ಖಾಸಗಿ ಶಾಲೆಗಳು ಹೆಚ್ಚು ಶಾಲಾ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಆರೋಪಗಳ ಕೇಳಿಬರುತ್ತಿರುವ ಹಿನ್ನೆಲೆ, ಖಾಸಗಿ ಶಾಲೆಗಳು ಪ್ರವೇಶಾತಿ ಶುಲ್ಕದ ವಿವರವನ್ನು ಕಡ್ಡಾಯವಾಗಿ ಪ್ರಕಟಣೆ ಮಾಡಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚನೆ ನೀಡಿದೆ.
ಮೇ 29ರಿಂದ ಈ ವರ್ಷದ ಶೈಕ್ಷಣಿಕ ವರ್ಷ ಆರಂಭವಾಗುತ್ತಿದೆ. ಈಗಾಗಲೇ ಎಲ್ಲ ಪರೀಕ್ಷೆಗಳು ಪೂರ್ಣಗೊಂಡು ಶಾಲೆಗಳಿಗೆ ಬೇಸಿಗೆ ರಜೆ ಘೋಷಿಸಲಾಗಿದೆ. ಕೆಲ ಖಾಸಗಿ ಶಾಲೆಗಳು ಪ್ರವೇಶಾತಿ ಪ್ರಕ್ರಿಯೆ ಆರಂಭಿಸಿದ್ದು, ಮನಬಂದಂತೆ ಶುಲ್ಕ ವಿಧಿಸಿ ಪೋಷಕರನ್ನು ಸುಲಿಗೆ ಮಾಡುತ್ತಿವೆ. ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಖಾಸಗಿ ಶಾಲೆಗಳ ಶುಲ್ಕದ ವಿವರ ಪ್ರಕಟಿಸುವುದು ಕಡ್ಡಾಯ ಎಂದಿದೆ.
ಶುಲ್ಕದ ವಿವರದೊಂದಿಗೆ ಹಲವು ನಿಯಮಗಳನ್ನು ಜಾರಿ ಮಾಡಿದ್ದು, ವಿದ್ಯಾರ್ಥಿ ಹಿಂದೆ ಓದುತ್ತಿದ್ದ ಶಾಲೆ ತೊರೆದು ಬೇರೆ ಶಾಲೆಗೆ ಪ್ರವೇಶ ಪಡೆದ ಸಂದರ್ಭದಲ್ಲಿ ತಕ್ಷಣವೇ ವರ್ಗಾವಣೆ ಪತ್ರ ನೀಡಬೇಕು ಎಂದು ಆದೇಶಿಸಿದೆ.
ಸಿಬಿಎಸ್‌ಸಿ, ಐಸಿಎಸ್‌ಸಿ ಪಠ್ಯಕ್ರಮ ಅನುಸರಿಸುವ ಶಾಲೆಗಳಿಗೂ ಈ ನಿಯಮ ಅನ್ವಯವಾಗಲಿದ್ದು, ಡೊನೇಷನ್ ಪಡೆಯಬಾರದು ಎಂದು ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಿದೆ. ಮಗುವಿನ ಪ್ರವೇಶಕ್ಕೆ ಪೋಷಕರಿಗೆ ಪ್ರವೇಶ ಪರೀಕ್ಷೆ ನಡೆಸಬಾರದೆಂದು ಸೂಚಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸಿದ ಶಾಲೆಗಳಿಗೆ ಒಂದು ಲಕ್ಷ ರೂಪಾಯಿ ದಂಡ, ಇದು ಪುನರಾವರ್ತನೆ ಆದರೆ ದಿನಕ್ಕೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ?: ಕನ್ನಡದಲ್ಲೂ ಬರೆಯಬಹುದು ಸಿಎಪಿಎಫ್ ಪರೀಕ್ಷೆ