ಮೂರು ಗಂಟೆ ಇದ್ದ ‘ದಿ ಟೆಸ್ಟ್ ಆಫ್ ಇಂಗ್ಲಿಷ್ ಆ್ಯಸ್ ಆ್ಯನ್ ಫಾರಿನ್ ಲಾಂಗ್ವೇಜ್’ (ಟಿಒಇಎಫ್ಎಲ್ ಅಥವಾ ಟೊಫೆಲ್) ಪರೀಕ್ಷೆಯ ಅವಧಿಯನ್ನು ಕಡಿತಗೊಳಿಸಲಾಗಿದೆ.
ಎಜುಕೇಷನಲ್ ಟೆಸ್ಟಿಂಗ್ ಸರ್ವಿಸಸ್ (ಇಟಿಎಸ್) ಆಯೋಜಿಸುವ ಟೊಫೆಲ್ ಪರೀಕ್ಷೆಯು ಜಗತ್ತಿನ ಅತಿ ಪ್ರಸಿದ್ಧ ಭಾಷಾ ಅರ್ಹತಾ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಹಿಂದೆ ಪರೀಕ್ಷೆ ಬರೆಯಲು ಮೂರು ಗಂಟೆ ಬೇಕಾಗುತ್ತಿತ್ತು. ಆದರೆ, ಈಗ 1:56 ಗಂಟೆಗೆ ತಗ್ಗಿಸಲಾಗಿದೆ.
ಈ ಹಿಂದೆ ಪರೀಕ್ಷೆ ಬರೆದ ನಂತರ ಅಂಕ ಬಿಡುಗಡೆ ದಿನದ ಘೋಷಣೆಗಾಗಿಯೂ ದಿನಗಣನೆ ಮಾಡಬೇಕಾಗಿತ್ತು. ಆದರೀಗ ಅಭ್ಯರ್ಥಿಗಳು ಪರೀಕ್ಷೆ ಪೂರ್ಣಗೊಳಿಸಿದ ನಂತರ ಅಂಕ ಬಿಡುಗಡೆಯ ಅಧಿಕೃತ ದಿನಾಂಕದ ಕುರಿತು ಮಾಹಿತಿ ಪಡೆಯಬಹುದಾಗಿದೆ. ಇದರ ಜೊತೆಗೆ ಇನ್ನಿತರ ಬದಲಾವಣೆಗಳನ್ನು ಮಾಡಲಾಗಿದ್ದು, ಇದು ಈ ವರ್ಷದ ಜುಲೈ 26ರಿಂದಲೇ ಜಾರಿಯಾಗಲಿದೆ ಎಂದು ಇಟಿಎಸ್ ತಿಳಿಸಿದೆ.
ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಮೊದಲ ಬಾರಿಗೆ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಶುಲ್ಕದ ಹಣವನ್ನು ಭಾರತೀಯ ರೂಪಾಯಿಗಳಲ್ಲಿ ಪಾವತಿಸಬಹುದು. ಸರಳೀಕೃತ ನೋಂದಣಿ ಪ್ರಕ್ರಿಯೆಯು 2023 ಜುಲೈನಿಂದ ಲಭ್ಯವಿರುತ್ತದೆ. ಪರೀಕ್ಷೆ ಎದರಿಸುವವರು ಈ ಹಿಂದೆಂದಿಗಿಂತಲೂ ತ್ವರಿತವಾಗಿ ಮತ್ತು ಸುಲಭವಾಗಿ ನೋಂದಾಯಿಸಿಕೊಳ್ಳಬಹುದು ಎಂದು ಇಟಿಎಸ್ ಹೇಳಿದೆ.
ಟೊಫೆಲ್ ಪರೀಕ್ಷೆ ನಡೆಸುವ ಉದ್ದೇಶವೇನೆಂದರೆ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯಲ್ಲಿ ಹೊಂದಿರುವ ಪ್ರಾವೀಣ್ಯತೆಯನ್ನು ಪರೀಕ್ಷಿಸುವುದು. ಭಾರತ, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ 160 ದೇಶಗಳ 11,500ಕ್ಕೂ ಅಧಿಕ ವಿಶ್ವವಿದ್ಯಾಲಯಗಳು ಹಾಗೂ ಇತರೆ ಶಿಕ್ಷಣ ಸಂಸ್ಥೆಗಳು ಈ ಪರೀಕ್ಷೆಗೆ ಮಾನ್ಯತೆ ನೀಡಿವೆ. ಈ ಸಂಸ್ಥೆಗಳು ವಿದ್ಯಾರ್ಥಿಗಳ ಆಯ್ಕೆಗೂ ಮುನ್ನ ಟೊಫೆಲ್ ಪರೀಕ್ಷೆಯಲ್ಲಿ ಅವರು ಪಡೆದಿರುವ ಅಂಕಗಳನ್ನು ಗಮನಿಸುತ್ತವೆ.
ಈ ಸುದ್ದಿ ಓದಿದ್ದೀರಾ?: ಒಂದು ನಿಮಿಷದ ಓದು | ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ; ಶಿಕ್ಷಕ ಅಮಾನತು