ಹಲವು ವಾರಗಳ ಬಿರುಸಿನ ಪ್ರಚಾರದ ನಂತರ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಇಂದು (ಏಪ್ರಿಲ್ 23) ವಿಧಾನಸಭೆ ಚುನಾವಣೆಯ ಮತದಾನ ಆರಂಭವಾಗಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಶುರುವಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಒಟ್ಟು 294 ಕ್ಷೇತ್ರಗಳ ಪೈಕಿ 152 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ಇನ್ನೊಂದೆಡೆ, ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಇಂದು ಮತದಾನ ನಡೆಯುತ್ತಿದೆ. ಈ ಎರಡೂ ರಾಜ್ಯಗಳಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದೆ.
ತಮಿಳುನಾಡಿನಲ್ಲಿ ಸುಮಾರು 5.67 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಅರ್ಹರಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದಲ್ಲಿ ಸುಮಾರು 3.6 ಕೋಟಿ ಮತದಾರರು ಮತದಾನ ಮಾಡಲಿದ್ದಾರೆ. ಎರಡೂ ರಾಜ್ಯಗಳಲ್ಲಿ ಬೆಳಗಿನಿಂದಲೇ ಮತದಾರರು ಉತ್ಸಾಹದಿಂದ ಮತಗಟ್ಟೆಗಳತ್ತ ಬರುತ್ತಿದ್ದು, ಭಾರಿ ಪ್ರಮಾಣದ ಮತದಾನ ನಿರೀಕ್ಷಿಸಲಾಗಿದೆ.
ಪಶ್ಚಿಮ ಬಂಗಾಳ: ಟಿಎಂಸಿ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ
ಬಂಗಾಳದಲ್ಲಿ ಆಡಳಿತಾರೂಢ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಮತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ನೇತೃತ್ವದ ಬಿಜೆಪಿ ನಡುವೆ ನೇರ ಹಾಗೂ ತೀವ್ರ ಕದನ ಏರ್ಪಟ್ಟಿದೆ. ಟಿಎಂಸಿ ‘ಲಕ್ಷ್ಮೀರ್ ಭಾಂಡಾರ್’ ದಂತಹ ಅಭಿವೃದ್ಧಿ ಯೋಜನೆಗಳು ಮತ್ತು ಬಂಗಾಳಿ ಅಸ್ಮಿತೆಯ ಮೇಲೆ ಹೆಚ್ಚು ಗಮನಹರಿಸಿದರೆ, ಬಿಜೆಪಿ ಹಿಂದುತ್ವ, ಅಕ್ರಮ ವಲಸಿಗರ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಿದೆ.
ಚುನಾವಣಾ ಆಯೋಗದ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ವಿವಾದದ ಬಗ್ಗೆ ಟಿಎಂಸಿ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಬಂಗಾಳದಲ್ಲಿ 91 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಮತ್ತು 62 ಲಕ್ಷ ಮತದಾರರ ಭವಿಷ್ಯ ಅನಿಶ್ಚಿತವಾಗಿದೆ ಎಂದು ಟಿಎಂಸಿ ಆರೋಪಿಸಿದೆ. ಮಹಿಳಾ ಮತದಾರರನ್ನು ಸೆಳೆಯಲು ಬಿಜೆಪಿ ಪ್ರತಿ ತಿಂಗಳು 3,000 ರೂ. ನೀಡುವುದಾಗಿ ಭರವಸೆ ನೀಡಿದ್ದರೆ, ಟಿಎಂಸಿ 2,000 ರೂ. ನೀಡುವುದಾಗಿ ಘೋಷಿಸಿದೆ. ರಾಜ್ಯದಲ್ಲಿ ಪ್ರಸ್ತುತ 3.76 ಕೋಟಿಗಿಂತಲೂ ಹೆಚ್ಚು ಮಹಿಳಾ ಮತದಾರರಿದ್ದಾರೆ.
ಇದನ್ನು ಓದಿದ್ದೀರಾ? ಬಂಗಾಳದಲ್ಲಿ 91 ಲಕ್ಷ ಮತದಾರರ ಹರಣ; ಪ್ರಜಾಪ್ರಭುತ್ವದ ಕಗ್ಗೊಲೆಯ ರಾಜಕೀಯ ಷಡ್ಯಂತ್ರ
ಇದರ ಜತೆಗೆ, ಎಡರಂಗ ಕೂಡ ಒಟ್ಟು 252 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಉತ್ತರ ಬಂಗಾಳ ಮತ್ತು ಜಂಗಲ್ ಮಹಲ್ ಭಾಗಗಳಲ್ಲಿ (ಕೂಚ್ ಬೆಹಾರ್, ಅಲಿಪುರ್ದಾರ್, ಕಾಲಿಂಪಾಂಗ್, ಜಲ್ಪೈಗುರಿ) ಚಹಾ ತೋಟದ ಕಾರ್ಮಿಕರು ಮತ್ತು ಯುವಕರನ್ನು ಸೆಳೆಯುವ ಮೂಲಕ ಮರಳಿ ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಿದೆ.
ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ, ಬೆರ್ಹಾಂಪೋರ್ನಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ಅಧೀರ್ ರಂಜನ್ ಚೌಧರಿ ಮತ್ತು ಮಾತಾಭಂಗದಲ್ಲಿ ಬಿಜೆಪಿಯ ನಿಸಿತ್ ಪ್ರಮಾಣಿಕ್ ಕಣದಲ್ಲಿದ್ದು, ಈ ಕ್ಷೇತ್ರಗಳು ತೀವ್ರ ಕುತೂಹಲ ಕೆರಳಿಸಿವೆ.
ತಮಿಳುನಾಡು: ತ್ರಿಕೋನ ಸ್ಪರ್ಧೆಯ ಅಖಾಡ
ತಮಿಳುನಾಡಿನಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಆಡಳಿತಾರೂಢ ಡಿಎಂಕೆ, ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟ ಮತ್ತು ಹೊಸ ಸ್ಪರ್ಧಿಯಾಗಿ ನಟ ವಿಜಯ್ ಅವರ ಟಿವಿಎಕೆ ಪಕ್ಷದ ನಡುವೆ ಪೈಪೋಟಿ ಇದೆ.
ಡಿಎಂಕೆ ತನ್ನ ಆಡಳಿತ, ಕಲ್ಯಾಣ ಯೋಜನೆಗಳು ಮತ್ತು ಒಕ್ಕೂಟ ವ್ಯವಸ್ಥೆಯ ಹಕ್ಕುಗಳನ್ನು ಮುಂದಿಟ್ಟು ಮತ ಕೇಳುತ್ತಿದೆ. ಇನ್ನು ನಟ ವಿಜಯ್ ಅವರ ಟಿವಿಎಕೆ ಪಕ್ಷವು ಯುವಜನರನ್ನು ಮತ್ತು ನಗರ ಪ್ರದೇಶದ ಮತದಾರರನ್ನು ಸೆಳೆಯುತ್ತಿದ್ದು, ದಶಕಗಳಿಂದ ಬೇರೂರಿರುವ ದ್ರಾವಿಡ ರಾಜಕೀಯಕ್ಕೆ ಪ್ರಬಲ ಪರ್ಯಾಯವಾಗಿ ಹೊರಹೊಮ್ಮುವ ಪ್ರಯತ್ನದಲ್ಲಿದೆ.
300 ಕಂಪನಿ ಅರೆಸೇನಾ ಪಡೆ, 84 ಸಾವಿರ ಪೊಲೀಸರ ಬಿಗಿ ಭದ್ರತೆ
ತಮಿಳುನಾಡಿನಲ್ಲಿ ಈ ಬಾರಿ ಡಿಎಂಕೆ, ಎಐಎಡಿಎಂಕೆ ಮೈತ್ರಿಕೂಟ ಹಾಗೂ ನಟ ವಿಜಯ್ ಅವರ ಟಿವಿಎಕೆ ಪಕ್ಷದ ನಡುವೆ ಭಾರಿ ಪೈಪೋಟಿಯ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವುದರಿಂದ, ಚುನಾವಣಾ ಆಯೋಗವು ಭದ್ರತೆಗೆ ಅತ್ಯುನ್ನತ ಆದ್ಯತೆ ನೀಡಿದೆ. ರಾಜಕೀಯ ಜಿದ್ದಾಜಿದ್ದಿನ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು, ಹಿಂಸಾಚಾರ, ಅಥವಾ ಮತಗಟ್ಟೆ ಅಕ್ರಮಗಳು ನಡೆಯದಂತೆ ತಡೆಯಲು ರಾಜ್ಯದಾದ್ಯಂತ ಹದ್ದಿನ ಕಣ್ಣು ಇಡಲಾಗಿದೆ.
ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಮತದಾನವನ್ನು ಖಚಿತಪಡಿಸಿಕೊಳ್ಳಲು ಒಟ್ಟು 300 ಕಂಪನಿ ಕೇಂದ್ರ ಅರೆಸೇನಾ ಪಡೆಗಳು ಹಾಗೂ 84 ಸಾವಿರಕ್ಕೂ ಹೆಚ್ಚು ರಾಜ್ಯ ಪೊಲೀಸ್ ಸಿಬ್ಬಂದಿಯನ್ನು ಸರ್ಪಗಾವಲಾಗಿ ನಿಯೋಜಿಸಲಾಗಿದೆ.
ರಾಜ್ಯದಲ್ಲಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಎಂದು ಗುರುತಿಸಲಾದ ಮತಗಟ್ಟೆಗಳಲ್ಲಿ ಹೆಚ್ಚುವರಿ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದ್ದು, ಸಣ್ಣ ಮಟ್ಟದ ಗಲಾಟೆಗಳಿಗೂ ಆಸ್ಪದ ನೀಡದಂತೆ ಎಚ್ಚರಿಕೆ ವಹಿಸಲಾಗಿದೆ.
ಕೇವಲ ಭದ್ರತಾ ಸಿಬ್ಬಂದಿ ಮಾತ್ರವಲ್ಲದೆ, ತಂತ್ರಜ್ಞಾನದ ಮೂಲಕವೂ ಕಟ್ಟೆಚ್ಚರ ವಹಿಸಲಾಗಿದೆ. ಸಾವಿರಾರು ಮತಗಟ್ಟೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ವೆಬ್ಕಾಸ್ಟಿಂಗ್ ಮೂಲಕ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ನೇರ ನಿಗಾ ಇರಿಸಿದ್ದಾರೆ. ಕಡೆ ಘಳಿಗೆಯಲ್ಲಿ ಮತದಾರರಿಗೆ ಆಮಿಷ ಒಡ್ಡುವುದನ್ನು (ಹಣ, ಮದ್ಯ ಹಾಗೂ ಉಡುಗೊರೆ ಹಂಚಿಕೆ) ತಡೆಯಲು ರಾಜ್ಯದ ಗಡಿ ಭಾಗಗಳು, ಹೆದ್ದಾರಿಗಳು ಹಾಗೂ ಒಳರಸ್ತೆಗಳಲ್ಲಿ ಬಿಗಿ ಚೆಕ್ಪೋಸ್ಟ್ಗಳನ್ನು ನಿರ್ಮಿಸಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ಪಡೆಗಳು ನಿರಂತರ ಗಸ್ತು ತಿರುಗುತ್ತಿವೆ.





