ಕೇಂದ್ರ ಮುಖ್ಯ ಮಾಹಿತಿ ಆಯುಕ್ತರ (ಸಿಐಸಿ) ಹುದ್ದೆಗೆ ರಾಜ್‌ಕುಮಾರ್ ಗೋಯಲ್ ಅವರನ್ನು ಆಯ್ಕೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ಸಮಿತಿಯು, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶಿಫಾರಸು ಮಾಡಿದ್ದ ಮೂರು ಪ್ರಮುಖ ಹೆಸರುಗಳನ್ನು ತಳ್ಳಿಹಾಕಿದೆ. ಈ ತಿರಸ್ಕೃತ ಪಟ್ಟಿಯಲ್ಲಿ ಒಡಿಶಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್. ಮುರಳೀಧರ್ ಅವರ ಹೆಸರೂ ಸೇರಿತ್ತು ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಕಳೆದ 2025ರ ಡಿಸೆಂಬರ್‌ನಲ್ಲಿ ‘ಸಿಐಸಿ’ ಆಯ್ಕೆಗಾಗಿ ನಡೆದ ತ್ರಿಸದಸ್ಯ ಸಮಿತಿಯ ಸಭೆಯಲ್ಲಿ ಈ ಬೆಳವಣಿಗೆ ನಡೆದಿದೆ. ಈ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಗೋಯಲ್ ಅವರ ಹೆಸರನ್ನು ಪ್ರಸ್ತಾಪಿಸಿದ್ದರು. ಆದರೆ, ಈ ಆಯ್ಕೆಯನ್ನು ವಿರೋಧಿಸಿದ್ದ ರಾಹುಲ್ ಗಾಂಧಿ ಅವರು ತಮಗಿದ್ದ ಪರ್ಯಾಯ ಒಲವುಗಳನ್ನು ಸಮಿತಿಯ ಮುಂದಿಟ್ಟಿದ್ದರು ಎಂಬ ಅಂಶ ಇದೀಗ ದಾಖಲೆಗಳಿಂದ ಬಹಿರಂಗವಾಗಿದೆ.
ಸಿಐಸಿ ಹುದ್ದೆಗೆ ಸಿದ್ಧಪಡಿಸಲಾಗಿರುವ ಕಿರುಪಟ್ಟಿಯಿಂದಲೇ ಅಭ್ಯರ್ಥಿಯನ್ನು ಆರಿಸುವುದಾದರೆ, ನಿವೃತ್ತ ಐಎಎಸ್ ಅಧಿಕಾರಿ ಸುಮೀತಾ ದಾವ್ರಾ ಅವರನ್ನು ಪರಿಗಣಿಸಬೇಕು ಎಂದು ರಾಹುಲ್ ಆಗ್ರಹಿಸಿದ್ದರು. ಒಂದು ವೇಳೆ ಕಿರುಪಟ್ಟಿಯ ಹೊರಗಿನಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಮಿತಿ ನಿರ್ಧರಿಸಿದರೆ, ಮೊದಲು ನ್ಯಾಯಮೂರ್ತಿ ಎಸ್. ಮುರಳೀಧರ್ ಮತ್ತು ನಂತರದ ಆದ್ಯತೆಯಾಗಿ ಖ್ಯಾತ ಶಿಕ್ಷಣ ತಜ್ಞ ಪ್ರೊ. ಫೈಜಾನ್ ಮುಸ್ತಫಾ ಅವರ ಹೆಸರನ್ನು ಪರಿಗಣಿಸುವಂತೆ ಅವರು ಸೂಚಿಸಿದ್ದರು. ಇವರಿಬ್ಬರೂ “ಕಾನೂನು, ನ್ಯಾಯ ಮತ್ತು ಸಾರ್ವಜನಿಕ ಸೇವಾ ವಲಯದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ, ಮಾದರಿ ದಾಖಲೆ ಹೊಂದಿರುವ ಗಣ್ಯ ವೃತ್ತಿಪರರಾಗಿದ್ದಾರೆ” ಎಂದು ತಮ್ಮ ಟಿಪ್ಪಣಿಯಲ್ಲಿ ರಾಹುಲ್ ಉಲ್ಲೇಖಿಸಿದ್ದರು.
ಇದನ್ನು ಓದಿದ್ದೀರಾ? ಕ್ಯಾಂಪಸ್ ರಾಜಕೀಯಕ್ಕೆ ಶಿಸ್ತಿನ ಕಡಿವಾಣ: ಲಿಂಗ್ಡೋ ಸಮಿತಿ ವರದಿಯ ಆಶಯ ಮತ್ತು ವಾಸ್ತವ
ಇದಲ್ಲದೆ, ‘ಮಾಹಿತಿ ಆಯುಕ್ತರ’ (ಐಸಿ) ನೇಮಕಾತಿಗಾಗಿ ಸಮಿತಿಯು ಅಂತಿಮಗೊಳಿಸಿದ ಒಟ್ಟು 8 ಅಭ್ಯರ್ಥಿಗಳ ಪೈಕಿ, ಒಬ್ಬರ ಹೆಸರಿನ ಬಗ್ಗೆಯೂ ರಾಹುಲ್ ಗಾಂಧಿ ತಮ್ಮ ಲಿಖಿತ ಆಕ್ಷೇಪವನ್ನು ದಾಖಲಿಸಿದ್ದರು.
ಸಲಿಂಗಕಾಮವನ್ನು ಅಪರಾಧ ಮುಕ್ತಗೊಳಿಸಿದ (ಐಪಿಸಿ ಸೆಕ್ಷನ್ 377) ಮಹತ್ವದ ತೀರ್ಪು ನೀಡಿದ್ದ ನ್ಯಾಯಮೂರ್ತಿ ಎಸ್. ಮುರಳೀಧರ್ ಅವರು ದೇಶದ ಗಮನ ಸೆಳೆದಿದ್ದರು. 2020ರ ದೆಹಲಿ ಗಲಭೆಯ ಸಂದರ್ಭದಲ್ಲಿ, ದೆಹಲಿ ಪೊಲೀಸರ ‘ನಿಷ್ಕ್ರಿಯತೆ’ಯನ್ನು ಕಟುವಾಗಿ ಟೀಕಿಸಿದ ಕೆಲವೇ ಗಂಟೆಗಳಲ್ಲಿ ಕೇಂದ್ರ ಸರ್ಕಾರವು ಅವರನ್ನು ದೆಹಲಿ ಹೈಕೋರ್ಟ್‌ನಿಂದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ರಾತ್ರೋರಾತ್ರಿ ವರ್ಗಾವಣೆ ಮಾಡಿತ್ತು. ಸರ್ಕಾರದ ಈ ನಡೆ ತೀವ್ರ ಟೀಕೆಗೆ ಗುರಿಯಾಗಿತ್ತು. ಇದೀಗ ಸಿಐಸಿ ಹುದ್ದೆಗೂ ಅವರ ಹೆಸರನ್ನು ಸರ್ಕಾರ ನಿರಾಕರಿಸಿದೆ.
ಸಮಿತಿಯಲ್ಲಿ ಪ್ರಧಾನಿ ಮತ್ತು ಅವರೇ ಆಯ್ಕೆ ಮಾಡಿದ ಓರ್ವ ಕೇಂದ್ರ ಸಚಿವರು ಇರುವುದರಿಂದ, ಬಹುಮತದ ಆಧಾರದ ಮೇಲೆ ಸರ್ಕಾರದ ಆಯ್ಕೆಗಳೇ ಅಂತಿಮವಾಗುತ್ತಿವೆ. ಹೀಗಾಗಿ ವಿಪಕ್ಷ ನಾಯಕನ ಶಿಫಾರಸುಗಳನ್ನು ನಿರಂತರವಾಗಿ ವೀಟೋ ಮಾಡಲಾಗುತ್ತಿದೆ ಎಂದು ಪಾರದರ್ಶಕತೆ ಪರ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.
https://drive.google.com/file/d/1QhJhAtkJdqmLW3QCODHVMrGylEiImZIz/view?pli=1




