ಈ ದಿನ ಸಂಪಾದಕೀಯ | ಮಹಿಳಾ ದಿನ ಕೇವಲ ಆಚರಣೆ ಮಾತ್ರವಲ್ಲ ಹಿರಿಮೆ

Date:

Advertisements
ಹಲವು ದೇಶಗಳು ಮಹಿಳೆಯರ ದಿನಕ್ಕಾಗಿ ಮಾರ್ಚ್ 8ಅನ್ನು ರಜಾದಿನವನ್ನಾಗಿ ಘೋಷಿಸಿವೆ. ಆದರೆ, ಭೀಮನ ಅಮಾವಾಸ್ಯೆಗೆ ರಜಾ ನೀಡುವ ಭಾರತದಲ್ಲಿ ಮಹಿಳಾದಿನಕ್ಕೆ ರಜೆ ಇಲ್ಲ. ಇಂತಹ ವಿಪರ್ಯಾಸಗಳ ವಿರುದ್ಧ ಮತ್ತೊಮ್ಮೆ ದನಿ ಎತ್ತುವ, ಘೋಷಣೆಗಳನ್ನು ಮೊಳಗಿಸುವ ಕಾಲ ಬಂದಿದೆ. 

ನಾವು ಈ ನೆಲದ ಹೆಣ್ಣುಗಳು, ಆಕಾಶದ ಅರ್ಧ ನಕ್ಷತ್ರಗಳು ನಾವು, ನಮಗೂ ಈ ನೆಲದಲ್ಲಿ ಬದುಕುವ ಸಮಾನವಾದ ಹಕ್ಕಿದೆ ಎಂಬ ಮಹಿಳೆಯರ ಕೂಗು ಮೊಳಗಲು ಶುರುವಾಗಿದ್ದು ನೆನ್ನೆ-ಮೊನ್ನೆಯಲ್ಲಲ್ಲ, ಶತಮಾನಗಳೇ ಕಳೆದಿವೆ. ಮಹಿಳಾ ದಿನವೆಂಬುದು ಕೇವಲ ಆಚರಣೆಯ ಭಾಗವಾಗಿ ಬಂದುದ್ದಲ್ಲ, 150 ವರ್ಷಗಳ ಇತಿಹಾಸವಿದೆ. ದುಡಿಯುವ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಭಾಗವಾಗಿ ಮಹಿಳೆಯರ ಹೆಮ್ಮೆಯ, ಸಂಘರ್ಷದ ದಿನವಾಗಿ ಮಾರ್ಚ್ 8ನ್ನು ದುಡಿವ ಮಹಿಳಾ ದಿನವಾಗಿ ಘೋಷಿಸಿ, ಆಚರಿಸಲಾಗುತ್ತಿದೆ.

ದುಡಿವ ಮಹಿಳಾ ದಿನದ ಮಹತ್ವವನ್ನು ಮರೆಮಾಚಿ ‘ದುಡಿವ’ ಪದವನ್ನೇ ಕಿತ್ತೆಸೆದು ಕೇವಲ ‘ಅಂತಾರಾಷ್ಟ್ರೀಯ ಮಹಿಳಾ ದಿನ’ವೆಂದು ಪ್ರಚಾರ ಮಾಡಲಾಗುತ್ತಿದೆ. ಇದಲ್ಲದೆ ವಿಶ್ವಸಂಸ್ಥೆಯು ಇತಿಹಾಸವನ್ನೇ ಮರೆತು 1975ನೇ ವರ್ಷವನ್ನು ಮಹಿಳಾ ದಿನಾರಂಭವೆಂದು ಘೋಷಿಸಿದೆ. ಆದರೆ, ಮಹಿಳಾ ದಿನದ ಆಚರಣೆಯು 1820ರಲ್ಲಿ ನ್ಯೂಜಿಲೆಂಡಿನ ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ ಮಹಿಳೆಯರು ತಮ್ಮ ಮೂಲಭೂತ ಹಕ್ಕುಗಳಿಗಾಗಿ ಶೌರ್ಯದಿಂದ ಮೊಳಗಿಸಿದ ಘೋಷಣೆ ಪ್ರಪಂಚಾದ್ಯಂತ ಪಸರಿಸಿದರ ಚರಿತ್ರೆಯ ಭಾಗವಾಗಿ ಬೆಳೆದು ಬಂದದೆ ಎಂಬುದು ಬಚ್ಚಿಟ್ಟಿರುವ ಸತ್ಯ.

ಅಂದಿನ ಕಾಲಘಟ್ಟದಲ್ಲಿ ಅಮೆರಿಕದಲ್ಲಿನ ಕಾರ್ಮಿಕ ಹೋರಾಟಗಳು ಪುರುಷರ ಸುತ್ತಲೇ ನಡೆಯುತ್ತಿದ್ದವು. ಆದರೆ, ಮಹಿಳೆಯರ ವಿಚಾರಗಳು ಹೋರಾಟದ ಅಜೆಂಡಾಗಳಲ್ಲಿ ಇರುತ್ತಿರಲಿಲ್ಲ. ಫ್ಯಾಕ್ಟರಿಗಳಲ್ಲಿ ‘ಬೆವರು ದುಡಿತದ ಮನೆ’ (ಸ್ಟೆಟ್ ಶಾಪ್) ಎಂದು ಕರೆಯುತ್ತಿದ್ದ ಮಹಿಳೆಯರು ದುಡಿಯುವ ಕೋಣೆಗಳಿಗೆ ಮಹಿಳೆಯನ್ನು ದೂಡಿ ಎಲ್ಲ ಬಾಗಿಲುಗಳನ್ನು ಮುಚ್ಚಿ ಬೀಗ ಹಾಕಲಾಗುತ್ತಿತ್ತು. ಅಂತಹ ಕೋಣೆಗಳಲ್ಲಿ ಮಹಿಳೆಯರು ವಾರಕ್ಕೆ 81 ಗಂಟೆಗಳ ಕಾಲ, ಅಂದರೆ ದಿನಕ್ಕೆ ಸುಮಾರು 12 ಗಂಟೆ ದುಡಿಯಬೇಕಿತ್ತು. ಸಿಗುತ್ತಿದ್ದ ಕೂಲಿ 3 ಡಾಲರ್‌ಗಳು ಮಾತ್ರ. ಆದರೆ, ಪುರುಷರಿಗೆ 10 ಗಂಟೆಗಳ ಕೆಲಸ.

Advertisements

ಇಂತಹ ತಾರತಮ್ಯ, ಶೋಷಣೆಯ ವಿರುದ್ದ ಮಹಿಳೆಯರು ದನಿ ಎತ್ತಲಾರಂಭಿಸಿದರು. ಅಮೆರಿಕದಲ್ಲಿ ಬೀಡಿ ಕಾರ್ಮಿಕರು, ಕೊಡೆ ಮಾಡುವವರು, ಟೈಲರ್‌ಗಳೂ ಸೇರಿದಂತೆ ಎಲ್ಲ ಕಾರ್ಮಿಕರು 1844ರಲ್ಲಿ ‘ಕೊವೆಲ್ ಮಹಿಳಾ ಕಾರ್ಮಿಕರ ಸುಧಾರಣಾ ಸಂಘ’ವನ್ನು ಸ್ಥಾಪಿಸಿದರು. 1857ರ ಮಾರ್ಚ್ 08ರಂದು ಕೆಲಸದ ಅವಧಿಯನ್ನು 10 ಗಂಟೆಗೆ ಇಳಿಸುವಂತೆ ಹಾಗೂ ಮಹಿಳೆಯರಿಗೂ ಪುರುಷರಿಗೂ ಸಮಾನ ಹಕ್ಕು ನೀಡುವಂತೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ಹೋರಾಟದ ಗೌರವಾರ್ಥವಾಗಿ 51 ವರ್ಷಗಳ ನಂತರ ಟೈಲರ್ ವಿಭಾಗದ ವಾರಿ ಸಹೋದರಿಯರು 1908ರ ಮಾರ್ಚ್ 08ರಂದು ಅಮೆರಿಕದಲ್ಲಿ ಲಕ್ಷಾಂತರ ಮಹಿಳಾ ಕಾರ್ಮಿಕರನ್ನೊಳಗೊಂಡ ಬೃಹತ್ ಪ್ರತಿಭಟನಾ ಮೆರವಣಿಗೆ ಏರ್ಪಡಿದರು. ಹಲವರು ಗಾರ್ಮೆಂಟ್ ಕೆಲಸಗಳನ್ನು ಬಹಿಷ್ಕರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಕೆಲಸದ ಅವಧಿಯಲ್ಲಿ ಕಡಿತ, ಉತ್ತಮ ಕೂಲಿ, ಮತದಾನದ ಹಕ್ಕು ಸೇರಿದಂತೆ ಹಲವಾರು ಬೇಡಿಕೆಗಳು ಈ ಹೋರಾಟದ್ದಾಗಿದ್ದವು. ಮಹಿಳೆಯರ ಹೋರಾಟವನ್ನು ಪತ್ರಿಕೆಗಳು ಬಂಬಲಿಸಿದವು. ಪರಿಣಾಮ, ಮಹಿಳೆಯರ ಬವಣೆಗಳು ಬೆಳಕಿಗೆ ಬಂದವು.

ಮಹಿಳಾ ಕಾರ್ಮಿಕರ ಹೋರಾಟಗಳು ನಡೆಯುತ್ತಿದ್ದ ಸಮಯದಲ್ಲಿ, ಅಮೆರಿಕದಲ್ಲಿ 2010ರಲ್ಲಿ ಸಮಾಜವಾದಿಗಳು ಮತ್ತು ಸ್ತೀವಾದಿಗಳು ಫೆಬ್ರವರಿ ಕೊನೆಯ ಭಾನುವಾರದಂದು ಮಹಿಳಾ ದಿನವನ್ನು ಆಚರಿಸಿದರು. ಅಂದು ನಡೆದ ಸಭೆಯಲ್ಲಿ ಪ್ರತಿ ವರ್ಷ ಫೆಬ್ರವರಿ ಕೊನೆಯ ಭಾನುವಾರವನ್ನು ಮಹಿಳಾ ದಿನವನ್ನಾಗಿ ಆಚರಿಸಲು ಶಿಫಾರಸ್ಸು ಮಾಡಿದರು. ಅದೇ ವರ್ಷ ಕೋಪನ್‌ಹೆಗನ್‌ನಲ್ಲಿ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಕಾರ್ಮಿಕ ಮಹಿಳೆಯರ ಹೋರಾಟದ ಮುಂಚೂಣಿಯಲ್ಲಿದ್ದ ಕಮ್ಯುನಿಸ್ಟ್ ನಾಯಕಿಯರು, ‘ಮಹಿಳೆಯರು ತಮ್ಮ ಗುರಿ ತಲುಪಲು ಮಹಿಳೆಯರಿಗೊಂದು ಅಂತಾರಾಷ್ಟ್ರೀಯ ದೃಷ್ಟಿಕೋನದ ಅವಶ್ಯಕತೆ ಇದೆ. ಆದ್ದರಿಂದ ಅಂತಾರಾಷ್ಟ್ರೀಯ ದುಡಿವ ಮಹಿಳಾದಿನವನ್ನು ಒಂದು ನಿಗದಿತ ದಿನದಂದು ಆಚರಿಸುವುದು ಅವಶ್ಯಕ’ ಎಂದು ಯೋಜನೆ ಮುಂದಿಟ್ಟರು. ಆ ಯೋಜನೆಗೆ 17 ದೇಶಗಳು ಬೆಂಬಲ ನೀಡಿದವು. ಹೀಗಾಗಿ ಕೋಪನ್‌ಹೆಗನ್‌ ಸಮಾವೇಶದಲ್ಲಿ ಅಂತಾರಾಷ್ಟ್ರೀಯ ದುಡಿವ ಮಹಿಳಾ ದಿನಾಚರಣೆ ಎಂದು ಘೋಷಿಸಲ್ಪಟ್ಟಿತು.

ಯೂರೋಪ್ ದೇಶಗಳಲ್ಲಿ 1911ರಿಂದ 1915ರವೆರೆಗೆ ಹಲವು ಪ್ರತಿಭಟನಾ ಮೆರವಣಿಗೆಗಳು ನಡೆದವು, ಹಲವು ಪತ್ರಿಕೆಗಳು ಮಹಿಳಾ ದಿನ, ಮಹಿಳೆ ಮತ್ತು ಮತ, ಮಹಿಳೆ ಮತ್ತು ಪಾರ್ಲಿಮೆಂಟ್ ಮುಂತಾದ ವಿಷಯಗಳ ಬಗೆಗೆ ಲೇಖನಗಳನ್ನು ಪ್ರಕಟಿಸಿದವು. ಜರ್ಮನಿಯಲ್ಲಿ ಕ್ಲಾರಾ ಜಟ್ಕಿನ್ ನೇತೃತ್ವದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು 1911ರ ಮಾರ್ಚ್19ರಂದು ಆಚರಿಸಲಾಯಿತು. ಆ ಸಮಯದಲ್ಲಿ ಮಹಿಳೆಯರಿಗೆ ಓಟಿನ ಹಕ್ಕು ಕೊಟ್ಟು, ಅದನ್ನು ಜಾರಿಗೆ ತರಬೇಕೆಂದು ಹತ್ತು ಲಕ್ಷ ಕರಪತ್ರಗಳನ್ನು ಹಂಚಲಾಯಿತು.

ರಷ್ಯಾದಲ್ಲಿ 1913ರಲ್ಲಿ ಮೊದಲ ಬಾರಿಗೆ ಮಹಿಳಾ ದಿನದ ಆಚರಣೆ ನಡೆಯಿತು. ಅಲ್ಲದೆ, 1917ರಲ್ಲಿ ನಡೆದ ಜಾರ್ ದೊರೆಯ ವಿರುದ್ದದ ಹೋರಾಟದಲ್ಲಿ (ರಷ್ಯಾ ಕ್ರಾಂತಿ) ಪಾಲ್ಗೊಂಡಿದ್ದ ಮಹಿಳೆಯರು, ಹೊಸ ಸರ್ಕಾರ ಬಂದ ನಾಲ್ಕು ದಿನಗಳಲ್ಲಿ ತಮ್ಮ ಓಟಿನ ಹಕ್ಕಿಗಾಗಿ ಒತ್ತಡ ಹಾಕಿದರು. ಪರಿಣಾಮ 1917ರ ಮಾರ್ಚ್ 8ರಂದು ರಷ್ಯಾ ಮಹಿಳೆಯರಿಗೆ ಮತದಾನದ ಹಕ್ಕು ನೀಡಲಾಯಿತು. ಇದು ಪ್ರಪಂಚದಲ್ಲೇ ಮೊದಲ ಬಾರಿಗೆ ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ರಷ್ಯಾದಲ್ಲಿ ಮಹಿಳೆಯರು ಮತದಾನದ ಹಕ್ಕು ಪಡೆದ ದಿನ ಮತ್ತು 1908ರ ಮಾರ್ಚ್ 8ರಂದು ಅಮೆರಿಕ ಗಾರ್ಮೆಂಟ್ ಮಹಿಳೆಯರು ನಡೆಸಿದ ಧೀರೋದ್ದಾತ ಹೋರಾಟದ ಸ್ಮರಣಾರ್ಥ ಮಾರ್ಷ್‌ 8ಅನ್ನು ಅಂತಾರಾಷ್ಟ್ರೀಯ ಮಹಿಳಾ ದಿನವೆಂದು 1918ರಲ್ಲಿ ಘೋಷಿಸಲಾಯಿತು.

ನಂತರದ ದಿನಗಳಲ್ಲಿ ಮಹಿಳೆಯರ ಸಮಾನತೆಯನ್ನು ಕಂಡುಕೊಳ್ಳುವ, ಪುರಷಾಧಿಪತ್ಯದ ವಿರುದ್ಧ ಹೋರಾಡುವ ಸ್ತ್ರೀವಾದ ಚಿಗುರೊಡೆದು ಬೆಳೆಯಿತು. ರಷ್ಯಾ ನಂತರ ಯೂರೋಪ್ ಮತ್ತು ಅಮೆರಿಕ ದೇಶಗಳಲ್ಲಿಯೂ ಮಹಿಳೆಯರು ಓಟಿನ ಹಕ್ಕನ್ನು ಪಡೆದುಕೊಂಡರು. ಸ್ತ್ರೀವಾದವೆಂದರೆ ಕುಟುಂಬ ಮತ್ತು ಸಮಾಜದಲ್ಲಿ ಹೆಣ್ಣಿನ ಶ್ರಮ, ಲೈಂಗಿಕತೆ, ಭೌತಿಕ ಮತ್ತು ಬೌದ್ದಿಕ ಮಟ್ಟದಲ್ಲಿ ನಿಯಂತ್ರಿಸುವ ಪುರುಷಾಧಿಪತ್ಯದ ಹಿಡಿತ ಕುರಿತ ಸ್ಥಿತಿಗಳಲ್ಲಿ ಬದಲಾವಣೆ ತರುವುದಕ್ಕಾಗಿ ಮಹಿಳೆ ಮತ್ತು ಪುರುಷರ ಪ್ರಜ್ಞಾಪೂರ್ವಕ ಹೋರಾಟವಾಗಿದೆ ಎಂದು ಮಹಿಳಾ ಚಳವಳಿಗಳು ಘೋಷಿಸಿದವು.

ಇಡೀ ಜಗತ್ತಿನಲ್ಲಿ ಮಹಿಳಾ ಹೋರಾಟಗಳ ಇತಿಹಾಸ ವರ್ಗ ಸಂಘರ್ಷದ ಭಾಗವಾಗಿ ಬೆಳೆದರೆ ಭಾರತದಲ್ಲಿ ಅದು ವಿಭಿನ್ನ ರೀತಿಯದ್ದಾಗಿತ್ತು. ಪ್ರಪಂಚದಲ್ಲೇ ದೊಡ್ಡ ಪ್ರಜಾಪ್ರಭುತ್ವ ದೇಶವೆಂದು ಕರೆಯಲ್ಪಡುವ ಭಾರತದಲ್ಲಿ ಪುರೋಹಿತಶಾಹಿ ಮತ್ತು ಮನುವಾದವನ್ನು ಪಾಲಿಸುವ ಕೆಟ್ಟ ನೀತಿಗಳಿಂದ ತುಂಬಿತ್ತು. ಮಹಿಳೆ ಜಾತಿ, ಧರ್ಮ, ಪ್ರದೇಶ, ಲಿಂಗ ತಾರತಮ್ಯಗಳಿಂದ ತುಳಿತಕ್ಕೊಳಗಾಗಿದ್ದಳು. ಬಾಲ್ಯವಿವಾಹ, ಸತಿಸಹಗಮನ ಪದ್ದತಿಗಳಂತ ಕ್ರೂರ ಅನಿಷ್ಟ ಪದ್ದತಿಗಳು, ಅತ್ಯಾಚಾರದಂತಹ ದಬ್ಬಾಳಿಕೆಗಳು ಹೇರಳವಾಗಿದ್ದವು. ಇಂತಹ ಕ್ರೌರ್ಯಗಳ ವಿರುದ್ಧ ಹಲವು ಶತಮಾನಗಳಿಂದ ವಿಚಾರ-ಹೋರಾಟಗಳು ನಡೆದು ಬಂದಿವೆ. ಕರ್ನಾಟಕದಲ್ಲಿ 12ನೇ ಶತಮಾನದ ಜನ ಚಳವಳಿಯ ಚಿಂತನೆಗಳು ಸಮಾಜವನ್ನು ತಟ್ಟಿವೆ. ಅಕ್ಕಮಹಾದೇವಿ, ಕಾಳವ್ವೆ, ಸಂಕವ್ವೆ ಮೊದಲಾದವರು ಮಹಿಳಾ ವಿಚಾರದ ಬೀಜವನ್ನು ಬಿತ್ತಿದ್ದರು. ಇದಾದ ನಂತರ 19ನೇ ಶತಮಾನದಲ್ಲಿ ಸಮಾಜ ಸುಧಾರಕರು ಮಹಿಳೆಯರ ಸಮಸ್ಯೆಗಳ ಬಗೆಗೆ ಮಾತನಾಡಲಾರಂಭಿಸಿದರು. ಬ್ರಹ್ಮ ಸಮಾಜ, ಆರ್ಯ ಸಮಾಜ ಹಾಗೂ 1827ರಲ್ಲಿ ಆರಂಭವಾದ ಮಹಿಳಾ ಸಂಸ್ಥೆಯಾದ ಭಗಿನಿ ಸಮಾಜ ಮಹಿಳೆಯರ ಪರ ದನಿ ಎತ್ತಿದ್ದವು. ಇದೆಲ್ಲದರಿಂದ ನಡೆದ ಹೋರಾಟದ ಭಾಗವಾಗಿ 1829ರಲ್ಲಿ ಸತಿ ಪದ್ದತಿ ರದ್ದಾಯಿತು. ನಂತರದ ದಿನಗಳಲ್ಲಿ ಹೆಣ್ಣು ಮಕ್ಕಳಿಗಾಗಿ ಶಾಲೆಯನ್ನು ತೆರೆಯಲ್ಪಟ್ಟು ಸಾವಿತ್ರಿ ಬಾಯಿ ಫುಲೆ, ರಮಭಾಯಿ, ತಾರಾಭಾಯಿ ಶಿಂದೆಯವರಂತಹ ಧೀರ ಮಹಿಳೆಯರು ಇದಕ್ಕಾಗಿ ದುಡಿದರು.

ಇದನ್ನು ಓದಿದ್ದೀರಾ?: ಅಮ್ಮಂದಿರು ಮಾಗುವ, ಅಮ್ಮಂದಿರಿಗೇ ಅಮ್ಮನಾಗುವ ‘ಫೋರ್ ಮದರ್ಸ್’

ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದ ಮಹಿಳೆಯರು 1917ರಲ್ಲಿ ‘ಮಹಿಳಾ ಭಾರತೀಯ ಸಂಸ್ಥೆ’ಯನ್ನು ಸ್ಥಾಪಿಸಿ 1924ರಲ್ಲಿ ‘ಅಖಿಲ ಭಾರತ ಮಹಿಳಾ ಸಮಾವೇಶ’ವನ್ನು ಮಾಡಿದರು. ಬಂಗಾಳದಲ್ಲಿ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ತೇಭಾಗ ಹೋರಾಟದಲ್ಲಿ ಕಮ್ಯನಿಸ್ಟರು ಹಿಂದೆ ಸರಿದಾಗ ‘ನಾರೀ ವಾಹಿನಿ’ ಸೈನ್ಯ ಕಟ್ಟಿ ಮುನ್ನಡೆಸಿದರು. ಸ್ವಾತಂತ್ರ್ಯವೇ ತಮ್ಮ ವಿಮೋಚನೆಯಾಗಿ ಕಂಡಿದ್ದ ಮಹಿಳೆಯರಿಗೆ ಸ್ವಾತಂತ್ರ್ಯ ನಂತರದಲ್ಲಿ ಓಟಿನ ಹಕ್ಕು, ಎಲ್ಲಾ ಕ್ಷೇತ್ರದಲ್ಲೂ ಸಮಾನ ಅವಕಾಶದ ಹಕ್ಕುಗಳು ಮೂಲಭೂತ ಹಕ್ಕುಗಳಿಗೆ ದೊರೆತವು. ವರದಕ್ಷಿಣೆ ಕಿರುಕುಳ, ದೌರ್ಜನ್ಯದ ವಿರುದ್ದದ ಹೋರಾಟಗಳಿಂದಾಗಿ ಹೊಸ ಕಾನೂನುಗಳು ಜಾರಿಯಾದವು. ಭಾರತದಲ್ಲಿಯೇ ಮಹಿಳೆಯರು ಮಹಿಳಾ ದಿನ ಆಚರಿಸಲಾರಂಭಿಸಿದರು.

ಧೀರೋದ್ದಾತ ಇತಿಹಾಸದೊಂದಿಗೆ ಮಹಿಳಾ ದಿನವು 1911ರಲ್ಲಿ ಘೋಷಿಸಲ್ಪಟ್ಟರೂ, ವಿಶ್ವಸಂಸ್ಥೆ 1975ಅನ್ನು ಮಹಿಳಾ ದಿನದ ಆರಂಭದ ವರ್ಷ ಎಂದು ತಿರುಚಿದೆ. ಆದರೂ, 1917ರಲ್ಲೇ ರಷ್ಯಾದಲ್ಲಿ ಮಹಿಳೆಯರ ದಿನ ಆಚಾರಣೆಗಾಗಿ ಮಾರ್ಚ್ 8ಅನ್ನು ರಜಾದಿನವನ್ನಾಗಿ ಘೋಷಿಸಿತು. ಧೈರ್ಯವಂತ ಮಹಿಳಾ ಕಾರ್ಮಿಕರ ಹಬ್ಬವಾಗಿ ಆಚರಿಸಲ್ಪಡುತ್ತಿದ್ದ ಈ ದಿನವನ್ನು ಹಲವಾರು ರಾಷ್ಟ್ರಗಳು ಸಾರ್ವತ್ರಿಕ ರಜಾದಿನವನ್ನಾಗಿ ಘೋಷಿಸಿದವು. ಕೆಲವು ರಾಷ್ಟ್ರಗಳು ಮಹಿಳೆಯರಿಗೆ ಮಾತ್ರ ವಿಶೇಷ ರಜೆ ಎಂದು ಪ್ರಕಟಿಸಿದವು. ಆದರೆ ಭೀಮನ ಅಮಾವಾಸ್ಯೆಗೆ ರಜಾ ನೀಡುವ ಭಾರತದಲ್ಲಿ ಮಹಿಳಾ ದಿನಕ್ಕೆ ರಜೆ ಜಾರಿಯಾಗಲಿಲ್ಲ. ಪ್ರತಿದಿನವು ಮನೆಯೊಳಗೆ ಮತ್ತು ಮನೆಯಾಚೆಗೆ ಚಾಕರಿ ಮಾಡುವ ವ್ಯವಸ್ಥೆಯನ್ನು ಭಾರತೀಯ ಸಮಾಜ ತಂದೊಡ್ಡಿದೆ. ಸಂಕೋಲೆಗಳಿಂದ ಹೊರಬರುವಂತೆ ಪ್ರೇರೇಪಿಸಬೇಕಾದ ಸರ್ಕಾರಗಳು ಮತ್ತಷ್ಟು ಸಂಕೋಲೆಗಳೊಂದಿಗೆ ಬಂಧಿಸುತ್ತಿವೆ. ಇಂತಹ ವಿಪರ್ಯಾಸಗಳ ವಿರುದ್ಧ ಮತ್ತೊಮ್ಮೆ ದನಿ ಎತ್ತುವ, ಘೋಷಣೆಗಳನ್ನು ಮೊಳಗಿಸುವ ಕಾಲ ಬಂದಿದೆ. ಎಲ್ಲರೂ ದನಿಗೂಡಿಸೋಣ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X