ತಪ್ಪು ಮಾಡಿದವರನ್ನು ಶಿಕ್ಷಿಸುವುದು, ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಸರ್ಕಾರವೇ ಪ್ರಜೆಗಳನ್ನು ತಾರತಮ್ಯದಿಂದ ಕಾಣುತ್ತಾ ಬೀದಿ ಬದಿ ಗೂಂಡಾನಂತೆ ವರ್ತಿಸತೊಡಗಿದರೆ ಯಾರಲ್ಲಿ ದೂರುವುದು? ಉತ್ತರ ಪ್ರದೇಶದ ಸ್ಥಿತಿ ನೋಡಿದರೆ, ಇಲ್ಲಿ ಚುನಾಯಿತ ಸರ್ಕಾರ ಅಧಿಕಾರ ನಡೆಸುತ್ತಿದೆ ಎಂದಾಗಲಿ, ಸಂವಿಧಾನದ ಅಡಿಯಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದಾಗಲಿ ಹೇಳಲು ಧೈರ್ಯ ಬಾರದು. ಯೋಗಿಯ ಉತ್ತರ ಪ್ರದೇಶ ‘ಜಂಗಲ್ ರಾಜ್’ ಆಗಿದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.
ಜನರಿಂದ ಚುನಾಯಿತರಾದವರು ಕಣ್ಣು ಕಿವಿ ಹೃದಯ ಕಳೆದುಕೊಂಡರೆ ಏನಾಗುತ್ತದೆ ಎನ್ನುವುದಕ್ಕೆ ಉತ್ತರ ಪ್ರದೇಶ ಸಾಕ್ಷಿಯಾಗಿದೆ. ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪ್ರಜೆಗಳನ್ನು ರಕ್ತ ಮಾಂಸವುಳ್ಳ, ನೋವು, ಸಂವೇದನೆ ಇರುವ ಜನರೆಂದು ಭಾವಿಸದೇ ಧರ್ಮ, ಜಾತಿಗಳ ಆಧಾರದಲ್ಲಿ ವಿಂಗಡಿಸಿ ಒಬ್ಬೊಬ್ಬರಿಗೆ ಒಂದೊಂದು ನ್ಯಾಯ ಎನ್ನುವಂತೆ ವರ್ತಿಸುತ್ತಿರುವುದು ಉತ್ತರ ಪ್ರದೇಶವನ್ನು ‘ಜಂಗಲ್ ರಾಜ್’ ಆಗಿ ಪರಿವರ್ತಿಸಿದೆ. ಅದರಲ್ಲೂ ದಲಿತರು, ಮಹಿಳೆಯರು, ಮುಸ್ಲಿಮರ ಬದುಕು ನರಕಸದೃಶವಾಗಿದೆ. ನಿನ್ನೆ, ಏಪ್ರಿಲ್ 18ರ ಮಂಗಳವಾರ, ನಡೆದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಮನೆಗೆ ಬೆಂಕಿ ಹಚ್ಚಿದ ಪ್ರಕರಣ ಮತ್ತು ಅತೀಕ್ ಅಹ್ಮದ್ ಹಾಗೂ ಅವರ ಪುತ್ರನ ಕೊಲೆ ಪ್ರಕರಣಗಳ ವಿವರಗಳನ್ನು ಸೂಕ್ಷ್ಮವಾಗಿ ಗ್ರಹಿಸಿದರೆ, ಉತ್ತರ ಪ್ರದೇಶ ಎಂಥ ಕ್ರೌರ್ಯದ ಹಾದಿಯಲ್ಲಿ ಸಾಗುತ್ತಿದೆ ಎನ್ನುವುದು ತಿಳಿಯುತ್ತದೆ.
ಉನ್ನಾವೋ ಅತ್ಯಾಚಾರ ಪ್ರಕರಣವನ್ನೇ ನೋಡುವುದಾದರೆ, ಅತ್ಯಾಚಾರ ಸಂತ್ರಸ್ತೆ ವಾಸವಿದ್ದ ಶೆಡ್‌ನತ್ತ ಬಂದ ಅತ್ಯಾಚಾರ ಆರೋಪಿಗಳು, ಮೊದಲು ಶೆಡ್‌ಗೆ ಬೆಂಕಿ ಹಚ್ಚಿದ್ದಾರೆ. ನಂತರ ಮನೆಯಲ್ಲಿದ್ದ ಇಬ್ಬರು ಹಸುಗೂಸುಗಳನ್ನು ಬೆಂಕಿಗೆ ಎಸೆದು ಪೈಶಾಚಿಕವಾಗಿ ವರ್ತಿಸಿದ್ದಾರೆ. ಸಂತ್ರಸ್ತೆಯ ಆರು ತಿಂಗಳ ಗಂಡು ಮಗು ಮತ್ತು ಆಕೆಯ ಸಂಬಂಧಿಯ ಎರಡು ತಿಂಗಳ ಶಿಶುವಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.
ಅತ್ಯಾಚಾರ ನಡೆದ ದಿನದಿಂದ ಆ ಸಂತ್ರಸ್ತೆ ಅನುಭವಿಸುತ್ತಿರುವ ಕಷ್ಟ ಪರಂಪರೆಗೆ ಕೊನೆಯೇ ಇಲ್ಲವಾಗಿದೆ. ಸಂತ್ರಸ್ತೆಯು 2017ರ ಜೂನ್ ನಾಲ್ಕರಂದು ಉತ್ತರ ಪ್ರದೇಶದ ಉನ್ನಾವೋ ಬಿಜೆಪಿ ಶಾಸಕ ಕುಲ್‌ದೀಪ್ ಸೆಂಗಾರ್ ಮನೆಗೆ ಕೆಲಸ ಕೊಡಿಸುವಂತೆ ಕೇಳಲು ಹೋಗಿರುತ್ತಾರೆ. ಸಹಾಯ ಬೇಡಿ ಬಂದ ಮಹಿಳೆಯ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡ ಆ ಶಾಸಕ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗುತ್ತಾನೆ. ಅಲ್ಲಿಂದ ಆರಂಭವಾಗಿ ಪೊಲೀಸ್ ವ್ಯವಸ್ಥೆ, ರಾಜ್ಯ ಸರ್ಕಾರ, ನ್ಯಾಯ ದಾನ ವ್ಯವಸ್ಥೆಗಳೊಂದಿಗೆ ಪ್ರತಿ ಹಂತದಲ್ಲೂ, ಪ್ರತಿ ಹೆಜ್ಜೆಯಲ್ಲೂ ಸಂತ್ರಸ್ತೆ ಹೋರಾಟ ಮಾಡುತ್ತಲೇ ಇದ್ದಾರೆ. ಈ ಐದು ವರ್ಷದಲ್ಲಿ ಆಕೆ ನ್ಯಾಯಕ್ಕಾಗಿ ವ್ಯವಸ್ಥೆಯ ಜೊತೆಗೆ ನಡೆಸಿದ ಸಂಘರ್ಷದಲ್ಲಿ ಹಣ, ಸಮಯ, ನೆಮ್ಮದಿಯ ಜೊತೆಗೆ ತನ್ನ ಕುಟುಂಬದ ಹಲವರನ್ನೂ ಕಳೆದುಕೊಂಡು ಅತಂತ್ರರಾಗಿದ್ದಾರೆ. ಪೊಲೀಸರು ಪ್ರಕರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಾಗ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸುತ್ತಾಳೆ. ಘಟನೆ ನಡೆದ ಕೆಲವೇ ದಿನಗಳಲ್ಲಿ ಆಕೆಯ ತಂದೆಯನ್ನು ಬಂಧಿಸಲಾಗುತ್ತದೆ. ಅದಕ್ಕಿಂತಲೂ ಘೋರವೆಂದರೆ, ಆಕೆಯ ತಂದೆಯನ್ನು ಶಾಸಕ ಸೆಂಗಾರ್ ಅನುಚರರು ಜೈಲಿನಲ್ಲಿಯೇ ಹೊಡೆದು ಸಾಯಿಸುತ್ತಾರೆ. 18 ವರ್ಷಗಳ ಹಿಂದಿನ ಪ್ರಕರಣದಲ್ಲಿ ಆಕೆಯ ಚಿಕ್ಕಪ್ಪನನ್ನು ಬಂಧಿಸಿ ಜೈಲಿಗೆ ತಳ್ಳಲಾಗುತ್ತದೆ. ಆಕೆ ಅಪ್ರಾಪ್ತಳೆಂದು ಸುಳ್ಳು ದಾಖಲೆ ಸಲ್ಲಿಸಿದ್ದಾಳೆ ಎಂದು ಸಂತ್ರಸ್ತೆ ವಿರುದ್ಧ ದೂರು ದಾಖಲಿಸಲಾಗುತ್ತದೆ. ಸಂತ್ರಸ್ತೆ ವಕೀಲರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಟ್ರಕ್‌ನಿಂದ ಕಾರಿಗೆ ಡಿಕ್ಕಿ ಹೊಡೆಲಾಗುತ್ತದೆ, ಅಪಘಾತದಲ್ಲಿ ಸಂತ್ರಸ್ತೆ ಬದುಕುಳಿದರೂ ಆಕೆಯ ಇಬ್ಬರು ಬಂಧುಗಳು ಸಾಯುತ್ತಾರೆ. ಇದನ್ನೆಲ್ಲ ಸುಪ್ರೀಂ ಕೋರ್ಟ್ ಗಮನಕ್ಕೆ ತಂದ ಮೇಲೆ ಪ್ರಕರಣಗಳ ವಿಚಾರಣೆಯನ್ನು ದೆಹಲಿ ಕೋರ್ಟ್‌ಗೆ ವರ್ಗಾಯಿಸಲಾಗುತ್ತದೆ. ದೆಹಲಿ ನ್ಯಾಯಾಲಯವು ಅಪರಾಧಿ ಕುಲದೀಪ್ ಸೆಂಗಾರ್‌ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸುತ್ತದೆ.
ಇಷ್ಟೆಲ್ಲ ಆದರೂ ಇನ್ನೂ ಆ ಸಂತ್ರಸ್ತೆಯ ಸಂಕಟ ನೀಗಿಲ್ಲ. ಅತ್ಯಾಚಾರ ಪ್ರಕರಣದ ಆರೋಪಿಗಳ ಪೈಕಿ ಇಬ್ಬರು ಇತ್ತೀಚೆಗೆ ಜೈಲಿನಿಂದ ಹೊರಬಂದಿದ್ದರು. ಅವರು ಇತರ ಐದು ಮಂದಿಯ ಜೊತೆ ಸೇರಿಕೊಂಡು ಸಂತ್ರಸ್ತೆ ವಾಸವಿದ್ದ ಶೆಡ್‌ಗೆ ತೆರಳಿ ಪ್ರಕರಣ ವಾಪಸ್ ಪಡೆಯಲು ಒತ್ತಾಯಿಸಿದ್ದಾರೆ. ಆಕೆ ಒಪ್ಪದೇ ಇದ್ದಾಗ ಶೆಡ್‌ಗೆ ಬೆಂಕಿ ಹಚ್ಚಿ ಅಮಾನುಷವಾಗಿ ವರ್ತಿಸಿದ್ದಾರೆ. ಬೇಸರದ ಸಂಗತಿ ಎಂದರೆ, ಸಂತ್ರಸ್ತೆಯ ಚಿಕ್ಕಪ್ಪ ಮತ್ತು ಆಕೆಯ ಅಜ್ಜ ಕೂಡ ಆರೋಪಿಗಳ ಜೊತೆಗಿದ್ದರು ಎಂದು ವರದಿಯಾಗಿದೆ.
ಇದಕ್ಕೂ ಕೆಲವು ದಿನಗಳ ಹಿಂದೆ ನಡೆದ ಅತೀಕ್ ಅಹ್ಮದ್ ಪ್ರಕರಣವೂ ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೊದಲು ಅತೀಕ್ ಅಹ್ಮದ್ ಮಗ ಅಸಾದ್ ಅಹ್ಮದ್‌ನನ್ನು ಉತ್ತರ ಪ್ರದೇಶದ ಪೊಲೀಸರು ಎನ್‌ಕೌಂಟರ್‌ನಲ್ಲಿ ಸಾಯಿಸುತ್ತಾರೆ. ನಂತರ ಅತೀಕ್ ಅಹ್ಮದ್ ಮತ್ತು ಆತನ ತಮ್ಮ ಅಶ್ರಫ್ ಅಹ್ಮದ್‌ನನ್ನು ಅವರಿಗೆ ಸಂಬಂಧವೇ ಇಲ್ಲದವರು ಗುಂಡು ಹೊಡೆದು ಸಾಯಿಸುತ್ತಾರೆ. ಅತೀಕ್ ಅಹ್ಮದ್ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಬರೆದಿದ್ದ ಪತ್ರ ತನ್ನ ಬಳಿ ಇದೆ ಹೇಳಿಕೊಂಡಿದ್ದ ಅತೀಕ್ ಅಹ್ಮದ್ ಪರ ವಕೀಲರ ಮನೆ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ. ಇವೆಲ್ಲದರ ಹಿಂದೆ ಯಾರಿದ್ದಾರೆ, ಉತ್ತರ ಪ್ರದೇಶದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ತಿಳಿಯುವುದು ಕಷ್ಟಕರವೇನಲ್ಲ. ತಪ್ಪು ಮಾಡಿದವರನ್ನು ಶಿಕ್ಷಿಸುವುದು, ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಸರ್ಕಾರವೇ ಪ್ರಜೆಗಳನ್ನು ತಾರತಮ್ಯದಿಂದ ಕಾಣುತ್ತಾ ಬೀದಿ ಬದಿ ಗೂಂಡಾನಂತೆ ವರ್ತಿಸತೊಡಗಿದರೆ ಯಾರಲ್ಲಿ ದೂರುವುದು? ಉತ್ತರ ಪ್ರದೇಶದ ಸ್ಥಿತಿ ನೋಡಿದರೆ, ಇಲ್ಲಿ ಚುನಾಯಿತ ಸರ್ಕಾರ ಅಧಿಕಾರ ನಡೆಸುತ್ತಿದೆ ಎಂದಾಗಲಿ, ಸಂವಿಧಾನದ ಅಡಿಯಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದಾಗಲಿ ಹೇಳಲು ಧೈರ್ಯ ಬಾರದು. ಯೋಗಿಯ ಉತ್ತರ ಪ್ರದೇಶ ‘ಜಂಗಲ್ ರಾಜ್’ ಆಗಿದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಅವರದ್ದೇ ಪಕ್ಷದ ಕೇಂದ್ರ ಸರ್ಕಾರ ಈ ಬಗ್ಗೆ ಮೌನ ಮುರಿಯುವುದು, ಕ್ರಮ ವಹಿಸುವುದು ಅಸಾಧ್ಯದ ಮಾತು. ನೊಂದವರಿಗೆ ಈಗ ಉಳಿದಿರುವ ಆಸರೆ ಸುಪ್ರೀಂ ಕೋರ್ಟ್ ಒಂದೇ. ಆದರೆ, ನ್ಯಾಯ ವ್ಯವಸ್ಥೆ ಎಲ್ಲರಿಗೂ ಸುಲಭವಾಗಿ ಎಟುಕುವುದಿಲ್ಲವಾದ್ದರಿಂದ ಉತ್ತರ ಪ್ರದೇಶದಲ್ಲಿನ ಕ್ರೌರ್ಯ, ಪೈಶಾಚಿಕತೆಗಳಿಗೆ ಕೊನೆ ಎಂದು ಎನ್ನುವ ಪ್ರಶ್ನೆಗೆ ಉತ್ತರ ಸುಲಭವಲ್ಲ. ನಾಗರಿಕ ಸಮಾಜ ಮತ್ತು ತಮ್ಮನ್ನು ಮಾರಿಕೊಂಡಿಲ್ಲದ ಮಾಧ್ಯಮಗಳು ಮಾತ್ರವೇ ಈಗ ಉಳಿದಿರುವ ಭರವಸೆ.
