ತಾಂತ್ರಿಕ ಸಮಸ್ಯೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಮೊದಲನೇ ಸೆಮಿಸ್ಟರ್ ಪರೀಕ್ಷೆಯನ್ನು ಮುಂದೂಡಲಾಗಿದೆ.
ಪರೀಕ್ಷೆ ಮುಂದೂಡಿಕೆ ಬಗ್ಗೆ ವಿಟಿಯು ಪ್ರಕಟಣೆ ಹೊರಡಿಸಿದೆ. ಮೊದಲ ವರ್ಷದ ಮೊದಲ ಸೆಮಿಸ್ಟರ್ ಪರೀಕ್ಷೆಗಳು ಏಪ್ರಿಲ್ 20 ರಿಂದ ನಿಗದಿಯಾಗಿದ್ದವು. ವಿಟಿಯು ವ್ಯಾಪ್ತಿಯ ಕಾಲೇಜುಗಳ ಉಪನ್ಯಾಸಕರನ್ನು ಚುನಾವಣೆಯ ಕೆಲಸದಲ್ಲಿ ನಿಯೋಜಿಸಿರುವ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಹೇಳಿದೆ.
ಚುನಾವಣೆ ಕೆಲಸಕ್ಕೆ ಎಲ್ಲ ಉಪನ್ಯಾಸಕರು ಹಾಜರಾಗುತ್ತಿದ್ದಾರೆ. ಅಲ್ಲದೆ, ಕೆಲವು ತಾಂತ್ರಿಕ ಸಮಸ್ಯೆಗಳೂ ಎದುರಾಗಿವೆ. ಹೀಗಾಗಿ ಮೊದಲ ಸೆಮಿಸ್ಟರ್ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ ಎಂದು ವಿಟಿಯು ತಿಳಿಸಿದೆ. ಮುಂದೂಡಿಕೆಯಾಗಿರುವ ಪರೀಕ್ಷೆಗಳನ್ನು ಏಪ್ರಿಲ್ 27ರಿಂದ ನಡೆಸಲು ವಿಟಿಯು ತೀರ್ಮಾನಿಸಿದೆ.

ರಾಜ್ಯದಲ್ಲಿ ಮೇ 10ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, 13ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಏಪ್ರಿಲ್ 20ರವರೆಗೆ ನಡೆಯಲಿದೆ. ಏಪ್ರಿಲ್ 21ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂತೆಗೆಯಲು ಏಪ್ರಿಲ್ 24 ಕೊನೆಯ ದಿನವಾಗಿದೆ. ಹೀಗಾಗಿ ಸದ್ಯ ಶಿಕ್ಷಕರು, ಉಪನ್ಯಾಸಕರು ಚುನಾವಣೆ ಕರ್ತವ್ಯದಲ್ಲಿ ವ್ಯಸ್ತರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಖಾಸಗಿ ಶಾಲೆಗಳು ಶುಲ್ಕದ ವಿವರ ಪ್ರಕಟಿಸುವುದು ಕಡ್ಡಾಯ