ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ. ಗ್ರಾಮದಲ್ಲೇ ಲಭ್ಯವಿರುವ ಉದ್ಯೋಗಾವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಬೀದರ್ ಜಿಲ್ಲಾ ಪಂಚಾಯಿತಿ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಗಿತ್ತೆ ಮಾಧವ್ ವಿಠ್ಠಲರಾವ್ ಹೇಳಿದರು.
ಔರಾದ್ ತಾಲೂಕಿನ ಜಂಬಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಬಿ-ಜಿ ರಾಮ್ಜಿ ಯೋಜನೆಯಡಿ ನಡೆಯುತ್ತಿರುವ ಸಿಸಿಟಿ ಕಾಮಗಾರಿಯನ್ನು ಗುರುವಾರ ಪರಿಶೀಲಿಸಿ ಅವರು ಮಾತನಾಡಿ, “ಯಾರೂ ಗುಳೆ ಹೋಗಬೇಡಿ, ನಿಮ್ಮೂರಲ್ಲೇ ಕೆಲಸ ಮಾಡಿ. ವಿಬಿ–ಜಿ ರಾಮ್ಜಿ ಯೋಜನೆಯಡಿ ವಾರ್ಷಿಕ ಉದ್ಯೋಗದ ದಿನಗಳನ್ನು 100ರಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. ದಿನಕ್ಕೆ ರೂ.382 ಕೂಲಿ ನೀಡಲಾಗುತ್ತಿದ್ದು, 125 ದಿನಗಳ ಉದ್ಯೋಗ ಪಡೆದ ಕುಟುಂಬವು ಗರಿಷ್ಠ ರೂ.47,750 ಕೂಲಿ ಪಡೆಯಬಹುದಾಗಿದೆ” ಎಂದು ತಿಳಿಸಿದರು.
ಇದಕ್ಕೂ ಮೊದಲು ಕಂದಗೂಳ ಗ್ರಾಮಕ್ಕೆ ಭೇಟಿ ನೀಡಿದ ಸಿಇಒ, ಜಲ ಜೀವನ್ ಮಿಷನ್ ಕಾಮಗಾರಿಯನ್ನು ಪರಿಶೀಲಿಸಿದರು. ಗ್ರಾಮಸ್ಥರಿಗೆ ಸಮರ್ಪಕ ಹಾಗೂ ಶುದ್ಧ ಕುಡಿಯುವ ನೀರು ದೊರೆಯುವಂತೆ ಕಾಮಗಾರಿಗಳನ್ನು ಗುಣಮಟ್ಟದಿಂದ ಪೂರ್ಣಗೊಳಿಸಬೇಕೆಂದು ತಿಳಿಸಿದ ಬಳಿಕ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಹಾಜರಾತಿ, ಪೌಷ್ಟಿಕ ಆಹಾರ ವಿತರಣೆ, ಬೆಳವಣಿಗೆ ದಾಖಲಾತಿ ಹಾಗೂ ಸ್ವಚ್ಛತೆ ಪರಿಶೀಲಿಸಿದರು.
ಆರೋಗ್ಯ ಕೇಂದ್ರ, ಹಾಸ್ಟೆಲ್ಗಳಿಗೆ ಭೇಟಿ
ವಡಗಾಂವ, ಜಂಬಗಿ ಹಾಗೂ ಸಂತಪೂರ ಗ್ರಾಮಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಹಾಜರಾತಿ, ವಸತಿ, ಆಹಾರ, ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ ಹಾಗೂ ಮೂಲಸೌಕರ್ಯಗಳನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂವಾದ ನಡೆಸಿ, ಅವರ ಊಟ, ವಸತಿ ಹಾಗೂ ಓದಿನ ಕುರಿತು ಸಮಾಲೋಚನೆ ನಡೆಸಿ, ಸಮಸ್ಯೆಗಳನ್ನು ಆಲಿಸಿದರು.

ವಡಗಾಂವ, ಸಂತಪೂರ ಹಾಗೂ ಜಂಬಗಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸರ್ಕಾರಿ ಶಾಲೆ ಸೇರಿದಂತೆ ವಿವಿಧ ಸಾರ್ವಜನಿಕ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ, ಸಿಬ್ಬಂದಿ ಹಾಜರಾತಿ, ಸಾರ್ವಜನಿಕರಿಗೆ ದೊರೆಯುತ್ತಿರುವ ಸೇವೆ ಹಾಗೂ ಮೂಲಸೌಕರ್ಯಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು.
ಸಾರ್ವಜನಿಕರಿಗೆ ಸರ್ಕಾರದ ಸೇವೆಗಳನ್ನು ಸಮರ್ಪಕವಾಗಿ ತಲುಪಿಸುವಲ್ಲಿ ಯಾವುದೇ ಲೋಪವಾಗಬಾರದು. ಸಿಬ್ಬಂದಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ : KPSC ಹಗರಣ | ತಪ್ಪಿತಸ್ಥರೆಲ್ಲರಿಗೂ ಕಠಿಣ ಶಿಕ್ಷೆ ಆಗುತ್ತದೆ : ಸಚಿವ ಈಶ್ವರ ಖಂಡ್ರೆ
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ್, ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಎಇಇ ಮಾರುತಿ ರಾಠೋಡ, ಐಇಸಿ ಸಂಯೋಜಕ ಅಂಬಾದಾಸ ಪಾಟೀಲ್, ಪಿಡಿಒಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.






