ಉತ್ತರ ಪ್ರದೇಶ ಮತ್ತು ಹರಿಯಾಣದ ಬಿಜೆಪಿ ನೇತೃತ್ವದ ಸರ್ಕಾರಗಳು ನೋಯಿಡಾ, ಗ್ರೇಟರ್ ನೋಯಿಡಾ, ಗುರುಗ್ರಾಮ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಕಾರ್ಮಿಕರ ಹೋರಾಟಗಳ ಮೇಲೆ ನಡೆಸುತ್ತಿರುವ ಕ್ರೂರ ದಮನವನ್ನು CITU ಖಂಡಿಸುತ್ತದೆ ಎಂದು ಸಂಘಟನೆಯ ರಾಜ್ಯ ಸಮಿತಿ ಉಪಾಧ್ಯಕ್ಷ ಆರ್ ಎಸ್ ಬಸವರಾಜ ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ಮಾಡಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಇದು ಕೇವಲ ಕೈಗಾರಿಕಾ ವಿವಾದವಲ್ಲ. ಇಲ್ಲಿ ಸರ್ಕಾರದ ಯಂತ್ರಾಂಗ, ಕಾರ್ಪೊರೇಟ್ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ಕಾರ್ಮಿಕರ ಹಕ್ಕುಗಳನ್ನು ತೀವ್ರತರವಾಗಿ ಕುಗ್ಗಿಸುತ್ತಿದೆ. ಎನ್ ಸಿ ಆರ್ ಹರಿಯಾಣ (ಮನೆಸರ್, ಪಾಣಿಪತ್ ಸೋನಿಪತ್), ರಾಜಸ್ಥಾನ (ದಿವಾಡಿ, ಇಮ್ರಾನ ಅಲ್ವರ), ಗುಜರಾತ್ (ಸುರತ್, ಹಜಿರಾ), ಬಿಹಾರ (ಬರೌನಿ) ಮತ್ತು ಇತರ ಕೈಗಾರಿಕಾ ಕೇಂದ್ರಗಳ ಕಾರ್ಮಿಕರು ಅನುಭವಿಸುತ್ತಿರುವ ಉದ್ಯೋಗಗಳಲ್ಲಿ ಗುತ್ತಿಗೆ ಕಾರ್ಮಿಕ ವ್ಯವಸ್ಥೆ, ಅತಿ ಕಡಿಮೆ ವೇತನ, ಅಮಾನವೀಯ ಕೆಲಸದ ಪರಿಸ್ಥಿತಿಗಳು, ಕಾರ್ಮಿಕ ವಿರೋಧಿ ಲೇಬರ್ ಕೋಡ್‌ಗಳು ಮತ್ತು ಸರ್ಕಾರ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿಯ ವಿರುದ್ಧ ಏಕೀಕೃತ ಹೋರಾಟ ನಡೆಸಲಾಗುತ್ತದೆ” ಎಂದರು.
CITU ವಿಜಯಪುರ ಜಿಲ್ಲಾ ಸಂಚಾಲಕ ಲಕ್ಷಣ ಹಂದ್ರಾಳ್ ಮಾತನಾಡಿ, “ಏಪ್ರಿಲ್ 9ರಂದು ನೋಯಿಡಾ ಫೇಸ್ -2 ನಲ್ಲಿ ಆರಂಭವಾದ ಈ ಹೋರಾಟ ವೇಗವಾಗಿ ವ್ಯಾಪಿಸಿದೆ. ನೋಯಿಡಾದಲ್ಲೇ ಸುಮಾರು 40 ರಿಂದ 50,000 ಸಾವಿರ ಕಾರ್ಮಿಕರನ್ನು ಒಳಗೊಂಡು, ಎನ್ ಸಿ ಆರ್ ನಲ್ಲಿ 6-8 ಪ್ರಮುಖ ಕೈಗಾರಿಕಾ ಪ್ರದೇಶಗಳು ಮತ್ತು ಹದಿನೈದಕ್ಕೂ ಹೆಚ್ಚು ಕೈಗಾರಿಕಾ ವಲಯಗಳಿಗೆ ವಿಸ್ತರಿಸಿದೆ. ಇದು ದೇಶ ವ್ಯಾಪಿ ಹೋರಾಟಗಳ ಭಾಗವಾಗಿದೆ. ಬರೌನಿ, ಪಾಣಿಪತ್, ಸೂರತ್ ಮತ್ತು ಮನೆ ಸರದ ಹೋರಾಟಗಳು ಸೇರಿದಂತೆ ಫೆಬ್ರುವರಿ 12ರ ಐತಿಹಾಸಿಕ ಮುಷ್ಕರದ ಮುಂದುವರಿಕೆಯಾಗಿದೆ. ಈ ಏಕತೆ ಈಗಾಗಲೇ ಉತ್ತರ ಪ್ರದೇಶ ಸರ್ಕಾರವನ್ನು ವೇತನ ಪರಿಷ್ಕರಣೆ ಘೋಷಿಸಲು ಒತ್ತಾಯಿಸಿದೆ. ಹೋರಾಟವೇ ಫಲ ನೀಡುತ್ತದೆ ಎಂಬುದನ್ನು ಇದು ಮತ್ತೊಮ್ಮೆ ಸಾಬೀತುಪಡಿಸಿದೆ. ಆದಾಗ್ಯೂ, ಈ ವೇತನ ಹೆಚ್ಚಳ ನಾಟಕೀಯವಾಗಿದೆ. ಅಗತ್ಯವಾದ ಮಟ್ಟಕ್ಕಿಂತ ಬಹಳ ಕಡಿಮೆ ಇದೆ. ಉತ್ತರ ಪ್ರದೇಶ ಮತ್ತು ಹರಿಯಾಣದ ಕಾರ್ಮಿಕರು ದೆಹಲಿಯಂತೆ ಸಮಾನ ಜೀವನ ವೆಚ್ಚ ಇದ್ದರೂ ಕಡಿಮೆ ವೇತನ ಪಡೆಯುತ್ತಿದ್ದಾರೆ. ಏರುತ್ತಿರುವ ಬೆಲೆ ಏರಿಕೆಯ ನಡುವೆ ತಿಂಗಳಿಗೆ 26,000 ಕನಿಷ್ಠ ವೇತನದ ಬೇಡಿಕೆ ಕೇವಲ ಬೇಡಿಕೆಯಲ್ಲ ಅದು ಅವಶ್ಯಕತೆ. ಈ ಸ್ಫೋಟವು ವರ್ಷಗಳ ವೇತನ ಸ್ಥಗಿತ, 2014ರಿಂದ ಕನಿಷ್ಠ ವೇತನ ಪರಿಷ್ಕರಣೆ ಇಲ್ಲದಿರುವುದು, ಬೆಲೆ ಏರಿಕೆ ಮತ್ತು ಟ್ರೇಡ್ ಯೂನಿಯನ್ ಚಟುವಟಿಕೆಗಳ ದಮನದ ಫಲವಾಗಿದೆ. ಈಗ ಕಾರ್ಮಿಕರು ಮೌನವನ್ನು ಮುರಿದು ತಮ್ಮ ಹಕ್ಕುಗಳನ್ನು ಪ್ರತಿಪಾದಿಸುತ್ತಿದ್ದಾರೆ” ಎಂದು ಹೇಳಿದರು.
ಇದನ್ನೂ ಓದಿ: ವಿಜಯಪುರ | ಬೇಡಿಕೆ ಈಡೇರಿಸುವಂತೆ ಆಗ್ರಹ: ಗ್ರಾಮ ಪಂಚಾಯಿತಿ ನೌಕರರ ಪ್ರತಿಭಟನೆ
ಈ ವೇಳೆ ಅಂಗನವಾಡಿ ಸಂಘಟನೆಯ ಮುಖಂಡರಾದ ಸುನಂದ ನಾಯಕ್, ಭಾರತಿ ವಾಲಿ, ಬಿಸಿಯೂಟ ಸಂಘಟನೆಯ ಸುಮಂಗಲ ಆನಂದ್ ಶೆಟ್ಟಿ, ಕಾಳಮ್ಮ ಬಡಿಗೇರ್, ಗ್ರಾಮ ಪಂಚಾಯಿತಿ ನೌಕರರ ಸಂಘಟನೆಯ ಲಾಲಮ್ಮದ್ ಶೇಕ್, ಶಿವಾನಂದ ಅನಿಮಿ, ಶಿವಾನಂದ್ ಬಿರಾದಾರ್, ಸುರೇಖಾ ವಾಗೊರೆ, ಭಾರತಿ ಮಠಪತಿ, ಕಟ್ಟಡ ಕಾರ್ಮಿಕ ಸಂಘಟನೆಯ ಈರಣ್ಣ ಬೆಳ್ಳುಂಡಗಿ, ಅಣ್ಣಾರಾಯ ಈಳಿಗೆರ ಮುಂತಾದವರು ಇದ್ದರು.





