ಕಡು ಬಡತನ, ಮೂಲಭೂತ ಸೌಕರ್ಯಗಳ ಕೊರತೆಯ ನಡುವೆಯೂ ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಅಂತಿಮ ವರ್ಷದ ಜಿಎನ್ಎಂ ನರ್ಸಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದಳು. ತನ್ನ ಸಮುದಾಯದಲ್ಲೇ ಅತಿ ಹೆಚ್ಚು ಶಿಕ್ಷಣ ಪಡೆದ ಬೆರಳೆಣಿಕೆಯ ವಿದ್ಯಾರ್ಥಿಗಳಲ್ಲಿ ಒಬ್ಬಳಾಗಿದ್ದ ಜ್ಯೋತಿ, ನರ್ಸ್ ಆಗಿ ಕುಟುಂಬಕ್ಕೆ ಆಸರೆಯಾಗುವ ಮತ್ತು ಸಮುದಾಯದ ಮಕ್ಕಳಿಗೆ ಶಿಕ್ಷಣದ ದಾರಿ ತೋರುವ ದೊಡ್ಡ ಕನಸನ್ನು ಕಂಡಿದ್ದಳು.
ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಯ ನಿರ್ಲಕ್ಷ್ಯ ಹಾಗೂ ಅವೈಜ್ಞಾನಿಕ ಹೆದ್ದಾರಿ ನಿರ್ಮಾಣ ವ್ಯವಸ್ಥೆಯಿಂದ ನರ್ಸ್ ಆಗುವ ಮೂಲಕ ತನ್ನ ಇಡೀ ಅಲೆಮಾರಿ ಸಮುದಾಯಕ್ಕೆ ಬೆಳಕಾಗಬೇಕೆಂದು ಕನಸು ಕಂಡಿದ್ದ ಪ್ರತಿಭಾನ್ವಿತ ವಿದ್ಯಾರ್ಥಿನಿ ಹೆಣವಾಗಿದ್ದಾಳೆ. ರಸ್ತೆ ದಾಟುವಾಗ ಸಂಭವಿಸಿದ ಭೀಕರ ಅಪಘಾತಕ್ಕೆ 20ರ ಹರೆಯದ ಜ್ಯೋತಿ ಬಲಿಯಾಗಿದ್ದಾಳೆ. ಇದು ಕೇವಲ ಅಪಘಾತವಲ್ಲ, ಅವೈಜ್ಞಾನಿಕ ಹೆದ್ದಾರಿ ನಿರ್ಮಾಣ ಮತ್ತು ವ್ಯವಸ್ಥೆಯ ನಿರ್ಲಕ್ಷ್ಯದಿಂದಾದ ಕೊಲೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಮಂಗಳೂರಿನ ನೇತ್ರಾವತಿ ನದಿ ತೀರದ ಗುಡಿಸಲಿನಲ್ಲಿ ಹುಟ್ಟಿ, ನರ್ಸ್ ಆಗುವ ಮೂಲಕ ತನ್ನ ಇಡೀ ಅಲೆಮಾರಿ ಸಮುದಾಯಕ್ಕೆ ಬೆಳಕಾಗಬೇಕೆಂದು ಕನಸು ಕಂಡಿದ್ದ ಪ್ರತಿಭಾನ್ವಿತ ವಿದ್ಯಾರ್ಥಿನಿಯೇ ಜ್ಯೋತಿ. ವಯಸ್ಸು ಕೇವಲ 20. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ನೇತ್ರಾವತಿ ನದಿ ತೀರದಲ್ಲಿ ಗುಡಿಸಲು ಕಟ್ಟಿಕೊಂಡು ಬದುಕುತ್ತಿರುವ ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದ ಹೆಣ್ಣು ಮಗಳು.
ಕಡು ಬಡತನ, ಮೂಲಭೂತ ಸೌಕರ್ಯಗಳ ಕೊರತೆಯ ನಡುವೆಯೂ ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಅಂತಿಮ ವರ್ಷದ ಜಿಎನ್ಎಂ ನರ್ಸಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದಳು. ತನ್ನ ಸಮುದಾಯದಲ್ಲೇ ಅತಿ ಹೆಚ್ಚು ಶಿಕ್ಷಣ ಪಡೆದ ಬೆರಳೆಣಿಕೆಯ ವಿದ್ಯಾರ್ಥಿಗಳಲ್ಲಿ ಒಬ್ಬಳಾಗಿದ್ದ ಜ್ಯೋತಿ, ನರ್ಸ್ ಆಗಿ ಕುಟುಂಬಕ್ಕೆ ಆಸರೆಯಾಗುವ ಮತ್ತು ಸಮುದಾಯದ ಮಕ್ಕಳಿಗೆ ಶಿಕ್ಷಣದ ದಾರಿ ತೋರುವ ದೊಡ್ಡ ಕನಸನ್ನು ಕಂಡಿದ್ದಳು.


ತನ್ನ ಕನಸನ್ನ ಹೆಗಲ ಮೇಲೇರಿಸಿ ಪ್ರತಿದಿನವೂ ಆಕೆ ಕಾಲೇಜಿಗೆ ತೆರಳಿ ವಿಧ್ಯಭ್ಯಾಸ ಪಡೆದು ತಾನಾಯಿತು ಎಂದು ಮನೆಗೆ ತೆರಳುತ್ತಿದ್ದವಳು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. 2026ರ ನವೆಂಬರ್ 14ರಂದು ನಡೆದ ಅಪಘಾತ ಆ ಒಂದು ಮನೆಯ ಜ್ಯೋತಿ ಅಷ್ಟೇ ಅಲ್ಲದೇ ಒಂದಿಡೀ ಸಮುದಾಯದ ಜ್ಯೋತಿಯನ್ನೇ ಆರಿಸಿಬಿಟ್ಟಿದೆ.
ಎಂದಿನಂತೆ ಕಾಲೇಜಿಗೆ ತೆರಳಲು ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಬೈಕೊಂದು ಜ್ಯೋತಿಗೆ ಬಡಿದು ಜ್ಯೋತಿ ರಸ್ತೆಗೆ ಎಳೆಯಲ್ಪಟ್ಟಿದ್ದಳು. ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಜ್ಯೋತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ.
ಅಪಘಾತ ನಡೆದ ಸ್ಥಳವನ್ನು ಗಮನಿಸಿದರೆ, ಇದು ಕೇವಲ ಅಪಘಾತವಲ್ಲ, ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದಿಂದಾದ ಸಾವು ಎಂಬುದು ಸ್ಪಷ್ಟವಾಗುತ್ತದೆ.
ಜನರ ತೆರಿಗೆ ಹಣದಿಂದ ನಿರ್ಮಿಸಲಾದ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಜನರು ರಸ್ತೆ ದಾಟಲು ಮೇಲ್ಸೇತುವೆಗಳಿಲ್ಲ ಸರ್ವೀಸ್ ರಸ್ತೆಗಳಿಲ್ಲ, ಕನಿಷ್ಠ ರಸ್ತೆ ಸೂಚಕ ಫಲಕಗಳೂ ಇಲ್ಲ ಎಂಬ ಆರೋಪ ಒಂದೆಡೆಯಾದರೆ ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ಈ ಭಾಗ ಸಾವಿನ ಕೂಪವಾಗಿ ಮಾರ್ಪಟ್ಟಿರುವುದಂತೂ ನಿಜ.
ಅವೈಜ್ಞಾನಿಕವಾಗಿ ಹೆದ್ದಾರಿ ನಿರ್ಮಿಸುವುದಲ್ಲದೇ ಸರಿಯಾದ ಸೌಲಭ್ಯಗಳನ್ನು ಕಲ್ಪಿಸದೇ ಜನರನ್ನು ಅಪಘಾತದ ಕೂಪಕ್ಕೆ ತಳ್ಳುವುದು ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯ. ಜೊತೆಗೆ, ಶಾಲಾ-ಕಾಲೇಜು ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ವಿದ್ಯಾರ್ಥಿಗಳನ್ನು ಹತ್ತಿಸುವ, ಇಳಿಸುವ ಬೇಜವಾಬ್ದಾರಿ ಮತ್ತು ಬೆಳಗಿನ ಧಾವಂತದಲ್ಲಿ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರುತ್ತಿರುವುದು ಇಂತಹ ದುರಂತಗಳಿಗೆ ದಾರಿ ಮಾಡಿಕೊಡುತ್ತಿದೆ ಎಂಬುದು ಕುಟುಂಬಸ್ಥರ ಆರೋಪವಾಗಿದೆ.
ಹಲವು ವರ್ಷಗಳ ಹಿಂದೆ ಮಂಗಳೂರಿಗೆ ವಲಸೆ ಬಂದ ಸುಮಾರು 30 ಅಲೆಮಾರಿ ಶಿಳ್ಳೆಕ್ಯಾತ ಕುಟುಂಬಗಳು ನೇತ್ರಾವತಿ ಮತ್ತು ಫಲ್ಗುಣಿ ನದಿ ತೀರದಲ್ಲಿ ಗುಡಿಸಲು ನಿರ್ಮಿಸಿಕೊಂಡು, ತೆಪ್ಪದ ಮೂಲಕ ಮೀನು ಹಿಡಿದು ಬದುಕು ಕಟ್ಟಿಕೊಂಡಿವೆ. ಒಂದೆಡೆ ಗುಡಿಸಲುಗಳಿಗೆ ಕನಿಷ್ಠ ಸೌಲಭ್ಯಗಳಿಲ್ಲ, ಇನ್ನೊಂದೆಡೆ ಸ್ಥಳೀಯರಿಂದ ನಿರಂತರ ದೌರ್ಜನ್ಯ. ಈ ನಡುವೆ ‘ಕರಾವಳಿ ವೃತ್ತಿ ನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಸಮಿತಿ’ಯ ಮೂಲಕ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದೇ. “ಮಕ್ಕಳ ಶಿಕ್ಷಣಕ್ಕಾಗಿ ವಲಸೆ ನಿಲ್ಲಿಸಿ, ದುಡಿದ ಹಣವನ್ನೆಲ್ಲಾ ಮಗಳ ಓದಿಗಾಗಿ ಸುರಿದಿದ್ದೇನೆ. ಆದರೆ ಇಂದು ಜ್ಯೋತಿಯೇ ಇಲ್ಲದೇ ದಿಕ್ಕು ತೋಚದಂತಾಗಿದೆ” ಎನ್ನುತ್ತಾರೆ ಜ್ಯೋತಿ ತಂದೆ.
ತುಳಿತಕ್ಕೊಳಗಾದ ಅಲೆಮಾರಿ ಸಮುದಾಯಗಳ ನೋವಿಗೆ ಸರ್ಕಾರ ಸ್ಪಂದಿಸದಿರುವುದು ಒಂದೆಡೆಯಾದರೆ, ಹೆದ್ದಾರಿ ಪ್ರಾಧಿಕಾರ ಮತ್ತು ಸಂಚಾರ ವ್ಯವಸ್ಥೆಯ ನಿರ್ಲಕ್ಷ್ಯ ಇಂದು ಒಂದು ಪ್ರತಿಭಾನ್ವಿತ ಜೀವವನ್ನು ಬಲಿ ಪಡೆದಿದೆ. ಜ್ಯೋತಿಯ ಸಾವಿಗೆ ನ್ಯಾಯ ಸಿಗಬೇಕಿದೆ. ಹೆದ್ದಾರಿಯಲ್ಲಿ ವೈಜ್ಞಾನಿಕ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ನೊಂದ ಅಲೆಮಾರಿ ಕುಟುಂಬಕ್ಕೆ ಸರ್ಕಾರ ಅತೀ ಶೀಘ್ರ ಸೂಕ್ತ ಪರಿಹಾರ ದೊರಕುವಂತಾಗಬೇಕಿದೆ.




