ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣ ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಬಗೆದಷ್ಟು ಆಳವಾಗುತ್ತ ಸಾಗಿದೆ. ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕ, ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರ ಗಂಗ್ವಾರ್ ಬಂಧನದ ಬೆನ್ನಲ್ಲೇ ಕೆಲವು ಅಭ್ಯರ್ಥಿಗಳ ಜೊತೆಗೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಡೋಣಗಾಪುರ ಗ್ರಾಮದ ಬಸವರಾಜ ಕನ್ನಾಳೆ ಕೆಪಿಎಸ್ಸಿ ಅಕ್ರಮದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದು ಇದೀಗ ಸಿಐಡಿ ತನಿಖಾಧಿಕಾರಿಗಳು ಬಯಲು ಮಾಡಿದ್ದಾರೆ.
ಕೆಲವರಿಗೆ ದಿಢೀರ್ನೇ ದುಡ್ಡು ಮಾಡಬೇಕು, ಐಶಾರಾಮಿ ಜೀವನ ನಡೆಸಬೇಕು, ಅವರಿವರ ಕೈಕಾಲು ಹಿಡಿದು ಅಧಿಕಾರ ಗಿಟ್ಟಿಸಿಕೊಳ್ಳಬೇಕೆಂಬ ಹಪಾಹಪಿಯೋ, ಹುಚ್ಚತನವೋ ಇರುತ್ತದೆ. ಇಂತಹ ಕರಾಮತ್ತಿನ ಆಟದಲ್ಲಿ ಕೆಲವರು ಯಶಸ್ಸು ಕಂಡು ಆಸ್ತಿ, ಅಂತಸ್ತಿನ ಜೊತೆಗೆ ಅಧಿಕಾರದ ರುಚಿ ಉಣ್ಣುತಿದ್ದರೆ, ಇನ್ನೂ ಕೆಲವರು ಈ ಮೋಸದಾಟದಲ್ಲಿ ಸಿಕ್ಕಿಬಿದ್ದು ಒದ್ದಾಡುತ್ತ ಬದುಕು ಬರ್ಬಾದ್ ಮಾಡಿಕೊಂಡವರೂ ಇದ್ದಾರೆ. ಅಂತಹದೇ ಹಾದಿಯಲ್ಲಿ ಹೋಗಿ ರಾಜಕಾರಣಿಗಳ ಸಖ್ಯ ಬೆಳೆಸಿಕೊಂಡ ಬಸವರಾಜ ಕನ್ನಾಳೆ ಈಗ ಸಿಐಡಿ ಅತಿಥಿಯಾಗಿ ಕೆಪಿಎಸ್ಸಿ ಹಗರಣದ ಪ್ರಮುಖ ಆರೋಪಿಯಾಗಿದ್ದಾರೆ.
ಭಾಲ್ಕಿ ತಾಲೂಕಿನ ಡೋಣಗಾಪುರ ಗ್ರಾಮದವರಾದ ಬಸವರಾಜ ಕನ್ನಾಳೆ ಕೆಲಸ ಅರಸಿ ಬೆಂಗಳೂರು ಹಾದಿಹಿಡಿದವರು. ಈ ಹಿಂದೆ ಸರ್ಕಾರಿ ನೌಕರಿಗಾಗಿ ಕೆಪಿಎಸ್ಸಿ ಪರೀಕ್ಷೆ ಬರೆದಿದ್ದ ಕನ್ನಾಳೆ ಅದರಲ್ಲಿ ಯಶಸ್ಸು ಕಂಡಿರಲಿಲ್ಲ. ಅದಾಗಲೇ ಬೀದರ್ ಜಿಲ್ಲಾ ಪಂಚಾಯತ್ ಸಿಇಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರ ಗಂಗ್ವಾರ್ ಅವರೊಂದಿಗೆ ನಂಟು ಬೆಳೆದಿತ್ತು. ಬೆಂಗಳೂರಿನಲ್ಲೇ ನೆಲೆಸಿದ್ದ ಕನ್ನಾಳೆ ಬಿಜೆಪಿ ಜೊತೆಗೆ ಗುರುತಿಸಿಕೊಂಡು ನಾಯಕರ ಒಡನಾಟದಿಂದ ಸಣ್ಣಪುಟ್ಟ ಸರ್ಕಾರಿ ಕೆಲಸಗಳು ಮಾಡಿಕೊಳ್ಳುತ್ತಿದ್ದರು ಎಂಬುದು ಬಯಲಾಗಿದೆ.
ಪಶು ವೈದ್ಯಾಧಿಕಾರಿಗಳ ಹುದ್ದೆಯ ಆಕಾಂಕ್ಷಿಗಳಾಗಿದ್ದ ಉತ್ತರ ಕರ್ನಾಟಕ ಭಾಗದ ಹಲವು ಅಭ್ಯರ್ಥಿಗಳನ್ನು ಜ್ಷಾನೇಂದ್ರಕುಮಾರ್ಗೆ ಪರಿಚಯ ಮಾಡಿಕೊಟ್ಟಿದ್ದರು ಎನ್ನಲಾಗಿದೆ. ಅದಾದ ಬಳಿಕ ಬಸವರಾಜ ಕನ್ನಾಳೆ ಕೆಪಿಎಸ್ಸಿ ಸದಸ್ಯರು, ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಸಾಧಿಸುವಲ್ಲಿ ಯಶಸ್ಸು ಕಂಡು ಹಣಕಾಸಿನ ವ್ಯವಹಾರ ನಡೆಸುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಕೆಪಿಎಸ್ಸಿ ಎಲ್ಲ ಪರೀಕ್ಷೆಗಳ ಉಸ್ತುವಾರಿ ಹಾಗೂ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರಕುಮಾರ್ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯ ಮುಖ್ಯ ರೂವಾರಿಯೇ ಆಗಿರುವುದು ಸಿಐಡಿ ತನಿಖೆಯಲ್ಲಿ ಗೊತ್ತಾಗಿದೆ.
ಕೆಪಿಎಸ್ಸಿ ಹಗರಣದಲ್ಲಿ ಬಸವರಾಜ ಕನ್ನಾಳೆ ಪಾತ್ರದ ಜಾಡು ಹಿಡಿದು ತನಿಖೆ ನಡೆಸುತ್ತಿರುವ ಸಿಐಡಿ ತಂಡಕ್ಕೆ ರೋಚಕ ಸಂಗತಿಗಳು ಗೊತ್ತಾಗಿವೆ. ಕೆಲ ವರ್ಷಗಳ ಹಿಂದೆ ಕೈಯಲ್ಲಿ ಕೆಲಸವಿಲ್ಲದೆ ನಿರುದ್ಯೋಗಿಯಾಗಿದ್ದ ಕನ್ನಾಳೆ ಅಲ್ಪಾವಧಿಯಲ್ಲೇ ಅನೇಕ ರಾಜಕಾರಣಿಗಳ ಒಡನಾಟ ಹೊಂದಿರುವುದು, ಐಎಎಸ್ ಸೇರಿ ಹಿರಿಯ ಅಧಿಕಾರಿಗಳೊಂದಿಗೆ ದೋಸ್ತಿ ಮಾಡಿರುವುದು ಮತ್ತು ಐಶಾರಾಮಿ ಜೀವನ ನಡೆಸುತ್ತಿರುವುದಕ್ಕೆ ಅಡ್ಡದಾರಿ ಹಿಡಿದಿರುವುದು ತನಿಖೆಯಿಂದ ಪಕ್ಕಾ ಎನಿಸುತ್ತಿದೆ. ಬಿಜೆಪಿ ನಾಯಕರು ಸೇರಿದಂತೆ ಆಡಳಿತರೂಢ ಕಾಂಗ್ರೆಸ್ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಬಸವರಾಜ ಸದ್ಯ ತುಮಕೂರು ವಿಶ್ವವಿದ್ಯಾಲಯರ ಸಿಂಡಿಕೇಟ್ ಸದಸ್ಯರಾಗಿದ್ದಾರೆ.
ಕೆಪಿಎಸ್ಸಿ ಪರೀಕ್ಷಾ ಹಗರಣದಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರ್ ಸಿಐಡಿ ವಶಕ್ಕೆ ಪಡೆದ ಬೆನ್ನಲೇ ಬಸವರಾಜ ರಾತ್ರೋರಾತ್ರಿ ವಿದೇಶಕ್ಕೆ ಹಾರಲು ಪ್ಲಾನ್ ಮಾಡಿದ್ದರು. ಆದರೆ, ಬಸವರಾಜನ ಜಾಡು ಹಿಡಿದು ಹೊರಟ ಸಿಐಡಿ ಅಧಿಕಾರಿಗಳು ಹೊಸದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿ ಭಾನುವಾರ ಬೆಂಗಳೂರಿಗೆ ಕರೆತಂದಿದ್ದು, ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಇಬ್ಬರು ಆರೋಪಿಗಳನ್ನು 10 ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಿ ಕೋರ್ಟ್ ಆದೇಶಿಸಿದೆ.
ಈ ಬಗ್ಗೆ ಬೀದರ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿ, “ಕೆಪಿಎಸ್ಸಿ ಅಕ್ರಮದಲ್ಲಿ ಸಿಐಡಿ ಬಂಧನದಲ್ಲಿರುವ ಭಾಲ್ಕಿ ಮೂಲದ ಬಸವರಾಜ ಕನ್ನಾಳೆ ಬಿಜೆಪಿ ಮುಖಂಡ ಅಲ್ಲ. ಬಿಜೆಪಿ ಪಕ್ಷದ ಕೆಲ ನಾಯಕರ ಬಳಿ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಆದರೆ, ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಕೂಡ ಪಡೆದಿಲ್ಲ, ಪಕ್ಷದ ಯಾವುದೇ ಪದಾಧಿಕಾರಿ ಹುದ್ದೆಯಲ್ಲೂ ಇಲ್ಲ. ಬಿಜೆಪಿ ಅಷ್ಟೇ ಅಲ್ಲದೆ ಕಾಂಗ್ರೆಸ್ ಮುಖಂಡರ ಜೊತೆಗೂ ಬಸವರಾಜ ಒಡನಾಟ ಹೊಂದಿರುವ ಬಗ್ಗೆ ಫೋಟೋಗಳು ವೈರಲ್ ಆಗಿವೆ. ಬಿಜೆಪಿ ಅವರೊಂದಿಗೆ ಇರುವ ಬಗ್ಗೆ ಬಸವರಾಜ ಅವರಿಂದ ಯಾವುದೇ ಅಕ್ರಮ ನಡೆದಿಲ್ಲ. ಈ ಹಗರಣಕ್ಕೂ ಬಿಜೆಪಿಗೆ ಯಾವುದೇ ಸಂಬಂಧ ಇಲ್ಲ. ಕೆಪಿಎಸ್ಸಿ ಹಗರಣದ ವಿರುದ್ಧ ಬಿಜೆಪಿ ಹೋರಾಟ ನಡೆಸುತ್ತೇವೆ, ಈ ಅಕ್ರಮದಲ್ಲಿ ಭಾಗಿಯಾದ ಯಾರೇ ಆದರೂ ಶಿಕ್ಷೆಯಾಗಬೇಕು” ಎಂದು ಸ್ಪಷ್ಟಪಡಿಸಿದ್ದಾರೆ.
ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಮಾತನಾಡಿ, “ಬಸವರಾಜ ಕನ್ನಾಳೆ ಅವರಿಗೆ ಬಿಜೆಪಿ ನಾಯಕರೊಂದಿಗೆ ಒಡನಾಟ ಇರಬಹುದು, ಆದರೆ ಬಿಜೆಪಿಯ ಪಕ್ಷದ ಮುಖಂಡ ಅಲ್ಲ, ಪಕ್ಷದ ಪದಾಧಿಕಾರಿಯೂ ಇಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂಬಂತೆ ತಪ್ಪು ಮಾಡಿದರೆ ಅವರು ಶಿಕ್ಷೆ ಅನುಭವಿಸುತ್ತಾರೆ. ಕಾಂಗ್ರೆಸ್ ನಾಯಕರೊಂದಿಗೆ ಇರುವ ಫೋಟೊಗಳು ವೈರಲ್ ಆಗಿರುವಾಗ ಬಿಜೆಪಿ ಮುಖಂಡ ಎಂಬುದು ತಪ್ಪು” ಎಂದು ಹೇಳಿದರು.
ಬಸವರಾಜ ಅವರನ್ನು ವಶಕ್ಕೆ ಪಡೆದ ಸಿಐಡಿ ತಂಡ ಬೆಂಗಳೂರಿನ ಸಹಕಾರ ನಗರ ಹತ್ತಿರ ಸ್ವಂತ ಮನೆ ಹಾಗೂ ಭಾಲ್ಕಿ ನಗರದಲ್ಲಿರುವ ಅವರ ಹೊಸ ಮನೆ ಹಾಗೂ ಡೋಣಗಾಪುರ ಗ್ರಾಮದ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ. ಕೆಲಸಕ್ಕಾಗಿ ಅಲೆದಾಡುತ್ತಿದ್ದ ಬಸವರಾಜ ನೌಕರಿ ಕೊಡಿಸುವ ದಲ್ಲಾಳಿ ದಂಧೆ ಮಾಡುತ್ತಲೇ ಕೋಟ್ಯಾಧೀಶನಾಗಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಶ್ರೀಮಂತಿಕೆ, ರಾಜಕಾರಣಿಗಳ ಬಾಂಧವ್ಯ ಬೆಳೆದ ಮೇಲೆ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಂಡ ಬಸವರಾಜ ಜಿಲ್ಲೆಯಲ್ಲಿ ಓಡಾಟ ಮಾಡುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಸೋನಿಯಾ ಆತ್ಮಕಥನ ಕುರಿತು ಮೋದಿಗೇಕೆ ಭಯ?
ಕೆಪಿಎಸ್ಸಿ ಸದಸ್ಯ ಶಾಂತಾ ಹೊಸಮನಿ ಅವರಿಗೆ ಸಿಐಡಿ ಅಧಿಕಾರಿಗಳು ಎರಡು ಬಾರಿ ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರೂ, ವಿಚಾರಣೆಗೆ ಗೈರಾಗಿದ್ದಾರೆ. ಬಂಧನ ಭೀತಿಯಲ್ಲಿ ತಲೆಮರೆಸಿಕೊಂಡು ವಿದೇಶಕ್ಕೆ ಹೋಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಅಧಿಕಾರಿಗಳು ಅವರ ವಿರುದ್ಧ ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ ಈ ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆಯಿಂದ ಶಾಂತಾ ಹೊಸಮನಿ ಸೇರಿದಂತೆ ಮಧ್ಯವರ್ತಿಗಳ ಮನೆಗಳಲ್ಲಿ ಶೋಧ ನಡೆಸಿದ್ದಾರೆ ಎನ್ನಲಾಗಿದೆ.




