ಬೀದರ್ ಜಿಲ್ಲೆಯ ಹುಲಸೂರು ತಾಲೂಕನ್ನು ಕೂಡಲೇ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವುದು ಸೇರಿದಂತೆ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಇತರೆ ಸಂಘಟನೆಗಳ ನೇತ್ರತ್ವದಲ್ಲಿ ಪಟ್ಟಣದ ಚೌಕಿ ಮಠದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ತಹಶೀಲ್ದಾರ್ ಕಾರ್ಯಾಲಯದವರೆಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ಬರಪೀಡಿತ ತಾಲೂಕು ಘೋಷಿಸಲು ಆಗ್ರಹಿಸಿದರು. ಬಳಿಕ ತಹಸೀಲ್ ಕಚೇರಿ ಎದುರು ಧರಣಿ ಸತ್ಯಾಗ್ರಹ ವೇದಿಕೆಯಲ್ಲಿ ರೈತ ಮುಖಂಡರು ಮಾತನಾಡಿದರು.
ಸರ್ಕಾರ ಹುಲಸೂರ ತಾಲೂಕು ಬರಪೀಡಿತ ಎಂದು ಘೋಷಣೆ ಮಾಡುವವರೆಗೆ ಉಪವಾಸ ಸತ್ಯಾಗ್ರಹ ಹಾಗೂ ಅಹೋರಾತ್ರಿ ಧರಣಿಯನ್ನು ಕೈಬಿಡುವುದಿಲ್ಲ ಎಂದು ನವಕಲ್ಯಾಣ ಕರ್ನಾಟಕ ಮಹಾಸಭಾ ಕಾರ್ಯದರ್ಶಿ ಡಾ.ಶಂಕರಗೌಡ ಎಚ್ಚರಿಸಿದರು.
“ಜಿಲ್ಲೆಯ ನಾಲ್ಕು ತಾಲೂಕುಗಳನ್ನು ಈಗಾಗಲೇ ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಉಳಿದ ತಾಲೂಕುಗಳನ್ನೂ ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಬೇಕು. ಹುಲಸೂರು ತಾಲೂಕಿನ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರದ ನಿರ್ಲಕ್ಷ್ಯ ಹಾಗೂ ಮಲತಾಯಿ ಧೋರಣೆ ಸರಿಯಲ್ಲ. ಬರಗಾಲ ಘೋಷಣೆಗೆ ಅಗತ್ಯವಿರುವ ಎಲ್ಲ ಅರ್ಹತೆಗಳಿದ್ದರೂ ತಾಲೂಕನ್ನು ಕೈಬಿಟ್ಟಿರುವುದು ಖಂಡನೀಯ” ಎಂದರು.
ರೈತರ ಸಂಕಷ್ಟವನ್ನು ಪರಿಗಣಿಸಿ ಸರ್ಕಾರ ಕೂಡಲೇ ಸೂಕ್ತ ನಿರ್ಧಾರ ಕೈಗೊಂಡು ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಹೋರಾಟವನ್ನು ಹಂತ ಹಂತವಾಗಿ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ರೈತ ಮುಖಂಡ ರಾಜಕುಮಾರ ನಿಡೋದೆ ಮಾತನಾಡಿ, “ಹುಲಸೂರು ತಾಲೂಕಿನ ರೈತರ ಪರಿಸ್ಥಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರ ಕಣ್ಣು ತೆರೆದು ನೋಡಬೇಕಿದೆ. ಬರಪೀಡಿತ ಪ್ರದೇಶ ಘೋಷಣೆಗೆ ಸರ್ಕಾರ ವಿಧಿಸಿರುವ ನಿಯಮಗಳ ಪ್ರಕಾರ ಹುಲಸೂರು ತಾಲೂಕು ಅರ್ಹತೆ ಹೊಂದಿದ್ದರೂ ಘೋಷಣೆ ಮಾಡದೆ ಅನ್ಯಾಯ ಮಾಡಲಾಗುತ್ತಿದೆ” ಎಂದು ಆರೋಪಿಸಿದರು.

ಮುಖಂಡ ಮಲ್ಲಪ್ಪ ಧಬಾಲೆ ಮಾತನಾಡಿ, “ಹುಲಸೂರು ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲು ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ವಿಳಂಬ ಮಾಡುವುದು ಸರಿಯಲ್ಲ. ರೈತರ ಹಿತದೃಷ್ಟಿಯಿಂದ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಕಲ್ಯಾಣ ಕರ್ನಾಟಕ | 4,904 ಅಂಗನವಾಡಿ ಕೇಂದ್ರಕ್ಕಿಲ್ಲ ಸ್ವಂತ ಕಟ್ಟಡ: ಅಡುಗೆ ಕೋಣೆ, ಶೌಚಾಲಯ ಮರೀಚಿಕೆ
ಪ್ರತಿಭಟನೆಯಲ್ಲಿ ಪ್ರಮುಖರಾದ ಎಂ.ಜಿ.ರಾಜೋಳ, ಬಸವರಾಜ ಚೌರೆ, ಕೇದಾರ್ ಭೂಕುಳೆ, ರಫೀಕ್, ಆಕಾಶ ಖಂಡಾಳೆ, ವಿಠಲರೆಡ್ಡಿ, ಖಾಸಿಂ ಮಾಮು, ನಾಗಯ್ಯ ಸ್ವಾಮಿ, ಪ್ರವೀಣ್ ಕಾಡಾದಿ, ತಂಗೆಮ್ಮ ಶೆಟಕಾರ, ರಾಜಕುಮಾರ ತೊಂಡಾರೆ, ದೇವೇಂದ್ರ ಹಾಲಿಂಗೆ, ಸುನಿಲ್ ಭುಜಂಗೆ, ಈರಪ್ಪ ಚೌರೆ ಸೇರಿದಂತೆ ರೈತ ಸಂಘದ ಪ್ರಮುಖರು, ವಿವಿಧ ಸಂಘ-ಸಂಸ್ಥೆಗಳು ಪ್ರಮುಖರು, ರೈತರು ಪಾಲ್ಗೊಂಡಿದ್ದರು.





