5 ವರ್ಷಗಳ ಬಳಿಕ ಮಗನೊಂದಿಗೆ ಮ್ಯಾನ್ಮಾರ್‌ ನಾಯಕಿ ಆಂಗ್ ಸಾನ್ ಸೂ ಕಿ ಮಾತು; ಯಾರೀ ʼಶಾಂತಿʼ ದೂತೆ?

Date:

ಮ್ಯಾನ್ಮಾರ್‌ನ ಪ್ರಜಾಪ್ರಭುತ್ವದ ಧೀಮಂತ ನಾಯಕಿ ಹಾಗೂ ನೋಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂ ಕಿ ಅವರು ಬರೋಬ್ಬರಿ 5 ವರ್ಷಗಳ ಬಳಿಕ ಮೊದಲ ಬಾರಿಗೆ ತಮ್ಮ ಮಗನೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.

- Advertisement -

ಐದು ವರ್ಷಗಳಿಗೂ ಹೆಚ್ಚು ಕಾಲ ಸಂಪೂರ್ಣ ಏಕಾಂತ ಬಂಧನದಲ್ಲಿದ್ದ 81 ವರ್ಷದ ಸೂ ಕಿ ಅವರ ಧ್ವನಿಯನ್ನು ಐದು ವರ್ಷಗಳ ನಂತರ ಕೇಳಿರುವುದಾಗಿ ಬ್ರಿಟನ್‌ನಲ್ಲಿ ನೆಲೆಸಿರುವ ಅವರ ಮಗ ಕಿಮ್ ಅರಿಸ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ತಿಳಿಸಿದ್ದು, ಈ ಕುರಿತು ಅವರು, “ಐದಕ್ಕೂ ಹೆಚ್ಚು ವರ್ಷಗಳ ನಂತರ ಇಂದು ನನ್ನ ತಾಯಿ ಡಾವ್ ಆಂಗ್ ಸಾನ್ ಸೂ ಕಿ ಅವರೊಂದಿಗೆ ಮಾತನಾಡಲು ನನಗೆ ಅಂತಿಮವಾಗಿ ಸಾಧ್ಯವಾಯಿತು. ಅವರ ಧ್ವನಿಯನ್ನು ಮತ್ತೆ ಕೇಳಿಸಿದ್ದು ಪದಗಳಿಗೆ ನಿಲುಕದಷ್ಟು ಅರ್ಥಪೂರ್ಣವಾಗಿದೆ. ನನ್ನ ತಾಯಿ ಮತ್ತು ನನ್ನ ಪರವಾಗಿ ನಿಂತ ಪ್ರತಿಯೊಬ್ಬರಿಗೂ ನಾನು ಹೃದಯದಿಂದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನಿಮ್ಮ ಧ್ವನಿಗಳು ಈ ಕ್ಷಣವನ್ನು ಸಾಧ್ಯವಾಗಿಸಲು ಸಹಾಯ ಮಾಡಿದೆ ಎಂದು ನಾನು ನಂಬುತ್ತೇನೆ. ಆದರೆ ನನ್ನ ತಾಯಿಗೆ ಈಗ 81 ವರ್ಷ ಮತ್ತು ಅವರನ್ನು ಇನ್ನೂ ಅನ್ಯಾಯವಾಗಿ ಬಂಧನದಲ್ಲಿಡಲಾಗಿದೆ. ಕೇವಲ ಒಂದು ಸಂಭಾಷಣೆಯಿಂದ ಅವರು ನಿರಂತರವಾಗಿ ಕುಟುಂಬದ ಸಂರ್ಪದಲ್ಲಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ” ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ಮ್ಯಾನ್ಮಾರ್‌ನಲ್ಲಿ ಒಂದು ದಶಕದ ಕಾಲ ಮುಂದುವರಿದಿದ್ದ ಪ್ರಜಾಪ್ರಭುತ್ವ ಪ್ರಯೋಗಕ್ಕೆ 2021ರ ಫೆಬ್ರವರಿ 1ರಂದು ಮಿಲಿಟರಿ ದಂಗೆಯ ಮೂಲಕ ತೆರೆ ಎಳೆಯಲಾಗಿದ್ದು, ಸೇನಾ ಮುಖ್ಯಸ್ಥ ಮಿನ್ ಆಂಗ್ ಹ್ಲೈಂಗ್ ನೇತೃತ್ವದ ಸೇನೆಯು ಸೂ ಕಿ ಅವರ ಸರ್ಕಾರವನ್ನು ಪದಚ್ಯುತಗೊಳಿಸಿ ಬಂಧಿಸಿತ್ತು. ದಂಗೆಯ ನಂತರ ಅವರನ್ನು ರಾಜಧಾನಿ ನೇಪ್ಯಿಡಾವ್‌ನಲ್ಲಿ ಕಠಿಣ ಏಕಾಂತ ಗೃಹ ಬಂಧನದಲ್ಲಿಡಲಾಗಿದ್ದು, ಅವರ ವಿರುದ್ಧ ಭ್ರಷ್ಟಾಚಾರ ಮತ್ತು ಅಧಿಕೃತ ರಹಸ್ಯ ಕಾಯ್ದೆ ಉಲ್ಲಂಘನೆ ಸೇರಿದಂತೆ ಅನೇಕ ಸುಳ್ಳು ಹಾಗೂ ರಾಜಕೀಯ ಪ್ರೇರಿತ ಆರೋಪಗಳನ್ನು ಹೊರಿಸಿ ದೀರ್ಘಾವಧಿಯ ಜೈಲು ಶಿಕ್ಷೆ ವಿಧಿಸಲಾಗಿತ್ತು. ವಿಶ್ವಸಂಸ್ಥೆ ಮತ್ತು ಜಾಗತಿಕ ಸಮುದಾಯದಿಂದ ನಿರಂತರವಾಗಿ ‘ಜೀವಂತ ಸಾಕ್ಷ್ಯ’ ಕೋರಿ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ, ಇತ್ತೀಚಿನ ತಿಂಗಳುಗಳಲ್ಲಿ ಸೇನಾ ಆಡಳಿತವು ಅವರ ಬಂಧನದ ನಿಯಮಗಳನ್ನು ಸ್ವಲ್ಪ ಮಟ್ಟಿಗೆ ಸಡಿಲಿಸುತ್ತಿರುವಂತೆ ಬಿಂಬಿಸುತ್ತಿದೆ.

Advertisements

ಇದರ ಭಾಗವಾಗಿ ಏಪ್ರಿಲ್‌ನಲ್ಲಿ ಜೈಲಿನಲ್ಲಿದ್ದ ಆಂಗ್ ಸಾನ್ ಸೂ ಕಿ ಅವರನ್ನು ನೇಪ್ಯಿಡಾವ್‌ನಲ್ಲಿ ಗೃಹ ಬಂಧನಕ್ಕೆ ಸ್ಥಳಾಂತರಿಸಲಾಗಿದ್ದು, ಆಗಸ್ಟ್‌ನಲ್ಲಿ ಅವರು ರೆಡ್‌ಕ್ರಾಸ್ ಪ್ರತಿನಿಧಿಯನ್ನು ಭೇಟಿಯಾದ ಫೋಟೋಗಳನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಮುಂದುವರಿದು, ಇತ್ತೀಚೆಗಷ್ಟೇ ಬ್ರಿಟನ್ ರಾಜ ಕಿಂಗ್ ಚಾರ್ಲ್ಸ್ ಕಳುಹಿಸಿದ್ದ ಮಣ್ಣಿನ ಕುರಿತಾದ ಎರಡು ಪುಸ್ತಕಗಳು ಹಾಗೂ ರಾಜತಾಂತ್ರಿಕ ಪತ್ರವನ್ನು ಅವರಿಗೆ ತಲುಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಮ್ಯಾನ್ಮಾರ್ ಅನ್ನು ಇಷ್ಟು ದಿನ ಮಿಲಿಟರಿ ಮುಖ್ಯಸ್ಥರಾಗಿ ಆಳುತ್ತಿದ್ದ ಮಿನ್ ಆಂಗ್ ಹ್ಲೈಂಗ್ ಈ ವರ್ಷ ತಮ್ಮನ್ನು ನಾಗರಿಕ ಅಧ್ಯಕ್ಷರನ್ನಾಗಿ ಘೋಷಿಸಿಕೊಂಡಿದ್ದರೂ, ಜಾಗತಿಕ ಮಟ್ಟದಲ್ಲಿ ತಮ್ಮ ಸರ್ಕಾರಕ್ಕೆ ಕಾನೂನುಬದ್ಧತೆ ಮತ್ತು ಮಾನ್ಯತೆ ಪಡೆಯುವ ಉದ್ದೇಶದಿಂದಲೇ ಸೇನೆಯು ಈಗ ಆಂಗ್ ಸಾನ್ ಸೂ ಕಿ ಅವರ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸುವ ಹಾಗೂ ಅವರ ಕುಟುಂಬದೊಂದಿಗೆ ಸಂಪರ್ಕ ಕಲ್ಪಿಸುವ ನಾಟಕವಾಡುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಮ್ಯಾನ್ಮಾರ್‌ ದೇಶದ ಬಹುತೇಕ ಭಾಗಗಳಲ್ಲಿ ಪ್ರಜಾಪ್ರಭುತ್ವ ಪರ ಸಶಸ್ತ್ರ ಗುಂಪುಗಳು ಮತ್ತು ವಿವಿಧ ಜನಾಂಗೀಯ ದಂಗೆಕೋರರು ಒಗ್ಗೂಡಿ ಮಿಲಿಟರಿ ಸರ್ಕಾರದ (ಜಂಟಾ) ವಿರುದ್ಧ ಸಶಸ್ತ್ರ ಹೋರಾಟ ನಡೆಸುತ್ತಿದ್ದಾರೆ. ಪ್ರಸ್ತುತ ಸೇನಾ ಮುಖ್ಯಸ್ಥ ಮಿನ್ ಆಂಗ್ ಹ್ಲೈಂಗ್ ನಿಯಂತ್ರಣ ಕಳೆದುಕೊಳ್ಳುತ್ತಿದ್ದು, ದೇಶದ ಅರ್ಧಕ್ಕಿಂತ ಹೆಚ್ಚು ಭೂಭಾಗವು ಈಗ ಬಂಡುಕೋರರ ವಶದಲ್ಲಿದೆ.

ಯಾರು ಈ ನಾಯಕಿ ಸೂ ಕಿ?

ಮ್ಯಾನ್ಮಾರ್‌ನಲ್ಲಿ (ಹಿಂದಿನ ಬರ್ಮಾ) ದಶಕಗಳ ಕಾಲ ಮಿಲಿಟರಿ ಆಡಳಿತವಿತ್ತು. ಇದರ ವಿರುದ್ಧ ಅಹಿಂಸಾತ್ಮಕ ಹೋರಾಟ ನಡೆಸಿದ ಆಂಗ್ ಸಾನ್ ಸೂ ಕಿ ಅವರು ‘ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ’ (NLD) ಪಕ್ಷವನ್ನು ಕಟ್ಟಿ ಜನಪ್ರಿಯತೆ ಗಳಿಸಿದರು. ದೀರ್ಘಕಾಲ ಗೃಹಬಂಧನದಲ್ಲೇ ಜೀವನ ಕಳೆದ ಅವರು, 2015ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರು. ನೇರವಾಗಿ ದೇಶದ ಅಧ್ಯಕ್ಷೆಯಾಗಲು ಮ್ಯಾನ್ಮಾರ್ ಸಂವಿಧಾನದಲ್ಲಿ ಅವಕಾಶವಿಲ್ಲದ ಕಾರಣ, ‘ಸ್ಟೇಟ್ ಕೌನ್ಸಿಲ್ಲರ್’ ಆಗಿ ಅವರು ಸರ್ಕಾರವನ್ನು ಮುನ್ನಡೆಸಿದರು. 2020ರ ಚುನಾವಣೆಯಲ್ಲೂ ಅವರ ಪಕ್ಷ ಭರ್ಜರಿ ಜಯಗಳಿಸಿತು. ಆದರೆ, ಚುನಾವಣೆಯಲ್ಲಿ ವ್ಯಾಪಕ ವಂಚನೆ ನಡೆದಿದೆ ಎಂದು ಆರೋಪಿಸಿದ ಮ್ಯಾನ್ಮಾರ್ ಸೇನೆಯು, 2021ರ ಫೆಬ್ರವರಿ 1ರಂದು ಪ್ರಚಂಡ ಬಹುಮತ ಪಡೆದಿದ್ದ ಪ್ರಜಾಸತ್ತಾತ್ಮಕ ಸರ್ಕಾರವನ್ನು ಪದಚ್ಯುತಗೊಳಿಸಿ ದೇಶದಲ್ಲಿ ಮತ್ತೆ ಮಿಲಿಟರಿ ಆಡಳಿತವನ್ನು (ದಂಗೆ) ಜಾರಿಗೆ ತಂದಿತು ಮತ್ತು ಸೂ ಕಿ ಅವರನ್ನು ಬಂಧಿಸಿತು.

ಸೂ ಕಿ ಅವರ ಮೇಲೆ ಒಟ್ಟು 19ಕ್ಕೂ ಹೆಚ್ಚು ಗಂಭೀರ ಪ್ರಕರಣಗಳನ್ನು ದಾಖಲಿಸಿ, ಒಟ್ಟು 33 ವರ್ಷಗಳ ಜೈಲು ಶಿಕ್ಷೆಯನ್ನು ಸೇನಾ ನ್ಯಾಯಾಲಯಗಳು ವಿಧಿಸಿದ್ದವು. ಈ ಎಲ್ಲಾ ವಿಚಾರಣೆಗಳು ಸಾರ್ವಜನಿಕರಿಗೆ ಅಥವಾ ಸ್ವತಂತ್ರ ಪತ್ರಕರ್ತರಿಗೆ ಪ್ರವೇಶವಿಲ್ಲದೆ, ರಹಸ್ಯವಾಗಿ ನಡೆದವು. ಅವರಿಗೆ ತಮ್ಮ ಪರವಾಗಿ ವಾದಿಸಲು ಸಮರ್ಥ ವಕೀಲರ ಸಂಪೂರ್ಣ ಸ್ವಾತಂತ್ರ್ಯವನ್ನೂ ನಿರಾಕರಿಸಲಾಗಿತ್ತು. ಜಾಗತಿಕ ಕಾನೂನು ತಜ್ಞರು ಇದನ್ನು ‘ಕಂಗರೂ ಕೋರ್ಟ್’ (ಪಕ್ಷಪಾತದ ಮತ್ತು ನ್ಯಾಯದ ಹೆಸರಿನಲ್ಲಿ ನಡೆಯುವ ಪ್ರಹಸನ) ಎಂದು ಕರೆದಿದ್ದಾರೆ.

ಸೇನಾ ಆಡಳಿತವು (ಜಂಟಾ) ಸೂ ಕಿ ಅವರನ್ನು ರಾಜಕೀಯವಾಗಿ ಮತ್ತು ಸಾರ್ವಜನಿಕವಾಗಿ ಸಂಪೂರ್ಣವಾಗಿ ಮೂಲೆಗುಂಪು ಮಾಡಲು ಅವರ ಮೇಲೆ ವಿವಿಧ ನ್ಯಾಯಾಲಯಗಳಲ್ಲಿ ಹಲವು ಗಂಭೀರ ಆರೋಪಗಳನ್ನು ಹೊರಿಸಿ ದೀರ್ಘಾವಧಿಯ ಜೈಲು ಶಿಕ್ಷೆ ವಿಧಿಸಿತು. ಅಧಿಕಾರದಲ್ಲಿದ್ದಾಗ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಲಂಚ ಪಡೆದಿದ್ದಾರೆ ಮತ್ತು ದಾನವಾಗಿ ಬಂದ ಹಣವನ್ನು ಅಕ್ರಮವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪಗಳನ್ನು ಹೊರಿಸಲಾಯಿತು. 2020ರ ಚುನಾವಣಾ ಪ್ರಚಾರದ ಸಮಯದಲ್ಲಿ ದೇಶದಲ್ಲಿ ಜಾರಿಯಲ್ಲಿದ್ದ ಕೊರೊನಾ ಸಾಂಕ್ರಾಮಿಕ ನಿಯಮಗಳು ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಯಿತು. ಬ್ರಿಟಿಷ್ ಮೂಲದ ಅವರ ಮಾಜಿ ಆರ್ಥಿಕ ಸಲಹೆಗಾರ ಆಸ್ಟರ್‌ನೆಲ್ ಅವರೊಂದಿಗೆ ಸೇರಿಕೊಂಡು ದೇಶದ ಪ್ರಮುಖ ಗೌಪ್ಯ ಮತ್ತು ಅಧಿಕೃತ ರಾಜ್ಯ ರಹಸ್ಯಗಳನ್ನು ಹೊರಹಾಕಿದ್ದಾರೆ ಎಂಬ ಗಂಭೀರ ಆರೋಪವನ್ನು ಹೊರಿಸಲಾಯಿತು. 2020ರ ಸಾರ್ವತ್ರಿಕ ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿ, ಚುನಾವಣಾ ಆಯೋಗದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ವಂಚನೆ ಎಸಗಿದ್ದಾರೆ ಎಂದು ದೂಷಿಸಲಾಯಿತು.

ಒಂದು ಕಾಲದಲ್ಲಿ ಜಾಗತಿಕ ಮಾನವ ಹಕ್ಕುಗಳ ದೇವತೆಯಂತೆ ಬಿಂಬಿತರಾಗಿದ್ದ ಸೂ ಕಿ, 2017ರಲ್ಲಿ ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಮುಸ್ಲಿಮರ ಮೇಲೆ ನಡೆದ ದೌರ್ಜನ್ಯದ ಸಮಯದಲ್ಲಿ ಮೌನ ವಹಿಸಿದ್ದಲ್ಲದೆ, ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ (ICJ) ಸೇನೆಯ ಪರವಾಗಿ ನಿಂತು ಸಮರ್ಥನೆ ಮಾಡಿಕೊಂಡಿದ್ದರು. ಇದು ಜಾಗತಿಕ ಮಟ್ಟದಲ್ಲಿ ಅವರ ಮೇಲಿದ್ದ ಸೌಮ್ಯವಾದಿಯ ವರ್ಚಸ್ಸಿಗೆ ದೊಡ್ಡ ಪೆಟ್ಟು ನೀಡಿತ್ತು. ಆದರೂ, ಪ್ರಸ್ತುತ ಮಿಲಿಟರಿ ದಂಗೆಯ ವಿಷಯ ಬಂದಾಗ ಜಾಗತಿಕ ಸಮುದಾಯವು ಸೇನಾ ಆಡಳಿತವನ್ನು ಬಿಟ್ಟು ಸೂ ಕಿ ಅವರ ಪರವಾಗಿ ನಿಂತಿದೆ.

ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು, ವಿಶ್ವಸಂಸ್ಥೆ ಮತ್ತು ಪಾಶ್ಚಿಮಾತ್ಯ ದೇಶಗಳು ಆಂಗ್ ಸಾನ್ ಸೂ ಕಿ ಅವರ ಮೇಲಿನ ಈ ಎಲ್ಲಾ ಆರೋಪಗಳೂ ಸಂಪೂರ್ಣವಾಗಿ “ರಾಜಕೀಯ ಪ್ರೇರಿತ, ಸುಳ್ಳು ಮತ್ತು ಸೇನೆಯ ಕಪಟ ನಾಟಕ” ಎಂದು ಬಲವಾಗಿ ಖಂಡಿಸಿವೆ. ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸವನ್ನು ಮುರಿಯಲು ಮತ್ತು ಸೇನಾ ಮುಖ್ಯಸ್ಥರ ಸರ್ವಾಧಿಕಾರವನ್ನು ಪ್ರಶ್ನಿಸದಂತೆ ಮಾಡಲು ಸೇನೆಯು ನ್ಯಾಯಾಲಯಗಳನ್ನು ಅಸ್ತ್ರವಾಗಿ ಬಳಸಿ ಈ ಶಿಕ್ಷೆಗಳನ್ನು ವಿಧಿಸಿದೆ ಎಂದು ಜಾಗತಿಕ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಕನಾಥ ಶಿಂಧೆ ಒಲಿಸಿಕೊಳ್ಳಲು 500 ಕೋಟಿ ಹಣ ನೀಡಿದ ಬಿಜೆಪಿ: ಜಾರಂಗೆ ಪಾಟೀಲ್ ಬಿಡುಗಡೆ ಮಾಡಿದ ಆಡಿಯೋ ಕ್ಲಿಪ್

ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಬಿಡುಗಡೆ ಮಾಡಿರುವ ವಿವಾದಾತ್ಮಕ ಆಡಿಯೊ...

ಏಷ್ಯನ್ ಪ್ಯಾರಾ ಗೇಮ್ಸ್: ಸಂದೀಪ್, ಹನಿಗೆ ವಿಶ್ವ ದಾಖಲೆಯ ಚಿನ್ನ; ಭಾರತಕ್ಕೆ 100ನೇ ಪದಕದ ಸಂಭ್ರಮ

ಜಪಾನ್‌ನ ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಪ್ಯಾರಾ ಅಥ್ಲೀಟ್‌ಗಳು...

ಅರುಣಾಚಲ ಗಡಿಯ ಹಲವೆಡೆ ಚೀನಾ ಸೇನೆ ಜೊತೆ ಸಂಘರ್ಷ ಮುಂದುವರಿಕೆ: ಐಟಿಬಿಪಿ ಮಹಾನಿರ್ದೇಶಕ

ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ ಚೀನಾ ಸೇನೆಯ ಜೊತೆಗಿನ ಮುಖಾಮುಖಿ ಹಾಗೂ...

ಟಿಬೆಟ್‌ನಲ್ಲಿ ಭೀಕರ ಭೂಕಂಪ: 16 ಸಾವು, ನೂರಾರು ಮನೆಗಳು ನೆಲಸಮ

ಟಿಬೆಟ್‌ನ ಉತ್ತರದ ಪರ್ವತ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಭೀಕರ ಭೂಕಂಪ ಸಂಭವಿಸಿದೆ.‌...