ಕರ್ನಾಟಕದ ಕರಾವಳಿ ಮತ್ತು ಮಲಬಾರ್ ಜೊತೆಗಿನ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನನ ಸಂಬಂಧಗಳ ಬಗೆಗೆ ಈ ಪುಸ್ತಕದಲ್ಲಿ ವಿಷಯಗಳನ್ನು ಮಂಡಿಸುವಾಗ ಕೃತಿಕಾರರು ಪೂರ್ವ ಇತಿಹಾಸದತ್ತಲೂ ಕಣ್ಣು ಹಾಯಿಸುತ್ತಾರೆ. ನಮ್ಮ ಕರಾವಳಿಯ ಬಂಗ, ಚೌಟ, ಅಜಿಲ, ನೀಲೇಶ್ವರ ರಾಜವಂಶಸ್ಥರ ಸ್ಥೂಲ ಪ್ರಸ್ತಾಪವನ್ನು ಮಾಡಿದ್ದಾರೆ. ಈ ಪ್ರಯತ್ನ ತಂದೆ-ಮಗನ ಕರಾವಳಿ ಸಂಬಂಧಗಳಿಗೆ ಒಂದು ಹಿನ್ನೆಲೆಯನ್ನು ಒದಗಿಸುತ್ತದೆ.
ಇತಿಹಾಸ ಎಂದರೆ ಏನು ಎಂಬುದರ ಬಗೆಗೆ ಹಲವು ಬಗೆಯ ವ್ಯಾಖ್ಯಾನಗಳಿವೆ. ಹಾಗಾಗಿ ಈ ವಿಷಯ ಸಂಕೀರ್ಣವಾದದ್ದು. ಇದರ ಅಧ್ಯಯನ ಹಲವು ಆಯಾಮಗಳು, ದೃಷ್ಟಿಕೋನಗಳು ಹಾಗೂ ಪ್ರಭಾವಗಳನ್ನು ಹೊಂದಿರುತ್ತದೆ. ಇತಿಹಾಸಕಾರ ತನ್ನ ಮುಂದಿರುವ ಪುರಾವೆಗಳನ್ನು ಹೇಗೆ ಬಳಸಿಕೊಳ್ಳುತ್ತಾನೆ ಹಾಗೂ ಅವುಗಳನ್ನು ಯಾವ ರೀತಿಯಲ್ಲಿ ರವಾನಿಸುತ್ತಾನೆ ಎಂಬುದು ಮುಖ್ಯವಾದ ಸಂಗತಿಯಾಗುತ್ತದೆ. ಇತಿಹಾಸವನ್ನು ದಾಖಲಿಸುವವರಿಗೂ ಮತ್ತು ಅದನ್ನು ಸ್ವೀಕರಿಸುವವರಿಗೂ ತಮ್ಮದೇ ಆದ ಒಲವು-ನಿಲುವುಗಳಿರುತ್ತವೆ. ಸೈದ್ಧಾಂತಿಕ ನೋಟಗಳೂ ಇರುತ್ತವೆ. ಈ ನಿಟ್ಟಿನಲ್ಲಿ ಜೊಳ್ಳನ್ನು ಕಾಳುಗಳಿಂದ ಬೇರ್ಪಡಿಸುವುದು ತ್ರಾಸದಾಯಕ ಕೆಲಸವೇ ಸರಿ.
ಇತ್ತೀಚೆಗೆ ಆಕ್ಟಿವಿಸ್ಟ್-ಜರ್ನಲಿಸ್ಟ್ ಮತ್ತು ಬರಹಗಾರರೂ ಆಗಿರುವ ನವೀನ್ ಸೂರಿಂಜೆ ಅವರ ಕೃತಿ ʼಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ʼ ಎಂಬ ಕೃತಿ ಕರ್ನಾಟಕದಲ್ಲೇ ಪುರೋಗಾಮಿ ಸಾಹಿತ್ಯದ ಪ್ರಕಟನೆಯಲ್ಲಿ ಅಗ್ರ ಸ್ಥಾನದಲ್ಲಿರುವ ಬೆಂಗಳೂರಿನ ನವಕರ್ನಾಟಕ ಪ್ರಕಾಶನದಿಂದ ಲೋಕಾರ್ಪಣೆಗೊಂಡಿತು. ಇದಕ್ಕೆ ಮುನ್ನುಡಿಯನ್ನು ಪ್ರಸಿದ್ಧ ಇತಿಹಾಸಕಾರರಾದ ಪ್ರೊ. ಪಿ.ವಿ. ನಂಜರಾಜ ಅರಸ್ ಅವರು ಬರೆದಿದ್ದಾರೆ. ಹಿನ್ನುಡಿಯನ್ನು ಬರೆದಿರುವವರು ಪ್ರೊ ಪುರುಷೋತ್ತಮ ಬಿಳಿಮಲೆ.
ಇತ್ತೀಚಿನ ದಶಕಗಳಲ್ಲಿ ನಮ್ಮ ದೇಶದಲ್ಲಿ ಬಲಪಂಥೀಯ ಕೋಮುವಾದ ಪ್ರವರ್ಧಮಾನಕ್ಕೆ ಬಂದಾಗ ಕೋಮುವಾದದ ಸಮರ್ಥಕರಿಗೆ ಸುಗ್ಗಿಯ ಕಾಲ ಒದಗಿ ಬಂದಿತು. ಸಾಮಾಜಿಕ ಜಾಲತಾಣದ ಏರುಹಾದಿಯ ಪಯಣ ಇದಕ್ಕೆ ಇಂಬನ್ನು ನೀಡಿತು. ಅನೇಕ ತೆರನಾಗಿ ಇತಿಹಾಸವನ್ನು ತಿರುಚಲಾಯಿತು, ಸುಳ್ಳು ಮಾಹಿತಿಗಳನ್ನು ಲೀಲಾಜಾಲವಾಗಿ ತಯಾರಿಸಲಾಯಿತು ಹಾಗೂ ಪ್ರಚಾರ ಮಾಡಲಾಯಿತು ಕೂಡ. ಶಿಕ್ಷಣ ವ್ಯವಸ್ಥೆಯ ಚರಿತ್ರೆಯ ಪುಸ್ತಕಗಳನ್ನು ಪರಿಷ್ಕರಿಸಲಾಯಿತು. ಇಂತಹ ಕಾರ್ಯಗಳ ಹಿಂದೆ ಪ್ರಬಲ ಸ್ಥಾಪಿತ ಹಿತಾಸಕ್ತಿಗಳು ಕೆಲಸ ಮಾಡಿದವು, ಮಾಡುತ್ತಿವೆ.
ಪ್ರಸ್ತುತ ಕಾಲಘಟ್ಟದಲ್ಲಿ ನಮ್ಮ ರಾಜ್ಯದಲ್ಲಿ ಟಿಪ್ಪು ಸುಲ್ತಾನನ್ನು ಖಂಡಿಸಿದಷ್ಟು, ಕೆಟ್ಟದಾಗಿ ಬಿಂಬಿಸಲ್ಪಟ್ಟಿದ್ದಷ್ಟು ಬೇರಾವ ರಾಜನನ್ನು ಗುರಿಮಾಡಲಾಗಿಲ್ಲ ಎಂದರೆ ಅತಿಶಯೋಕ್ತಿಯಾಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಆತ ಇಸ್ಲಾಂ ಮತಕ್ಕೆ ಸೇರಿದ್ದ ಎಂಬುದೇ ಆಗಿದೆ. ಆತ ದೊಡ್ಡ ಸಂಖ್ಯೆಯ ಹಿಂದೂ ಪೂಜಾಸ್ಥಳಗಳನ್ನು ಧ್ವಂಸ ಮಾಡಿದ; ದೊಡ್ಡ ಮಟ್ಟದಲ್ಲಿ ಹಿಂದೂಗಳನ್ನು ಮತಾಂತರಿಸಿದ; ಕನ್ನಡ ಭಾಷೆಯ ದ್ವೇಷಿಯಾಗಿದ್ದ; ಪಾರ್ಸಿ ಮತ್ತು ಉರ್ದು ಭಾಷೆಗಳನ್ನು ಹೇರಿದ ಎಂಬ ಸುಳ್ಳು ಮಾಹಿತಿಗಳನ್ನು ಹರಿಬಿಡಲಾಯಿತು. ಇವುಗಳನ್ನು ಅನೇಕ ಸಾಮಾನ್ಯ ಮಂದಿ ನಂಬಿದರು; ಪ್ರಚಾರ ಮಾಡಿದರು ಕೂಡ. ಇಂತಹ ಅಪಪ್ರಚಾರಗಳಿಗೆ ತಕ್ಕ ಉತ್ತರವನ್ನು ನೀಡುತ್ತದೆ ನವೀನ್ ಅವರ ಪುಸ್ತಕ.
ಈ ಪುಸ್ತಕದಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಗೆ ಸಂಬಂಧಿಸಿದಂತೆ ಕ್ರಮವಾಗಿ 14 ಮತ್ತು 54 ಅಧ್ಯಾಯಗಳಿವೆ. ಇವುಗಳನ್ನು 1/8 ಡಿಮಿ ಗಾತ್ರದ 136 ಪುಟಗಳಲ್ಲಿ ಅಡಕಗೊಳಿಸಲಾಗಿದೆ. ಅಂದರೆ ಇದೊಂದು ಸಣ್ಣ ಪುಸ್ತಕ. ಆದರೆ ಇದರಲ್ಲೇ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಕುರಿತಂತೆ ಅನೇಕ ಮಾಹಿತಿಗಳನ್ನು ಸೂಕ್ತ ಆಕರಗಳೊಡನೆ ದಾಟಿಸಿರುವುದು ಗಮನಾರ್ಹ ಸಂಗತಿ. ಈ ಕೃತಿ 36 ಆಕರ ಗ್ರಂಥಗಳನ್ನು ಆಧರಿಸಿದೆ.
ಕರ್ನಾಟಕದ ಕರಾವಳಿ ಮತ್ತು ಮಲಬಾರ್ ಜೊತೆಗಿನ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನನ ಸಂಬಂಧಗಳ ಬಗೆಗೆ ಈ ಪುಸ್ತಕದಲ್ಲಿ ವಿಷಯಗಳನ್ನು ಮಂಡಿಸುವಾಗ ಕೃತಿಕಾರರು ಪೂರ್ವ ಇತಿಹಾಸದತ್ತಲೂ ಕಣ್ಣು ಹಾಯಿಸುತ್ತಾರೆ. ನಮ್ಮ ಕರಾವಳಿಯ ಬಂಗ, ಚೌಟ, ಅಜಿಲ, ನೀಲೇಶ್ವರ ರಾಜವಂಶಸ್ಥರ ಸ್ಥೂಲ ಪ್ರಸ್ತಾಪವನ್ನು ಮಾಡಿದ್ದಾರೆ. ಈ ಪ್ರಯತ್ನ ತಂದೆ-ಮಗನ ಕರಾವಳಿ ಸಂಬಂಧಗಳಿಗೆ ಒಂದು ಹಿನ್ನೆಲೆಯನ್ನು ಒದಗಿಸುತ್ತದೆ.
ಹೈದರ್ ಅಲಿ ತಿರುಪತಿ ದೇವಾಲಯಕ್ಕೆ ಆನೆ ಮತ್ತು ಪಲ್ಲಕ್ಕಿಯನ್ನು ಹಾಗೂ ಕರಾವಳಿಯ ಹಲವು ದೇಗುಲಗಳಿಗೆ ಉಂಬಳಿಯಾಗಿ ಭೂಮಿಯನ್ನು, ವಾರ್ಷಿಕ ಅನುದಾನವನ್ನು ನೀಡಿದ. ಆತ ಧರ್ಮಸಹಿಷ್ಣು ಆಗಿದ್ದ ಎಂಬುದಕ್ಕೆ ಕೆಲವು ನಿದರ್ಶನಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ. ಬಿದನೂರಿನಲ್ಲಿ ಹೈದರ್ ಹೊಸ ಟಂಕಸಾಲೆಯನ್ನು ನಿರ್ಮಿಸಿ ʼಬಹದ್ದೂರಿ ವರಹ ʼಎಂಬ ನಾಣ್ಯವನ್ನು ಚಾಲ್ತಿಗೆ ತರುತ್ತಾನೆ. ಈ ಬಹುದ್ದೂರಿ ನಾಣ್ಯದ ಒಂದು ಪಾರ್ಶ್ವದಲ್ಲಿ ಶಿವ ಪಾರ್ವತಿಯರ ಚಿತ್ರ ಹಾಗೂ ಇನ್ನೊಂದರಲ್ಲಿ ಹೈದರ್ನ ಸಹಿಯಾದʼ ಹೈ ʼಇದ್ದವು. ಅಲ್ಲದೆ ಹೈದರ್ ಅಖಂಡ ಭಾರತದಲ್ಲೇ ಮೊದಲ ಬಾರಿಗೆ ಗೋ ಹತ್ಯಾ ನಿಷೇಧ ಕಾನೂನನ್ನು ತನ್ನ ಆಡಳಿತಾವಧಿಯಲ್ಲಿ ಜಾರಿ ಮಾಡಿದ. ಹೈದರ್ ಮತ್ತು ಟಿಪ್ಪುಗೆ ಮೂಡಬಿದ್ರೆಯ ಪೊನ್ನಚಾರು ಮಠ, ಹವ್ಯಕರ ಸ್ವರ್ಣವಲ್ಲಿ ಮಠ, ಹೊಸನಗರದ ರಾಮಚಂದ್ರಾಪುರ ಮಠ, ಶೃಂಗೇರಿ ಮಠಗಳ ಜೊತೆಯಿದ್ದ ಸೌಹಾರ್ದಯುತ ನಂಟು, ಇಂತಹ ಅನೇಕ ಐತಿಹಾಸಿಕ ಸಂಗತಿಗಳನ್ನು ಸ್ಥೂಲವಾಗಿ ಸೂಕ್ತ ಆಕರಗಳೊಡನೆ ನವೀನ್ ಕಟ್ಟಿಕೊಟ್ಟಿದ್ದಾರೆ.
ಟಿಪ್ಪು ಸುಲ್ತಾನ್ ಹೈದರ್ನ ಅವಸಾನದ ತರುವಾಯ ಕ್ರಿ ಶ 1783ರಲ್ಲಿ ಅರಸು ಪಟ್ಟಕ್ಕೆ ಏರುತ್ತಾನೆ. ಆಗ ಆತನ ವಯಸ್ಸು 33 ವರ್ಷಗಳು. ಆ ಸಮಯಕ್ಕೆ ಆತನಿಗೆ ಸುಮಾರು 17 ವರ್ಷಗಳ ಬ್ರಿಟೀಷ್ ಮತ್ತಿತರ ವಿರೋಧಿ ಅರಸರ ಜೊತೆ ನಡೆಸಿದ ಯುದ್ಧಗಳ ಅನುಭವವಿರುತ್ತದೆ. ಹೈದರ್ ಅನಕ್ಷರಸ್ಥನಾಗಿದ್ದ. ಆದರೆ ಟಿಪ್ಪುವನ್ನು ಓದಿಸಲು ಮುಂದಾದ. ಟಿಪ್ಪುವಿಗೆ ಕನ್ನಡ, ಹಿಂದಿ, ಉರ್ದು, ಪಾರ್ಸಿ, ಅರೆಬಿಕ್ ಮತ್ತು ಫ್ರೆಂಚ್ ಭಾಷೆ ಓದಲು ಮತ್ತು ಬರೆಯಲು ಬರುತ್ತಿತ್ತು.
ಟಿಪ್ಪು ರಾಜನಾದ ತಕ್ಷಣ ಮಂಗಳೂರಿನ ಮೇಲೆ ಬ್ರಿಟೀಷರು ದಾಳಿಯನ್ನು ಮಾಡುತ್ತಾರೆ. ಆತ ಅಲ್ಲಿಗೆ ತೆರಳುತ್ತಾನೆ. ಆ ಸಮಯದಲ್ಲೇ ಟಿಪ್ಪುವನ್ನು ಆತನ ರಾಜನ ಸ್ಥಾನದಿಂದ ಕೆಳಗಿಳಿಸಲು ಶ್ರೀರಂಗಪಟ್ಟಣದಲ್ಲಿ ಸ್ಕೆಚ್ ಹಾಕಲಾಗುತ್ತದೆ. ಆದರೆ ಅದು ವಿಫಲವಾಗುತ್ತದೆ. ಕೊನೆಗೆ ಮಂಗಳೂರಿನಲ್ಲಿ ಬ್ರಿಟೀಷರು ಟಿಪ್ಪುವಿಗೆ ಮಣಿಯುತ್ತಾರೆ. ಸಂಧಾನ ಜರುಗಿ ʼಮಂಗಳೂರು ಒಪ್ಪಂದʼ ಜಾರಿಯಾಗುತ್ತದೆ. ಟಿಪ್ಪುವಿನ ಕರಾವಳಿಯ ಯುದ್ಧದ ಸಮಯದಲ್ಲಿ ಆತ ಕ್ರಿಶ್ಚಿಯನ್ನರ ಮೇಲೆ ಆಕ್ರಮಣ ಹಾಗೂ ಅಲ್ಲಿನ ಚರ್ಚುಗಳನ್ನು ಧ್ವಂಸ ಮಾಡಿದ ಎಂಬ ಆರೋಪಗಳನ್ನು ಕೋಮುವಾದಿ ಇತಿಹಾಸಕಾರರು ಹರಿಯಬಿಟ್ಟಿದ್ದಾರೆ. ಇದೇ ರೀತಿ ಮಲಬಾರ್ ಮತ್ತು ಇತರ ಪ್ರಾಂತ್ಯಗಳಲ್ಲೂ ಟಿಪ್ಪುವಿನಿಂದ ಅನೇಕ ಕುಕೃತ್ಯಗಳು ನಡೆದವೆಂದು ಅಂತಹವರು ಸಾರುತ್ತ ಬಂದಿದ್ದಾರೆ. ಆದರೆ ಇತಿಹಾಸಕಾರ ಪ್ರಾಕ್ಸಿ ಫರ್ನಾಂಡಿಸ್ ಮತ್ತು ಎ ಎಲ್ ಪಿ ಡಿಸೋಜಾ ಅವರಂಥವರು ಇಂತಹ ವೃತ್ತಾಂತಗಳ ಬಗೆಗೆ ಸರಿಯಾದ ಬೆಳಕನ್ನು ಚೆಲ್ಲಿದ್ದಾರೆ. ಅವರು ಮಂಡಿಸಿದ ಕೆಲವು ವಿಷಯಗಳನ್ನು ಈ ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ.
ರಾಜಸತ್ತೆಯ ಕಾಲದಲ್ಲಿ ಇಂತಹ ನಡೆಗಳು ಸಾಮಾನ್ಯವಾಗಿದ್ದವು. ಯಾರು ಅರಸೊತ್ತಿಗೆಯ ವಿರುದ್ಧ ಕಾರ್ಯಾಚರಣೆಗಳನ್ನು ಮಾಡುತ್ತಾರೋ, ದಂಗೆ ಏಳುತ್ತಾರೋ ಅಂತಹವರಿಗೆ ಮರಣ ದಂಡನೆ ಸೇರಿದಂತೆ ಇತರ ಕೆಲವು ಕಠಿಣ ಶಿಕ್ಷೆಗಳನ್ನು ನೀಡಲಾಗುತ್ತಿತ್ತು. ಈ ಪ್ರಕ್ರಿಯೆಗಳಲ್ಲಿ ಮತಧಾರ್ಮಿಕ ಅಂಶ ಗೌಣವಾಗಿತ್ತು. ಆದರೆ ನಮ್ಮ ರಾಜ್ಯದ ಕೋಮುವಾದಿ ಶಕ್ತಿಗಳು ಟಿಪ್ಪುವನ್ನು ಮಾತ್ರ ಖಳನಾಯಕನಂತೆ ಬಿಂಬಿಸುವುದರ ಹಿಂದೆ ಅವರ ಕುಟಿಲ ಉದ್ದೇಶಗಳು ಅನವಾರಣಗೊಳ್ಳುತ್ತವೆ. ಇನ್ನು ಟಿಪ್ಪುವಿನಿಂದ ತುಂಬ ದೊಡ್ಡ ಮಟ್ಟದಲ್ಲಿ ಮತಾಂತರ ಆಯಿತು ಎಂಬ ಅಪಪ್ರಚಾರವನ್ನು ಇಂತಹ ವ್ಯಕ್ತಿಗಳು ಮಾಡುತ್ತಾರೆ. ನಿಜ, ಕೆಲವು ಮತಾಂತರಗಳು ಆಗಿರಬಹುದು. ಆದರೆ ದೊಡ್ಡ ರೀತಿಯಲ್ಲಿ ಜರುಗಿದ್ದಕ್ಕೆ ಇಂತಹವರು ದಾಖಲೆಗಳನ್ನು ಒದಗಿಸುವುದಿಲ್ಲ.

ಟಿಪ್ಪು ಬ್ರಿಟೀಷರ ವಿರುದ್ಧ ಸೆಣಸಾಡುತ್ತಿದ್ದಾಗ, ಮರಾಠರು, ನಿಝಾಮರು ಮತ್ತು ಹಲವು ತುಂಡರಸರು ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ಶಕ್ತಿಯ ಜೊತೆ ಕೈಜೋಡಿಸಿದ್ದರು. ಮೈಸೂರಿನ ಒಡೆಯರ್ ವಂಶಸ್ಥರು ತೆಪ್ಪಗಿದ್ದರು. ತನ್ನ ಹೋರಾಟದ ಸಮಯದಲ್ಲಿ ಟಿಪ್ಪು ತನ್ನ ಇಬ್ಬರು ಮಕ್ಕಳನ್ನು ಕೂಡ ಒತ್ತೆ ಇಡಬೇಕಾದ ಸಂದರ್ಭ ಬಂದಿತು. ಟಿಪ್ಪು ಗತಿಸಿದ ಸುಮಾರು 58 ವರ್ಷಗಳ ತರುವಾಯ ಜರುಗಿದ ʼಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮʼದ ಬೇರುಗಳು ಬಹುಶಃ ಟಿಪ್ಪು ಬ್ರಿಟೀಷರ ವಿರುದ್ಧ ನಡೆಸಿದ ಧೀರೋದಾತ್ತ ಹೋರಾಟಗಳಲ್ಲಿ ಹುದುಗಿರಬಹುದಾದ ಸಾಧ್ಯತೆಗಳಿವೆ.
ಟಿಪ್ಪು ಜೀವಿಸಿದ್ದ ಕಾಲವನ್ನು ʼMercantile Capitalism ʼ ಎಂದು ಕರೆಯಲಾಗುತ್ತದೆ. ಕೆಲವು ವಿಶೇಷಜ್ಞರು ಈ ಕಾಲಘಟ್ಟವನ್ನು ʼಪ್ರಭುತ್ವ ನಿರ್ದೇಶಿತ ವಾಣಿಜ್ಯ ಬಂಡವಾಳಶಾಹಿಯ ಪ್ರಾರಂಭದ ಹಂತʼ ಎಂದೂ ಗುರುತಿಸುತ್ತಾರೆ. ಇಂಗ್ಲೆಂಡಿನಲ್ಲಿ 18ನೇ ಶತಮಾನದಲ್ಲಿ ಕೈಗಾರಿಕ ಕ್ರಾಂತಿ ಜರಗುತ್ತಿತ್ತು. ಫ್ರೆಂಚ್ ಕ್ರಾಂತಿ(1789-1799) ಕೂಡ ಆ ಸಮಯದಲ್ಲಿ ನಡೆಯುತ್ತಿತ್ತು. 1794-1797ರ ಅವಧಿಯಲ್ಲಿ ಫ್ರೆಂಚ್ ಕ್ರಾಂತಿಯಿಂದ ಪ್ರಭಾವಿತನಾದ ಟಿಪ್ಪು ಶ್ರೀರಂಗಪಟ್ಟಣದಲ್ಲಿ Jacobin Club ಅನ್ನು ಸ್ಥಾಪಿಸಿದ. ʼಸ್ವಾತಂತ್ರ್ಯʼದ ಗಿಡವನ್ನು ನೆಟ್ಟ. ತನ್ನನ್ನು Citizen Tippu
ಎಂದು ಬಣ್ಣಿಸಿಕೊಂಡ! ಇವೆಲ್ಲ ಬೆಳವಣಿಗೆಗಳು ಟಿಪ್ಪುವಿನ ಆಡಳಿತದ ಮೇಲೆ ಪರಿಣಾಮಗಳು ಮತ್ತು ಪ್ರಭಾವಗಳನ್ನು ಬೀರಿದ್ದವು ಎಂದು ಅರ್ಥೈಸಬಹುದು. ಟಿಪ್ಪುವಿನ ಅನೇಕ ಪುರೋಗಾಮಿ ಮತ್ತು ಪ್ರಯೋಗಾತ್ಮಕ ಕ್ರಮಗಳ ಹಿಂದೆ ಇಂತಹ ಪ್ರಕ್ರಿಯೆಗಳು ಕೆಲಸ ಮಾಡಿರಬಹುದು. ಹೀಗಾಗಿ ಟಿಪ್ಪು ಕಾಲದ ಕೂಸಾಗಿದ್ದ!
ಒಟ್ಟಿನಲ್ಲಿ ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಅವರ ಪಾತ್ರದ ಬಗೆಗೆ ಬೆಳಕನ್ನು ಚೆಲ್ಲುವ, ಓದುಗರು ಯೋಚಿಸುವಂತೆ, ಪ್ರಜ್ಞಾವಂತಿಕೆಯನ್ನು ಹೆಚ್ಚಿಸಿಕೊಳ್ಳುವಂತೆ, ಅಪಪ್ರಚಾರಗಳನ್ನು ವಿಶ್ಲೇಷಿಸುವಂತೆ ಮಾಡುವ ಈ ಕೃತಿಯನ್ನು ಬರೆದ ನವೀನ್ ಸೂರಿಂಜೆ ಅವರಿಗೆ ಹಾಗೂ ಇದನ್ನು ಪ್ರಕಟಿಸಿದ ನವಕರ್ನಾಟದ ಪ್ರಕಾಶನ ಸಂಸ್ಥೆಗೆ ಹಾರ್ದಿಕ ಅಭಿನಂದನೆಗಳು.

ಮ ಶ್ರೀ ಮುರಳಿ ಕೃಷ್ಣ
ಬರಹಗಾರ, ಸಾಮಾಜಿಕ ಕಾರ್ಯಕರ್ತ




