ಹುಬ್ಬಳ್ಳಿ- ಧಾರವಾಡ ನಡುವೆ ಮಾಡಲಾಗಿರುವ ತ್ವರಿತ ಬಸ್ ಸಾರಿಗೆ ವ್ಯವಸ್ಥೆ (ಬಿಆರ್‌ಟಿಎಸ್) ರೀತಿಯಲ್ಲಿಯೇ ಇಲ್ಲಿಯೂ 'ಚಿಗರಿ' ಮಾದರಿಯ ಬಸ್‌ಗಳನ್ನು ಓಡಿಸಲು ಯೋಜನೆ ರೂಪಿಸಬಹುದು
ಬೆಂಗಳೂರಿನಿಂದ ತುಮಕೂರು ನಗರದವರೆಗೆ ‘ನಮ್ಮ ಮೆಟ್ರೊ’ ವಿಸ್ತರಣೆ ಮಾಡುವ ಕಾರ್ಯಸಾಧನೆ ಯೋಜನಾ ವರದಿಯನ್ನು ಸರ್ಕಾರಕ್ಕೆ ‘ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ’ (ಬಿಎಂಆರ್‌ಸಿಎಲ್) ಸಲ್ಲಿಸಿದೆ. ಸರ್ಕಾರದ ಸೂಚನೆಯ ಮೇರೆಗೆ ಡಿಪಿಆರ್ ರೂಪಿಸಿರುವ ಬಿಎಂಆರ್‌ಸಿಎಲ್, ಪ್ರಸ್ತಾವಿತ ಯೋಜನೆಗೆ ತಗಲುವ ಖರ್ಚು ವೆಚ್ಚವನ್ನು ಅಂದಾಜು ಮಾಡಿದೆ.
ಸದ್ಯ ‘ನಮ್ಮ ಮೆಟ್ರೊ’ ಹಸಿರು ಮಾರ್ಗವು ಮಾದಾವರವರೆಗೆ ಇದ್ದು, ಅದನ್ನು ತುಮಕೂರಿನ ಶಿರಾ ಗೇಟ್‌ವರೆಗೆ ವಿಸ್ತರಿಸುವ ಕುರಿತು ಕಾರ್ಯಸಾಧನೆ ಯೋಜನೆ ಪ್ರಸ್ತಾಪಿಸಿದೆ. ಟೆಂಡರ್ ಪಡೆದ ಹೈದರಾಬಾದ್‌ನ ಆರ್.ವಿ. ಕನ್ಸಲ್ವೆಂಟ್ ವರದಿ ತಯಾರಿಸಿ ಬಿಎಂಆರ್‌ಸಿಎಲ್‌ಗೆ ನೀಡಿತ್ತು. ಬಿಎಂಆರ್‌ಸಿಎಲ್ ಸರ್ಕಾರಕ್ಕೆ ಸಲ್ಲಿಸಿದೆ. ವರದಿ ಪ್ರಕಾರ 59.6 ಕಿಲೋ ಮೀಟರ್ ಉದ್ದದ ಈ ಮಾರ್ಗದಲ್ಲಿ 25 ನಿಲ್ದಾಣಗಳು ಇರಲಿವೆ. 2 ಗಂಟೆಯ ಪ್ರಯಾಣದ ಹಾದಿ ಎಂದು ಸಮಯ ನಿಗದಿಪಡಿಸಲಾಗಿದೆ. ಸಾರ್ವಜನಿಕ-ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ಈ ಯೋಜನೆಯನ್ನು ಜಾರಿಗೆ ತರಬಹುದು. ಇದಕ್ಕೆ ಅಂದಾಜು 20,650 ಕೋಟಿ ಬೇಕಾಗಬಹುದು, ಇಲ್ಲವೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಿಧಿ ಹಾಗೂ ಬಾಹ್ಯ ನಿಧಿ (ಸಾಲ) ಬಳಸಿ ಯೋಜನೆ ಅನುಷ್ಠಾನ ಮಾಡಬಹುದು. ಆಗ 18,670 ಕೋಟಿ ಬೇಕಾಗಬಹುದು ಎಂದು ಪ್ರಸ್ತಾವಿತ ವರದಿ ಉಲ್ಲೇಖಿಸಿದೆ.
ಕೈಗಾರಿಕಾ ಕ್ಷೇತ್ರದಲ್ಲಿ ಕ್ಷಿಪ್ರವಾಗಿ ಬೆಳೆಯುತ್ತಿರುವ ತುಮಕೂರು ನಗರದ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲು ಮೆಟ್ರೊ ಬೇಕೆಂದು ಉದ್ಯಮಿಗಳು, ರಾಜಕಾರಣಿಗಳು, ಸರ್ಕಾರದ ಸಚಿವರುಗಳು ಒತ್ತಾಯಿಸುತ್ತಾ ಬಂದಿದ್ದಾರೆ. ಆದರೆ ಮೆಟ್ರೊದಂತಹ ಯೋಜನೆಯನ್ನು ಇಷ್ಟು ಸರಳವಾಗಿ ನೋಡಲು ಸಾಧ್ಯವಿಲ್ಲ. ಇದರ ಹಿಂದೆ ಬೇರೆಯ ಲೆಕ್ಕಾಚಾರಗಳು ಇರುತ್ತವೆ. ಅಂತಿಮವಾಗಿ ಜನರ ಮೇಲೆ ಭಾರವನ್ನು ಹೊರಿಸಲಾಗುತ್ತದೆ ಎಂಬ ಎಚ್ಚರಿಕೆ ವಹಿಸಬೇಕಾಗುತ್ತದೆ.
ಈಗಾಗಲೇ ಬೆಂಗಳೂರು ನಗರದೊಳಗೆ ವಿಸ್ತರಣೆಯಾಗುತ್ತಿರುವ ಮೆಟ್ರೊ ಮಾರ್ಗಗಳಿಗೆ ತಗುಲುತ್ತಿರುವ ವೆಚ್ಚ ಹಾಗೂ ಅದನ್ನು ತುಂಬಿಕೊಳ್ಳಲು ಬಿಎಂಆರ್‌ಸಿಎಲ್ ಮಾಡುತ್ತಿರುವ ಬೆಲೆ ಏರಿಕೆಗಳನ್ನು ಗಂಭೀರವಾಗಿ ನೋಡಬೇಕಾಗುತ್ತದೆ. ಹೀಗಾದಾಗ ಮೆಟ್ರೊ ಜನಸಾಮಾನ್ಯರಿಗಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಟ್ರಾಫಿಕ್ ಸಮಸ್ಯೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಮೆಟ್ರೊ ಬೇಕೆಂದು ಹೇಳುವವರು ಇದ್ದಾರೆ. ಆದರೆ ಮೆಟ್ರೊ ವಿಸ್ತರಣೆಯಂತಹ ಯೋಜನೆಗಳ ಹಿಂದೆ ಕೇವಲ ಟ್ರಾಫಿಕ್ ಸಮಸ್ಯೆ ಇರುವುದಿಲ್ಲ. ಅದರ ಹಿಂದೆ ಹಗರಣಗಳ ವಾಸನೆ ಬಡಿದುಬಿಡುತ್ತದೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಒಳಮೀಸಲಾತಿಯಲ್ಲಿ ‘ದಲಿತ ಕ್ರಿಶ್ಚಿಯನ್’ ಪ್ರಶ್ನೆಗೆ ‘ತಾಯ್ಗಣ್ಣು’ ಅಗತ್ಯ
ಬಿಎಂಆರ್‌ಸಿಎಲ್- ಸರ್ಕಾರದ ಇಲಾಖೆಯಲ್ಲ. ಅದೊಂದು ಪ್ರತ್ಯೇಕವಾದ ಸರ್ಕಾರಿ ಕಂಪನಿ. ಅದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರತಿನಿಧಿಗಳು ಇರುತ್ತಾರೆ. ಹೀಗಾಗಿ ಈ ಮೆಟ್ರೊ ವಿಸ್ತರಣೆಯ ವಿಚಾರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳೆರಡರಲ್ಲೂ ಪರ-ವಿರೋಧ ಮಾಡುವವರು ಇದ್ದೇ ಇರುತ್ತಾರೆ. ಅದೇನೇ ಇರಲಿ, ಮೆಟ್ರೊದಂತಹ ಯೋಜನೆಗಳು ಆರ್ಥಿಕ ವ್ಯವಸ್ಥೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಗಂಭೀರವಾಗಿ ಗಮನಿಸಬೇಕು.
ಮೆಟ್ರೊ ಬೆಲೆಯನ್ನು ಭಾರೀ ಏರಿಕೆ ಮಾಡಿದ್ದ ಬಿಎಂಆರ್‌ಸಿಎಲ್, ”ನಿರ್ವಹಣೆ, ಎನರ್ಜಿ ಖರೀದಿ, ಸಿಬ್ಬಂದಿ ನಿರ್ವಹಣೆ ಇವೆಲ್ಲವೂ ಹೆಚ್ಚಾಗಿದೆ. ಅದಕ್ಕಾಗಿ ಬೆಲೆ ಏರಿಕೆ ಅನಿವಾರ್ಯ” ಎಂದಿತ್ತು. ಅಸಲಿ ಸಂಗತಿ ಬೇರೆಯದ್ದೇ ಆಗಿತ್ತು. ಮುಂಬರುವ ಐದು ವರ್ಷಗಳಲ್ಲಿ ಬಿಎಂಆರ್‌ಸಿಎಲ್ 10,000 ಕೋಟಿ ರೂ.ಗಳಷ್ಟು ಸಾಲವನ್ನು (ಅಸಲು ಮತ್ತು ಬಡ್ಡಿ ಸೇರಿ) ಕಟ್ಟಬೇಕಾಗಿದೆ. ಜನರು ಖರೀದಿಸುವ ಟಿಕೆಟ್ ಮತ್ತು ಕಾರ್ಡ್‌ನಿಂದ ಅಷ್ಟು ಆದಾಯ ಸದ್ಯಕ್ಕೆ ಸಿಗುತ್ತಿಲ್ಲ. ಹಾಗಾಗಿ ದರ ಹೆಚ್ಚಿಸಲು ಮುಂದಾಗಿತ್ತು. ಬಿಎಂಆರ್‌ಸಿಎಲ್ ಸಾಲದ ಹೊರೆಯನ್ನು ಅನುಭವಿಸುತ್ತಿರುವುದಕ್ಕೆ ಅದರ ದುಬಾರಿ ಯೋಜನೆಗಳೇ ಕಾರಣ ಎಂದು ವಿಷಯ ತಜ್ಞರು ಎಚ್ಚರಿಸುತ್ತಲೇ ಬಂದಿದ್ದಾರೆ.
ಭಾರತದಂತೆಯೇ ಜನಸಂಖ್ಯೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಾಗಿರುವ ಲ್ಯಾಟಿನ್ ಅಮೆರಿಕದ ದೇಶಗಳು ಮೆಟ್ರೊ ಬದಲು ಬಸ್‌ಗಳನ್ನೇ ಬಳಸುತ್ತಿವೆ. ‘ನಮ್ಮ ಮೆಟ್ರೊ’ದ ಮೊದಲ ಹಂತಕ್ಕೆ 6,000 ಕೋಟಿ ರೂ. ಅಂದಾಜು ಮಾಡಲಾಗಿತ್ತು. ಅದು ಮುಗಿಯುವ ವೇಳೆಗೆ 14,000 ಕೋಟಿ ರೂ. ಖರ್ಚಾಗಿತ್ತು. ಮೆಟ್ರೊ ಎರಡನೇ ಹಂತದ ಕಾಮಗಾರಿಗೆ 26,000 ಕೋಟಿ ರೂ. ಅಂದಾಜಿಸಲಾಗಿತ್ತು. ಅದೀಗ 40,000 ಕೋಟಿ ರೂ.ಗೆ ಏರಿಕೆಯಾಗಿದೆ. ಎರಡು ಹಂತದ ಕಾಮಗಾರಿಗೆ ಒಟ್ಟು 54,000 ಕೋಟಿ ರೂ. ವಿನಿಯೋಗವಾಗಿದೆ. ಅದರಲ್ಲಿ ಮೂರನೇ ಒಂದು ಭಾಗ ಅಥವಾ ಅದಕ್ಕಿಂತ ಕಡಿಮೆ ಹಣ ಕೇಂದ್ರ ಸರ್ಕಾರದಿಂದ ಬರುತ್ತದೆ. ಶೇ. 40ರಷ್ಟು ಹಣ ರಾಜ್ಯ ಸರ್ಕಾರದ್ದಾಗಿರುತ್ತದೆ. ಮಿಕ್ಕಿದ್ದೆಲ್ಲ ಸಾಲದ ಹಣ! ಅಷ್ಟು ಸಾಲವನ್ನು ಈಗ ಬಡ್ಡಿ ಸಮೇತ ತೀರಿಸಲೇಬೇಕಾಗುತ್ತದೆ.
ಇದರ ಜೊತೆಗೆ ವಿಸ್ತರಣೆಯಾಗುತ್ತಿರುವ ಮೆಟ್ರೊ ಮಾರ್ಗಗಳಿಗೆ ತಗುಲುತ್ತಿರುವ ವೆಚ್ಚಗಳನ್ನು ಗಮನಿಸಬೇಕು. ”ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂ ಮಾರ್ಗವಾಗಿ, ಅದು ವಿಮಾನ ನಿಲ್ದಾಣ ತಲುಪುತ್ತಿದೆ. ಸಿಲ್ಕ್ ಬೋರ್ಡ್‌ನಿಂದ ಏರ್‌ಪೋರ್ಟ್‌ವರೆಗೆ ನಿರ್ಮಾಣ ಮಾಡಲಾಗುತ್ತಿರುವ ಮೆಟ್ರೊ ಲೈನ್‌ಗೆ 15,000 ಕೋಟಿ ರೂ. ಬಜೆಟ್ ಅಂದಾಜಿಸಲಾಗಿದೆ. ಅದು ಮುಗಿಸುವಷ್ಟರಲ್ಲಿ ಮತ್ತಷ್ಟು ಹೆಚ್ಚಾಗಿರುತ್ತದೆ. ಮೂರನೇ ಹಂತ ಮತ್ತು ಮೂರನೇ ‘ಎ’ ಹಂತ ಕಾಮಗಾರಿಯೂ ಬರುತ್ತಿದೆ. ಜೆ.ಪಿ.ನಗರ ಮಾರ್ಗದಲ್ಲಿ ಫೇಸ್ -3, ಹೆಬ್ಬಾಳದಿಂದ- ಸರ್ಜಾಪುರದವರೆಗೆ ಫೇಸ್ 3ಎ ಆಗಲಿದೆ. ಮೂರನೇ ಹಂತಕ್ಕೆ 14,000 ಕೋಟಿ ರೂ., ಮೂರನೇ ಹಂತ ‘ಎ’ಗೆ 28,405 ಕೋಟಿ ಅಂದಾಜು ಮಾಡಲಾಗಿದೆ. ಅಂದರೆ ಉಳಿದ ಹಂತದ ಕಾಮಗಾರಿಗೆ 50ರಿಂದ 60 ಸಾವಿರ ಕೋಟಿ ರೂ. ಖರ್ಚಾಗುತ್ತಿದೆ. ಹೀಗಾಗಿ ಮುಂಬರುವ ವರ್ಷಗಳಲ್ಲಿ ಬಿಎಂಆರ್‌ಸಿಎಲ್ ಮೇಲೆ ಸಾಲದ ಹೊರೆ ಮತ್ತಷ್ಟು ಹೆಚ್ಚಾಗಲಿದೆ” ಎನ್ನುತ್ತಾರೆ ಮೆಟ್ರೊ ವ್ಯವಸ್ಥೆ ಬಗ್ಗೆ ಅಧ್ಯಯನ ಮಾಡಿರುವ ವಕೀಲ ವಿನಯ್ ಶ್ರೀನಿವಾಸ್. ಈಗ ತುಮಕೂರು- ಬೆಂಗಳೂರು ನಡುವೆ ಮೆಟ್ರೊ ವಿಸ್ತರಣೆಗೆ 20,000 ಕೋಟಿ ರೂ. ಅಂದಾಜಿಸಲಾಗಿದೆ. ಯೋಜನೆ ಪೂರ್ಣಗೊಳ್ಳುವ ವೇಳೆಗೆ ಅದರ ವೆಚ್ಚ ಇನ್ನೂ 10ರಿಂದ 15 ಸಾವಿರ ಕೋಟಿ ರೂ.ಗಳಿಗೆ ಏರಿಕೆಯಾಗುವ ಸಾಧ್ಯತೆ ಇದೆ.
ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ ಬೆಂಗಳೂರು-ತುಮಕೂರು ನಡುವೆ ಮೆಟ್ರೊ ಯೋಜನೆ ಜಾರಿಗೆ ತರುವ ಪ್ರಸ್ತಾಪವನ್ನು ಮಾಡಲಾಗಿದೆ. ಅದಾಗದಿದ್ದರೆ ಸರ್ಕಾರದ ಹಣ ಹಾಗೂ ಸಾಲದಿಂದ ಯೋಜನೆ ರೂಪಿಸುವ ಚಿಂತನೆ ನಡೆಸಲಾಗಿದೆ. ಆದರೆ ಈವರೆಗೆ ವಿಸ್ತರಣೆಗಳಾಗಿರುವ ಮೆಟ್ರೊ ಯೋಜನೆಗಳಲ್ಲಿ ಖಾಸಗಿ ಸಹಭಾಗಿತ್ವದ ಕೊಡುಗೆ ಅಷ್ಟೇನೂ ಇಲ್ಲ ಎಂಬುದು ನಮ್ಮ ಮುಂದಿರುವ ಸತ್ಯ. ಉದಾಹರಣೆಗೆ ನೋಡಿ, ಏರ್‌ಪೋರ್ಟ್‌ಗೆ ಸಂಪರ್ಕ ಕಲ್ಪಿಸಲಿರುವ ಮೆಟ್ರೊದಿಂದಾಗಿ ಐಟಿಗಳಿಗೆ ಹೆಚ್ಚಿನ ಲಾಭವಾಗಲಿದೆ. ಔಟರ್ ರಿಂಗ್ ರೋಡ್‌ನಲ್ಲಿ ಐಟಿ ಕಂಪನಿಗಳಿವೆ. ಒಂದೆರಡು ಐಟಿ ಕಂಪನಿಗಳು ಸುಮಾರು 100 ಕೋಟಿ ರೂ.ಗಳನ್ನು ಕೊಟ್ಟಿರಬಹುದಷ್ಟೇ. ಆದರೆ ಒಟ್ಟು ಕಾಮಗಾರಿಯೇ ಸುಮಾರು 15,000 ಕೋಟಿ ರೂಪಾಯಿ. ಹೀಗಿರುವಾಗ ಹಣವನ್ನು ಕಂಪನಿಗಳಿಂದ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಮಂತ್ರಿಮಾಲ್‌ನಂಥವರಿಗೆ ಭೂಮಿ ಕೊಟ್ಟಿದ್ದರಿಂದ ಲಾಭವಾಗಲಿಲ್ಲ ಎಂಬುದನ್ನು ಗಮನಿಸಬೇಕು.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಶಾಂತಿ ಬಯಸುವುದು ದೇಶದ್ರೋಹವಲ್ಲ!
ಇದರ ಜೊತೆಗೆ ಮೆಟ್ರೊ ಕುರಿತು ನಡೆದಿರುವ ಅಧ್ಯಯನಗಳು ಮತ್ತಷ್ಟು ಸಂಗತಿಗಳನ್ನು ತಿಳಿಸುತ್ತವೆ. ‘ವರ್‍ಲ್ಡ್ ರಿಸೋರ್ಸ್ ಇನ್‌ಸ್ಟಿಟ್ಯೂಟ್’ (ಡಬ್ಲ್ಯುಆರ್‌ಐ) ಅಧ್ಯಯನದ ಪ್ರಕಾರ, ”ಮಧ್ಯಮ ವರ್ಗದವರು ಮೆಟ್ರೊವನ್ನು ಹೆಚ್ಚು ಉಪಯೋಗಿಸುತ್ತಿದ್ದಾರೆ. ಬಡವರಿಗೆ ಹಳೆಯ ಮೆಟ್ರೊ ದರವೇ ಭಾರವಾಗಿತ್ತು. ಅವರು ಮೆಟ್ರೊ ಉಪಯೋಗಿಸುತ್ತಿಲ್ಲ. ಶ್ರೀಮಂತರು ಕಾರುಗಳಲ್ಲಿ ತಿರುಗಾಡುತ್ತಾರೆ. ಮಧ್ಯಮ ವರ್ಗದವರೇ ಹೆಚ್ಚು ಮೆಟ್ರೊ ಅವಲಂಬಿಸಿದ್ದಾರೆ.” ಸುಮಾರು 50,000 ಕೋಟಿ ರೂ. ಖರ್ಚು ಮಾಡಿ ಮಾಡಲಾಗಿರುವ ನಮ್ಮ ಮೆಟ್ರೊದಲ್ಲಿ ದಿನಕ್ಕೆ 8.5 ಲಕ್ಷ ಜನ ಪ್ರಯಾಣ ಮಾಡುತ್ತಾರೆ. ಆದರೆ ಬಿಎಂಟಿಸಿಯಲ್ಲಿ 38 ಲಕ್ಷ ಜನ ಪ್ರಯಾಣಿಸುತ್ತಿದ್ದಾರೆ. ಇದು ಅಂತರ ನಗರ ಮೆಟ್ರೊ ವಿಸ್ತರಣೆಯಾದಾಗಲೂ ಮುಂದುವರಿಯುವ ಸಾಧ್ಯತೆ ಇದೆ. ಬೆಂಗಳೂರಿನಿಂದ ತುಮಕೂರಿನವರೆಗೆ 20,000 ಕೋಟಿ ರೂ.ಗಳನ್ನು ಮೆಟ್ರೊಗಾಗಿ ಖರ್ಚು ಮಾಡುವುದಕ್ಕಿಂತ, ಅದೇ ಹಣದಲ್ಲಿ ರಸ್ತೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಬಹುದು. ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಬಹುದು. ಹುಬ್ಬಳ್ಳಿ- ಧಾರವಾಡ ನಡುವೆ ಮಾಡಲಾಗಿರುವ ತ್ವರಿತ ಬಸ್ ಸಾರಿಗೆ ವ್ಯವಸ್ಥೆ (ಬಿಆರ್‌ಟಿಎಸ್) ರೀತಿಯಲ್ಲಿಯೇ ಇಲ್ಲಿಯೂ ‘ಚಿಗರಿ’ ಮಾದರಿಯ ಬಸ್‌ಗಳನ್ನು ಓಡಿಸಲು ಯೋಜನೆ ರೂಪಿಸಬಹುದು. ಮೆಟ್ರೊ ಹೊರತಾಗಿ ಇಂಟರ್ ಸಿಟಿ ರೈಲು ಮಾರ್ಗವನ್ನು ಬಲಪಡಿಸಬಹುದು. ಈ ಯೋಜನೆಗಳಿಗೆ ಮೆಟ್ರೊಗೆ ತಗಲುವಷ್ಟು ಹಣದ ಅಗತ್ಯವೂ ಇರುವುದಿಲ್ಲ ಎನ್ನುತ್ತಾರೆ ಸಾರಿಗೆ ತಜ್ಞರು.
ಕೇವಲ ಸಾರಿಗೆಯಷ್ಟೇ ಅಲ್ಲ, ವಸತಿ, ಶಿಕ್ಷಣ, ಆರೋಗ್ಯಕ್ಕೂ ಆದ್ಯತೆ ಸಿಗಬೇಕು. ಟ್ರಾಫಿಕ್ ಸಮಸ್ಯೆಯ ಕಾರಣಕ್ಕೆ 50,000 ಕೋಟಿ ವೆಚ್ಚದಲ್ಲಿ ಮೆಟ್ರೊ ಮಾಡಲಾಯಿತು. ಈಗ ಅದರ ವಿಸ್ತರಣೆಯ ಭಾಗವಾಗಿ 50000 ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ. ಈಗ ಮತ್ತೊಂದು ವಿಸ್ತರಣೆಗೆ 20,000 ಕೋಟಿ ರೂ. ಅಂದಾಜಿಸಲಾಗಿದೆ. ಇದು ರಾಜಕಾರಣಿಗಳು, ಶ್ರೀಮಂತರು, ಅಧಿಕಾರಶಾಹಿಗಳು ಜೇಬು ತುಂಬಿಸಿಕೊಳ್ಳುವ ಯೋಜನೆಯಾದಂತೆ ಕಾಣತೊಡಗಿದೆ.

ಒಟ್ಟಿನಲ್ಲಿ ಹಣ ಖರ್ಚಾಗುತ್ತೆ ಅಂತ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿ ಕೊಳ್ಳಬಾರದು
ಹಣ ಇಟ್ಕೊಂಡು ಬರೀ ಗ್ಯಾರಂಟಿ ಯೋಜನೆ ಗಳಿಗೆನೇ ಖರ್ಚು ಮಾಡ್ಬೇಕು ಅಂತಾನಾ ಸರ್
ತುಮಕೂರು ಕೈಗಾರಿಕಾ ಕೇಂದ್ರವಾಗಿ, ಅತಿಹೆಚ್ಚು ಟ್ರಾಫಿಕ್ ಸಮಸ್ಯೆ ಇಂದ ಬಳಲುತ್ತಿರುವ
ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ಜಿಲ್ಲಾ ಕೇಂದ್ರ
ಜನರ ಕಲ್ಯಾಣ ಅಂದ್ರೆ ಕೇವಲ ಅವರ ಕೈಗೆನೇ ದುಡ್ಡು ಕೊಡೋದು ಅಲ್ಲಾ ಸ್ವಾಮಿ
ಅಭಿವೃದ್ಧಿ ಯೋಜನೆಗಳಿಗೂ ಕೂಡ ಗಮನ ಹರಿಸೋದು ನೀವು ಹೇಳೋದು ನೋಡಿದ್ರೆ ದುಡ್ಡು ಖರ್ಚಗುತ್ತೆ ಅಂತ
ಅಭಿವೃದ್ಧಿ ಕಾಮಗಾರಿಗಳು ಆಗಬಾರದು ಅಂದಂಗೆ ಆಯ್ತು