ಬಿಎಸ್ಸಿ ನರ್ಸಿಂಗ್ ಪರೀಕ್ಷೆಗೆ ಈ ವರ್ಷದಿಂದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಕಡ್ಡಾಯ ಎಂದು ಪ್ರಕಟಣೆಯಾದ ಬೆನ್ನಲ್ಲೆ, ಆನ್‌ಲೈನ್ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಜಿ ಆಹ್ವಾನಿಸಿದೆ.
ಮ್ಯಾನೆಜ್‌ಮೆಂಟ್ ಸೀಟಿಗಾಗಿ ಹಲವು ವಿದ್ಯಾರ್ಥಿಗಳು ಪರದಾಡುವುದನ್ನು ತಪ್ಪಿಸುವ ಸಲುವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಸಕ್ತ ವರ್ಷದಿಂದ ಬಿಎಸ್ಸಿ ನರ್ಸಿಂಗ್ ವಿಷಯಕ್ಕೂ ಸಿಇಟಿ ಕಡ್ಡಾಯ ಮಾಡಿದೆ. ಅರ್ಜಿ ಸಲ್ಲಿಕೆಗೆ ಏ.22 ಕೊನೆಯ ದಿನಾಂಕವಾಗಿದೆ.
ಬಿಎಸ್ಸಿ (ನರ್ಸಿಂಗ್) ಕೋರ್ಸ್‌ಗಳಿಗೆ ಸಿಇಟಿ ಮೂಲಕ ಪ್ರವೇಶಾತಿ ಬಯಸುವ ಅಭ್ಯರ್ಥಿಯು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ವಿಷಯಗಳನ್ನು ಅಭ್ಯಸಿಸಿ ಒಟ್ಟಾರೆ ಕನಿಷ್ಠ ಶೇ.45ರಷ್ಟು ಅಂಕಗಳನ್ನು ಒಡೆದು ತೇರ್ಗಡೆಯಾಗಿರಬೇಕು. ಜೊತೆಗೆ, ಇಂಗ್ಲಿಷ್ ವಿಷಯವನ್ನೂ ಅಭ್ಯಾಸ ಮಾಡಿರಬೇಕು. ಎಸ್ಸಿ, ಎಸ್ಟಿ, ಮತ್ತು ಇತರೆ ಹಿಂದುಳಿದ ವರ್ಗಗಳಾದ ಪ್ರವರ್ಗ-1, 2ಎ, 3ಎ ಮತ್ತು 3ಬಿಗಳಿಗೆ ಸೇರಿರುವ ಅಭ್ಯರ್ಥಿಗಳು ಶೇ.40 ರಷ್ಟು ಅಂಕಗಳಿಸಿರಬೇಕು.
ಬಿಎಸ್ಸಿ ನರ್ಸಿಂಗ್ ಕೋಸ್‌ಗಳ ಪ್ರವೇಶಾತಿಗೆ ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಏ. 22 ರಾತ್ರಿ 11.59 ರವರೆಗೆ ಸಿಇಟಿ-2023ಕ್ಕೆ ನೋಂದಣಿ ಮಾಡಿಕೊಂಡು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅದೇ ದಿನದೊಳಗೆ ನಿಗದಿತ ಶುಲ್ಕವನ್ನು ಪಾವತಿಸಬೇಕು.
ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.
ಈ ಸುದ್ದಿ ಓದಿದ್ದೀರಾ?: ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಇರಲಿ: ಯುಜಿಸಿ