ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ನಡೆಸಿದ 12ನೇ ತರಗತಿ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಶೇ.87.33ರಷ್ಟು ಫಲಿತಾಂಶ ದಾಖಲಾಗಿದೆ.
ಫೆ.15 ರಿಂದ ಏ.5ರ ವರೆಗೆ 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ಸಿಬಿಎಸ್‌ಇ ನಡೆಸಿತ್ತು. ಒಟ್ಟು 16,96,770 ವಿದ್ಯಾರ್ಥಿಗಳು ಪರೀಕ್ಷೆ ಬರದಿದ್ದರು.
ಸಿಬಿಎಸ್‌ಇ ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ ಶೇ.87.33 ಫಲಿತಾಂಶ ದಾಖಲಾಗಿದೆ. ಕಳೆದ ಬಾರಿ ಶೇ.92.71ರಷ್ಟು ಫಲಿತಾಂಶ ದಾಖಲಾಗಿತ್ತು.
ಫಲಿತಾಂಶವನ್ನು ಅಭ್ಯರ್ಥಿಗಳು cbse.gov.in, cbseresults.nic.in ಮತ್ತು results.cbse.nic.in ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಸಿಬಿಎಸ್‌ಇ ಹೇಳಿದೆ.
ವಿದ್ಯಾರ್ಥಿಗಳಲ್ಲಿ ಅನಾರೋಗ್ಯಕರ ಸ್ಪರ್ಧೆಯನ್ನು ತಪ್ಪಿಸುವ ನಿಟ್ಟಿನಲ್ಲಿ, ಪ್ರಥಮ, ದ್ವಿತೀಯ ಅಥವಾ ಮೂರನೇ ಸ್ಥಾನ (ರ್ಯಾಂಕ್) ಘೋಷಿಸುವುದಿಲ್ಲ ಎಂದು ಮಂಡಳಿ ಹೇಳಿದೆ. ಆದರೆ, ಹೆಚ್ಚಿನ ಅಂಕಗಳನ್ನು ಗಳಿಸಿದ 0.1 ಪ್ರತಿಶತ ವಿದ್ಯಾರ್ಥಿಗಳಿಗೆ ಮೆರಿಟ್ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
ಕೇರಳದ ತಿರುವನಂತಪುರ ಭಾಗದಲ್ಲಿ ಅತೀ ಹೆಚ್ಚು ಅಂದರೆ ಶೇ.99,91ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. 78.05 ರಷ್ಟು ಫಲಿತಾಂಶ ಪಡೆದ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಈ ಸುದ್ದಿ ಓದಿದ್ದೀರಾ?: ಮೇ 13ರವರೆಗೂ ‘ಸಿಇಟಿ’ಗೆ ಅರ್ಜಿ ಸಲ್ಲಿಸಬಹುದು