ಭಾಲ್ಕಿ ತಾಲೂಕಿನ ಮೆಹಕರ್ ಗ್ರಾಮದಲ್ಲಿ ಸೆಪ್ಟೆಂಬರ್ 8ರಂದು ಪ್ರಜಾ ಸೇವಾ ಅಭಿಯಾನಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಚಾಲನೆ ನೀಡಲಿದ್ದು, ಸಾರ್ವಜನಿಕರು ತಮ್ಮ ಅಹವಾಲುಗಳನ್ನು ನೇರವಾಗಿ ಸಚಿವರಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಜಾ ಸೇವಾ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಪ್ರಜಾ ಸೇವಾ ಅಭಿಯಾನದ ಸಂದರ್ಭದಲ್ಲಿ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಉಪಸ್ಥಿತರಿದ್ದು, ತಮ್ಮ ಇಲಾಖೆಗಳ ವಿವಿಧ ಯೋಜನೆಗಳ ಕುರಿತು ಮಾಹಿತಿ ಫಲಕ ಹಾಗೂ ಪ್ರಚಾರ ಮಳಿಗೆಗಳನ್ನು ಸ್ಥಾಪಿಸಬೇಕು. ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆದ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಕಾರ್ಯಕ್ರಮದಲ್ಲಿ ಸೌಲಭ್ಯಗಳನ್ನು ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಸೂಚಿಸಿದರು.
“ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಲು ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ವಿವಿಧ ಇಲಾಖೆಗಳ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಪ್ರಚಾರ ಮಳಿಗೆಗಳನ್ನು ತೆರೆಯಲಾಗುವುದು. ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ, ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು” ಎಂದರು.
ಸರ್ಕಾರದ ಸುತ್ತೋಲೆಯನ್ವಯ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಪ್ರತಿ ತಿಂಗಳು ಪ್ರಜಾ ಸೇವಾ ಆಂದೋಲನ ಸಭೆಗಳನ್ನು ಆಯೋಜಿಸಲಾಗುವುದು. ಪ್ರತಿ ತಿಂಗಳ 2ನೇ ಮತ್ತು 4ನೇ ಶನಿವಾರ ಸೇರಿದಂತೆ ನಿಗದಿತ ಶನಿವಾರಗಳಂದು ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಪ್ರಜಾ ಸೇವಾ ಆಂದೋಲನ ಸಭೆಗಳನ್ನು ಕಡ್ಡಾಯವಾಗಿ ನಡೆಸುವಂತೆ ಸರ್ಕಾರ ನಿರ್ದೇಶನ ನೀಡಿದೆ ಎಂದು ತಿಳಿಸಿದರು.
ತಾಲೂಕು ಮಟ್ಟದ ಪ್ರಜಾ ಸೇವಾ ಆಂದೋಲನ ಸಭೆಗಳನ್ನು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಮೊದಲ ಹಂತದಲ್ಲಿ ಎಲ್ಲಾ ಹೋಬಳಿ ಕೇಂದ್ರ ಸ್ಥಾನಗಳ ಗ್ರಾಮಗಳಲ್ಲಿ ಹಾಗೂ ನಂತರ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ ಹೊಂದಿರುವ ಗ್ರಾಮಗಳಲ್ಲಿ ನಡೆಸಲಾಗುವುದು. ಈ ಸಭೆಗಳಿಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಹೇಳಿದರು.
ಪ್ರಜಾ ಸೇವಾ ಆಂದೋಲನ ಸಭೆಗಳು ನಡೆಯುವ ದಿನಗಳಲ್ಲಿ ಇಲಾಖೆಗಳು ಇತರೆ ಯಾವುದೇ ಸಭೆಗಳನ್ನು ನಿಗದಿಪಡಿಸಬಾರದು. ಯಾವುದೇ ಕಾರಣಕ್ಕೂ ಪ್ರಜಾ ಸೇವಾ ಆಂದೋಲನ ಸಭೆಗಳನ್ನು ತಪ್ಪಿಸದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿ, “ಜಿಲ್ಲೆಯ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸುವುದರೊಂದಿಗೆ ಪ್ರಪ್ರಥಮ ಬಾರಿಗೆ ಸಾಂಕೇತಿಕವಾಗಿ ಆರೋಗ್ಯ ಕಾರ್ಡ್ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು” ಎಂದರು.
“ವಿಬಿ-ಜಿ ರಾಮ್ ಜಿ ಯೋಜನೆಯಡಿ ಜಾಬ್ ಕಾರ್ಡ್, ಹೊಲಿಗೆ ಯಂತ್ರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ವಿತರಿಸಲಾಗುವುದು. ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ನಡೆಸಲು ವ್ಯವಸ್ಥೆ ಮಾಡಲಾಗುವುದು. ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಕಲ್ಪಿಸಲು ಅಭಿಯಾನ ಸಹಕಾರಿಯಾಗಲಿದೆ” ಎಂದು ತಿಳಿಸಿದರು.
ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮೀತ್ ಸುಭಾಷರಾವ್ ಪಾಟೀಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ಅಪರ ಜಿಲ್ಲಾಧಿಕಾರಿ ಸುರೇಖಾ, ಸಹಾಯಕ ಆಯುಕ್ತ ಅಹ್ಮದ್ ಶಕೀಲ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಆನ್ಲೈನ್ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಕೋರಿಕೆ
ಮುಖ್ಯಮಂತ್ರಿಗಳ ಮಹತ್ವಕಾಂಕ್ಷಿ ಯೋಜನೆಯಾದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಪಿಂಚಣಿ ಸಮಸ್ಯೆ, ಪಹಣಿಗಳಲ್ಲಿನ ಸಮಸ್ಯೆ, ವಸತಿ/ನಿವೇಶನ ಸಮಸ್ಯೆ, ಗ್ಯಾರಂಟಿ ಯೋಜನೆಗಳನ್ನು ಪಡೆಯಲು ಎದುರಿಸುತ್ತಿರುವ ಸಮಸ್ಯೆ ಮತ್ತು ಇನ್ನಿತರ ಸರ್ಕಾರಿ ಸೇವೆಗಳ ಸಮಸ್ಯೆಗಳ ಕುರಿತು ಖುದ್ದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಇದನ್ನೂ ಓದಿ : ಔರಾದ್ ತಾಲೂಕಿನ ಜಿಲ್ಲಾ ಪಂಚಾಯತ್ ಸಿಇಒ ಸಂಚಾರ: ಆಸ್ಪತ್ರೆ, ಹಾಸ್ಟೆಲ್ ಭೇಟಿ, ಪರಿಶೀಲನೆ
ಆದ್ದರಿಂದ ಸರ್ಕಾರ ನಿಗದಿಪಡಿಸಿರುವ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಆನ್ಲೈನ್ https://ipgrs.karnataka.gov.in/ ಮೂಲಕ ಸ್ವೀಕೃತಿ ಪಡೆಯಲು ಹಾಗೂ ಸದರಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಕೋರಿದ್ದಾರೆ.





