ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಮತ್ತು ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಾಧೀಶರ ಸಾಂವಿಧಾನಿಕ ಪೀಠದಲ್ಲಿ 8ನೇ ದಿನದ ವಿಚಾರಣೆ ಮುಂದುವರೆದಿದೆ. ವಿಚಾರಣೆಯ ವೇಳೆ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರು, “ಒಬ್ಬ ಹಿಂದೂ ಎಂದರೆ ಅವ ಹಿಂದೂವೇ, ಅವನು ಯಾವ ದೇವಸ್ಥಾನಕ್ಕಾದರೂ ಹೋಗಬಹುದು ಎಂದಿದ್ದಾರೆ. ಧಾರ್ಮಿಕ ಪಂಗಡಗಳ ಹೆಸರಿನಲ್ಲಿ ಭೇದಭಾವ ಮಾಡುವುದರ ವಿರುದ್ಧ ಹಾಗೂ ಕೆಲವರಿಗೆ ದೇವಸ್ಥಾನ ಪ್ರವೇಶ ನಿರಾಕರಿಸುವುದರ ವಿರುದ್ಧ ಆಡಿದ ಮಾತುಗಳಿವು ಎಂದು ವಿಶ್ಲೇಷಿಸಲಾಗುತ್ತಿದೆ.
ಇಂದಿನ ವಿಚಾರಣೆಯ ವೇಳೆ ಕೆಲ ಮಹತ್ವದ ಹೇಳಿಕೆಗಳು ಹೊರಬಿದ್ದಿವೆ. ಹಿರಿಯ ವಕೀಲ ನೀರಜ್ ಕಿಶನ್ ಕೌಲ್ ಅವರು ಶಶಿ ತರೂರ್ ಅವರ ಲೇಖನವೊಂದರ ʼಆಳವಾದ ನಂಬಿಕೆಯ ವಿಷಯಗಳ ಮೇಲೆ ತೀರ್ಪು ನೀಡುವಾಗ ಕಾನೂನು ತರ್ಕದ ಮಿತಿಗಳ ಬಗ್ಗೆ ಎಚ್ಚರಿಕೆ ಇರಲಿ” ಎಂಬ ಮಾತುಗಳನ್ನು ಉಲ್ಲೇಖಿಸಿದಾಗ, ನ್ಯಾಯಮೂರ್ತಿ ನಾಗರತ್ನ ಅವರು, ʼವಾಟ್ಸಾಪ್ ಯುನಿವರ್ಸಿಟಿʼ ಮಾಹಿತಿಗಳನ್ನು ಹಂಚಿಕೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದರು. ಇದಕ್ಕೆ ಉತ್ತರಿಸಿದ ಕೌಲ್, ಜ್ಞಾನ ಮತ್ತು ಬುದ್ಧಿವಂತಿಕೆ ಯಾವುದೇ ಮೂಲದಿಂದ ಬಂದರೂ ಅದನ್ನು ಗೌರವಿಸಬೇಕು ಎಂದರು. ಆಗ ಮುಖ್ಯ ನ್ಯಾಯಮೂರ್ತಿಗಳು, ಗಣ್ಯ ವ್ಯಕ್ತಿಗಳ ಬಗ್ಗೆ ಗೌರವವಿದ್ದರೂ ಅವರ ವೈಯಕ್ತಿಕ ಅಭಿಪ್ರಾಯಗಳು ನ್ಯಾಯಾಲಯದ ಮೇಲೆ ಪ್ರಭಾವ ಬೀರದು ಎಂದು ಸ್ಪಷ್ಟಪಡಿಸಿದರು.
ಧಾರ್ಮಿಕ ಪಂಗಡ ಮತ್ತು ಏಕತೆಯ ವಾದ: ಹಿರಿಯ ವಕೀಲ ದ್ವಿವೇದಿ, ಧಾರ್ಮಿಕ ಪಂಗಡಗಳು ವಿಧಿ 26ರ ಅಡಿಯಲ್ಲಿ ರಕ್ಷಿಸಲ್ಪಟ್ಟ ಶಿಸ್ತುಬದ್ಧ ಗುಂಪುಗಳು ಎಂದು ವಾದಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪೀಠವು, ದೇವಸ್ಥಾನಗಳು ಪಂಗಡಗಳ ಹೆಸರಿನಲ್ಲಿ ಇತರರನ್ನು ಹೊರಗಿಡಬಾರದು ಎಂದು ಹೇಳಿತು. ಅಂತಹ ಹೊರಗಿಡುವಿಕೆಯು ಅಂತಿಮವಾಗಿ ಆ ಪಂಗಡವನ್ನೇ ದುರ್ಬಲಗೊಳಿಸುತ್ತದೆ ಮತ್ತು ಹಿಂದೂಗಳು ಒಗ್ಗೂಡಬೇಕು ಎಂದಿತ್ತು.
ಸಾಮಾಜಿಕ ಸುಧಾರಣೆಯಲ್ಲಿ ಸರ್ಕಾರದ ಪಾತ್ರ: ಸಾಮಾಜಿಕ ಕಲ್ಯಾಣ ಮತ್ತು ಸುಧಾರಣೆಯ ವಿಷಯದಲ್ಲಿ ಸರ್ಕಾರ ಕೇವಲ ಪ್ರೇಕ್ಷಕನಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. “ಸರ್ಕಾರವು ಜನರ ಇಚ್ಛೆಯನ್ನು ಪ್ರತಿನಿಧಿಸುತ್ತದೆ. ಸಮಾಜದಲ್ಲಿನ ಕೆಡಕುಗಳನ್ನು ಹೋಗಲಾಡಿಸಲು ಜನರು ಬಯಸಿದರೆ, ಆ ಸುಧಾರಣಾ ಅಧಿಕಾರವನ್ನು ಅಥವಾ ಬದಲಾವಣೆಗಳನ್ನು ತರಲು ಸರ್ಕಾರಕ್ಕೆ ಹಕ್ಕಿದೆ” ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದ್ದಾರೆ.
ಸದ್ಯ ವಿಚಾರಣೆಯಲ್ಲಿರುವ 7 ಪ್ರಮುಖ ಸಾಂವಿಧಾನಿಕ ಪ್ರಶ್ನೆಗಳು: ಈ ಪ್ರಕರಣವು ಮುಖ್ಯವಾಗಿ ಏಳು ಪ್ರಶ್ನೆಗಳನ್ನು ಒಳಗೊಂಡಿದೆ. ಧಾರ್ಮಿಕ ಸ್ವಾತಂತ್ರ್ಯದ (ವಿಧಿ 25) ವ್ಯಾಪ್ತಿ, ವೈಯಕ್ತಿಕ ಮತ್ತು ಪಂಗಡಗಳ ಹಕ್ಕುಗಳ ನಡುವಿನ ಸಂಬಂಧ, ಧಾರ್ಮಿಕ ಹಕ್ಕುಗಳ ಮೇಲೆ ಇತರ ಮೂಲಭೂತ ಹಕ್ಕುಗಳ ಪ್ರಭಾವ, ‘ಸಾಂವಿಧಾನಿಕ ನೈತಿಕತೆ’ಯ ಅರ್ಥ, ಧಾರ್ಮಿಕ ಆಚರಣೆಗಳ ಮೇಲೆ ನ್ಯಾಯಾಂಗ ವಿಮರ್ಶೆಯ ಮಿತಿ, ʼಹಿಂದೂಗಳ ವಿಭಾಗಗಳುʼ ಎಂಬ ಪದದ ವ್ಯಾಖ್ಯಾನ ಮತ್ತು ಪಂಗಡಕ್ಕೆ ಸೇರದ ವ್ಯಕ್ತಿಗಳು ಪಿಐಎಲ್ ಸಲ್ಲಿಸುವ ಹಕ್ಕು ಹೊಂದಿದ್ದಾರೆಯೇ ಎಂಬುದರ ಕುರಿತು ಮುಂದಿನ ವಿಚಾರಣೆಗಳಲ್ಲಿ ಕೋರ್ಟ್ ಬೆಳಕು ಚೆಲ್ಲಲಿದ್ದು ಭಾರೀ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ವ್ಯಕ್ತಿಚಿತ್ರ | ’31 ದಿನಗಳ ದೊರೆ’ ನಾದೆಂಡ್ಲ ಭಾಸ್ಕರ್ ರಾವ್!
ಕೇಂದ್ರ ಸರ್ಕಾರ, ದೇವಸ್ಥಾನದ ಭಕ್ತರ ಸಂಘಟನೆಗಳು ಮತ್ತು ತಿರುವಾಂಕೂರು ದೇವಸ್ವಂ ಮಂಡಳಿಯ ವಾದಗಳು ಈಗಾಗಲೇ ಪೂರ್ಣಗೊಂಡಿವೆ. ಏಪ್ರಿಲ್ 21 ರಂದು ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣ್ ಮತ್ತು ಜೆ. ಸಾಯಿ ದೀಪಕ್ ಅವರು ತಮ್ಮ ವಾದಗಳನ್ನು ಮಂಡಿಸಿದ್ದರು. ಇದಕ್ಕೂ ಮುನ್ನ ನಡೆದ ಚರ್ಚೆಯಲ್ಲಿ ನ್ಯಾಯಮೂರ್ತಿ ನಾಗರತ್ನ ಅವರು ನಾಸ್ತಿಕರು ಮತ್ತು ಅಜ್ಞೇಯತಾವಾದಿಗಳ ನಂಬಿಕೆಗಳ ಬಗ್ಗೆಯೂ ಪ್ರಸ್ತಾಪಿಸಿದ್ದರು. ವಿಧಿ 25(2) ಮತ್ತು ವಿಧಿ 26ರ ನಡುವಿನ ಸಂಬಂಧದ ಬಗ್ಗೆ ವಕೀಲರು ಸುದೀರ್ಘ ವಾದ ಮಂಡಿಸಿದ್ದಾರೆ.





