ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಗುರುವಾರ(ಏ.23) ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಅತ್ಯುತ್ಸಾಹದಿಂದ ಹಕ್ಕು ಚಲಾಯಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಅಲ್ಲಲ್ಲಿ ನಡೆದ ಹಿಂಸಾಚಾರದ ನಡುವೆಯೂ ಶೇ 92.03ರಷ್ಟು ದಾಖಲೆಯ ಮತದಾನವಾಗಿದ್ದರೆ, ಅತ್ತ ತಮಿಳುನಾಡಿನಲ್ಲಿ ಶೇ 84.69ರಷ್ಟು ಮತದಾನವಾಗುವ ಮೂಲಕ ರಾಜ್ಯದ ಚುನಾವಣಾ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ನಿರ್ಮಾಣವಾಗಿದೆ.
ತಮಿಳುನಾಡು: ಇತಿಹಾಸದಲ್ಲೇ ಗರಿಷ್ಠ ಮತದಾನ
ತಮಿಳುನಾಡಿನ 17ನೇ ವಿಧಾನಸಭೆಯನ್ನು ಆಯ್ಕೆ ಮಾಡಲು ಗುರುವಾರ ನಡೆದ 234 ಕ್ಷೇತ್ರಗಳ ಚುನಾವಣೆಯಲ್ಲಿ ಒಟ್ಟು ಶೇ 84.69 ರಷ್ಟು (ರಾತ್ರಿ 8 ಗಂಟೆಯವರೆಗಿನ ತಾತ್ಕಾಲಿಕ ಅಂಕಿಅಂಶ) ಮತದಾನವಾಗಿದೆ. ಇದು ರಾಜ್ಯದ ಚುನಾವಣಾ ಇತಿಹಾಸದಲ್ಲೇ ಅತಿ ಹೆಚ್ಚಿನ ಶೇಕಡಾವಾರು ಮತದಾನವಾಗಿದೆ. ಬೆಳಿಗ್ಗೆ 7 ಗಂಟೆಯಿಂದ ಆರಂಭವಾದ ಪ್ರಕ್ರಿಯೆಯಲ್ಲಿ ಸುಮಾರು 4.85 ಕೋಟಿಗೂ ಹೆಚ್ಚು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಬುಧವಾರ ರಾತ್ರಿ ಚೆನ್ನೈನ ಗ್ರ್ಯಾಂಡ್ ಸದರ್ನ್ ಟ್ರಂಕ್ ರಸ್ತೆಯಲ್ಲಿ ದಕ್ಷಿಣದ ಕಡೆಗೆ ತೆರಳುವ ಖಾಸಗಿ ಹಾಗೂ ಸಾರ್ವಜನಿಕ ವಾಹನಗಳ ದಟ್ಟಣೆಯಿಂದಾಗಿ ಜನರು ಗಂಟೆಗಟ್ಟಲೆ ಪರದಾಡಿದರು. ಈ ಟ್ರಾಫಿಕ್ ಸಮಸ್ಯೆ ಎದುರಾಗದೇ ಇದ್ದಿದ್ದರೆ, ಮತದಾನದ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿತ್ತು ಎನ್ನಲಾಗಿದೆ.
ಬೆಳಿಗ್ಗೆ 7ಕ್ಕೆ ಶುರುವಾದ ಮತದಾನವು ಬಿರುಸಿನಿಂದ ಸಾಗಿತು. ಮೊದಲ ಎರಡು ಗಂಟೆಗಳಲ್ಲಿ (9 ಗಂಟೆಗೆ) ಶೇ 17.69ರಷ್ಟಿದ್ದ ಮತದಾನ, ಬೆಳಿಗ್ಗೆ 11 ಗಂಟೆಯ ವೇಳೆಗೆ ಶೇ 37.56ಕ್ಕೆ ತಲುಪಿತ್ತು. ಮಧ್ಯಾಹ್ನದ ಸುಡುಬಿಸಿಲಿನಲ್ಲೂ ಉತ್ಸಾಹ ಕಳೆದುಕೊಳ್ಳದ ಮತದಾರರು 1 ಗಂಟೆಯ ವೇಳೆಗೆ ಶೇ 56.81ರಷ್ಟು ಹಾಗೂ ಸಂಜೆ 5ರ ವೇಳೆಗೆ ಶೇ 80ರ ಗಡಿ ದಾಟುವಂತೆ ಮಾಡಿದರು. ವೆಂಗೈವಯಲ್‌ನಲ್ಲಿ ಪರಿಶಿಷ್ಟ ಜಾತಿಯವರ ಮೇಲಿನ ದೌರ್ಜನ್ಯದ ಸಿಬಿ-ಸಿಐಡಿ ತನಿಖೆ ವಿಳಂಬವಾಗುತ್ತಿರುವುದನ್ನು ಖಂಡಿಸಿ ಕಪ್ಪು ಬಾವುಟ ಪ್ರದರ್ಶಿಸಿ ಚುನಾವಣೆ ಬಹಿಷ್ಕರಿಸಿದಂತಹ ಕೆಲವು ಬೆರಳೆಣಿಕೆಯ ಘಟನೆಗಳನ್ನು ಹೊರತುಪಡಿಸಿ, ರಾಜ್ಯಾದ್ಯಂತ ಮತದಾನ ಬಹುತೇಕ ಶಾಂತಿಯುತವಾಗಿತ್ತು.
ಪಶ್ಚಿಮ ಬಂಗಾಳ: ಹಿಂಸಾಚಾರದ ನಡುವೆಯೂ ಬೃಹತ್ ಮತದಾನ
ಇನ್ನೊಂದೆಡೆ, ಪಶ್ಚಿಮ ಬಂಗಾಳದಲ್ಲಿ ಗುರುವಾರ 16 ಜಿಲ್ಲೆಗಳ (ದಕ್ಷಿಣ ಮತ್ತು ಉತ್ತರ ಬಂಗಾಳದ ತಲಾ ಎಂಟು ಜಿಲ್ಲೆಗಳು) 152 ಸ್ಥಾನಗಳಿಗೆ ನಡೆದ ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ ಅಲ್ಲಲ್ಲಿ ಹಿಂಸಾಚಾರದ ಘಟನೆಗಳು ವರದಿಯಾಗಿವೆ. ಘರ್ಷಣೆ ಮತ್ತು ಬಿಗುವಿನ ವಾತಾವರಣದ ನಡುವೆಯೂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶೇ 92.03ರಷ್ಟು ಬೃಹತ್ ಮತದಾನ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ದೀದಿ ಕೋಟೆಯಲ್ಲಿ ಕಮಲ ಅರಳುವುದೇ? ನಿರ್ಣಾಯಕ ಹಂತದಲ್ಲಿ 59 ಕ್ಷೇತ್ರಗಳ ಅಸಲಿ ಆಟ
ದಕ್ಷಿಣ ದಿನಾಜ್‌ಪುರದ ಕುಮಾರ್‌ಗಂಜ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶುಭೇಂದು ಸರ್ಕಾರ್ ಅವರು ಕುಗ್ರಾಮವೊಂದರ ಮತಗಟ್ಟೆಗೆ ಭೇಟಿ ನೀಡಿದ್ದಾಗ, ಗುಂಪೊಂದು ಅವರನ್ನು ಅಟ್ಟಿಸಿಕೊಂಡು ಹೋಗಿ ಥಳಿಸಿದೆ. ಭದ್ರತಾ ಸಿಬ್ಬಂದಿ ತಡೆಯಲು ಯತ್ನಿಸುತ್ತಿರುವ ವಿಡಿಯೊ ಸೆರೆಯಾಗಿದ್ದು, ಈ ಸಂಬಂಧ ಐವರನ್ನು ಬಂಧಿಸಲಾಗಿದೆ. ಅದೇ ರೀತಿ, ಅಸನ್ಸೋಲ್ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಗ್ನಿಮಿತ್ರಾ ಪಾಲ್ ಅವರ ವಾಹನದ ಮೇಲೂ ದಾಳಿ ನಡೆದಿದೆ.
ಬೀರ್‌ಭೂಮ್‌ನ ಲಾಭ್‌ಪುರದಲ್ಲಿ ಬಿಜೆಪಿ ಏಜೆಂಟ್ ದೇಬಾಶಿಶ್ ಓಜಾ ಅವರ ಮೇಲೆ ಹಲ್ಲೆ ನಡೆದಿದ್ದು ತಲೆಗೆ ತೀವ್ರ ಪೆಟ್ಟಾಗಿದೆ. ದುಬ್ರಾಜ್‌ಪುರದಲ್ಲಿ ಪೊಲೀಸರು ಮತ್ತು ಕೇಂದ್ರ ಭದ್ರತಾ ಪಡೆಗಳ ಮೇಲೆ ಸ್ಥಳೀಯರು ಕಲ್ಲುತೂರಾಟ ನಡೆಸಿದ್ದು, ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದಾರೆ.
ದೊಮ್ಕಲ್ ಪ್ರದೇಶದಲ್ಲಿ ಬುಧವಾರ ಸಂಜೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ಕಬೀರ್ ಅವರ ಮೇಲೆ ಕಚ್ಚಾ ಬಾಂಬ್ ಎಸೆಯಲಾಗಿತ್ತು. ಇದರಿಂದಾಗಿ ಈ ಭಾಗದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಗುರುವಾರ ಟಿಎಂಸಿ ಮತ್ತು ಇತರ ಕಾರ್ಯಕರ್ತರ ನಡುವಿನ ಮುಖಾಮುಖಿಯನ್ನು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ತಡೆಯುವಲ್ಲಿ ಯಶಸ್ವಿಯಾಗಿದೆ. ಆಡಳಿತ ಪಕ್ಷದ ಬೆಂಬಲಿಗರು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದ ದೊಮ್ಕಲ್‌ನ ಕೆಲವು ಮತದಾರರು, ಕೇಂದ್ರ ಪಡೆಗಳು ಭದ್ರತೆ ಒದಗಿಸಿದರಷ್ಟೇ ಮತದಾನ ಮಾಡುವುದಾಗಿ ಪಟ್ಟು ಹಿಡಿದಿದ್ದ ಘಟನೆಯೂ ಜರುಗಿದೆ.





