ಜನರ ಸಮಸ್ಯೆ ಹಾಗೂ ಅಹವಾಲುಗಳನ್ನು ಅವರಿರುವಲ್ಲಿಯೇ ಆಲಿಸಿ, ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಪ್ರಜಾಸೇವೆ ಆಂದೋಲನ ಸಭೆಗಳನ್ನು ಆಯೋಜಿಸುತ್ತಿದೆ. ಈ ಮೂಲಕ ಜನರ ಸಮಸ್ಯೆಗಳಿಗೆ ಸರ್ಕಾರ ಧ್ವನಿಯಾಗುವ ಕೆಲಸ ಮಾಡುತ್ತಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಹೇಳಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಪ್ರಜಾಸೇವೆ ಇಲಾಖೆ ಹಾಗೂ ಉಡುಪಿ ಜಿಲ್ಲಾಡಳಿತದ ಸಹಯೋಗದಲ್ಲಿ ನಡೆದ *ಉಡುಪಿ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಸಭೆಯನ್ನುಉದ್ಘಾಟಿಸಿ ಅವರು ಮಾತನಾಡಿದರು.
ಸೆಪ್ಟೆಂಬರ್ 5ರಂದು ವಿಜಯನಗರ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಜಾಸೇವೆ ಆಂದೋಲನಕ್ಕೆ ಚಾಲನೆ ನೀಡಿದ್ದರು. ರಾಜ್ಯದಾದ್ಯಂತ ಏಕಕಾಲದಲ್ಲಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಉಡುಪಿಯಲ್ಲಿ ಅಂದು ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವ ಇದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಹವಾಲು ಸಲ್ಲಿಸಲು ತೊಂದರೆಯಾಗುವ ಕಾರಣ ಉಡುಪಿಯಲ್ಲಿ ಈ ದಿನ ಸಭೆ ಆಯೋಜಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಸರ್ಕಾರ ಇರುವುದೇ ಜನರ ಸೇವೆಗಾಗಿ
ಸರ್ಕಾರ ಹಾಗೂ ಜನರ ನಡುವಿನ ಸಂಬಂಧ ಸದಾ ಗಟ್ಟಿಯಾಗಿರಬೇಕು. ಸರ್ಕಾರಿ ಸೇವೆ ಪಡೆಯಲು ಜನರು ವಾರಗಟ್ಟಲೆ, ತಿಂಗಳುಗಟ್ಟಲೆ ಕಚೇರಿಗಳಿಗೆ ಅಲೆಯುವ ಪರಿಸ್ಥಿತಿಯನ್ನು ತಪ್ಪಿಸುವ ಉದ್ದೇಶದಿಂದ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಪ್ರಜಾಸೇವೆ ಆಂದೋಲನ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜನಸಾಮಾನ್ಯರ ಅಹವಾಲು ಹಾಗೂ ಸಮಸ್ಯೆಗಳಿಗೆ ಸರ್ಕಾರದ ಮಟ್ಟದಲ್ಲಿ ಕಾಲಮಿತಿಯೊಳಗೆ ಪರಿಹಾರ ಕಲ್ಪಿಸಲಾಗುವುದು. ಜನರು ಯಾವ ಸಮಸ್ಯೆಗಳಿಂದ ಹೈರಾಣಾಗಿದ್ದಾರೆ ಎಂಬುದನ್ನು ಅರಿತು, ಅವರ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಿ ಅದಕ್ಕೆ ತಕ್ಕಂತೆ ನೀತಿಗಳನ್ನು ರೂಪಿಸುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.
ಆಯಾ ಜಿಲ್ಲೆಯ ಉಸ್ತುವಾರಿ ಸಚಿವರು ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶನಿವಾರ ತಾಲೂಕು ಮಟ್ಟದಲ್ಲಿ ಮತ್ತು ಎರಡನೇ ಹಾಗೂ ನಾಲ್ಕನೇ ಶನಿವಾರ ಹೋಬಳಿ ಮಟ್ಟದಲ್ಲಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಲಿದ್ದಾರೆ. ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವ ಕಾರ್ಯ ನಡೆಯಲಿದೆ. ಪ್ರತಿ ಬುಧವಾರ ಜಿಲ್ಲಾಧಿಕಾರಿಗಳು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಅರ್ಜಿಗಳ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸಿ ಫಾಲೋಅಪ್ ಮಾಡಲಿದ್ದಾರೆ ಎಂದರು.
ಸಾರ್ವಜನಿಕರಿಂದ ಸ್ವೀಕರಿಸುವ ಪ್ರತಿಯೊಂದು ಅರ್ಜಿಯನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ, ಅದರ ಮೇಲೆ ಕೈಗೊಂಡ ಕ್ರಮ ಹಾಗೂ ಪರಿಹಾರದ ಮಾಹಿತಿಯನ್ನು ಅರ್ಜಿದಾರರಿಗೆ ತಿಳಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ಹೇಳಿದರು.

ಕರಾವಳಿ ಅಭಿವೃದ್ಧಿಗೆ ವಿಶೇಷ ಸಂಪುಟ ಸಭೆ
ಉಡುಪಿ ಪ್ರಜ್ಞಾವಂತರ ಜಿಲ್ಲೆ ಎಂದು ಹೆಸರು ಪಡೆದಿದ್ದು, ಇಲ್ಲಿ ಪ್ರಜಾಸೇವೆ ಆಂದೋಲನವನ್ನು ಅನುಷ್ಠಾನಗೊಳಿಸಿರುವುದು ಸಂತಸದ ವಿಷಯ ಎಂದ ಸಚಿವರು, ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ಇದೇ 18ರಂದು ಮಂಗಳೂರಿನಲ್ಲಿ ವಿಶೇಷ ಸಂಪುಟ ಸಭೆ ನಡೆಯಲಿದೆ ಎಂದು ತಿಳಿಸಿದರು.
ಪ್ರವಾಸೋದ್ಯಮ ಅಭಿವೃದ್ಧಿ, ವ್ಯವಹಾರ ಕ್ಷೇತ್ರದ ವಿಸ್ತರಣೆ, ಉದ್ಯೋಗಾವಕಾಶಗಳ ಸೃಷ್ಟಿ ಸೇರಿದಂತೆ ಕರಾವಳಿ ಭಾಗದ ಒಟ್ಟಾರೆ ಅಭಿವೃದ್ಧಿಗೆ ಈ ವಿಶೇಷ ಸಂಪುಟ ಸಭೆಯಲ್ಲಿ ಒತ್ತು ನೀಡಲಾಗುವುದು ಎಂದರು.
208 ಅರ್ಜಿಗಳ ಸ್ವೀಕಾರ
ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಖಾತೆ ಪೋಡಿ, ದರಖಾಸ್ತು ಜಮೀನು, ಜಮೀನುಗಳಿಗೆ ಕಾಲುದಾರಿ, ಮನೆ, ನಿವೇಶನ, ಚರಂಡಿ ವ್ಯವಸ್ಥೆ, ಕೆರೆಗಳ ಅಭಿವೃದ್ಧಿ, ಗೃಹಜ್ಯೋತಿ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ 208 ಅರ್ಜಿಗಳು ವಿವಿಧ ಇಲಾಖೆಗಳ ಮೂಲಕ ಸಲ್ಲಿಕೆಯಾದವು.
ಸಚಿವ ರಿಜ್ವಾನ್ ಅರ್ಷದ್ ಅವರು ಸಾರ್ವಜನಿಕರ ಸಮಸ್ಯೆಗಳನ್ನು ಶಾಂತವಾಗಿ ಆಲಿಸಿ, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ತ್ವರಿತವಾಗಿ ಕ್ರಮಕೈಗೊಂಡು ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಸೂಚಿಸಿದರು.
ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕಾರ್ಯಕ್ರಮ: ಯಶಪಾಲ್ ಸುವರ್ಣ
ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಪ್ರತಿಯೊಂದು ಇಲಾಖೆಯ ಅಧಿಕಾರಿಗಳಿಗೂ ಚುರುಕು ಮುಟ್ಟಿಸಿ, ಅವರ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ನೆನಪಿಸುವಲ್ಲಿ ಪ್ರಜಾಸೇವೆ ಆಂದೋಲನ ಸಭೆ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದರು.
ಜನರ ಸಮಸ್ಯೆಗಳಿಗೆ ಪೂರಕವಾಗಿ ಪರಿಹಾರ ಒದಗಿಸುವ ಅರ್ಥಪೂರ್ಣ ಕಾರ್ಯಕ್ರಮವಾಗಿ ಇದು ರೂಪುಗೊಳ್ಳಬೇಕು. ಶೈಕ್ಷಣಿಕ, ಆರೋಗ್ಯ, ಧಾರ್ಮಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಹೆಗ್ಗಳಿಕೆ ಹೊಂದಿರುವ ಉಡುಪಿ ಜಿಲ್ಲೆಗೆ ಹೆಚ್ಚಿನ ಅನುದಾನ ಒದಗಿಸಿ, ವಿಶೇಷ ಸಭೆಯ ಮೂಲಕ ಅಭಿವೃದ್ಧಿಗೆ ಹೊಸ ಮುನ್ನುಡಿ ಬರೆಯಬೇಕು ಎಂದು ಹೇಳಿದರು.

ಮನೆ ಬಾಗಿಲಿಗೆ ಸರ್ಕಾರದ ಯೋಜನೆ
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಮೊಟ್ಟಮೊದಲ ಪ್ರಜಾಸೇವೆ ಆಂದೋಲನ ಸಭೆ ಆಯೋಜಿಸಲಾಗುತ್ತಿದೆ. ಜಿಲ್ಲೆಯ ಪ್ರತಿಯೊಂದು ಹಳ್ಳಿಯ ಮನೆ ಬಾಗಿಲಿಗೂ ಸರ್ಕಾರದ ಯೋಜನೆಗಳನ್ನು ಕೊಂಡೊಯ್ಯುವ ಪ್ರಯತ್ನವನ್ನು ಈ ಸಭೆಯ ಮೂಲಕ ಮಾಡಲಾಗುತ್ತಿದೆ ಎಂದರು.
ಸಾರ್ವಜನಿಕರ ಅಹವಾಲು ಹಾಗೂ ಸಮಸ್ಯೆಗಳಿಗೆ ಕ್ಲಪ್ತ ಸಮಯದಲ್ಲಿ ಪರಿಹಾರ ಕಲ್ಪಿಸಲು ಮತ್ತು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಪ್ರಜಾಸೇವೆ ಆಂದೋಲನ ಉತ್ತಮ ವೇದಿಕೆಯಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಸಭೆಯಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜನಾಥ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಡಿಎಫ್‌ಒ ರುಥೇನ್ ಸೇರಿದಂತೆ ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಸ್ವಾಗತಿಸಿದರು. ರೋಷನ್ ಕುಮಾರ್ ಶೆಟ್ಟಿ ನಿರೂಪಿಸಿದರು.
ಸಭಾಂಗಣದ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ವಿವಿಧ ಅಭಿವೃದ್ಧಿ ನಿಗಮಗಳು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ–ಸಂಜೀವಿನಿ, ಕೃಷಿ, ತೋಟಗಾರಿಕೆ, ಆಯುಷ್, ಪಶುಪಾಲನೆ, ಕಾರ್ಮಿಕ, ಮೀನುಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ವತಿಯಿಂದ ಮಾಹಿತಿ ಮಳಿಗೆಗಳನ್ನು ತೆರೆಯಲಾಗಿತ್ತು.
ಸರ್ಕಾರದ ವಿವಿಧ ಯೋಜನೆಗಳು, ಕಾರ್ಯಕ್ರಮಗಳು ಹಾಗೂ ಸಾಲ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಸಂಜೀವಿನಿ ಉತ್ಪನ್ನಗಳ ಮಾರಾಟ ಮಳಿಗೆಯನ್ನೂ ತೆರೆಯಲಾಗಿತ್ತು. ಆರೋಗ್ಯ ಇಲಾಖೆಯ ವತಿಯಿಂದ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಕೂಡ ಆಯೋಜಿಸಲಾಗಿತ್ತು.







