ದೇಶದ ಶೇ.40ಕ್ಕಿಂತ ಕಡಿಮೆ ಜೈಲುಗಳಲ್ಲಿ ಮಾತ್ರವೇ ಮಹಿಳೆಯರಿಗೆ ಮಾಸಿಕ ಋತುಚಕ್ರಕ್ಕೆ ಸಂಬಂಧಿಸಿದ ಸ್ಯಾನಿಟರಿ ನ್ಯಾಪ್ಕಿನ್ಸ್ ಒದಗಿಸಲಾಗುತ್ತಿದೆ. ದೇಶದ ಜೈಲುಗಳ ಶೇ.75ರಷ್ಟು ಮಹಿಳಾ ವಾರ್ಡ್‌ಗಳು ಅಡುಗೆಮನೆ ಮತ್ತು ಇತರೆ ಸಾಮಾನ್ಯ ಸೌಲಭ್ಯಗಳನ್ನು ಪುರುಷ ವಾರ್ಡ್ ಗಳೊಂದಿಗೆ ಹಂಚಿಕೊಳ್ಳುವ ಪರಿಸ್ಥಿತಿಯಿದೆ
ಜೈಲುಗಳ ಸುಧಾರಣೆ ಕುರಿತು ಸುಪ್ರೀಮ್ ಕೋರ್ಟ್ ನೇಮಿತ ಸಮಿತಿಯೊಂದು ನೀಡಿರುವ ವರದಿಯ ಅಂಶಗಳು ಮಹಿಳೆಯನ್ನು ದೇವತೆಯೆಂದು ಪೂಜಿಸುತ್ತೇವೆಂದು ಎದೆಯುಬ್ಬಿಸುವ ಸಮಾಜಕ್ಕೆ ಘನತೆ ನೀಡುವಂತಹುವಲ್ಲ. ವರ್ಷದ ಹಿಂದೆ ಸುಪ್ರೀಮ್ ಕೋರ್ಟಿಗೆ ಸಲ್ಲಿಸಲಾಗಿದ್ದ ಈ ವರದಿಯನ್ನು ಇತ್ತೀಚೆಗೆ ವಿಚಾರಣೆಗೆ ಎತ್ತಿಕೊಳ್ಳಲಾಗಿತ್ತು. ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಅಮಿತಾವ ರಾಯ್ ನೇತೃತ್ವದಲ್ಲಿ ಈ ಸಮಿತಿಯನ್ನು ರಚಿಸಲಾಗಿತ್ತು. ವರದಿಯ ಶಿಫಾರಸುಗಳನ್ನು ಗಂಭೀರವಾಗಿ ಪರಿಗಣಿಸಿ ಜಾರಿಗೊಳಿಸಬೇಕಿದೆ. ಸಮಿತಿಯ ಶಿಫಾರಸುಗಳ ಕುರಿತು ರಾಜ್ಯ ಸರ್ಕಾರಗಳು ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಮ್ ಕೋರ್ಟು ನಿರ್ದೇಶನ ನೀಡಿದೆ.
ಅತ್ಯಂತ ಮೂಲಭೂತ ಸೌಲಭ್ಯಗಳ ವಿಚಾರದಲ್ಲಿ ಪುರುಷರು ಮತ್ತು ಮಹಿಳಾ ಕೈದಿಗಳ ನಡುವೆ ತೀವ್ರ ಭೇದ ಭಾವವಿದೆ ಎಂಬುದು ಈ ವರದಿಯ ತಿರುಳು. ಮನುವಾದವೇ ಮೆರೆದಿರುವ ಪಿತೃಪ್ರಧಾನ ಸಮಾಜದಲ್ಲಿ ಮಹಿಳೆಯ ಪಾಲಿಗೆ ಜೈಲುಗಳ ಒಳಗು ಮತ್ತು ಹೊರಗು ಎರಡೂ ಒಂದೇ ಆಗಿರುವುದು ಸೋಜಿಗವೇನೂ ಅಲ್ಲ!
ಭಾರತೀಯ ಜೈಲುಗಳು ದುಪ್ಪಟ್ಟು ಅಥವಾ ಮೂರುಪಟ್ಟು ಹೆಚ್ಚು ಸಂಖ್ಯೆಯ ಕೈದಿಗಳಿಂದ ಕಿಕ್ಕಿರಿದಿವೆ. ಹುಟ್ಟಿನಿಂದಲೇ ದಮನಿತಳು ಮಹಿಳೆ. ಆಕೆಯನ್ನು ಸಮಾನತೆಯಿಂದ ಕಾಣುವ ವ್ಯವಸ್ಥೆ ಸಮಾಜದಲ್ಲೇ ಇನ್ನೂ ಸೃಷ್ಟಿಯಾಗಿಲ್ಲ. ಜೈಲುಗಳಲ್ಲಿ ಸಮಾನತೆ ಎಲ್ಲಿಂದ ಬಂದೀತು.
ಗೋವಾ, ದೆಹಲಿ ಹಾಗೂ ಪುದುಚೇರಿಯಲ್ಲಿ ಮಾತ್ರವೇ ಮಹಿಳಾ ಕೈದಿಗಳು ತಮ್ಮ ಮಕ್ಕಳನ್ನು ನಡುವೆ ಗಾಜಿನ ಗೋಡೆ ಅಥವಾ ಸರಳುಗಳ ಅಡೆತಡೆಯಿಲ್ಲದೆ ಭೇಟಿ ಮಾಡಬಹುದು. ದೇಶದ ಶೇ.40ಕ್ಕಿಂತ ಕಡಿಮೆ ಜೈಲುಗಳಲ್ಲಿ ಮಾತ್ರವೇ ಮಹಿಳೆಯರಿಗೆ ಮಾಸಿಕ ಋತುಚಕ್ರಕ್ಕೆ ಸಂಬಂಧಿಸಿದ ಸ್ಯಾನಿಟರಿ ನ್ಯಾಪ್ಕಿನ್ಸ್ ಒದಗಿಸಲಾಗುತ್ತಿದೆ. ದೇಶದ ಜೈಲುಗಳ ಶೇ.75ರಷ್ಟು ಮಹಿಳಾ ವಾರ್ಡ್‌ಗಳು ಅಡುಗೆಮನೆ ಮತ್ತು ಇತರೇ ಸಾಮಾನ್ಯ ಸೌಲಭ್ಯಗಳನ್ನು ಪುರುಷ ವಾರ್ಡ್ ಗಳೊಂದಿಗೆ ಹಂಚಿಕೊಳ್ಳುವ ಪರಿಸ್ಥಿತಿಯಿದೆ.
ವೈದ್ಯಕೀಯ ಸೌಲಭ್ಯ, ವೈದ್ಯಕೀಯ ಸಿಬ್ಬಂದಿ, ಕಾನೂನು ಮತ್ತು ಆಪ್ತಸಮಾಲೋಚನೆಯ ನೆರವು, ಕೂಲಿ ಕೆಲಸ ಹಾಗೂ ಮನರಂಜನೆಯ ಸೌಲಭ್ಯಗಳು ಪುರುಷ ಕೈದಿಗಳಿಗೆ ಸರಿಸಮನಾಗಿ ಮಹಿಳಾ ಕೈದಿಗಳಿಗೆ ದೊರೆಯುತ್ತಿಲ್ಲ. ಮಹಿಳೆಯರಿಗೆ ಪ್ರತ್ಯೇಕ ಜೈಲು ಸೌಲಭ್ಯವಿಲ್ಲ. ಒಟ್ಟಾರೆ ವಿಶಾಲ ಜೈಲು ವ್ಯವಸ್ಥೆಯ ಪುಟ್ಟ ದ್ವೀಪದಂತಹ ಭಾಗದಲ್ಲಿ ಅವರನ್ನು ಇಡಲಾಗುತ್ತಿದೆ. ಸೌಲಭ್ಯಗಳಿಂದ ವಂಚಿತರಾಗಲು ಈ ವ್ಯವಸ್ಥೆಯು ಮುಖ್ಯ ಕಾರಣ ಎಂದು ವರದಿ ಹೇಳುತ್ತದೆ.
ವಿಚಾರಣಾಧೀನ ಕೈದಿಗಳು- ಶಿಕ್ಷೆಗೊಳಗಾದ ಅಪರಾಧಿಗಳು ಎಂಬ ತರತಮವಿಲ್ಲದೆ ಎರಡೂ ವರ್ಗಗಳ ಮಹಿಳಾ ಕೈದಿಗಳನ್ನು ಜೊತೆ ಜೊತೆಗೆ ಇಡಲಾಗುತ್ತಿದೆ. ಮಹಿಳೆಯರ ದೈಹಿಕ ತಪಾಸಣೆ ನಡೆಸುವ ತರಬೇತಿಯನ್ನು ಕೂಡ ಮೇಟ್ರನ್‌ಗಳಿಗೆ ನೀಡಲಾಗಿಲ್ಲ. ಜೈಲು ಸಿಬ್ಬಂದಿಯಿಂದ ತಮ್ಮ ಮೇಲೆ ನಡೆಯುವ ಯಾವುದೇ ಬಗೆಯ ದೌರ್ಜನ್ಯ ದುರ್ಬಳಕೆಯ ದೂರುಗಳನ್ನು ನೀಡುವ ಅವಕಾಶ ದೇಶದ 10 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಮಾತ್ರ ಉಂಟು.
ಮಹಿಳಾ ಕೈದಿಗಳಿಗೆ ಪ್ರತ್ಯೇಕ ವೈದ್ಯಕೀಯ ಮತ್ತು ಮನೋವೈದ್ಯಕೀಯ ವಾರ್ಡುಗಳಿಲ್ಲ. ಹೆರಿಗೆಗೆ ಮೂಲಭೂತ ಸೌಲಭ್ಯಗಳನ್ನೂ ಕಲ್ಪಿಸಲಾಗಿಲ್ಲ. ಮಹಿಳಾ ಆರೋಗ್ಯದ ಅಗತ್ಯಗಳನ್ನು ಪೂರೈಸುವ ಯಾವ ಏರ್ಪಾಡೂ ಇಲ್ಲ. 19 ರಾಜ್ಯಗಳ ಜೈಲುಗಳು ಮತ್ತು ಆರು ಕೇಂದ್ರಾಡಳಿತ ಪ್ರದೇಶಗಳ ಜೈಲುಗಳಲ್ಲಿ ಮಹಿಳಾ ಕೈದಿಗಳಿಗೆ ಮನೋವ್ಯಾಧಿಯ ವಾರ್ಡುಗಳಿಲ್ಲ.
ಮಹಿಳಾ ಕೈದಿಗಳ ದೇಹಗಳ ನಿಯಂತ್ರಣವೂ ಅವರದಲ್ಲ ಎಂಬಷ್ಟು ಅಸಹಾಯಕ ಪರಿಸ್ಥಿತಿ. ಪ್ರತಿ ಸಲ ನ್ಯಾಯಾಲಯದ ವಿಚಾರಣೆಯಿಂದ ಹಿಂದಿರುಗಿದಾಗಲೂ ಮಹಿಳಾ ಗಾರ್ಡುಗಳ ಮುಂದೆ ಸಂಪೂರ್ಣ ಬೆತ್ತಲು ನಿಲ್ಲಬೇಕು. ಮಾಸಿಕ ಋತುಚಕ್ರದ ದಿನಗಳಲ್ಲೂ ಈ ಅವಹೇಳನದಿಂದ ಬಿಡುಗಡೆಯಿರದು. ಗಾರ್ಡುಗಳು ಎಲ್ಲಿ ಬೇಕಾದರೂ ಕೈ ಹಾಕಿ ಶೋಧಿಸಬಹುದು. ಜೈಲುಗಳು ಘನತೆಯ ಮತ್ತು ಆರೋಗ್ಯಪೂರ್ಣ ಬದುಕಿನಿಂದ ಬಹುದೂರ.
ಹಲವು ಜೈಲುಗಳಲ್ಲಿ ಒಂದು ಕೊಳಕು ಪಾಯಿಖಾನೆಯನ್ನು 40ಕ್ಕೂ ಹೆಚ್ಚು ಮಂದಿ ಉಪಯೋಗಿಸಬೇಕಾದ ದುಸ್ಥಿತಿ. ಹುಳುಗಳು ಕೀಟಗಳೊಂದಿಗೆ ಬೆಂದ ಅನ್ನ ತರಕಾರಿ. ಅದು ಕೂಡ ಹಸಿವು ಹಿಂಗಿಸುವಷ್ಟು ಸಿಗದು. ಮಹಾರಾಷ್ಟ್ರ ಜೈಲು ಕೈಪಿಡಿಯ ಪ್ರಕಾರ ಪುರುಷ ಕೈದಿಗಳಿಗೆ ನೀಡುವುದಕ್ಕಿಂತ ಕಡಿಮೆ ರೊಟ್ಟಿಗಳು ಸಾಕು ಮಹಿಳಾ ಕೈದಿಗಳಿಗೆ. ಕೆಲವರಿಗೆ ಅಷ್ಟೇ ಸಾಲಬಹುದು. ಆದರೆ ಈ ಕೆಲವರೇ ಎಲ್ಲರೂ ಅಲ್ಲವಲ್ಲ? ಕೈದಿಗಳಿಗೆ ನೀಡುವ ಆಹಾರವನ್ನು ವೈದ್ಯಾಧಿಕಾರಿ ಪ್ರತಿದಿನ ಪರೀಕ್ಷಿಸುತ್ತಾರೆ. ಆದರೆ ಪರೀಕ್ಷೆಗೆಂದು ವೈದ್ಯಾಧಿಕಾರಿಗೆ ನೀಡುವ ಆಹಾರವೇ ಬೇರೆ. ಪುರುಷ ಕೈದಿಗಳಿಗಿರುವ ಬಯಲು ಬಂದೀಖಾನೆಗಳ ಅವಕಾಶದಿಂದ ವಂಚಿತರು ಮಹಿಳಾ ಕೈದಿಗಳು. ಕೆಲವೇ ಜೈಲುಗಳು ಈ ಮಾತಿಗೆ ಅಪವಾದ. 14 ವರ್ಷಗಳ ಕನಿಷ್ಠ ಜೀವಾವಧಿ ಶಿಕ್ಷೆಯನ್ನು ಸನ್ನಡತೆಯಿಂದ ಪೂರ್ಣಗೊಳಿಸಿದರೆ ಬಿಡುಗಡೆಯುಂಟು ಪುರುಷರಿಗೆ. ಆದರೆ ಮಹಿಳೆಯರಿಗೆ ಎಲ್ಲ ಜೈಲುಗಳಲ್ಲೂ ಈ ಸೌಲಭ್ಯವಿಲ್ಲ.
ರಾಷ್ಟ್ರೀಯ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಪ್ರಕಾರ 2021ರ ಹೊತ್ತಿಗೆ ದೇಶದಲ್ಲಿ ಒಟ್ಟು 22,918 ಮಹಿಳಾ ಕೈದಿಗಳಿದ್ದರು. 1418 ಕೈದಿಗಳು ತಮ್ಮ 1,601 ಮಕ್ಕಳನ್ನೂ ತಮ್ಮೊಂದಿಗೆ ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಈ ಮಕ್ಕಳಿಗೆ ಸೂಕ್ತ ಶಿಕ್ಷಣ, ಆವರಣ, ಪೌಷ್ಟಿಕ ಆಹಾರದ ಮಾತೇ ಇಲ್ಲ. ಆರು ವರ್ಷ ತುಂಬಿದ ನಂತರ ಈ ಮಕ್ಕಳು ತಾಯಂದಿರೊಂದಿಗೆ ಜೈಲಿನಲ್ಲಿ ಇರುವಂತಿಲ್ಲ. ಈ ವಯೋಮಿತಿಯನ್ನು ಹನ್ನೆರಡು ವರ್ಷಗಳಿಗೆ ಏರಿಸಬೇಕೆಂದೂ, ಗರ್ಭಿಣಿ ಕೈದಿಗಳ ಪ್ರಸವಕ್ಕೆ ಸೂಕ್ತ ಸೌಲಭ್ಯ ಕಲ್ಪಿಸಬೇಕೆಂದು ಗೃಹವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಇತ್ತೀಚಿನ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಲಿಂಗತ್ವ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಜೈಲು, ವಿಶೇಷ ವ್ಯವಸ್ಥೆಯ ಸೊಲ್ಲೇ ಇಲ್ಲ. ಲಿಂಗಸೂಕ್ಷ್ಮ ನೀತಿಗಳು, ಸಮಾನ ಸೌಲಭ್ಯಗಳು ಜೈಲುಗಳಲ್ಲಿ ರೂಪುಗೊಳ್ಳಲೇಬೇಕು. ಈ ದಿಸೆಯಲ್ಲಿ ಪ್ರಭುತ್ವದ ನಿರ್ಲಕ್ಷ್ಯಕ್ಕೆ ಚಾಟಿ ಬೀಸಿ ಎಚ್ಚರಿಸುವುದು ನ್ಯಾಯಾಂಗದಿಂದ ಮಾತ್ರ ಸಾಧ್ಯ.