ವಚನಾಮೃತ ಕನ್ನಡ ಸಂಘವು ಜಿಲ್ಲೆಯ ಪ್ರತಿ ಮನೆಗೂ ಬಸವಾದಿ ಶರಣರ ವಚನ ಸಾಹಿತ್ಯದ ಕೃತಿಗಳನ್ನು ವಿತರಿಸುವ ಗುರಿ ಹೊಂದಿದೆ ಎಂದು ಸಂಘದ ಅಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಹೇಳಿದರು.
ಬೀದರ್ ನಗರದ ಮಹೇಶನಗರದಲ್ಲಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಸಿದ್ದಮ್ಮ ಹಳಕಾಯಿ ಹಾಗೂ ರೇವಣಪ್ಪ ಹಳಕಾಯಿ ದಂಪತಿಗೆ ‘ಮನೆ ಮನೆಗೆ ಶರಣರ ಕೃತಿಗಳು’ ಅಭಿಯಾನ ಅಂಗವಾಗಿ ಬುಧವಾರ ವಚನ ಸಾಹಿತ್ಯದ 30 ಕೃತಿಗಳನ್ನು ವಿತರಿಸಿ ಅವರು ಮಾತನಾಡಿದರು.
“ಒಂದು ತಿಂಗಳಲ್ಲಿ 15 ಮನೆಗಳಿಗೆ ಕೃತಿಗಳನ್ನು ತಲುಪಿಸಲಾಗಿದೆ. ಕೃತಿ ವಿತರಣೆ ನಿರಂತರ ಪ್ರಕ್ರಿಯೆ ಆಗಿರಲಿದೆ. ಸುಸಂಸ್ಕೃತ ಸಮಾಜ ನಿರ್ಮಾಣಕ್ಕಾಗಿ ನೈತಿಕ ಹಾಗೂ ಮಾನವೀಯ ಮೌಲ್ಯಗಳ ಅಳವಡಿಕೆ ಅವಶ್ಯಕವಾಗಿದೆ. ಜೀವನಕ್ಕೆ ಅಗತ್ಯವಾದ ಮೌಲ್ಯಗಳನ್ನು ಒಳಗೊಂಡಿರುವ, ಆದರ್ಶ ಬದುಕಿಗೆ ಮಾರ್ಗದರ್ಶಿಯಾದ ವಚನ ಸಾಹಿತ್ಯದ ಕೃತಿಗಳ ವಿತರಣೆಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ” ಎಂದು ಹೇಳಿದರು.
ಹಿರಿಯ ಸಾಹಿತಿ ಭಾರತಿ ವಸ್ತ್ರದ್ ಮಾತನಾಡಿ, “ವಚನಾಮೃತ ಕನ್ನಡ ಸಂಘವು ಮನೆ-ಮನೆಗೆ ಶರಣರ ಕೃತಿಗಳು ಅಭಿಯಾನ ಹಮ್ಮಿಕೊಂಡಿರುವುದು ಶ್ಲಾಘನೀಯ. ವಚನ ಸಾಹಿತ್ಯವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು. ಶರಣರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಳ್ಲಬೇಕು” ಎಂದು ತಿಳಿಸಿದರು.
ಇದನ್ನೂ ಓದಿ : KPSC ಹಗರಣ | ತಪ್ಪಿತಸ್ಥರೆಲ್ಲರಿಗೂ ಕಠಿಣ ಶಿಕ್ಷೆ ಆಗುತ್ತದೆ : ಸಚಿವ ಈಶ್ವರ ಖಂಡ್ರೆ
ಪ್ರಮುಖರಾದ ಸಿದ್ದಣ್ಣ ಚೌಧರಿ, ಬಸವರಾಜ ಬಿರಾದಾರ, ಜಗದೇವಿ ಮೈನಾಳೆ, ಸಿದ್ರಾಮ ಸಪಾಟೆ, ಚಂದ್ರಶೇಖರ ತೂಗಾ, ಅಶೋಕ್ ಬೋಗಾರ್, ಸುಧೀರ್ ಬುಜ್ಜಿ, ಬಸವರಾಜ ಬೆಳಕೋಣೆ ಮತ್ತಿತರರು ಇದ್ದರು.






