ಪದವಿ, ಸ್ನಾತಕೋತ್ತರ, ಡಿಪ್ಲೊಮ, ಬಿ. ಫಾರ್ಮ ಮತ್ತು ಹಲವು ಕೋರ್ಸ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಪ್ರಕಟಣೆ ಹೊರಡಿಸಿದೆ.
ಏಪ್ರಿಲ್‌ನಲ್ಲೇ ವಾರ್ಷಿಕ ಬಸ್ ಪಾಸ್‌ಗಳ ಅವಧಿ ಮುಗಿದ ಕಾರಣ ವಿದ್ಯಾರ್ಥಿಗಳು ಮತ್ತಷ್ಟು ಅವಧಿ ವಿಸ್ತರಣೆಗೆ ಮನವಿ ಮಾಡಿಕೊಂಡಿದ್ದರು. ಅಂತಿಮ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪರೀಕ್ಷೆಗಳು ಇನ್ನೂ ಮುಗಿದಿರುವುದಿಲ್ಲ.
ವಿದ್ಯಾರ್ಥಿಗಳ ಬೇಡಿಕೆ ಮತ್ತು ವೇಳಾಪಟ್ಟಿಯನ್ನು ಪರಿಗಣಿಸಿ ಅಂತಿಮ ವರ್ಷದ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿ, ಸ್ನಾತಕೋತ್ತರ, ಡಿಪ್ಲೊಮ, ಕಾನೂನು ಸೇರಿದಂತೆ ಇತರೆ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳ ಅಂತಿಮ ವರ್ಷದ ಪರೀಕ್ಷೆ ಮುಗಿಯುವವರೆಗೆ ಬಸ್ ಪಾಸ್ ಅವಧಿಯನ್ನು ವಿಸ್ತರಿಸಲಾಗಿದೆ.
ವಿದ್ಯಾರ್ಥಿಗಳ ತರಗತಿ ಅಥವಾ ಪರೀಕ್ಷೆ ನಡೆಯುತ್ತಿರುವುದನ್ನು ಖಚಿತಪಡಿಸಿಕೊಂಡು ಹೆಚ್ಚುವರಿ ಹಣ ಪಾವತಿಸಿಕೊಂಡು ಒಂದು ಅಥವಾ ಎರಡು ತಿಂಗಳ ಅವಧಿಗೆ ಪಾಸ್ ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ.
ವಿದ್ಯಾರ್ಥಿಗಳು ಕಡ್ಡಾಯವಾಗಿ ರಶೀದಿ ಮತ್ತು ಹಳೆಯ ಪಾಸ್ ಎರಡನ್ನೂ ತೋರಿಸಿ ಪ್ರಯಾಣಿಸಬಹುದು. ಈ ಬಗ್ಗೆ ಎಲ್ಲ ಚಾಲಕ ನಿರ್ವಾಹಕರಿಗೆ ಅಗತ್ಯ ಮಾಹಿತಿ ನೀಡುವಂತೆ ಕೆಎಸ್‌ಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಎಸಿಎಫ್ ನೇಮಕಾತಿ; ಸಂದರ್ಶನ ಸಮಿತಿಗೆ ಕೆಪಿಎಸ್‌ಸಿ ನಕಾರ