ಈ ದಿನ ಸಂಪಾದಕೀಯ | ‘ಹದ್ದು ಮೀರಿದ ಇಡಿ ವರ್ತನೆ’ಗೆ ಯಾರು ಕಾರಣ?

Date:

Advertisements

ಚುನಾವಣಾ ಆಯೋಗ, ಸಿಬಿಐ, ಇಡಿ ಈ ಮೂರೂ ಸಂಸ್ಥೆಗಳನ್ನು ತಮ್ಮ ವಿರೋಧಿಗಳನ್ನು ಮಟ್ಟಹಾಕಲು, ಅವರ ಚಾರಿತ್ರ್ಯಹರಣ ಮಾಡಲು, ಮಾನಸಿಕವಾಗಿ ಕುಗ್ಗಿಸಲು ಮೋದಿ ಸರ್ಕಾರ ಬಳಸಿಕೊಳ್ಳುತ್ತಿರುವುದು ಅಕ್ಷಮ್ಯ. ಭಾರತದ ಚರಿತ್ರೆಯಲ್ಲಿ ಮೋದಿಯವರ ಆಡಳಿತ ಇಂತಹ ಹಲವು ಅಪಸವ್ಯಗಳನ್ನು ಮುಂದೆ ನಿಂತು ನಡೆಸತೊಡಗಿದೆ.

ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮದ ಕೇಂದ್ರ ಕಚೇರಿ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯದ (ಇಡಿ) ಕ್ರಮವನ್ನು ಸುಪ್ರೀಂ ಕೋರ್ಟ್‌ ಗುರುವಾರ ತೀವ್ರವಾಗಿ ಖಂಡಿಸಿ “ನಿಮ್ಮ ಇಡಿ ಎಲ್ಲ ಮಿತಿಗಳನ್ನು ಮೀರುತ್ತಿದೆ” ಎಂದು ತರಾಟೆಗೆ ತೆಗೆದುಕೊಂಡಿದೆ.

ಮದ್ಯದಂಗಡಿಗಳಿಗೆ ಪರವಾನಗಿ ನೀಡಲು ನಿಗಮದಲ್ಲಿನ ಕೆಲವರು ಅಕ್ರಮವಾಗಿ ಹಣ ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪದ ಮೇಲೆ ರಾಜ್ಯ ಸರ್ಕಾರ ಈ ಮೊದಲೇ (2014-21) ಹಲವು ವ್ಯಕ್ತಿಗಳ ವಿರುದ್ಧ 41ಎಫ್‌ಐಆರ್‌ಗಳನ್ನು ದಾಖಲಿಸಿದ್ದು ವಿಚಾರಣೆ ನಡೆಯುತ್ತಿದೆ. ಆದರೆ ಈಗ 2025ರಲ್ಲಿ ಇಡಿ ಏಕಾಏಕಿ ಮಧ್ಯಪ್ರವೇಶಿಸಿ ನಿಗಮದ ಪ್ರಧಾನ ಕಚೇರಿ ಮೇಲೆ ದಾಳಿ ನಡೆಸಿದೆ. ಇದನ್ನು ಡಿಎಂಕೆ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು. “ಆರೋಪ ಇರುವುದು ನಿಗಮದ ಮೇಲಲ್ಲ, ವ್ಯಕ್ತಿಗಳ ಮೇಲೆ, ಹಾಗಿರುವಾಗ ನಿಗಮದ ಮೇಲೆ ಹಗರಣದ ಆರೋಪ ಹೇಗೆ ಸಾಧ್ಯ” ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಪ್ರಶ್ನಿಸಿದ್ದಾರೆ. ಈ ತನಿಖಾ ಸಂಸ್ಥೆಯ ದುರುಪಯೋಗದ ಬಗ್ಗೆ ಈ ಹಿಂದೆ ಹಲವು ಸಲ ಸುಪ್ರೀಂ ಕೋರ್ಟ್‌ ಅಸಮಾಧಾನ ಹೊರ ಹಾಕಿತ್ತು.

Advertisements

ಆದರೆ ಮೋದಿಯವರು ದೇಶದ ಸಂವಿಧಾನ, ಸುಪ್ರೀಂಕೋರ್ಟ್‌ ಯಾವುದಕ್ಕೂ ಸೊಪ್ಪು ಹಾಕುತ್ತಿಲ್ಲ. ತಾವು ಎಲ್ಲವನ್ನೂ ಮೀರಿದ ವ್ಯಕ್ತಿ ಎಂಬಂತೆ ವರ್ತಿಸುತ್ತಿದ್ದಾರೆ. ಸಂಸತ್ತಿನಲ್ಲಿ ಯಾವುದೇ ಗಂಭೀರವಾದ ಚರ್ಚೆಗೆ ಅವರು ಹಾಜರಾಗುವುದಿಲ್ಲ. ಪಹಲ್ಗಾಮ್ ನರಮೇಧದಂತಹ ರಾಷ್ಟ್ರೀಯ ವಿಪತ್ತಿನ ಸಮಯದಲ್ಲೂ ಸರ್ವಪಕ್ಷ ಸಭೆಯಲ್ಲಿ ಭಾಗಿಯಾಗುವುದಿಲ್ಲ. ಗೋದಿ-ಮೋದಿ ಮಾಧ್ಯಮಗಳಿಗೆ ನೀಡಿರುವ ಭಟ್ಟಂಗಿ ಸಂದರ್ಶನಗಳ ವಿನಾ ಕಳೆದ ಹನ್ನೊಂದು ವರ್ಷಗಳಿಂದ ಮಾಧ್ಯಮಗಳನ್ನು ಎದುರಿಸಿಯೇ ಇಲ್ಲ. ಯಾರ ಪ್ರಶ್ನೆ, ಸಲಹೆಗಳನ್ನೂ ಪಡೆಯಲೂ ಅವರು ತಯಾರಿಲ್ಲ. ಹೆದ್ದಾರಿ, ಸೇತುವೆ, ರೈಲ್ವೆನಿಲ್ದಾಣ, ಏರ್ಪೋರ್ಟ್‌ ಹೀಗೆ ಎಲ್ಲವನ್ನೂ ತಾವೇ ಉದ್ಘಾಟಿಸಬೇಕು. ಒಬ್ಬನೇ ನಾನೊಬ್ಬನೇ ಎಲ್ಲಕ್ಕೂ ನಾನೊಬ್ಬನೇ ಎಂಬ ಚಕ್ರವರ್ತಿ ರೀತಿ ಮೋದಿಯವರು ವರ್ತಿಸುತ್ತಿದ್ದಾರೆ. ಅರಸೊತ್ತಿಗೆಯಲ್ಲಿ ಈ ವರ್ತನೆ ಸರಿಯಿದ್ದೀತು. ಆದರೆ ಅರಸೊತ್ತಿಗೆಗಳು ಅಳಿದು ಪ್ರಜೆಗಳೇ ಪರಮ ಎಂಬ ಆಶಯದ ಜನತಂತ್ರ ವ್ಯವಸ್ಥೆಯಲ್ಲಿ ಮೋದಿ ವರ್ತನೆ ಎಳ್ಳಷ್ಟೂ ಸಲ್ಲದು.

ಜಾರಿ ನಿರ್ದೇಶನಾಲಯ ತನ್ನ ಎಲ್ಲ ಮಿತಿಗಳನ್ನು ಮೀರಿ ಮೋದಿ-ಶಾ ಕೈಗೊಂಬೆಯಾಗಿದೆ ಎಂಬ ಆರೋಪವನ್ನು ಹಲವು ರಾಜಕೀಯ ಪಕ್ಷಗಳ ಮುಖಂಡರು, ರಾಜಕೀಯ ವಿಶ್ಲೇಷಕರು, ಹೋರಾಟಗಾರರು, ಪತ್ರಕರ್ತರು ಹೇಳುತ್ತಲೇ ಬಂದಿದ್ದಾರೆ. ಹಿಂದೆ ಕಾಂಗ್ರೆಸ್‌ ಸರ್ಕಾರ ಇದ್ದಾಗಲೂ ವಿಪಕ್ಷಗಳ ನಾಯಕರನ್ನು ಗುರುಯಾಗಿಸಿ ಇಡಿ ದಾಳಿ ನಡೆಸಿದ್ದು ಇದೆ. ಆದರೆ ಮೋದಿ ಆಡಳಿತದಲ್ಲಿ ಇಷ್ಟೊಂದು ಪ್ರಮಾಣದಲ್ಲಿ, ದುರುದ್ದೇಶಪೂರಿತ ದಾಳಿ ಎಂದು ಸಾಮಾನ್ಯರಿಗೂ ಅರ್ಥವಾಗುವ ರೀತಿ ರಾಜಾರೋಷವಾಗಿ ದಾಳಿ ನಡೆಸುತ್ತಿದೆ. ಮತ್ತು ಈ ದಾಳಿ ಕೇವಲ ಪ್ರತಿಪಕ್ಷಗಳ ಸರ್ಕಾರಗಳಿರುವ ರಾಜ್ಯಗಳು, ಪ್ರತಿಪಕ್ಷಗಳ ನಾಯಕರು, ಟೀಕೆ ಟಿಪ್ಪಣಿ ಮಾಡುವವರ ಮೇಲೆ ಇಡಿಯನ್ನು ಛೂ ಬಿಡಲಾಗುತ್ತಿದೆ. ಪ್ರತಿಪಕ್ಷಗಳ ಹಲವು ನಾಯಕರು ಇಡಿ ದಾಳಿಯ ಭಯಕ್ಕೆ ಬಿಜೆಪಿ ಸೇರಿಕೊಂಡದ್ದೂ ಇದೆ. ದಾಳಿ ನಡೆದ ನಂತರ ಕೆಲವರು ಬಿಜೆಪಿ ಸೇರಿದ್ದೂ ಇದೆ. ಬಿಜೆಪಿ ಸೇರಿದ ನಂತರ ದಾಳಿಗಳು ನಿಂತು ಬಿಡುತ್ತವೆ. ತನಿಖೆ ಕೂಡ ಕ್ರಮೇಣ ಸ್ಥಗಿತಗೊಳ್ಳುತ್ತದೆ. ಅದಕ್ಕಾಗಿಯೇ ಎಲ್ಲ ಆರೋಪಗಳನ್ನೂ ತೊಳೆದು ಹಾಕುವ ‘ವಾಷಿಂಗ್‌ ಮಷೀನ್‌’ ಎಂಬುದಾಗಿ ಬಿಜೆಪಿ ಕುರಿತು ವ್ಯಂಗ್ಯ ಮಾಡಲಾಗಿದೆ. ಈ ವ್ಯಂಗ್ಯದಲ್ಲಿ ಹುರುಳಿದೆ. ಪುರಾವೆಗಳು ಕಣ್ಣಿಗೆ ರಾಚುವಂತಿವೆ.

ಕೇರಳದಲ್ಲಿ ಮಾರ್ಚ್‌ನಲ್ಲಿ ಬಿಡುಗಡೆಯಾದ ಎಂಪುರಾನ್‌ ಸಿನಿಮಾದಲ್ಲಿ ಗುಜರಾತ್‌ನ ಗೋದ್ರಾ ಗಲಭೆ ಹೋಲುವ ದೃಶ್ಯ ಇದೆ ಎಂಬ ಕಾರಣಕ್ಕೆ ಬಲಪಂಥೀಯರಿಂದ ಭಾರೀ ವಿರೋಧ ವ್ಯಕ್ತವಾದ ನಂತರ ಆ ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು. ಆದರೆ ವಾರದೊಳಗೆ ಆ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಗೋಕುಲಂ ಗೋಪಾಲನ್‌ ಅವರ ಚಿಟ್‌ಫಂಡ್‌ ಕಂಪೆನಿ ಮೇಲೆ ಇಡಿ ದಾಳಿ ನಡೆಸಿತ್ತು.

ಮೈಸೂರಿನ ಮುಡಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ  ಹದಿನಾಲ್ಕು ಬದಲಿ ನಿವೇಶನ ಹಂಚಿಕೆ ಅಕ್ರಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಖಾಸಗಿ ವ್ಯಕ್ತಿ ನೀಡಿದ್ದ ದೂರು ಆಧರಿಸಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ಹೈಕೋರ್ಟ್‌ ನಿರ್ದೇಶನದಂತೆ ಲೋಕಾಯುಕ್ತ ತನಿಖೆ ನಡೆಯುತ್ತಿರುವಾಗ ಓಡೋಡಿ ಬಂದು ಇಡಿ ಮೂಗು ತೂರಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಪಾರ್ವತಿಯವರ ಸಹೋದರ ಮತ್ತು ಸಚಿವ ಬೈರತಿ ಸುರೇಶ್‌ ವಿರುದ್ಧ ಸಮನ್ಸ್‌ ಜಾರಿಗೊಳಿಸಿತ್ತು. ಸಮನ್ಸ್‌ಗೆ ಹೈಕೋರ್ಟ್‌ ತಡೆ ನೀಡಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣಗಳಿಗೆ ಮಾತ್ರ ಜಾರಿ ನಿರ್ದೇಶನಾಲಯ ಮಧ್ಯಪ್ರವೇಶ ಮಾಡಬಹುದು. ಮುಡಾದಲ್ಲಿ ಹಣ ವರ್ಗಾವಣೆಯ ಪ್ರಶ್ನೆಯೇ ಇರಲಿಲ್ಲ. ಹೀಗೆ ಮಾಧ್ಯಮಗಳ ಉತ್ಪ್ರೇಕ್ಷಿತ ವರದಿಗಳು ಮತ್ತು ಬಿಜೆಪಿಯವರ ಅಪಪ್ರಚಾರಗಳಿಗೆ ಅನುವಾಗುವ ಅಧೋಗತಿಗೆ ಇಡಿಯನ್ನು ಇಳಿಸಲಾಗಿದೆ.

ಹಣಕಾಸಿನ ಅಪರಾಧದಡಿ ಇಡಿ ದಾಳಿಯಾಗಿ ಪ್ರಕರಣ ಎದುರಿಸುತ್ತಿರುವ ಉದ್ಯಮಸಂಸ್ಥೆಗಳು, ಖಾಸಗಿ ಬ್ಯಾಂಕುಗಳು, ಕಪ್ಪು ಪಟ್ಟಿಗೆ ಒಳಗಾದ ಸಂಸ್ಥೆಗಳು ಬಿಜೆಪಿಗೆ ಚುನಾವಣಾ ಬಾಂಡ್‌ ಮೂಲಕ ದೇಣಿಗೆ  ನೀಡಿರುವುದು, ಅದಕ್ಕೆ ಪ್ರತಿಯಾಗಿ ಇಡಿ ಪ್ರಕರಣಗಳು ಮುಕ್ತಾಯಗೊಂಡಿರುವ ‘ಇಂದ್ರಜಾಲ’ ಕಳೆದ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳಿರುವಾಗ ಬಟಾ ಬಯಲಾಗಿತ್ತು. ಚುನಾವಣಾ ಬಾಂಡ್‌ನ ಮಾಹಿತಿ ಬಹಿರಂಗಪಡಿಸಬೇಕು ಎಂಬ ಸುಪ್ರೀಂ ಕೋರ್ಟ್‌ ಎಸ್‌ಬಿಐಗೆ ಸುಪ್ರೀಂ ಕೋರ್ಟ್‌ ಚಾಟಿ ಬೀಸಿದ ನಂತರ ಅನಿವಾರ್ಯವಾಗಿ ಬಾಂಡ್‌ ನೀಡಿದವರ ಮಾಹಿತಿ ಬಹಿರಂಗಪಡಿಸಲಾಗಿತ್ತು. ಆ ವೇಳೆ ಮೋದಿ ಸರ್ಕಾರದ ಬಣ್ಣ ಬಯಲಾಗಿತ್ತು. ಆ ನಂತರ ಇಡಿ ದಾಳಿಗಳು ಪಕ್ಷಪಾತದ ಗಬ್ಬು ನಾತ ಬೀರುತ್ತಿವೆ. ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆ, ನಾ ಖಾವೂಂಗ ಖಾನೇ ದೂಂಗ ಎಂದು ಅಬ್ಬರದ ಭಾಷಣ ಬಿಗಿದ ನರೇಂದ್ರ ಮೋದಿ ಅವರು ಭ್ರಷ್ಟಾಚಾರವನ್ನು ತಡೆಯಲೆಂದೇ ಇರುವ ಜಾರಿ ನಿರ್ದೇಶನಾಲಯವನ್ನು ಹೇಗೆಲ್ಲ ದುರುಪಯೋಗಪಡಿಸಿಕೊಂಡಿದ್ದರು ಎಂಬುದು ದೇಶದ ಜನರ ಮುಂದೆ ಬಹಿರಂಗವಾಗಿತ್ತು. ಆರ್ಥಿಕ ಅಪರಾಧಿಗಳು, ಭ್ರಷ್ಟರನ್ನೆಲ್ಲ ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿ, ಮಂತ್ರಿ, ಮುಖ್ಯಮಂತ್ರಿ ಮಾಡಿ ಅವರನ್ನು ದೋಷಮುಕ್ತಗೊಳಿಸಿ ಪ್ರಜಾಪ್ರಭುತ್ವಕ್ಕೆ ಕಳಂಕ ತಂದಿದ್ದಾರೆ. ತಮ್ಮ ಮೂರನೆಯ ಅಧಿಕಾರಾವಧಿಯಲ್ಲೂ ಇಡಿಯ ದುರುಪಯೋಗವನ್ನು ನಿಲ್ಲಿಸಿಲ್ಲ ಮೋದಿ.

“ಸೂಕ್ತ ಸಾಕ್ಷ್ಯಾಧಾರಗಳಿಲ್ಲದೇ ಆರೋಪಗಳನ್ನು ಮಾಡುವುದು ಜಾರಿ ನಿರ್ದೇಶನಾಲಯದ (ಇಡಿ) ಹೊಸ ತನಿಖಾ ಮಾದರಿಯಾಗಿದೆ” ಎಂದು ಇದೇ ಮೇ 6ರಂದು ಸುಪ್ರೀಂಕೋರ್ಟ್‌ ವ್ಯಂಗ್ಯದ ಬಾಣದಿಂದ ಇರಿದಿತ್ತು. ಛತ್ತೀಸ್‌ಗಢ ಮಾಜಿ ಮುಖ್ಯಮಂತ್ರಿ ಭೂಪೇಶ್‌ ಬಾಘೆಲ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ, ವ್ಯಕ್ತಿಯೊಬ್ಬರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, “ಸಾಬೀತುಪಡಿಸಲಾಗದ ಆರೋಪಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾವು ಹಲವು ಇಡಿ ಪ್ರಕರಣಗಳನ್ನು ನೋಡಿದ್ದೇವೆ. ಇಡಿ ಸಾಕ್ಷ್ಯಾಧಾರಗಳಿಲ್ಲದೆ ಆರೋಪಗಳನ್ನು ಮಾಡುತ್ತಿರುವುದೇ ಒಂದು ಮಾದರಿಯಾಗಿ ಹೋಗಿದೆ” ಎಂದು ನ್ಯಾಯಮೂರ್ತಿ ಎ.ಎಸ್. ಓಕಾ  ಕಿಡಿಕಾರಿದ್ದರು.

ಚುನಾವಣಾ ಆಯೋಗ, ಸಿಬಿಐ, ಇಡಿ ಈ ಮೂರೂ ಸಂಸ್ಥೆಗಳನ್ನು ವಿರೋಧಿಗಳನ್ನು ಮಟ್ಟಹಾಕಲು, ಅವರ ಚಾರಿತ್ರ್ಯಹರಣ ಮಾಡಲು, ಮಾನಸಿಕವಾಗಿ ಕುಗ್ಗಿಸಲು ಮೋದಿ ಸರ್ಕಾರ ಬಳಸಿಕೊಳ್ಳುತ್ತಿರುವುದು ಅಕ್ಷಮ್ಯ. ಭಾರತದ ಚರಿತ್ರೆಯಲ್ಲಿ ಮೋದಿಯವರ ಆಡಳಿತ ಇಂತಹ ಹಲವು ಅಪಸವ್ಯಗಳನ್ನು ಮುಂದೆ ನಿಂತು ನಡೆಸತೊಡಗಿದೆ. ಸರ್ಕಾರದ ನೀತಿಗಳ ವಿರುದ್ಧ ಮಾತನಾಡಿದರೆ, ಹೋರಾಟ ಮಾಡಿದರೆ ದೇಶದ್ರೋಹದ ಪ್ರಕರಣ ದಾಖಲಿಸುವುದು, ಬಂಧಿಸಿ ಜಾಮೀನು ಸಿಗದಂತೆ ಮಾಡುವುದು, ವಿದ್ಯಾರ್ಥಿ ಮುಖಂಡರನ್ನು ವರ್ಷಾನುಗಟ್ಟಲೆ ಜೈಲಿನಲ್ಲಿಟ್ಟು ಅವರ ಭವಿಷ್ಯವನ್ನು ಹಾಳು ಮಾಡುವ ಪರಮ ದುಷ್ಟತನ ನಿರಾತಂಕವಾಗಿ ಜರುಗಿದೆ. ಆದರೆ ಕೋಟೆ ಕಟ್ಟಿ ಮೆರೆದವರು ಅಮರರಾಗಿ ಉಳಿದಿದ್ದಾರೆಯೇ? ಚರಿತ್ರೆ ಎಲ್ಲವನ್ನೂ ದಾಖಲಿಸಲಿದೆ. ತಾವು ಅಮರರಲ್ಲ ಮತ್ತು ಕಾಲವನ್ನು ಗೆದ್ದವರು ಯಾರೂ ಇಲ್ಲ ಎಂಬುದನ್ನು ಆಳುವವರು ಕ್ಷಣಕಾಲವಾದರೂ ನಿಂತು ಆಲೋಚಿಸಬೇಕಿದೆ. ವಿವೇಕದಿಂದ ವರ್ತಿಸಬೇಕಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X