ವಿಶೇಷ ನಟನೆ ಮೂಲಕ ಕನ್ನಡಿಗರ ಮನೆಮಾತಾದ ನಟ ಸಾರ್ವಭೌಮ ಡಾ.ರಾಜಕುಮಾರ್ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ವಿಜಯಪುರ ಜಿಲ್ಲೆಯಲ್ಲಿ ವಿಶಿಷ್ಟವಾಗಿ ಆಚರಿಸಲು ಅಧಿಕಾರಿಗಳು ಮುತುವರ್ಜಿವಹಿಸಿ ಕಾರ್ಯಕ್ರಮಕ್ಕೆ ಸಿದ್ಧತೆ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಡಾ.ರಾಜ್ ಕುಮಾರ್ ಜನ್ಮ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮೇರುನಟ ಡಾ.ರಾಜ್ ಕುಮಾರ್ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ಏ.24ರಂದು ಬೆಳಿಗ್ಗೆ 9 ಗಂಟೆಗೆ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ತಿಳಿಸಿದರು.
ಡಾ. ರಾಜ್ ಕುಮಾರ ಈ ನಾಡು ಕಂಡ ನೆಚ್ಚಿನ ನಟರಾಗಿದ್ದಾರೆ. ಕನ್ನಡಪರ ಹೋರಾಟಗಳಲ್ಲಿ ಭಾಗಿಯಾಗಿ ನಾಡು-ನುಡಿಗಾಗಿ ಮಹತ್ತರ ಸೇವೆ ಸಲ್ಲಿಸಿದ್ದಾರೆ. ಇವರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ವಿವಿಧ ಪಾತ್ರಗಳಲ್ಲಿ ಮನಮಿಡಿಯುವಂತೆ ನಟಿಸಿ ಕಲಾರಾಧಕರ ಹೃದಯ ಗೆದ್ದಿದ್ದಾರೆ. ಇವರ ಕಾರ್ಯಕ್ರಮ ಯಶಸ್ಸಿಗೆ ವಿವಿಧ ಇಲಾಖೆಗಳ ಅಧಿಕಾರಿಗಳು ವಹಿಸಿರುವ ಕೆಲಸ ನಿರ್ವಹಿಸಿ, ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಯುವಂತೆ ವ್ಯವಸ್ಥೆ ಮಾಡಲು ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ.ರಾಜ್ ಕುಮಾರ್ ಅವರ ಅಭಿನಯದ ಚಲನಚಿತ್ರಗಳ ಗೀತಗಾಯನ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಲು ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು. ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಿಸಿ ವಿತರಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ, ಕಾರ್ಯಕ್ರಮದ ಅವಧಿಯಲ್ಲಿ ನಿರಂತರ ವಿದ್ಯುತ್ ಪೂರೈಕೆ, ಪೊಲೀಸ್ ಭದ್ರತೆ ವ್ಯವಸ್ಥೆ ಸೇರಿ ಕಾರ್ಯಕ್ರಮವನ್ನು ಯಾವುದೇ ಗೊಂದಲಗಳಿಲ್ಲದೇ ಆಚ್ಚುಕಟ್ಟಾಗಿ ನಿರ್ವಹಿಸಲು ಕಲಾವಿದರ ಸಮನ್ವಯ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: ವಿಜಯಪುರ | ಕಾರ್ಮಿಕ ಹೋರಾಟಗಳ ಹತ್ತಿಕ್ಕುವ ಪ್ರಯತ್ನ; ಬಿಜೆಪಿ ಸರ್ಕಾರಗಳ ವಿರುದ್ಧ CITU ಆಕ್ರೋಶ
ಸಭೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ವೀರಯ್ಯ ಸಾಲಿಮಠ, ಮಹಾನಗರ ಪಾಲಿಕೆಯ ಉಪ ಆಯುಕ್ತ ಮಹಾವೀರ ಬೋರಣ್ಣವರ, ಸಹಾಯಕ ತೋಟಗಾರಿಕಾ ನಿರ್ದೇಶಕ ಭಗವಂತ ಜಿಗಜಿಣಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ಧೈವಾಡಿ ಎಂ.ಸಿ ಮುಲ್ಲಾ, ಅಡಿವೆಪ್ಪ ಸಾಲಗಲ್, ಸುರೇಶ ಬಿಜಾಪುರ, ಫಯಾಜ್ ಕಲಾದಗಿ, ಶರಣು ಸಬರದ, ಮಂಜುಳಾ ಅಂಗಡಿ, ಸುರೇಶ್ ಬಬಲೇಶ್ವರ, ಸೋಮನಗೌಡ ಕಲ್ಲೂರ, ಭೀಮರಾಯ ಜಿಗಜಿಣಗಿ ಸೇರಿದಂತೆ ವಾರ್ತಾ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.





