ಅಮೆರಿಕ ಮತ್ತು ಇರಾನ್ ನಡುವಿನ ಎರಡನೇ ಸುತ್ತಿನ ಶಾಂತಿ ಮಾತುಕತೆಗಳ ಬಗ್ಗೆ ತೀವ್ರ ಅನಿಶ್ಚಿತತೆ ಮೂಡಿರುವಂತೆಯೇ, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಕಳೆದ ಒಂದು ವಾರಕ್ಕೂ ಹೆಚ್ಚು ಕಾಲದಿಂದ ಬಿಗಿ ಭದ್ರತೆಯ ಲಾಕ್‌ಡೌನ್ ಮುಂದುವರಿದಿದೆ. ಮಾತುಕತೆಗಾಗಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಪಾಕಿಸ್ತಾನಕ್ಕೆ ಆಗಮಿಸಿದ್ದರೂ, ಅಮೆರಿಕದೊಂದಿಗೆ ನೇರ ಮಾತುಕತೆ ನಡೆಸುವ ಸಾಧ್ಯತೆಯನ್ನು ಇರಾನ್ ಸಾರಾಸಗಟಾಗಿ ತಳ್ಳಿಹಾಕಿದೆ.
ಈ ಬೆಳವಣಿಗೆಗಳ ನಡುವೆ, ಮುಂದಿನ ಸಂಧಾನ ಪ್ರಕ್ರಿಯೆಗಳು ಯಾವ ಸ್ವರೂಪ ಪಡೆದುಕೊಳ್ಳಲಿವೆ ಎಂಬ ಕುತೂಹಲ ಹಾಗೂ ಗೊಂದಲಗಳು ನಿರ್ಮಾಣವಾಗಿವೆ ಎಂದು ಅಂತಾರಾಷ್ಟ್ರೀಯ ವರದಿಗಳನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇಸ್ಲಾಮಾಬಾದ್ ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ನಗರವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಅತಿ-ಭದ್ರತೆಯ ‘ರೆಡ್ ಜೋನ್’ ಪ್ರದೇಶವನ್ನು ಭದ್ರತಾ ಪಡೆಗಳು ತಮ್ಮ ಸುಪರ್ದಿಗೆ ತೆಗೆದುಕೊಂಡಿವೆ. ಪ್ರಮುಖ ವಾಣಿಜ್ಯ ಕೇಂದ್ರವಾದ ‘ಬ್ಲೂ ಏರಿಯಾ’ದ ಮಾರುಕಟ್ಟೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.
ಇದನ್ನು ಓದಿದ್ದೀರಾ? ಕ್ಯಾಂಪಸ್ ರಾಜಕೀಯಕ್ಕೆ ಶಿಸ್ತಿನ ಕಡಿವಾಣ: ಲಿಂಗ್ಡೋ ಸಮಿತಿ ವರದಿಯ ಆಶಯ ಮತ್ತು ವಾಸ್ತವ
ಇದರಿಂದಾಗಿ ಸ್ಥಳೀಯ ನಿವಾಸಿಗಳು ದಿನನಿತ್ಯದ ಅಗತ್ಯ ವಸ್ತುಗಳ ಕೊರತೆ ಹಾಗೂ ತೀವ್ರ ಅನಿಶ್ಚಿತತೆಯನ್ನು ಎದುರಿಸುವಂತಾಗಿದೆ. ಏಪ್ರಿಲ್ 11 ರಂದು ನಡೆದ ಮೊದಲ ಸುತ್ತಿನ ಮಾತುಕತೆಯು ಯಾವುದೇ ಮಹತ್ವದ ನಿರ್ಣಯವಿಲ್ಲದೆ ಮುಕ್ತಾಯಗೊಂಡಿದ್ದರ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರ ಈ ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ.
ಒಂದೆಡೆ ಇರಾನ್ ನೇರ ಮಾತುಕತೆಯನ್ನು ನಿರಾಕರಿಸುತ್ತಿದ್ದರೆ, ಮತ್ತೊಂದೆಡೆ ಸಂಭವನೀಯ ಮಾತುಕತೆಗಾಗಿ ಅಮೆರಿಕದ ವಿಶೇಷ ಪ್ರತಿನಿಧಿಗಳ ನಿಯೋಗ ಪಾಕಿಸ್ತಾನಕ್ಕೆ ಭೇಟಿ ನೀಡುವ ಬಗ್ಗೆ ಶ್ವೇತಭವನ ಸುಳಿವು ನೀಡಿದೆ. ಉಭಯ ರಾಷ್ಟ್ರಗಳ ನಡುವಿನ ಮಾತುಕತೆಗಳು ಮರುಜೀವ ಪಡೆಯಲಿವೆ ಮತ್ತು ಬಿಕ್ಕಟ್ಟು ಶಮನವಾಗಲಿದೆ ಎಂಬ ಆಶಯವನ್ನು ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನ ವ್ಯಕ್ತಪಡಿಸುತ್ತಿದೆ. ಆದಾಗ್ಯೂ, ಸ್ಪಷ್ಟ ನಿರ್ಧಾರಗಳು ಹೊರಬೀಳುವವರೆಗೂ ಈ ರಾಜತಾಂತ್ರಿಕ ಬಿಕ್ಕಟ್ಟು ಮತ್ತು ಇಸ್ಲಾಮಾಬಾದ್‌ನ ಬಿಗುವಿನ ವಾತಾವರಣ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ವರದಿಯು ತಿಳಿಸಿದೆ.





