- ಪ್ರಧಾನಿ ರೋಡ್ ಶೋನಲ್ಲಿ 40 ಟನ್ ಹೂವು ಬಳಕೆ
- ರಾಶಿ ಹೂವು ಜನರ ಕೈ ಸೇರಿದ್ದರ ಹಿಂದಿನ ಅಸಲಿಯತ್ತು ಬಯಲು
ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ನಡೆಸಿದ ರೋಡ್ ಶೋಗೆ ಬಳಕೆಯಾದ 40 ಟನ್ ಹೂವುಗಳು ಸಾರ್ವಜನಿಕರು ತಂದಿದ್ದಲ್ಲ, ಬದಲಿಗೆ ಬಿಜೆಪಿಗರೇ ಮಾರುಕಟ್ಟೆಯಿಂದ ಹೂವು ಖರೀದಿಸಿ ಜನರಿಗೆ ಹಂಚಿದ್ದು ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಮಾತುಗಳಿಗೆ ಪುಷ್ಟಿ ನೀಡುವುಂತೆ ಬಿಜೆಪಿಯ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೂಗಳನ್ನು ರಾಶಿ ಹಾಕಿರುವ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಹುಭಾಷಾ ನಟ ಪ್ರಕಾಶ್ ರಾಜ್ ಸೇರಿದಂತೆ ಹಲವರು ಬಿಜೆಪಿಗರಿಗೆ ಛೀಮಾರಿ ಹಾಕಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆ ಪ್ರಧಾನಿ ಮೋದಿ ಕಳೆದ ಶನಿವಾರ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದರು. ಈ ರೋಡ್ ಶೋನಲ್ಲಿ ಮೋದಿ ಅವರ ಸ್ವಾಗತಕ್ಕೆ 40 ಟನ್ ಹೂಗಳು ಬಳಕೆಯಾಗಿದೆ ಎಂದು ವರದಿಯಾಗಿತ್ತು. ಸಾರ್ವಜನಿಕರು ತಮ್ಮ ಸ್ವಂತ ಹಣದಲ್ಲಿ ಹೂವು ಖರೀದಿಸಿ ದಾರಿಯುದ್ದಕ್ಕೂ ಚೆಲ್ಲಿ ಪ್ರಧಾನಿಗಳಿಗೆ ಭವ್ಯ ಸ್ವಾಗತ ನೀಡಿದರು ಎಂದೆಲ್ಲ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಗಿಟ್ಟಸಿಕೊಂಡಿದ್ದರು. ಆದರೆ, ಬೆಂಗಳೂರಿನ ಬೀದಿಗಳಲ್ಲಿ ಕಿಲೋ ಮೀಟರ್ಗಟ್ಟಲೇ ಬಿದ್ದ 40 ಟನ್ ಹೂಗಳನ್ನು ಸಾರ್ವಜನಿಕರು ತಮ್ಮ ಸ್ವಂತ ಹಣದಲ್ಲಿ ಖರೀದಿಸಿ ತಂದಿದ್ದಲ್ಲ, ಬದಲಿಗೆ ಬಿಜೆಪಿ ನಾಯಕರು ಖರೀದಿಸಿ ಜನರಿಗೆ ಹಂಚಿದ್ದು ಎಂಬ ಅಂಶ ಬಹಿರಂಗಗೊಂಡಿದೆ.
ಕೇಂದ್ರ ಸಚಿವೆ, ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಹೂವಿನ ರಾಶಿಯನ್ನು ಪರಿಶೀಲಿಸುತ್ತಿರುವ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ʼಆಲ್ಟ್ ನ್ಯೂಸ್ʼ ಮುಖ್ಯಸ್ಥ ಮೊಹಮ್ಮದ್ ಝುಬೈರ್, “ಜನ ಸಾಮಾನ್ಯರು ತಮ್ಮ ಸ್ವಂತ ಹಣ ಖರ್ಚು ಮಾಡಿ ಹೂವು ಚೆಲ್ಲಿ ಮೋದಿ ಅವರನ್ನು ಸ್ವಾಗತಿಸಿದರು ಎಂದು ಮಾಧ್ಯಮಗಳು ಬಿಂಬಿಸುತ್ತಿವೆ. ಆದರೆ, ಬಿಜೆಪಿ ಕಾರ್ಯಕರ್ತರಿಗೆ ಹೂವು ಹಂಚಿದ್ದು ಯಾರು ಎಂಬುದನ್ನು ತಿಳಿಯಲು ಈ ವಿಡಿಯೋವನ್ನು ನೋಡಿ” ಎಂದಿದ್ದಾರೆ.
ಝುಬೈರ್ ಅವರ ಈ ಟ್ವೀಟ್ ಅನ್ನು ಬಳಸಿ ಬಿಜೆಪಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪ್ರಕಾಶ್ ರಾಜ್, “ನಾಚಿಕೆಗೇಡು, ಮಹಾಸುಳ್ಳನ ರಂಗತಯಾರಿ” ಎಂದು ಛೀ ಮಾರಿ ಹಾಕಿದ್ದಾರೆ.
ಮೋದಿ ರೋಡ್ ಶೋಗೆ ಬಳಕೆಯಾದ ಹೂವಿನ ರಾಶಿಯ ಬಳಿ ಶೋಭಾ ಕರಂದ್ಲಾಜೆ ಇರುವ ವಿಡಿಯೋ ವೈರಲ್ ಆಗುತ್ತಲೇ ಆಕ್ರೋಶಗೊಂಡ ನೆಟ್ಟಿಗರು, “ಬಿಜೆಪಿ ನಾಯಕರು ಹೂವನ್ನು ಮಾತ್ರ ಖರೀದಿಸಿಲ್ಲ, ದಾರಿಯುದ್ದಕ್ಕೂ ಆ ಹೂಗಳನ್ನು ಚೆಲ್ಲಲು ಜನರನ್ನು ಕೂಡ ದುಡ್ಡು ಕೊಟ್ಟು ಕರೆ ತಂದಿದ್ದಾರೆ” ಎಂದು ಆರೋಪಿಸಿದ್ದಾರೆ.