ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಶರುವಾಗಿದೆ. ಎಲ್ಲ ಪಕ್ಷಗಳು ಅಂತಿಮ ಸುತ್ತಿನ ಪ್ರಚಾರಕ್ಕೆ ತಂತ್ರ ರೂಪಿಸುತ್ತಿವೆ. ಆದರೆ, ಈ ಚುನಾವಣೆಯಲ್ಲಿ ತನ್ನ ಪ್ರಾಬಲ್ಯ ತೋರಿಸಲು ಮುಂದಾಗಿದ್ದ ಆಮ್ ಆದ್ಮಿ ಪಕ್ಷ (ಎಎಪಿ) ಸದ್ದಿಲ್ಲದಂತಾಗಿದೆ. ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಪ್ರಚಾರಕ್ಕೆ ಗೈರುಹಾಜರಾಗಿದ್ದು, ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹವನ್ನು ಕುಗ್ಗಿಸಿದಂತೆ ಕಾಣುತ್ತಿದೆ.
ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ಬಳಿಕ ಎಲ್ಲ ಪಕ್ಷಗಳ ರಾಷ್ಟ್ರ ಮತ್ತು ಸ್ಥಳೀಯ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ, ಎಎಪಿ ನಾಯಕ ಮತ್ತು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ರಾಜ್ಯಕ್ಕೆ ಒಮ್ಮೆಯಷ್ಟೆ ಭೇಟಿ ನೀಡಿದ್ದಾರೆ. ಅದೂ, ಮಾರ್ಚ್ ತಿಂಗಳಿನಲ್ಲಿ ದಾವಣಗೆರೆಯಲ್ಲಿ ನಡೆದ ಸಮಾವೇಶದಲ್ಲಿ ಭಾಗಿಯಾಗಿದ್ದರಷ್ಟೇ. ಎಎಪಿ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆದ ನಂತರ ಅದು ಎದುರಿಸುತ್ತಿರುವ ಮೊದಲ ಚುನಾವಣೆಯಿದು. ಆದರೂ, ಪಕ್ಷದ ನಾಯಕರು ರಾಜ್ಯದತ್ತ ಮುಖಮಾಡಿಲ್ಲ.
ಕೇಜ್ರಿವಾಲ್ ದೆಹಲಿಯಲ್ಲಾಗುತ್ತಿರುವ ಬೆಳವಣಿಗೆಗಳಿಂದಾಗಿ ಅಲ್ಲಿಯೇ ಸಿಕ್ಕಿಕೊಂಡಿದ್ದಾರೆ ಎನ್ನಲಾಗಿದೆ. ಅವರ ಅನುಪಸ್ಥಿತಿಯು ರಾಜ್ಯದ ಎಎಪಿ ಕಾರ್ಯಕರ್ತರಲ್ಲಿ ಚುನಾವಣಾ ಸಡಗರವನ್ನು ಕುಗ್ಗಿಸಿದೆ. ರಾಜ್ಯ ನಾಯಕರು ತಮ್ಮ ಕಾರ್ಯಕರ್ತರ ಉತ್ಸಾಹವನ್ನು ಹೆಚ್ಚಿಸುವ, ಚುನಾವಣೆಯಲ್ಲಿ ಉತ್ಸುಕತೆಯಲ್ಲಿ ಕೆಲಸ ಮಾಡುವಂತೆ ಪ್ರೇರೇಪಿಸುವ ಕೆಲಸ ಮಾಡುತ್ತಿದ್ದಾರೆ. ಒಂದಷ್ಟು ಕ್ಷೇತ್ರಗಳನ್ನಾದರೂ ಗೆಲ್ಲಬೇಕು ಮತ್ತು ತಮ್ಮ ಪ್ರಭಾವವನ್ನು ವೃದ್ಧಿಸಬೇಕೆಂದು ಶ್ರಮಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಡಾ ಕೆ.ಸುಧಾಕರ್: ಅಪಾಯಕಾರಿ ರಾಜಕೀಯ ಶೈಲಿ
“ನಮ್ಮದು ಒಂದು ಸಣ್ಣ ಪಕ್ಷ. ದೆಹಲಿ ಎಎಪಿ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ನೋಡಿಕೊಳ್ಳುತ್ತಿದ್ದ ಇಬ್ಬರು ಪ್ರಮುಖ ಮಂತ್ರಿಗಳು ಜೈಲಿನಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದೆಹಲಿಯಲ್ಲಿ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು ಮತ್ತು ಅಲ್ಲಿಯ ಜನರು ನಿರಾಶೆಗೊಳ್ಳದಂತೆ ನೋಡಿಕೊಳ್ಳುವುದು ಕೇಜ್ರಿವಾಲ್ ಅವರ ಮೊದಲ ಆಧ್ಯತೆಯಾಗಿದೆ,” ಎಂದು ರಾಜ್ಯ ಎಎಪಿ ಸಂಚಾಲಕ ಪೃಥ್ವಿ ರೆಡ್ಡಿ ಹೇಳಿದ್ದಾರೆ.
“ಸಂಸದರಾದ ಸಂಜಯ್ ಸಿಂಗ್, ರಾಘವ್ ಚಡ್ಡಾ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹಾಗೂ ಇತರ ಎಎಪಿ ನಾಯಕರು ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಕೇಜ್ರಿವಾಲ್ ಗೈರಾಗಿದ್ದರೂ, ಅವರ ತತ್ವ-ಆದರ್ಶಗಳು ನಮ್ಮೊಂದಿಗಿವೆ. ಹೀಗಾಗಿ, ಕಾರ್ಯಕರ್ತರು ಉತ್ಸಾಹದಿಂದಲೇ ಕೆಲಸ ಮಾಡುತ್ತಿದ್ದಾರೆ,” ಎಂದು ಪೃಥ್ವಿ ರೆಡ್ಡಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಕರ್ನಾಟಕದ ಮೇಲೆ ಬಿಜೆಪಿಯವರು ಮುಗಿಬಿದ್ದಿರುವ ಕಾರಣ ವಿವರಿಸಿದ ಸಿದ್ದರಾಮಯ್ಯ