ಕರ್ನಾಟಕದಲ್ಲಿ 1ನೇ ತರಗತಿಗೆ ಮಕ್ಕಳ ಸೇರ್ಪಡೆಗೆ ಇರುವ ವಯೋಮಿತಿಯನ್ನು ರಾಜ್ಯ ಸರ್ಕಾರ ಸಡಿಲಗೊಳಿಸಿದೆ. ಮಕ್ಕಳಿಗೆ 5 ವರ್ಷ 5 ತಿಂಗಳು ಆಗಿದ್ದರೂ ಅವರು ಶಾಲೆಗೆ ದಾಖಲಾಗಲು ಅವಕಾಶ ನೀಡಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ.
ಈ ಹಿಂದೆ, ಮಕ್ಕಳು 1ನೇ ತರಗತಿಗೆ ದಾಖಲಾಗಲು ಕಡ್ಡಾಯವಾಗಿ 6 ವರ್ಷದ ವಯೋಮಿತಿಯನ್ನು ಪೂರೈಸಿರಬೇಕಿತ್ತು. ಆದರೆ, ಇದೀಗ, ವಯೋಮಿತಿಯ ಮಾನದಂಡವನ್ನು ಸಡಿಲಿಸಲಾಗಿದೆ. 5 ವರ್ಷ 5 ತಿಂಗಳು ವಯೋಮಾನವನ್ನು ಪೂರೈಸಿದ್ದ ಮಕ್ಕಳು 1ನೇ ತರಗತಿಗೆ ದಾಖಲಾಗಬಹುದಾಗಿದೆ. ಆದಾಗ್ಯೂ, ಸಂಪೂರ್ಣ ಆರು ವರ್ಷ ಪೂರೈಸಿರದ ಮಕ್ಕಳು 1ನೇ ತರಗತಿಗೆ ದಾಖಲಾಗಲು ಅವರು ಯುಕೆಜಿ ಕಲಿತಿರಬೇಕು ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
“ಎಲ್ಕೆಜಿ, ಯುಕೆಜಿಯಲ್ಲಿ ಕಲಿತಿದ್ದರೆ ಮಾತ್ರವೇ 5 ವರ್ಷ 5 ತಿಂಗಳು ಆಸುಪಾಸಿನ ಮಕ್ಕಳಿಗೆ 1ನೇ ತರಗತಿಗೆ ಪ್ರವೇಶ ನೀಡಲಾಗುತ್ತದೆ. ಪೋಷಕರ ಒತ್ತಾಯದ ಮೇರೆಗೆ ಈ ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ. ವಯೋಮಿತಿ ಸಡಿಲಿಕೆಯು ಈ ವರ್ಷಕ್ಕೆ ಮಾತ್ರವೇ ಅನ್ವಯವಾಗುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ, 2022ರಲ್ಲಿ 1ನೇ ತರಗತಿಗೆ ಪ್ರವೇಶ ಪಡೆಯಲು ಮಕ್ಕಳು ಕಡ್ಡಾಯವಾಗಿ 6 ವರ್ಷ ಪೂರೈಸಿರಬೇಕು ಎಂದು ಕರ್ನಾಟಕ ಶಿಕ್ಷಣ ಇಲಾಖೆ ಆದೇಶಿಸಿತ್ತು. ಈ ಆದೇಶವು 2023–24ನೇ ಸಾಲಿನಲ್ಲಿಯೇ ಜಾರಿಗೆ ಬರಬೇಕಿತ್ತು. ಆದರೆ, ಪೋಷಕರಿಂದ ವ್ಯಾಪಕ ಆಕ್ಷೇಪ ವ್ಯಕ್ತವಾಗಿದ್ದರಿಂದ ನಿಯಮ ಜಾರಿಗೆ ಬಂದಿರಲಿಲ್ಲ. ಇದೀಗ, ವಯೋಮಿತಿ ಸಡಿಲಿಕೆ ಮಾಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ (2025-26) 2022ರ ಆದೇಶವು ಜಾರಿಗೆ ಬರಲಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಉತ್ತಮ ತೀರ್ಮಾನ. ಇದು ಒಂದು ವರ್ಷಕ್ಕೇ ಸೀಮಿತವಾಗದಿರಲಿ. ✔️