ರಾಜ್ಯದಲ್ಲಿ ಇತ್ತೀಚೆಗಷ್ಟೇ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದೆ. ಉನ್ನತ ಶಿಕ್ಷಣಕ್ಕಾಗಿನ ಸಿಇಟಿ ಪರೀಕ್ಷೆಗಳು ಕೂಡ ನಡೆದಿವೆ. ಈ ಸಿಇಟಿ ಪರೀಕ್ಷೆಗಳನ್ನು ಬರೆಯಲು ಪಿಯುಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೂ ಅವಕಾಶ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, “ಪಿಯುಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರೀಕ್ಷೆ-2ಅನ್ನು ಬರೆದು ಉತ್ತೀರ್ಣರಾಗಬಹುದು. ಹೀಗಾಗಿ, ಪರೀಕ್ಷೆ-1ರಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೂ ಸಿಇಟಿ ಬರೆಯಲು ಅವಕಾಶ ನೀಡಲಾಗಿದೆ. ಸಿಇಟಿಯಲ್ಲಿ ಉತ್ತೀರ್ಣರಾಗಿ, ಪರೀಕ್ಷೆ-2ರಲ್ಲಿ ತೇರ್ಗಡೆ ಹೊಂದಿದವರು ಮುಂದಿನ ಉನ್ನತ ಶಿಕ್ಷಣಕ್ಕೆ ತೆರಳಲು ಸಹಾಯವಾಗುತ್ತದೆ. ಇದರಿಂದ, ಒಂದು ವರ್ಷ ಅವಧಿಯ ಕಾಯುವಿಕೆ ತಪ್ಪುತ್ತದೆ” ಎಂದು ತಿಳಿಸಿದ್ದಾರೆ.
“ಪರೀಕ್ಷೆ-1ರಲ್ಲಿ ಅನುತ್ತೀರ್ಣರಾಗಿ, ಪರೀಕ್ಷೆ-2ಕ್ಕೆ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳ ಪೈಕಿ 92.4%ರಷ್ಟು ವಿದ್ಯಾರ್ಥಿಗಳು ಸಿಇಟಿ ಬರೆಯಲು ಅರ್ಹರಾಗಿದ್ದಾರೆ. ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ಒಟ್ಟು 1,69,353 ವಿದ್ಯಾರ್ಥಿಗಳು ಈಗ ಎರಡನೇ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷೆ-2 ಏಪ್ರಿಲ್ 24 ರಿಂದ ಮೇ 8ರವರೆಗೆ ನಡೆಯಲಿದೆ. ಈ ಪರೀಕ್ಷೆಯ ಫಲಿತಾಂಶವನ್ನು ಸಿಇಟಿ ಫಲಿತಾಂಶಕ್ಕೂ ಮುನ್ನವೇ ಪ್ರಕಟಿಸಲಾಗುತ್ತದೆ. ಇದರಿಂದ, ವಿದ್ಯಾರ್ಥಿಗಳು ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನಲ್ಲೇ ಅರ್ಹತೆ ಪಡೆಯಲು ಸಾಧ್ಯವಾಗುತ್ತದೆ” ಎಂದು ಹೇಳಿದ್ದಾರೆ.
ಬುಧವಾರ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿ ಪರೀಕ್ಷೆಗಳು ನಡೆದಿವೆ. ಸಿಇಟಿಗೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳ ಪೈಕಿ 94.20% ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.