ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಹತ್ವಾಕಾಂಕ್ಷಿ ಯೋಜನೆಗಳಾದ ‘ಗಗನ್ಯಾನ್’ ಮತ್ತು ಇತರ ಪ್ರಮುಖ ಮಿಷನ್ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 100ಕ್ಕೂ ಹೆಚ್ಚು ವಿಜ್ಞಾನಿಗಳು ಹಾಗೂ ತಾಂತ್ರಿಕ ಸಿಬ್ಬಂದಿ ದಿಢೀರ್ ರಾಜೀನಾಮೆ ನೀಡಿರುವುದು ತೀವ್ರ ಸಂಚಲನ ಮೂಡಿಸಿದೆ.
ಕಳೆದ ಕೆಲವು ತಿಂಗಳುಗಳ ಅಂತರದಲ್ಲಿ ಕನಿಷ್ಠ 100 ರಿಂದ 120 ಮಂದಿ ಸಿಬ್ಬಂದಿ ಸಂಸ್ಥೆಯನ್ನು ತೊರೆದಿದ್ದಾರೆ. ಇವರಲ್ಲಿ ಅನೇಕರು ಪ್ರಮುಖ ಹುದ್ದೆಗಳಲ್ಲಿದ್ದವರು ಎಂಬುದು ಕಳವಳಕಾರಿ ಸಂಗತಿಯಾಗಿದೆ.
ಇಸ್ರೋದ ಪ್ರಮುಖ ಕೇಂದ್ರಗಳಿಂದಲೇ ಅತಿ ಹೆಚ್ಚು ವಿಜ್ಞಾನಿಗಳು ಹೊರನಡೆದಿದ್ದಾರೆ. ಯು.ಆರ್.ರಾವ್ ಉಪಗ್ರಹ ಕೇಂದ್ರದಿಂದ (URSC) ಸುಮಾರು 80 ಮಂದಿ ವಿಜ್ಞಾನಿಗಳು ಮತ್ತು ಸಿಬ್ಬಂದಿ ರಾಜೀನಾಮೆ ನೀಡಿದ್ದಾರೆ. ಇದರಲ್ಲಿ ಸ್ಪೇಡೆಕ್ಸ್ (SpaDeX) ಯೋಜನಾ ನಿರ್ದೇಶಕರು ಹಾಗೂ ಚಂದ್ರಯಾನ-3ರ ಸಿಮ್ಯುಲೇಶನ್ಸ್ ವಿಭಾಗದ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ ಆದಿತ್ಯ ರಲ್ಲಾಪಲ್ಲಿ ಅವರಂತಹ ಪ್ರಮುಖ ವಿಜ್ಞಾನಿಗಳೂ ಸೇರಿದ್ದಾರೆ.
ಅದೇ ರೀತಿ, ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಿಂದ (VSSC) ಕನಿಷ್ಠ 20 ಮಂದಿ ಹುದ್ದೆ ತ್ಯಜಿಸಿದ್ದು, ಎಲ್ವಿಎಂ-3 (LVM-3) ಯೋಜನಾ ನಿರ್ದೇಶಕರಾಗಿದ್ದ ವಿಕ್ಟರ್ ಜೋಸೆಫ್ ಅವರೂ ಸಂಸ್ಥೆ ತೊರೆದವರಲ್ಲಿದ್ದಾರೆ.ವಿಜ್ಞಾನಿಗಳ ಸರಣಿ ನಿರ್ಗಮನದಿಂದ ಎಚ್ಚೆತ್ತುಕೊಂಡಿರುವ ಬಾಹ್ಯಾಕಾಶ ಇಲಾಖೆಯು ಜುಲೈ 14ರಂದು ಆಂತರಿಕ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಸ್ವಯಂ ನಿವೃತ್ತಿ (VRS) ಮತ್ತು ರಾಜೀನಾಮೆಗೆ ಸಂಬಂಧಿಸಿದಂತೆ ಇದ್ದ ಹಳೆಯ ನಿಯಮಗಳನ್ನು ಬಿಗಿಗೊಳಿಸಿದೆ.
ಈ ಹಿಂದೆ 2020ರ ನವೆಂಬರ್ನಲ್ಲಿ ತರಲಾಗಿದ್ದ ನಿಯಮದನ್ವಯ ‘ಗ್ರೂಪ್ ಎ’ ವಿಜ್ಞಾನಿಗಳು ಮತ್ತು ತಾಂತ್ರಿಕ ಸಿಬ್ಬಂದಿಯ ರಾಜೀನಾಮೆ ಅಥವಾ ವಿಆರ್ಎಸ್ ಮನವಿಗಳನ್ನು ಅಂಗೀಕರಿಸುವ ಅಧಿಕಾರವನ್ನು ಆಯಾ ಕೇಂದ್ರಗಳ ನಿರ್ದೇಶಕರಿಗೆ ನೀಡಲಾಗಿತ್ತು. ಆದರೆ ಹೊಸ ಆದೇಶದ ಪ್ರಕಾರ, ಪ್ರಮುಖ ಯೋಜನೆಗಳು ಪೂರ್ಣಗೊಳ್ಳುವವರೆಗೆ ಅಂತಹ ಮನವಿಗಳನ್ನು ನಿರ್ದೇಶಕರು ನೇರವಾಗಿ ಅಂಗೀಕರಿಸುವಂತಿಲ್ಲ. ಬದಲಾಗಿ, ನಿರ್ದೇಶಕರ ಶಿಫಾರಸ್ಸಿನೊಂದಿಗೆ ಅಂತಿಮ ನಿರ್ಧಾರಕ್ಕಾಗಿ ಅವುಗಳನ್ನು ಕಡ್ಡಾಯವಾಗಿ ಬಾಹ್ಯಾಕಾಶ ಇಲಾಖೆಗೆ ಕಳುಹಿಸಬೇಕು ಮತ್ತು ಈ ಮನವಿಗಳನ್ನು ಇನ್ಮುಂದೆ ಸಾಮಾನ್ಯ ಪ್ರಕ್ರಿಯೆಯಾಗಿ ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಸಿಬ್ಬಂದಿಯ ಈ ನಿರ್ಗಮನವನ್ನು ಒಪ್ಪಿಕೊಂಡಿರುವ ಇಸ್ರೋ, ಇದೊಂದು ಸಾಮಾನ್ಯ ಪ್ರಕ್ರಿಯೆ ಎಂದಿದೆ. ಜನರು ಸಂಸ್ಥೆ ತೊರೆಯುವುದು ಎಲ್ಲಾ ಕಡೆ ಇರುವ ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಪ್ರಮುಖ ಯೋಜನೆಗಳಿಗೆ ಹಠಾತ್ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಈ ಹೊಸ ಸುತ್ತೋಲೆ ಹೊರಡಿಸಲಾಗಿದೆ ಮತ್ತು ಯಾರಾದರೂ ನಿರ್ಗಮಿಸಿದರೆ ಅವರ ಜವಾಬ್ದಾರಿಯನ್ನು ಮತ್ತೊಬ್ಬರು ವಹಿಸಿಕೊಳ್ಳಲಿದ್ದಾರೆ ಎಂದು ಹಿರಿಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಖಾಸಗಿ ಬಾಹ್ಯಾಕಾಶ ವಲಯದಲ್ಲಿ ಹೆಚ್ಚುತ್ತಿರುವ ಅವಕಾಶಗಳು ಈ ವಲಸೆಗೆ ಪ್ರಮುಖ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ. ಪ್ರಸ್ತುತ 14,600ಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊಂದಿರುವ ಇಸ್ರೋ, ಮುಂಬರುವ ದಿನಗಳಲ್ಲಿ 1,050 ಹೊಸ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಲು ನಿರ್ಧರಿಸಿದೆ. ಆದರೂ, ರಾಷ್ಟ್ರೀಯ ಪ್ರಾಮುಖ್ಯತೆಯ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಭವಿ ವಿಜ್ಞಾನಿಗಳ ಸ್ಥಾನವನ್ನು ದಿಢೀರನೆ ಹೊಸಬರಿಂದ ತುಂಬುವುದು ಸಂಸ್ಥೆಗೆ ಸದ್ಯದ ದೊಡ್ಡ ಸವಾಲಾಗಿ ಪರಿಣಮಿಸಿದೆ.




