- 11 ಗಂಟೆ ನಂತರ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟ
- ಇಂಜಿನಿಯರಿಂಗ್ ವಿಭಾಗದಲ್ಲಿ ವಿಘ್ನೇಶ್ ಪ್ರಥಮ ಸ್ಥಾನ
2023-24ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ(ಕೆಸಿಇಟಿ)ಯ ಫಲಿತಾಂಶ ಗುರುವಾರ ಬೆಳಗ್ಗೆ ಪ್ರಕಟವಾಗಿದ್ದು, ಎಲ್ಲ ವಿಭಾಗಗಳಲ್ಲಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 11 ಗಂಟೆ ನಂತರ ವೆಬ್‌ಸೈಟ್ ಮೂಲಕ ಸಂಪೂರ್ಣ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.
2023ರ ಮೇ 20 ಮತ್ತು ಮೇ 21 ರಂದು ಸಿಇಟಿ ಪರೀಕ್ಷೆ ನಡೆಸಲಾಗಿತ್ತು. ಸುಮಾರು 2,44,345 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುಸಂಗೋಪನೆ, ಯೋಗ & ನ್ಯಾಚುರೋಪತಿ, ಡಿ ಫಾರ್ಮ ಕೋರ್ಸ್, ಬಿಎಸ್‌ಸಿ ನರ್ಸಿಂಗ್ಗೆ ಪ್ರವೇಶ ಪರೀಕ್ಷೆ ನಡೆದಿತ್ತು.
ಪರೀಕ್ಷೆಗೆ ಹಾಜರಾಗಿದ್ದ 2,44,345 ವಿದ್ಯಾರ್ಥಿಗಳಲ್ಲಿ ಎಂಜಿನಿಯರ್ ಕೋರ್ಸ್‌ಗೆ 2,03,381, ಕೃಷಿ ವಿಜ್ಞಾನಕ್ಕೆ 1,64,187, ಪಶುಸಂಗೋಪನೆಗೆ 1,66,756, ಯೋಗ ಮತ್ತು ನ್ಯಾಚುರೋಪತಿಗೆ 1,66,746, ಬಿ ಫಾರ್ಮಾಕ್ಕೆ 2,06,191 ಹಾಗೂ 2,06,340 ವಿದ್ಯಾರ್ಥಿಗಳು ಡಿ ಫಾರ್ಮಾ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.
ಈ ಬಾರಿ ಸಿಇಟಿಯಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಇಂಜಿನಿಯರಿಂಗ್ ವಿಭಾಗದಲ್ಲಿ ವಿಘ್ನೇಶ್ ಪ್ರಥಮ ಸ್ಥಾನ ಪಡೆದಿದ್ದರೆ, ಅರ್ಜುನ್ ಕೃಷ್ಣಸ್ವಾಮಿ ದ್ವಿತೀಯ ಸ್ಥಾನದಲ್ಲಿದ್ದಾರೆ.
ಮಲ್ಲೇಶ್ವರದಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ಸಿಇಟಿ ಫಲಿತಾಂಶ ಪ್ರಕಟಿಸಲಾಗಿದೆ. ಜೂನ್ 15ರ ಬೆಳಗ್ಗೆ 11ರ ನಂತರ ಕೆಇಎ ವೆಬ್ ಸೈಟ್ http://kea.kar.nic.in ಸಿಇಟಿ ಫಲಿತಾಂಶ ಸಿಗಲಿದೆ ಎಂದು ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಅವರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೆ.ಸಿ ಜನರಲ್ ಆಸ್ಪತ್ರೆ | ಶೀಘ್ರದಲ್ಲಿಯೇ ಟ್ರಾಮಾ ಕೇರ್ ಸೆಂಟರ್ ನಿರ್ಮಾಣ: ಸಚಿವ ದಿನೇಶ್ ಗುಂಡೂರಾವ್
ಈ ಹಿಂದೆ ಜೂನ್ 12 ರಂದು ಸಿಇಟಿ ಫಲಿತಾಂಶ ಪ್ರಕಟಿಸಲು ನಿರ್ಧರಿಸಲಾಗಿತ್ತು. ಆದರೆ ಸುಮಾರು 30 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ವಿವರಗಳಲ್ಲಿ ಹೊಂದಾಣಿಕೆಯಾಗದ ಕಾರಣ ಫಲಿತಾಂಶದ ದಿನಾಂಕವನ್ನು ಮುಂದೂಡಲಾಗಿತ್ತು.