ಲೈಂಗಿಕ ದೌರ್ಜನ್ಯ ಪ್ರಕರಣದ ವೈದ್ಯಕೀಯ ವರದಿಯಲ್ಲಿ ದೈಹಿಕ ಗಾಯಗಳ ಗುರುತುಗಳು ದಾಖಲಾಗಿಲ್ಲ ಎಂಬ ಒಂದೇ ಕಾರಣಕ್ಕೆ ಸಂತ್ರಸ್ತರಿಗೆ ಪರಿಹಾರ ನಿರಾಕರಿಸುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾದ ಅಪ್ರಾಪ್ತ ಸಂತ್ರಸ್ತೆಗೆ ಉತ್ತರ ಪ್ರದೇಶ ಸರ್ಕಾರದ ರಾಣಿ ಲಕ್ಷ್ಮೀಬಾಯಿ ಮಹಿಳಾ ಸಮ್ಮಾನ್ ಕೋಶ್ ಯೋಜನೆಯಡಿ ₹3 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಶೇಖರ್ ಬಿ. ಸರಾಫ್ ಮತ್ತು ಅಮಿತಾಭ್ ಕುಮಾರ್ ರೈ ಅವರ ವಿಭಾಗೀಯ ಪೀಠವು ಗುರುವಾರ ಈ ಆದೇಶ ನೀಡಿದೆ. ಆದೇಶದ ಪ್ರಮಾಣೀಕೃತ ಪ್ರತಿಯನ್ನು ಸಲ್ಲಿಸಿದ 10 ದಿನಗಳೊಳಗೆ ಪರಿಹಾರದ ಸಂಪೂರ್ಣ ಮೊತ್ತವನ್ನು ಪಾವತಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ ಎಂದು PTI ವರದಿ ಮಾಡಿದೆ.
ಲಖನೌನ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ 2022ರ ಡಿಸೆಂಬರ್ 7ರಂದು ಈ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ದಾಖಲಾಗಿತ್ತು. 2023ರ ಜನವರಿ 13ರಂದು ಆರೋಪಪಟ್ಟಿ ಸಲ್ಲಿಸಲಾಗಿತ್ತು. ಆದರೆ, ವೈದ್ಯಕೀಯ ವರದಿಯಲ್ಲಿ ‘ನುಗ್ಗುವಿಕೆಯೊಂದಿಗೆ (Penetration) ನಡೆದ ಲೈಂಗಿಕ ದೌರ್ಜನ್ಯವನ್ನು ದೃಢಪಡಿಸುವ ಸಾಕ್ಷ್ಯಗಳಿಲ್ಲ’ ಎಂಬ ಅಮಾನವೀಯ ಕಾರಣ ನೀಡಿ ಜಿಲ್ಲಾ ಸಮಿತಿಯು ಸಂತ್ರಸ್ತೆಗೆ ಪರಿಹಾರ ನೀಡುವುದನ್ನು ತಡೆಹಿಡಿದಿತ್ತು. ರಾಜ್ಯ ಸರ್ಕಾರದ ಪರ ವಕೀಲರೂ ವೈದ್ಯಕೀಯ ವರದಿಯಲ್ಲಿ ನುಗ್ಗುವಿಕೆಯನ್ನು ಸೂಚಿಸುವ ಗಾಯಗಳಿಲ್ಲ ಎಂದು ವಾದಿಸಿದ್ದರು.
ಈ ವಾದವನ್ನು ತಿರಸ್ಕರಿಸಿದ ಹೈಕೋರ್ಟ್, ಪರಿಹಾರ ತಡೆಹಿಡಿಯುವ ಜಿಲ್ಲಾ ಸಮಿತಿಯ ನಿರ್ಧಾರವು ಕಾನೂನು ಮತ್ತು ಯೋಜನೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿತು.
ಪೋಕ್ಸೋ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಉಲ್ಲೇಖಿಸಲಾದ ನುಗ್ಗುವಿಕೆಯೊಂದಿಗೆ ನಡೆಯುವ ಲೈಂಗಿಕ ದೌರ್ಜನ್ಯವನ್ನು ದೃಢಪಡಿಸಲು ದೈಹಿಕ ಗಾಯಗಳಿರುವುದು ಕಡ್ಡಾಯವಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು. ವೈದ್ಯಕೀಯ ವರದಿಯಲ್ಲಿ ಗಾಯದ ಗುರುತುಗಳು ದಾಖಲಾಗಿಲ್ಲ ಎಂಬ ಕಾರಣ ಮಾತ್ರದಿಂದ ಲೈಂಗಿಕ ದೌರ್ಜನ್ಯದ ಆರೋಪವನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಹೇಳಿತು.
ಎಫ್‌ಐಆರ್ ಮತ್ತು ಆರೋಪಪಟ್ಟಿಯಲ್ಲಿ ಪೋಕ್ಸೋ ಕಾಯ್ದೆಯ ಸೆಕ್ಷನ್ 4ರ ಅಡಿಯಲ್ಲಿ ಅಪರಾಧ ನಡೆದಿರುವುದನ್ನು ಸೂಚಿಸುವ ಅಂಶಗಳಿದ್ದರೆ, ವೈದ್ಯಕೀಯ ವರದಿಯಲ್ಲಿ ಗಾಯಗಳಿಲ್ಲ ಎಂಬ ಒಂದೇ ಕಾರಣಕ್ಕೆ ಪರಿಹಾರ ನಿರಾಕರಿಸಬಾರದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಇದನ್ನೂ ಓದಿ: ʼಗೂಂಡಾ ಕಾಯ್ದೆಯ ದುರ್ಬಳಕೆ ಸಲ್ಲದುʼ; ಯುಪಿ ಸರ್ಕಾರದ ವಿರುದ್ದ ಅಲಹಾಬಾದ್ ಹೈಕೋರ್ಟ್ ಅಸಮಾಧಾನ
ಉತ್ತರ ಪ್ರದೇಶದ ರಾಣಿ ಲಕ್ಷ್ಮೀಬಾಯಿ ಮಹಿಳಾ ಸಮ್ಮಾನ್ ಕೋಶ್ ಯೋಜನೆಯಡಿ ಪೋಕ್ಸೋ ಕಾಯ್ದೆಯ ವ್ಯಾಪ್ತಿಗೆ ಬರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರಿಗೆ ₹3 ಲಕ್ಷ ಪರಿಹಾರ ನೀಡಲು ಅವಕಾಶವಿದೆ. ಯೋಜನೆಯ ಪ್ರಕಾರ, ಎಫ್‌ಐಆರ್ ದಾಖಲಾದ 15 ದಿನಗಳೊಳಗೆ ₹1 ಲಕ್ಷ ಪಾವತಿಸಬೇಕು. ಉಳಿದ ₹2 ಲಕ್ಷವನ್ನು ಆರೋಪಪಟ್ಟಿ ಸಲ್ಲಿಸಿದ ಒಂದು ತಿಂಗಳೊಳಗೆ ನೀಡಬೇಕು.
ಈ ಯೋಜನೆಯು ಸಂತ್ರಸ್ತರು ಅನುಭವಿಸುವ ಆಘಾತ ಮತ್ತು ಸಂಕಷ್ಟವನ್ನು ತಗ್ಗಿಸಲು ರೂಪಿಸಿರುವ ಕಲ್ಯಾಣ ಕ್ರಮವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಆದ್ದರಿಂದ ಯೋಜನೆಯ ನಿಯಮಗಳನ್ನು ಸಂತ್ರಸ್ತರಿಗೆ ನೆರವಾಗುವ ರೀತಿಯಲ್ಲಿ ಉದಾರವಾಗಿ ಅರ್ಥೈಸಬೇಕು ಎಂದು ಸೂಚಿಸಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ಬಾಲಕಿಯರು ಮತ್ತು ಅವರ ಕುಟುಂಬಗಳು ದೈಹಿಕ ನೋವಿನ ಜೊತೆಗೆ ತೀವ್ರವಾದ ಮಾನಸಿಕ ಆಘಾತ ಹಾಗೂ ಸಾಮಾಜಿಕ ಬಹಿಷ್ಕಾರವನ್ನು ಎದುರಿಸಬೇಕಾಗುತ್ತದೆ. ಸರ್ಕಾರಿ ಪರಿಹಾರವು ಕೇವಲ ಹಣಕಾಸಿನ ನೆರವಷ್ಟೇ ಅಲ್ಲ, ಅದು ಸಮಾಜದಲ್ಲಿ ಅವರಿಗೆ ಆತ್ಮವಿಶ್ವಾಸದಿಂದ ಬದುಕಲು ಸಿಗುವ ನೈತಿಕ ಮತ್ತು ಆರ್ಥಿಕ ಬೆಂಬಲವಾಗಿದೆ.





