ಜನಕಲ್ಯಾಣ ಕಾರ್ಯಕ್ರಮಗಳಿಗೆ ಹಣ ಹೊಂದಿಸಲು ಉಳ್ಳವರ ಮೇಲೆ ತೆರಿಗೆಯನ್ನು ಹೆಚ್ಚಿಸಬೇಕಾಗುತ್ತದೆ. ಆದರೆ ನವ ಉದಾರೀಕರಣ ನೀತಿಯು ಶ್ರೀಮಂತರನ್ನು ಪೋಷಿಸುತ್ತದೆ
2024-25ರ ಬಜೆಟ್‌ನಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ(ಪರಿಶಿಷ್ಟ ಜಾತಿ ಉಪ ಯೋಜನೆ) ಕಾಯ್ದೆ ಅನ್ವಯ ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಲಾಗಿದ್ದ 39,914.87 ಕೋಟಿ ರೂ.ಗಳಲ್ಲಿ ಇನ್ನೂ ಶೇ. 41.16ರಷ್ಟು ಅನುದಾನ ಬಿಡುಗಡೆಯೇ ಆಗಿಲ್ಲ ಎಂಬ ಸಂಗತಿ ಹೊರಬಿದ್ದಿದೆ. ಆರ್ಥಿಕ ವರ್ಷ ಕೊನೆಯಾಗಲು ಇನ್ನೆರಡು ತಿಂಗಳು ಬಾಕಿ ಇದೆಯಷ್ಟೇ. ಆದರೆ ಜನವರಿ 17ರವರೆಗೆ 23,485.70 ಕೋಟಿ ರೂ. ಬಿಡುಗಡೆಯಾಗಿದ್ದು, ಇನ್ನೂ 16,429.17 ಕೋಟಿ ರೂ. ಬಾಕಿ ಉಳಿದಿದೆ!
ಇದರ ಜೊತೆಗೆ ಇನ್ನೊಂದು ಆಘಾತಕಾರಿ ಸಂಗತಿಯೂ ಹೊರಬಿದ್ದಿದೆ. ”ಎಸ್‌ಸಿಎಸ್‌ಪಿ/ಟಿಎಸ್‌ಪಿ ಅಡಿ 34 ಇಲಾಖೆಗಳಿಗೆ ಹಂಚಿಕೆಯಾದ ಹಣದಲ್ಲಿ ಬಳಕೆಯಾಗಿರುವುದು ಶೇ.51ರಷ್ಟು ಹಣವಷ್ಟೇ. ಅನುದಾನ ಬಳಕೆ ಮಾಡಿರುವ ಪೈಕಿ ಸಮಾಜ ಕಲ್ಯಾಣ ಇಲಾಖೆ ಶೇ. 45, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಕೇವಲ ಶೇ. 22ರಷ್ಟು ಮಾತ್ರ ಪ್ರಗತಿ ತೋರಿಸಿವೆ” ಎಂಬ ಸಂಗತಿ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಇತ್ತೀಚೆಗೆ ನಡೆಸಿದ ನೋಡಲ್ ಏಜೆನ್ಸಿಗಳ ಸಭೆಯಲ್ಲಿ ಚರ್ಚೆಯಾಗಿದೆ.
ಪರಿಶಿಷ್ಟರಿಗೆ ಕಾಯ್ದೆಯನ್ವಯ ಶೇ.24.10ರಷ್ಟು ಅನುದಾನವನ್ನು ಸರ್ಕಾರ ಮೀಸಲಿಡಬೇಕು. ಬಜೆಟ್‌ನ ಒಟ್ಟು ಗಾತ್ರದ ಆಧಾರದಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿಯ ಪಾಲು ಹೋಗುತ್ತದೆ. ಇಲಾಖೆವಾರು, ಕಾರ್ಯಕ್ರಮಗಳ ಅನ್ವಯ ಹಣ ಹಂಚಿಕೆಯಾಗುತ್ತದೆ. ಈ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಬಹುದೇ, ಬಳಸಿದರೆ ಎಷ್ಟರಮಟ್ಟಿಗೆ ತಪ್ಪು ಎಂಬ ಚರ್ಚೆ ಮೊದಲಿನಿಂದಲೂ ಇದೆ. ಹಾಗೆ ಬಳಕೆಯಾದರೂ ‘ಶಕ್ತಿ’ ಯೋಜನೆಯಂತಹ ಫಲಾನುಭವಿಗಳಲ್ಲಿ ಪರಿಶಿಷ್ಟರು ಎಷ್ಟು ಪ್ರಮಾಣದಲ್ಲಿದ್ದರು ಎಂದು ಲೆಕ್ಕ ಹಾಕುವುದು ಹೇಗೆ? ಇದು ಅಸಾಧ್ಯದ ಮಾತು. ಹೀಗಾಗಿ ಮುಂಬರುವ ಸಾಲಿನಲ್ಲಿ ಸಾರಿಗೆ ಇಲಾಖೆಗೆ ನೀಡುವ ಪಾಲಿನಲ್ಲಿ ಶೇ.24.10 ಮಿತಿಯನ್ನಷ್ಟೇ ಪಾಲಿಸುವುದಾಗಿ ಸರ್ಕಾರ ಹೇಳುತ್ತಿದೆ. ಈ ಮಿತಿಯನ್ನು ಮೀರಿಯೂ ಫಲಾನುಭವಿಗಳು ಇರಬಹುದು, ಮಿತಿಗಿಂತ ಕಡಿಮೆಯೂ ಫಲಾನುಭವಿಗಳು ಇರಬಹುದು.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ರಾಯಚೂರು ಗ್ರಾಮೀಣ ಕೂಲಿಕಾರರ ಸತ್ಯಾಗ್ರಹ; ಸ್ವಾರ್ಥರಹಿತ ಜನಹಿತದ ಬೇಡಿಕೆಗಳು ಸರ್ಕಾರದ ಕಣ್ತೆರೆಸಲಿ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಯ್ದೆಯನ್ವಯ ಕೊಡಬೇಕಾದಷ್ಟು ಹಣ ನೀಡಿಲ್ಲ, ಬಜೆಟ್ ಗಾತ್ರ ಹೆಚ್ಚಾದರೂ ಪರಿಶಿಷ್ಟರ ಅನುದಾನ ಏರಿಕೆಯಾಗಲಿಲ್ಲ, ಅದನ್ನು ಸರಿಪಡಿಸಿದ್ದೇವೆ ಎಂದು ಕಾಂಗ್ರೆಸ್ ಸರ್ಕಾರ ಹೇಳಿಕೊಂಡಿತ್ತು. ನಿಗದಿಪಡಿಸಿದ ಹಣದ ದುರುಪಯೋಗ ಮಾಡಿಕೊಳ್ಳಲು ಕಳ್ಳಗಿಂಡಿಯಾಗಿದ್ದ ಕಾಯ್ದೆಯ ಸೆಕ್ಷನ್ 7 (ಡಿ) ರದ್ದುಗೊಳಿಸುವ ಮಹತ್ವದ ನಿರ್ಧಾರವನ್ನೂ ಕಾಂಗ್ರೆಸ್ ಸರ್ಕಾರ ಕೈಗೊಂಡಿತ್ತು. ಈ ಸೆಕ್ಷನ್ ಬಳಸಿಕೊಂಡು ಹೆದ್ದಾರಿ ನಿರ್ಮಾಣದಂತಹ ಸಾಮಾನ್ಯ ಕೆಲಸಗಳಿಗೂ ಪರಿಶಿಷ್ಟರ ಹಣ ಹೋಗುತ್ತಿತ್ತು. ಅದನ್ನು ತೆಗೆದು ಹಾಕುವ ನಿರ್ಧಾರ ಖಂಡಿತ ಮಹತ್ವದ್ದಾಗಿತ್ತು. ಅದರಂತೆಯೇ ಕಾಯ್ದೆಯ ಸೆಕ್ಷನ್ ‘ಸಿ’ ರದ್ದಾಗಬೇಕೆಂಬ ಆಗ್ರಹವೂ ಇದೆ. ಎಲ್ಲ ಜಾತಿ, ಧರ್ಮಗಳಿಗೂ ಅನ್ವಯವಾಗುವ ಶಿಕ್ಷಣ, ಆರೋಗ್ಯದಂತಹ ಕ್ಷೇತ್ರಗಳಿಗೆ ಹಣ ಬಿಡುಗಡೆ ಮಾಡುವಾಗ ಪರಿಶಿಷ್ಟರ ಸಂಖ್ಯೆಗೆ ಅನುಗುಣವಾಗಿ ಶೇ.24.10ರಷ್ಟು ಅನುದಾನ ಹಂಚಿಕೆ ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳಲು ಸೆಕ್ಷನ್ 7 (ಸಿ) ಬಳಕೆಯಾಗುತ್ತಿದೆ. ಆದರೆ ಈ ಸಾಮಾನ್ಯ ಸಂಗತಿಗಳಲ್ಲಿ ಪರಿಶಿಷ್ಟರ ನಿಖರ ಸಂಖ್ಯೆ ಎಷ್ಟು ಎಂಬುದು ತಿಳಿಯದು. ಗ್ಯಾರಂಟಿಗಳಿಗೆ ಹಣ ಬಳಸುವಾಗ ಸೆಕ್ಷನ್ 7(ಸಿ) ಉಪಯೋಗಿಸಿಕೊಳ್ಳಲಾಗುತ್ತದೆ. ಫಲಾನುಭವಿಗಳ ಲೆಕ್ಕವಿಲ್ಲದೆ ಹಣ ವಿನಿಯೋಗವಾದರೆ ಪರಿಶಿಷ್ಟರ ಹಣ ಬೇರೆಯವರಿಗೂ ಬಳಕೆಯಾಗುತ್ತದೆ ಎಂಬುದು ಸತ್ಯ. ಹೀಗಾಗಿ ಸೆಕ್ಷನ್ 7 (ಸಿ) ಕೂಡ ತೆರವಾಗಬೇಕು ಎಂಬುದು ಹೋರಾಟಗಾರರ ಆಗ್ರಹ. ಆದರೆ ಅನುದಾನ ಘೋಷಿಸಿ, ಬಿಡುಗಡೆಯೇ ಆಗದಿದ್ದರೆ, ಹೇಗೆ ನೋಡಬೇಕು?
ಸಾಮಾನ್ಯವಾಗಿ ಬಜೆಟ್‌ನಲ್ಲಿ ಅಂದಾಜಿಸಿದ್ದಷ್ಟೇ ಅನುದಾನ ಬಿಡುಗಡೆಯಾಗದೆ ಇರಬಹುದು. ಬಜೆಟ್‌ನಲ್ಲಿ ಅಂದಾಜಿಸಿದ್ದಷ್ಟು ಆದಾಯ ಬಾರದ ಕಾರಣ, ಬಂದಿದ್ದರಲ್ಲಿ ಇಷ್ಟು ಹಂಚಿಕೆ ಮಾಡಿದ್ದೇವೆ ಎಂದು ಸರ್ಕಾರ ಹೇಳಿಬಿಡಬಹುದು. ಆದರೆ ಅಂದಾಜಿಸಿದ್ದಕ್ಕೂ ಕಾಣುತ್ತಿರುವ ಅಂತರಕ್ಕೂ ದೊಡ್ಡ ವ್ಯತ್ಯಾಸವಿದ್ದಾಗ ಪ್ರಶ್ನೆಗಳು ಏಳುತ್ತವೆ. ಈಗ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳಿಗೆ ಪರಿಶಿಷ್ಟರ ಹಣದಲ್ಲಿ ಹೆಚ್ಚಿನ ಪಾಲು ಹೋಗಿರುವುದು ಕಾಣುತ್ತಿದೆ. ಪರಿಶಿಷ್ಟರಿಗಾಗಿ ಇರುವ ಇತರ ಕಾರ್ಯಕ್ರಮಗಳಿಗೆ ಅನುದಾನ ಕೊರತೆ ಉಂಟುಮಾಡುವುದು ಎಷ್ಟು ಸರಿ?
ಜನಕಲ್ಯಾಣ ಕಾರ್ಯಕ್ರಮಗಳಿಗೆ ಹಣ ಹೊಂದಿಸಲು ಉಳ್ಳವರ ಮೇಲೆ ತೆರಿಗೆಯನ್ನು ಹೆಚ್ಚಿಸಬೇಕಾಗುತ್ತದೆ. ಆದರೆ ನವ ಉದಾರೀಕರಣ ನೀತಿಯು ಶ್ರೀಮಂತರನ್ನು ಪೋಷಿಸುತ್ತದೆ. ತೆರಿಗೆ ಹೆಚ್ಚಳವಾಗದಿದ್ದರೆ ಅಲ್ಲಿನ ಹಣ ಇಲ್ಲಿಗೆ, ಇಲ್ಲಿನ ಹಣ ಅಲ್ಲಿಗೆ ಎತ್ತಿಹಾಕುವ ಕಸರತ್ತು ಮಾಡಬೇಕಾಗುತ್ತದೆ. ಆದಾಯ ತೆರಿಗೆ ವಿಧಿಸುವ ಹಕ್ಕು ರಾಜ್ಯ ಸರ್ಕಾರಗಳಿಗೆ ಇಲ್ಲವಾದರೂ ಐಷಾರಾಮಿ ಟ್ಯಾಕ್ಸ್‌ಗಳನ್ನು ಹಾಕಲು ಅವಕಾಶಗಳಿವೆ. ಆದರೆ ಐಷಾರಾಮಿ ತೆರಿಗೆಗಳನ್ನು ಹಾಕಿದರೆ ಹೂಡಿಕೆ ಹೆಚ್ಚಳವಾಗುವುದಿಲ್ಲ ಎಂಬ ವಾದವನ್ನು ಸರ್ಕಾರಗಳು ಮಾಡುತ್ತವೆ. ಈ ಧೋರಣೆಯನ್ನು ಬಿಡಬೇಕಾದ ಅಗತ್ಯವಿದೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಪ್ರಚೋದನಕಾರಿ ಭಾಷಣ – ಆಯುಧ ಹಂಚಿಕೆ ಕಾನೂನು ಉಲ್ಲಂಘನೆಯಲ್ಲವೇ?
2023-24ನೇ ಸಾಲಿನಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅಡಿ 35221.84 ಕೋಟಿ ರೂ. ಘೋಷಣೆ ಆಗಿತ್ತು. ಶೇ. 97.23 ಅನುದಾನ ಖರ್ಚಾಗಿರುವುದಾಗಿ ಸರ್ಕಾರ ಹೇಳುತ್ತಿದೆ. 2024-25ನೇ ಸಾಲಿನಲ್ಲಿ 39,914.87 ಕೋಟಿ ರೂ.ಗಳನ್ನು ಎಸ್‌ಸಿಎಸ್‌ಪಿ/ಟಿಎಸ್‌ಪಿಗೆ ವಿನಿಯೋಗಿಸುವುದಾಗಿ ಅಂದಾಜಿಸಲಾಗಿತ್ತು. ಅದರಲ್ಲಿ ಶೇ. 41.16ರಷ್ಟು ಅನುದಾನ ಬಿಡುಗಡೆಯೇ ಆಗಿಲ್ಲ. ಈಗಿನ ಆರ್ಥಿಕ ವರ್ಷಕ್ಕೆ ಇರುವುದು ಇನ್ನೆರಡೇ ತಿಂಗಳು. ಆಮೇಲೆ ಹೊಸ ಬಜೆಟ್ ಮಂಡನೆಯಾಗುತ್ತದೆ. ಈ ವರ್ಷದ ಲೆಕ್ಕ ಚುಕ್ತಾ ಆಗುತ್ತದೆ. ಬಿಜೆಪಿ ಮಾಡುತ್ತಿದ್ದ ತಪ್ಪನ್ನೇ ಕಾಂಗ್ರೆಸ್ ಸರ್ಕಾರವೂ ಮುಂದುವರಿಸುತ್ತಿದೆ. ಗ್ಯಾರಂಟಿಗಳಂತಹ ಜನಕಲ್ಯಾಣ ಕಾರ್ಯಕ್ರಮಗಳನ್ನು ತಂದಿದ್ದನ್ನು ಒಪ್ಪಲೇಬೇಕು. ಆದರೆ ಅವುಗಳ ನಿರ್ವಹಣೆಯಲ್ಲಿ ಕಾಣಿಸುತ್ತಿರುವ ಗೋಜಲಿಗೂ ಪರಿಶಿಷ್ಟರ ಹಣ ಸಂಪೂರ್ಣವಾಗಿ ಬಿಡುಗಡೆಯಾಗದಿರುವುದಕ್ಕೂ, ಬಿಡುಗಡೆಯಾದರೂ ಇತರ ಮಾನವ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಕೆಯಾಗದಿರುವುದಕ್ಕೂ ಸಂಬಂಧಗಳಿವೆಯೇ ಎಂಬುದನ್ನು ಚರ್ಚಿಸಬೇಕಿದೆ. ಈ ತಾರತಮ್ಯದ ವಿರುದ್ಧ ದನಿ ಎತ್ತಲೇಬೇಕಿದೆ.
“ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನ ಖರ್ಚು ಮಾಡದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಯ್ದೆ ಹೇಳುತ್ತದೆ. ಕಾಯ್ದೆ ಗಂಭೀರವಾಗಿದ್ದು ಅದರಂತೆ ಯಾರು ನಿರ್ಲಕ್ಷ್ಯ ಮಾಡುತ್ತಾರೆ, ಅವರ ವಿರುದ್ಧ ಕಾಯ್ದೆಯನ್ವಯ ಕ್ರಮ ಕೈಗೊಳ್ಳುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಎಚ್ಚರಿಕೆ ನೀಡಿದ್ದುಂಟು. ಈಗ ಬಿಡುಗಡೆಯಾಗಿರುವ ಹಣ ಸದ್ಬಳಕೆಯಾಗದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸರ್ಕಾರ ಕ್ರಮ ಜರುಗಿಸುತ್ತದೆಯೋ ಅಥವಾ ಎಂದಿನಂತೆ ಮುಂದುವರಿಯುತ್ತದೆಯೋ ಎಂಬುದು ಸದ್ಯದ ಪ್ರಶ್ನೆ.
