ರಾಮನಗರ ಜಿಲ್ಲೆಯ ಮಾಗಡಿ ಪೊಲೀಸ್ ಠಾಣೆಯಲ್ಲಿ ಸುಮಾರು 20 ತಿಂಗಳ ಹಿಂದಿನ ಕೊಲೆ ಬೆದರಿಕೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣದಲ್ಲಿ ಈಗ ಎಫ್ಐಆರ್ ದಾಖಲಾಗಿದೆ. ದೂರುದಾರರಾದ ಜಯದೇವ ಎಂ. ಅವರು ಮಾಹಿತಿ ಹಕ್ಕು ಕಾಯ್ದೆ(RTI) ಬಳಸಿ ಪೂರಕ ದಾಖಲೆಗಳನ್ನು ಪಡೆದು, ತನಿಖೆಯಲ್ಲಿನ ಲೋಪಗಳನ್ನು ಸೂಚಿಸಿ ಉನ್ನತಾಧಿಕಾರಿಗಳಿಗೆ ಮರುತನಿಖೆಗೆ ದೂರು ನೀಡಿದ್ದರು. ಪರಿಣಾಮವಾಗಿ ಹಳೆಯ ದೂರಿನ ಆಧಾರದ ಮೇಲೆ ಎಫ್ಐಆರ್ ನೋಂದಾಯಿಸಲಾಗಿದೆ.
ಘಟನೆ 23/01/2025 ರಿಂದ 29/01/2025ರ ನಡುವೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರುದಾರರು ನವೀನ್ ಅವರ ಬಗ್ಗೆ ವೀಡಿಯೊ ಮಾಡಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು. ಇದರಿಂದ ನವೀನ್ ವರ್ಗಾವಣೆಯಾದ ನಂತರ ಅವರ ತಂದೆ ಉಮೇಶ್ ಮತ್ತು ಇತರರು ಮೊಬೈಲ್ ಕರೆ ಹಾಗೂ ವಾಟ್ಸಾಪ್ ಸಂದೇಶಗಳ ಮೂಲಕ ಕೊಲೆ ಬೆದರಿಕೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಉಮೇಶ್ ಅವರ ನಂಬರ್ 6361356216ರಿಂದ ಒಟ್ಟು 9 ಬಾರಿ ಕರೆ ಮಾಡಿ ಸುಮಾರು 30 ನಿಮಿಷಗಳ ಕಾಲ ಬೆದರಿಕೆ ಹಾಕಲಾಗಿದೆ. ಹಲವು ಅಪರಿಚಿತ ಸಂಖ್ಯೆಗಳಿಂದ ವಾಟ್ಸಾಪ್ ಸಂದೇಶ ಮತ್ತು ಫೋನ್ ಕರೆಗಳು ಬಂದಿವೆ ಎಂದು ದೂರಿನಲ್ಲಿ ಹೇಳಲಾಗಿದೆ.
ಈ ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) 2023ರ ಕಲಂ 352 (ಉದ್ದೇಶಪೂರ್ವಕ ಅವಮಾನ ಮತ್ತು ಸಾರ್ವಜನಿಕ ಶಾಂತಿ ಕದಡುವಂತೆ ಪ್ರಚೋದನೆ), ಕಲಂ 351(2) (ಅಪರಾಧಿಕ ಬೆದರಿಕೆ) ಮತ್ತು ಕಲಂ 3(5) (ಸಾಮಾನ್ಯ ಉದ್ದೇಶದೊಂದಿಗೆ ಹಲವು ಜನರು ಸೇರಿ ಅಪರಾಧ) ಅಡಿಯಲ್ಲಿ ದಾಖಲಿಸಲಾಗಿದೆ. ಆರೋಪಿಗಳ ಬೆದರಿಕೆಯಿಂದ ಕುಟುಂಬ ಭಯಭೀತರಾಗಿ ಮನೆಯಿಂದ ಹೊರಬರಲಾಗದಿದ್ದು ತಡವಾಗಿ ದೂರು ನೀಡಲು ಕಾರಣ ಎಂದು ನಮೂದಿಸಲಾಗಿದೆ.

ದೂರುದಾರರು ಈ ಹಿಂದೆ ಮೊದಲ ದೂರನ್ನು ಕಾಟಾಚಾರಕ್ಕೆ ತನಿಖೆ ಮಾಡಿ ಮುಕ್ತಾಯಗೊಳಿಸಿದ್ದಕ್ಕೆ ವಿರುದ್ಧವಾಗಿ ಆರ್ಟಿಐ ಮೂಲಕ ದಾಖಲೆಗಳನ್ನು ಪಡೆದು ಲೋಪಗಳನ್ನು ಸೂಚಿಸಿ ಐಜಿ, ಡಿಜಿ ಮತ್ತು ಎಸ್ಪಿ ಅವರಿಗೆ ಮರುತನಿಖೆಗೆ ದೂರು ನೀಡಿದ್ದರು. ಇದರ ನಂತರವೇ ಹಳೆಯ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.





