- ಜ್ಯೋತಿಷ್ಯದ ಬಗ್ಗೆ ಅಂಧಾಭಿಮಾನ ಸೃಷ್ಟಿಸುವುದು ಸರ್ಕಾರದ ಉದ್ದೇಶ
- ದಲಿತ ಮತ್ತು ಮಹಿಳೆಯರನ್ನು ಶಿಕ್ಷಣದಿಂದ ಹೊರಗಿಡಲು ವೈದಿಕ ಶಿಕ್ಷಣ ಕಾರಣ
ಹೊರ ರಾಷ್ಟ್ರದ ವಿದ್ಯಾರ್ಥಿಗಳನ್ನು ಆಕರ್ಷಿಸಲು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (ಯುಜಿಸಿ) ಧರ್ಮನಿರಪೇಕ್ಷ, ವೈಜ್ಞಾನಿಕ ಆಶಯಗಳಿಗೆ ವಿರುದ್ಧವಾಗಿರುವ ವೈದಿಕ ಶಿಕ್ಷಣ, ಜ್ಯೋತಿಷ್ಯ ಪರಿಚಯಿಸಲು ಮುಂದಾಗಿದೆ. ಯುಜಿಸಿ ನಿರ್ಧಾರವನ್ನು ಅಖಿಲ ಭಾರತ ಪ್ರಜಾಸತಾತ್ಮಕ ವಿದ್ಯಾರ್ಥಿಗಳ ಸಂಘಟನೆ (ಎಐಡಿಎಸ್ಒ) ವಿರೋಧ ವ್ಯಕ್ತಪಡಿಸಿದೆ.
“ಕೇಂದ್ರ ಸರ್ಕಾರದ ‘ಹೊಸ ಶಿಕ್ಷಣ ನೀತಿ-2020’ರ ಪ್ರಕಾರ ಅಂತರಾಷ್ಟ್ರೀಯ ವಿದ್ಯಾರ್ಥಿಗಳನ್ನು ಭಾರತಕ್ಕೆ ಆಕರ್ಷಿಸುವ ಸಲುವಾಗಿ ವೈದಿಕ ಗಣಿತ, ಸಂಸ್ಕೃತ, ಯೋಗ, ಆಯುರ್ವೇದ, ಜ್ಯೋತಿಷ್ಯದಂತಹ ವಿಷಯಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹೊಸದಾಗಿ ಸೇರಿಸಬೇಕು” ಎಂದು ಯುಜಿಸಿ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಆದೇಶ ಹೊರಡಿಸಿದೆ.
ದಲಿತರನ್ನು, ಮಹಿಳೆಯರನ್ನು ಶಿಕ್ಷಣದಿಂದ ದೂರವಿರುವಂತೆ ಮಾಡಲು ವೈದಿಕ ಶಿಕ್ಷಣ ಕಾರಣವಾಗಿತ್ತು. ಈ ಪುರಾಣಗಳ ವಿರುದ್ಧ ಜ್ಯೋತಿಬಾ ಫುಲೆ, ಸಾವಿತ್ರಿ ಬಾಯಿ ಫುಲೆ ಜೀವನಪರ್ಯಂತ ಹೋರಾಡಿದ್ದರು. ಇದೀಗ ಅದೇ ಅವೈಜ್ಞಾನಿಕ ಶಿಕ್ಷಣ ಪದ್ದತಿಯನ್ನು ಸರ್ಕಾರ ಜಾರಿ ಮಾಡಲು ಮುಂದಾಗಿದೆ ಎಂದು ಸಂಘಟನೆ ಕಿಡಿಕಾರಿದೆ.
ಬ್ರಿಟಿಷರು ಭಾರತೀಯರನ್ನು ಅಂಧಕಾರದಲ್ಲಿಡಲು ವೈದಿಕ ಶಿಕ್ಷಣ ಪರಿಚಯಿಸಲು ಹೊರಟಾಗ ಈಶ್ವರ ಚಂದ್ರ ವಿದ್ಯಾಸಾಗರರು ವೇದಶಾಸ್ತ್ರ, ವೈದಿಕ ಜ್ಞಾನದಿಂದ ಯಾವ ಉಪಯೋಗವೂ ಇಲ್ಲ, ಬದಲಾಗಿ ಸಮಾಜದ ಪ್ರಗತಿಗೆ ಇಂಗ್ಲೀಷ್ ಭಾಷೆ, ವಿಜ್ಞಾನ, ಇತಿಹಾಸ, ಭೌಗೋಳ ಶಾಸ್ತ್ರದ ಅವಶ್ಯಕತೆ ಇದೆ ಎಂದಿದ್ದರು. ಜ್ಯೋತಿಷ್ಯ ಶಾಸ್ತ್ರವನ್ನು ಮಾನಸಿಕ ರೋಗ ಎಂದು ಸ್ವಾಮಿ ವಿವೇಕಾನಂದರು ಹೀಗೆಳೆದಿದ್ದರು.
ಈ ಸುದ್ದಿ ಓದಿದ್ದೀರಾ?: ಸಂರಕ್ಷಣಾಧಿಕಾರಿ ಪರೀಕ್ಷೆ; ವರ್ಷಗಳೇ ಕಳೆದರೂ ಪ್ರಕಟವಾಗದ ಫಲಿತಾಂಶ
ಇಂತಹ ಅವೈಜ್ಞಾನಿಕ ವಿಷಯಗಳನ್ನು ಶಿಕ್ಷಣದಲ್ಲಿ ತರುವ ಸರ್ಕಾರದ ಉದ್ದೇಶವೇ ವಿದ್ಯಾರ್ಥಿಗಳಲ್ಲಿ ವೈದಿಕ ಶಿಕ್ಷಣ ಜ್ಯೋತಿಷ್ಯದ ಬಗ್ಗೆ ಅಂಧಾಭಿಮಾನ ಸೃಷ್ಟಿಸುವುದು. ‘ಧರ್ಮ, ಶಿಕ್ಷಣ ಹಾಗೂ ರಾಜಕೀಯದಿಂದ ಕೈತೆಗೆ’ ಎಂದಿದ್ದ ವಿವೇಕಾನಂದರ ಆಶಯಗಳ ವಿರುದ್ಧವಾಗಿ ಸರ್ಕಾರ ಕೋಮುದ್ವೇಷ ಸೃಷ್ಟಿಸಲು ಹೊರಟಿದೆ. ಸರ್ಕಾರದ ಈ ನಡೆಯನ್ನು ಎಐಡಿಎಸ್ಓ ಅತ್ಯುಗ್ರವಾಗಿ ಖಂಡಿಸುತ್ತದೆ.
ವಿಶ್ವ ವಿದ್ಯಾಲಯಗಳಿಗೆ ತನ್ನದೇ ಆದ ಸ್ವಾಯತ್ತತೆ ಇದೆ. ಅಂತಹ ಸಂದರ್ಭದಲ್ಲಿ, ಇದನ್ನೇ ವಿವಿಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು ಬೋಧಿಸಬೇಕು ಎಂದು ಹಲವು ನಿರ್ದೇಶನಗಳನ್ನು ಎನ್.ಇ.ಪಿ ಹೆಸರಿನಲ್ಲಿ ವಿಶ್ವವಿದ್ಯಾಲಯಗಳ ಮೇಲೆ ಹೇರುತ್ತಿರುವ ಯುಜಿಸಿಯ ಕ್ರಮ ಅತ್ಯಂತ ಅಪ್ರಜಾತಾಂತ್ರಿಕ ಹಾಗೂ ಸರ್ವಾಧಿಕಾರಿ ಧೋರಣೆಯಿಂದ ಕೂಡಿದೆ ಎಂದು ಎಐಡಿಎಸ್ಒ ಆಕ್ರೋಶ ವ್ಯಕ್ತಪಡಿಸಿದೆ.