ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಿ ಬರ್ಬರ ಹತ್ಯೆ ನಡೆಸುತ್ತಿರಲಿಲ್ಲ. ಜೀವಂತ ಸುಡುತ್ತಿರಲಿಲ್ಲ. ಕುದುರೆ ಏರಿದರೆ, ಮೀಸೆ ತಿರುವಿದರೆ, ಉತ್ತಮ ಉಡುಪು ತೊಟ್ಟರೆ, ಅಂಬೇಡ್ಕರ್ ರಿಂಗ್ ಟೋನ್ ಇಟ್ಟುಕೊಂಡರೆ ಕೊಂದು ಹಾಕುತ್ತಿರಲಿಲ್ಲ.
“ರಾಜ್ಯದ 101 ಪರಿಶಿಷ್ಟ ಜಾತಿಗಳ ಶೇ.75ರಷ್ಟು ಜನ ಒಂದಲ್ಲ ಒಂದು ಬಗೆಯ ಅಸ್ಪೃಶ್ಯತೆಗೆ ಈಗಲೂ ಗುರಿಯಾಗುತ್ತಿವೆ”. ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕುರಿತು ಆಯೋಗ ನೀಡಿರುವ ವರದಿಯು ಈ ಘೋರ ಸತ್ಯ ನುಡಿದಿದೆ. ನಾಗರಿಕ ಸಮಾಜ ನಾಚಿಕೆಯಿಂದ ತಲೆತಗ್ಗಿಸಬೇಕಿರುವ ಸಂಗತಿಯಿದು. ನಮ್ಮ ಸಮಾಜದ ಸಾಮೂಹಿಕ ವೈಫಲ್ಯ- ವಿಕಾರಗಳಿಗೆ ಹಿಡಿದ ಕನ್ನಡಿ.
ಜಾತಿ ಎಲ್ಲಿದೆ? ಅಸ್ಪೃಶ್ಯತೆ ಎಂಬುದು ಹಳೆಯ ಕತೆ, ಮೀಸಲಾತಿಯನ್ನು ಅಂತ್ಯಗೊಳಿಸಿ ಎಂದೆಲ್ಲ ಬೊಬ್ಬೆಯಿಡುವ ಬಾಯಿಬಡುಕ ಬಲಿಷ್ಠರು ತಮ್ಮ ಅಂತಸ್ಸಾಕ್ಷಿಯನ್ನು ತಡವಿ ನೋಡಿಕೊಳ್ಳಬೇಕಿರುವ ಕಟು ಸತ್ಯವಿದು. ಅವರು ಹಾಗೆ ಮಾಡುವುದಿಲ್ಲ. ಯಾಕೆಂದರೆ ತಮ್ಮ ಆತ್ಮಸಾಕ್ಷಿಯನ್ನೇ ಕೊಂದು ಹಾಕಿಕೊಂಡಿರುವವರು ಇವರು. ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಿ ಬರ್ಬರ ಹತ್ಯೆ ನಡೆಸುತ್ತಿರಲಿಲ್ಲ. ಜೀವಂತ ಸುಡುತ್ತಿರಲಿಲ್ಲ. ಕುದುರೆ ಏರಿದರೆ, ಮೀಸೆ ತಿರುವಿದರೆ, ಉತ್ತಮ ಉಡುಪು ತೊಟ್ಟರೆ, ಅಂಬೇಡ್ಕರ್ ರಿಂಗ್ ಟೋನ್ ಇಟ್ಟುಕೊಂಡರೆ ಕೊಂದು ಹಾಕುತ್ತಿರಲಿಲ್ಲ.
ಜಾತಿ ವ್ಯವಸ್ಥೆ ಎಂಬುದು ಹಿಂದೂ ಧರ್ಮದ ಬಹುದೊಡ್ಡ ಕಳಂಕ. ಹಿಂದುವಾಗಿ ಹುಟ್ಟಿರುವೆ, ಆದರೆ ಹಿಂದು ಆಗಿ ಸಾಯುವುದಿಲ್ಲ ಎಂದು ಸಾರಿದ ಡಾ. ಬಾಬಾಸಾಹೇಬ ಅಂಬೇಡ್ಕರ್ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಆದರೆ ಬಹುತೇಕ ದಲಿತರು ಅವರು ತೋರಿದ ದಾರಿಯನ್ನು ತುಳಿದಿಲ್ಲ. ಈಗಲೂ ಹಿಂದು ಧರ್ಮದ ಜೀತದ ನೊಗಕ್ಕೆ ಕೊರಳು ಕೊಟ್ಟು ನರಳುತ್ತಿದ್ದಾರೆ.
ದಲಿತ ಸಮುದಾಯಗಳನ್ನು ದಮನ ದೌರ್ಜನ್ಯ ಅಸ್ಪೃಶ್ಯತೆಯಿಂದ ಬಿಡುಗಡೆ ಮಾಡುವ ಕ್ರಾಂತಿಗಳು ನಡೆದಾಗಲೆಲ್ಲ ಅವುಗಳನ್ನು ಬ್ರಾಹ್ಮಣ್ಯವು ಪ್ರತಿಕ್ರಾಂತಿ ನಡೆಸಿ ಹತ್ತಿಕ್ಕುತ್ತ ಬಂದಿದೆ.
“ಇತ್ತೀಚಿನ ದಿನಗಳಲ್ಲಿ ಪರಿಶಿಷ್ಟರು ಮತ್ತು ಅವರ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಪರಿಶಿಷ್ಟರ ಸಾಮೂಹಿಕ ಹತ್ಯೆ ಮತ್ತು ಅವರಿಗೆ ಹೇಲು ತಿನ್ನಿಸುವ ಪ್ರಕರಣಗಳೂ ಏರುಮುಖವಾಗಿವೆ. ಸುಮಾರು 15 ಜಾತಿಗಳು ‘ಹೆಚ್ಚು ಸಾಮಾಜಿಕ ತಾರತಮ್ಯ’ಕ್ಕೆ, 28 ಜಾತಿಗಳು ‘ಮಧ್ಯಮ ಹಂತದ ತಾರತಮ್ಯ’ಕ್ಕೆ ಹಾಗೂ 38 ಜಾತಿಗಳು ‘ಕಡಿಮೆ ತಾರತಮ್ಯ’ಕ್ಕೆ ಗುರಿಯಾಗಿವೆ. 22 ಜಾತಿಗಳು ಇಂತಹ ತಾರತಮ್ಯವನ್ನು ಎದುರಿಸಿಲ್ಲ” ಎಂದು ಆಯೋಗ ತಮ್ಮ ವರದಿಯಲ್ಲಿ ತಿಳಿಸಿದೆ.
ಕಳೆದ ಐದು ವರ್ಷಗಳಲ್ಲಿ 101 ಜಾತಿಗಳು 3,069 ಅಸ್ಪೃಶ್ಯತೆಯ ಪ್ರಕರಣಗಳನ್ನು ದಾಖಲಿಸಿವೆ. ಮಾದಿಗ, ಹೊಲೆಯ, ಲಂಬಾಣಿ, ಭೋವಿ, ಆದಿ ಕರ್ನಾಟಕ, ಆದಿ ದ್ರಾವಿಡ, ಚಲವಾದಿ, ಕೊರಮ, ಮೊಗೇರ ಹಾಗೂ ಚಮ್ಮಾರ ಜಾತಿಗಳ ಜನ ಕಳೆದ ಐದು ವರ್ಷಗಳಲ್ಲಿ ಅಸ್ಪೃಶ್ಯತೆ ಆಚರಣೆಯ ನೂರು ಪ್ರಕರಣಗಳನ್ನು ದಾಖಲಿಸಿದ್ದಾರೆ.
ಪ್ರವೇಶ ನಿಷೇಧ. ಸಹಭೋಜನದ ಅವಕಾಶ ನಿರಾಕರಣೆ, ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿಷೇಧ, ಈ ಜಾತಿಗಳನ್ನು ಜೀತಕ್ಕೆ ಇಟ್ಟುಕೊಂಡು ಶೋಷಿಸುವುದು, ಪ್ರತ್ಯೇಕ ಆಸನ ವ್ಯವಸ್ಥೆ, ಕುಡಿಯಲು ಪ್ರತ್ಯೇಕ ಲೋಟಗಳು, ಅತ್ಯಾಚಾರ, ದೌರ್ಜನ್ಯ, ಶಾಲೆಗಳಲ್ಲಿ ತಾರತಮ್ಯ ಮುಂತಾದ ರೂಪಗಳಲ್ಲಿ ಅಸ್ಪೃಶ್ಯತೆಯ ಆಚರಣೆ ಕಂಡು ಬಂದಿದೆ.
ಆಯೋಗವು ತಿಂಗಳುಗಳ ಹಿಂದೆಯಷ್ಟೆ ನಡೆಸಿರುವ ಸಮೀಕ್ಷೆಯ ಅಂಕಿಅಂಶಗಳಿವು ಎಂಬುದನ್ನು ಗಮನಾರ್ಹ.
45 ಜಾತಿಗಳು ಒಂದೇ ಒಂದು ದೂರನ್ನೂ ದಾಖಲಿಸಿಲ್ಲ. ಅಂದಾಕ್ಷಣ, ಈ ಜಾತಿಗಳು ಅಸ್ಪೃಶ್ಯತೆ ಅಥವಾ ದಬ್ಬಾಳಿಕೆಯನ್ನು ಎದುರಿಸಿಯೇ ಇಲ್ಲ ಎಂದು ಅರ್ಥವಲ್ಲ. ದೂರು ನೀಡುವ ಶಕ್ತಿಯೂ ಇಲ್ಲದಂತಹ ಸಣ್ಣಪುಟ್ಟ ಜಾತಿಗಳಿವು. ಹೊಟ್ಟೆ ಹೊರೆಯಲು ಇತರೆ ಜಾತಿಗಳನ್ನು ನೆಚ್ಚಬೇಕಾಗಿರುವ ಈ ಜಾತಿಗಳು ದೂರು ನೀಡಲು ಮುಂದೆ ಬರುವುದಿಲ್ಲ. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಮುಂದುವರೆದ ಸಮುದಾಯಗಳು ಮಾತ್ರವೇ ತಮ್ಮ ಮೇಲಿನ ದೌರ್ಜನ್ಯಗಳನ್ನು ಪ್ರಶ್ನಿಸುತ್ತಿವೆ ಎಂದು ವರದಿ ಹೇಳಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ನಿಗ್ರಹ ಕಾಯಿದೆಯಡಿ ಹೂಡಲಾಗುವ ಪ್ರಕರಣಗಳು ಶಿಕ್ಷೆಯಲ್ಲಿ ಅಂತ್ಯವಾಗುವುದು ಅತ್ಯಂತ ವಿರಳ. ಪೊಲೀಸರ ನಿರ್ಲಕ್ಷ್ಯ, ಬೆದರಿಕೆಯ ಒತ್ತಡದಡಿ ತಿರುಗಿ ಬೀಳುವ ಸಾಕ್ಷಿಗಳು, ವರ್ಷಗಟ್ಟಲೆ ಎಳೆಯುವ ವಿಚಾರಣೆಗಳು ಈ ಕಾಯಿದೆಯ ಹಲ್ಲು ಉಗುರುಗಳನ್ನೇ ಕಿತ್ತು ಹಾಕಿದೆ.
ಶೇ75 ರಷ್ಟು ದಲಿತರು ಅಸ್ಪೃಶ್ಯತೆ ಎದುರಿಸಿರುವುದಕ್ಕೂ ಮತ್ತು ಇಂತಹ ಪ್ರಕರಣಗಳಲ್ಲಿ 100ಕ್ಕೆ 90ಕ್ಕೂ ಹೆಚ್ಚು ಆಪಾದಿತರು ಖುಲಾಸೆಯಾಗುತ್ತಿರುವುದಕ್ಕೂ ಪರಸ್ಪರ ನೇರ ಸಂಬಂಧವಿದೆ.
ಡಾ.ಬಾಬಾಸಾಹೇಬ ಭೀಮರಾವ್ ಅಂಬೇಡ್ಕರ್ ಅವರು ಈ ಈ ವ್ಯಾಧಿಗೆ ನೀಡಿದ್ದ ಮದ್ದು ‘ಶಿಕ್ಷಣ ಸಂಘಟನೆ ಹೋರಾಟ’. ಶಿಕ್ಷಣ ಪಡೆಯಲು, ಸಮಾನತೆಯ ಸಮ್ಮಾನಕ್ಕಾಗಿ ದಾವೆ ಹೂಡಲು ದಲಿತ ಸಮುದಾಯಗಳು ಒಟ್ಟಾಗಿ ಹೋರಾಡಬೇಕಿದೆ. ಹೋರಾಟವಿಲ್ಲದೆ ಯಾವುದೂ ದಕ್ಕುವುದಿಲ್ಲ ಎಂಬ ಮಾತನ್ನು ಅಕ್ಷರಶಃ ತಮ್ಮ ಬದುಕನ್ನೇ ಉದಾಹರಣೆಯಾಗಿಸಿ ತೋರಿಸಿದರು ಬಾಬಾಸಾಹೇಬರು.
ತಮ್ಮನ್ನು ತಲೆ ತಲಾಂತರಗಳಿಂದ ಇಲ್ಲಿಯ ತನಕ ತುಳಿದಿಟ್ಟು, ಸಾವಿರಾರು ಬಗೆಗಳಲ್ಲಿ ತಮ್ಮನ್ನು ವಂಚಿಸುತ್ತ ಬಂದಿರುವ, ತಮ್ಮ ವಿರುದ್ಧ ವಿಷವನ್ನೇ ಕಾರುವ, ತಮ್ಮ ಹಿತವನ್ನು ವಿಮೋಚನೆಯನ್ನು ನಿರ್ದಯೆಯಿಂದ ವಿರೋಧಿಸಿದ್ದ ಪಕ್ಷಗಳ ದಾಸರಾಗಿ ಹೋಗಿದ್ದಾರೆ ದಲಿತರು. ಹಾವಿನ ಹೆಡೆಯ ಅಡಿಯ ನೆರಳನ್ನು ನಿಜ ನೆರಳೆಂದು ಭ್ರಮಿಸಿ ತಮ್ಮನ್ನು ನುಂಗುವ ಸರ್ಪಗಳತ್ತ ಕುಪ್ಪಳಿಸುತ್ತಿದ್ದಾರೆ.
ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯಿಲ್ಲದ ರಾಜಕೀಯ ಸಮಾನತೆಗೆ ಯಾವ ಅರ್ಥವೂ ಇಲ್ಲ ಎಂದಿದ್ದರು ಬಾಬಾಸಾಹೇಬರು. ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ದಲಿತರಿಗೆ ಇನ್ನೂ ದೂರ ದಿಗಂತದ ಕನಸಾಗಿಯೇ ಉಳಿದಿದೆ. ಜಾತಿ ತಾರತಮ್ಯದ ನೀಚತನ ದಿನದಿಂದ ದಿನಕ್ಕೆ ಹೆಚ್ಚು ಕ್ರೌರ್ಯ ಧರಿಸಿ ಹೂಂಕರಿಸುತ್ತಿದೆ. ರಾಜಕೀಯ ಸಮಾನತೆಯನ್ನು ದಲಿತರಿಗೆ ಗಳಿಸಿಕೊಡುವ ಬಾಬಾಸಾಹೇಬರ ಅಪ್ರತಿಮ ಹೋರಾಟ ಪೂನಾ ಒಪ್ಪಂದದಲ್ಲಿ ಮಣ್ಣು ಪಾಲಾಯಿತು.
ವಾಸ್ತವದಲ್ಲಿ ಅಸ್ಪೃಶ್ಯತೆಯ ಆಚರಣೆ, ದಲಿತರಿಗೆ ಹೇಲು ತಿನ್ನಿಸುವ ಕೃತ್ಯಗಳು, ದೌರ್ಜನ್ಯಗಳು ತಾರತಮ್ಯಗಳು ದೇಶದ್ರೋಹದ ಅಪರಾಧಗಳಾಗಬೇಕು. ಆದರೆ ಆಳುವವರು ಈ ಕುರಿತು ತಲೆ ಕೆಡಿಸಿಕೊಂಡೇ ಇಲ್ಲ. ಅಷ್ಟೇ ಅಲ್ಲ, ಒಂದಲ್ಲ ಒಂದು ರೀತಿಯಲ್ಲಿ ಈ ಅಪರಾಧಗಳನ್ನು ಪೋಷಿಸುತ್ತ ಬಂದಿದ್ದಾರೆ.
ಹಳೆಯ ಕಾಂಗ್ರೆಸ್ಸಿನ ಸ್ಥಾನದಲ್ಲಿ ಬಿಜೆಪಿ ಕುಳಿತಿದೆ. ತಾನೇ ದಲಿತರ ಹಿತರಕ್ಷಕ ಎಂದು ಕಾಂಗ್ರೆಸ್ ಹೇಳಿಕೊಂಡು ಬಂದಿದ್ದ ಮಾತನ್ನು ಇಂದು ಬಿಜೆಪಿ ಹೇಳತೊಡಗಿದೆ. ಅತಿ ಹೆಚ್ಚಿನ ಸಂಖ್ಯೆಯ ದಲಿತ ಶಾಸಕರು- ದಲಿತ ಲೋಕಸಭಾ ಸದಸ್ಯರು ಆರಿಸಿ ಬರುತ್ತಿರುವುದು ಭಾರತೀಯ ಜನತಾಪಕ್ಷದಿಂದಲೇ ಎಂದು ಬೀಗುತ್ತಿದೆ.
ದಲಿತ ಚುನಾಯಿತ ಪ್ರತಿನಿಧಿಗಳು ತಮ್ಮ ಪ್ರಾತಿನಿಧ್ಯವನ್ನು ಸ್ವಾರ್ಥಕ್ಕಾಗಿ ಒತ್ತೆಯಿಟ್ಟಿದ್ದಾರೆ. ಸವರ್ಣೀಯರು ಹಾಕಿದ ಮೂಗುದಾರ ತೊಟ್ಟು ತಲೆಯಾಡಿಸಿದ್ದಾರೆ. ಆಯ್ಕೆ ಆಗಬೇಕಿದ್ದರೆ ಮೇಲ್ಜಾತಿಗಳೆನ್ನುವವರ ಮತಗಳು ಬೇಕೇ ಬೇಕು. ಅವರ ಕೈಕಾಲು ಹಿಡಿಯಬೇಕು. ಅವರ ಬೇಕು ಬೇಡಗಳ ಲೆಕ್ಕವಿಡಲೇಬೇಕು. ಮೇಲ್ಜಾತಿಗಳೆನ್ನುವವರನ್ನು ಖುಷಿ ಮಾಡುವವರು ದಲಿತರ ಹಿತ ಕಾಯುವುದು ಹೇಗೆ ಸಾಧ್ಯ? ಅಸ್ಪೃಶ್ಯ ಸಮುದಾಯಗಳ ಮತದಾರರನ್ನು ಮಾತ್ರವೇ ಹೊಂದಿರುವ ಪ್ರತ್ಯೇಕ ಮತಕ್ಷೇತ್ರಗಳ ಮೂಲ ಅಂಶಕ್ಕೆ ಮರಳುವುದೇ ಈ ಗುಲಾಮಗಿರಿಗೆ ಏಕೈಕ ಪರಿಹಾರ ಎಂದು ಬಾಬಾಸಾಹೇಬರು ಖಡಾ ಖಂಡಿತವಾಗಿ ಸಾರಿದ್ದಾರೆ.
ಇದನ್ನೂ ಓದಿ ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು
ಹಿಂದುತ್ವದ ಮಾತಾಡುವವರು, ಹಿಂದುಗಳೆಲ್ಲ ಒಂದೇ ಎನ್ನುವವರು ಜಾತಿವ್ಯವಸ್ಥೆಯ ನಿಜ ಪ್ರತಿಪಾದಕರು. ಬೇಟೆಗಾರನಿಂದ ತಪ್ಪಿಸಿಕೊಂಡು ಓಡುತ್ತಿರುವ ಮಿಕದೊಂದಿಗೂ ಮತ್ತು ಅದೇ ಸಮಯದಲ್ಲಿ ಬೇಟೆಗಾರನೊಂದಿಗೆ ಹತಾರು ಹಿಡಿದು ಓಡುತ್ತಿರುವ ವಂಚಕರು. ಬಾಬಾಸಾಹೇಬರು ಸೂಚಿಸಿರುವ ಪರಿಹಾರಕ್ಕಾಗಿ ಹೋರಾಟ ಮಾಡಿ ಅದನ್ನು ದಕ್ಕಿಸಿಕೊಳ್ಳದೆ ಹೋದರೆ ಈ ದೇಶದ ತಳಸಮುದಾಯಗಳಿಗೆ ತಾರತಮ್ಯದ ಅಪಮಾನದಿಂದ ಬಿಡುಗಡೆ ಇಲ್ಲ.

ಲೇಖನದಲ್ಲಿ ವ್ಯಕ್ತಪಡಿಸಿರುವ ನಿಮ್ಮ ಅಭಿಪ್ರಾಯಗಳು ನೂರಕ್ಕೆ ನೂರು ಸತ್ಯ. ಇಂದಿಗೂ ಅಸ್ಪೃಶ್ಯತೆ ಆಚರಣೆಯಲ್ಲಿದೆ. ಆಡೂಟ್ಕೂಡ ಕಾಲಕ್ಕೆ ತಕ್ಕಂತೆ ಅಲ್ಪಸ್ವಲ್ಪ ಬದಲಾವಣೆಗಳೊಟ್ಟಿಗೆ ಜೀವಂತವಾಗಿದೆ.
ಅಸ್ಪೃಶ್ಯತೆ ಈ ನೆಲಕ್ಕಂಟಿದ ವಿಷಕಾರಿ ಕಳೆ. ಮರ್ಯಾದಾ ಹತ್ಯೆಗಳು ನಡೆಯುತ್ತಿರುವ ಈ ದೇಶದಲ್ಲಿ ಜಾತಿ ಬೇಧ ಆಚರಣೆ ತೊಲಗುವ ದಿನ ಯಾವಾಗ ಬಂದೀತು? ಲೇಖನ ಕೇಳಿದ ಪ್ರಶ್ನೆ ಸದೃಢ, ಸದ್ಭಾವದ ಭಾರತ ನಿರ್ಮಾಣ ಬಯಸುವ ಪ್ರತಿಯೊಬ್ಬ ನಾಗರಿಕರ ಆಶಯವಾಗಲಿ.