- ಶಿರಸಿಯಲ್ಲೂ ರೋಡ್ ಶೋ ನಡೆಸಲಿರುವ ಶಿವರಾಜ್ ಕುಮಾರ್
- ಸಿದ್ದರಾಮಯ್ಯ ನಮ್ಮ ಮೈಸೂರು ಪ್ರಾಂತ್ಯದವರು ಎಂದ ಹಿರಿಯ ನಟ
ಚಿತ್ರ ನಿರ್ಮಾಪಕಿ ಗೀತಾ ಕಾಂಗ್ರೆಸ್ ಪಕ್ಷ ಸೇರಿದ ಬೆನ್ನಲ್ಲೇ ಅವರ ಪತಿ, ಸ್ಯಾಂಡಲ್‌ವುಡ್‌ನ ಹಿರಿಯ ನಟ ಶಿವರಾಜ್ ಕುಮಾರ್, ಕೈ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ.
ಏಪ್ರಿಲ್ 30ರಂದು ಸೊರಬ ವಿಧಾನಸಭಾ ಕ್ಷೇತ್ರದ ಆನವಟ್ಟಿಯಲ್ಲಿ ತಮ್ಮ ಸಂಬಂಧಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರ ರೋಡ್ ಶೋ ನಡೆಸುವ ಮೂಲಕ ಪ್ರಚಾರ ಕಾರ್ಯ ಆರಂಭಿಸಿರುವ ಶಿವಣ್ಣ, ಇಬ್ಬರು ಮಾಜಿ ಮುಖ್ಯಮಂತ್ರಿಗಳು ಸೇರಿ ಕಾಂಗ್ರೆಸ್‌ನ ಅನೇಕ ಅಭ್ಯರ್ಥಿಗಳ ಪರ ಮತ ಯಾಚಿಸುವುದಾಗಿ ತಿಳಿಸಿದ್ದಾರೆ.
ಸೋಮವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಶಿವಣ್ಣ, “ಮಧು ಬಂಗಾರಪ್ಪ ನನ್ನ ಸಂಬಂಧಿ ಎನ್ನುವುದಕ್ಕಿಂತ ಆತ ನನ್ನ ಸ್ನೇಹಿತ, ಹೀಗಾಗಿ ಆತನ ಪರ ಚುನಾವಣಾ ಪ್ರಚಾರ ಕೈಗೊಂಡಿದ್ದೇನೆ. ಸಾಗರ ಕೂಡ ಪಕ್ಕದ ಕ್ಷೇತ್ರವಾದ ಕಾರಣಕ್ಕೆ ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಅವರ ಪರ ರೋಡ್ ಶೋ ನಡೆಸುತ್ತಿದ್ದೇನೆ. ಶಿರಸಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಭಿಮಣ್ಣ ನಾಯಕ್ ನಮ್ಮ ಕುಟುಂಬ ಆತ್ಮೀಯರು ಹೀಗಾಗಿ ಅವರ ಪರವೂ ಪ್ರಚಾರ ಮಾಡಲಿದ್ದೇನೆ. ಜಗದೀಶ್ ಶೆಟ್ಟರ್ ಅವರು ಕೂಡ ನಮ್ಮ ಕುಟುಂಬದ ಆಪ್ತರು, ಅವರ ಪರ ಹುಬ್ಬಳ್ಳಿಯಲ್ಲಿ ಪ್ರಚಾರ ನಡೆಸಲಿದ್ದೇನೆ. ಅಶೋಕ್ ಖೇಣಿ ನನಗೆ ಒಳ್ಳೆಯ ಸ್ನೇಹಿತರು, ಅವರ ಪರ ಬೀದರ್ ಕ್ಷೇತ್ರದಲ್ಲಿ ರೋಡ್ ಶೋ ಮಾಡಲಿದ್ದೇನೆ. ಅಪ್ಪಾಜಿಯವರ ಕಾಲದಿಂದಲೂ ಸಿದ್ದರಾಮಯ್ಯನವರು ನಮ್ಮ ಕುಟುಂಬಕ್ಕೆ ಬೇಕಾದವರು, ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಮೈಸೂರು ಪ್ರಾಂತ್ಯದವರು, ಹೀಗಾಗಿ ಮೇ 4ರಂದು ಅವರ ಪರ ವರುಣಾ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದೇನೆ. ಜನರ ಸ್ಪಂದನೆ ಕೂಡ ಚೆನ್ನಾಗಿದೆ” ಎಂದಿದ್ದಾರೆ.
ನಟ ಸುದೀಪ್ ಬಿಜೆಪಿ ಪರ ಪ್ರಚಾರ ಮಾಡುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಶಿವಣ್ಣ, “ಪ್ರತಿಯೊಬ್ಬರಿಗೂ ಅವರದ್ದೇ ಆದ ಸಿದ್ಧಾಂತಗಳಿರುತ್ತವೆ. ನಾನು ಯಾರನ್ನು ವಿರೋಧಿಸಿ ಮಾತನಾಡುವವನಲ್ಲ. ನನಗೆ ಬೇಕಾದವರನ್ನು ಬೆಂಬಲಿಸುತ್ತಿದ್ದೇನೆ ಅಷ್ಟೇ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚುನಾವಣಾ ಪ್ರಚಾರ | ಸುದೀಪ್ ನೋಡಲು ಮುಗಿಬಿದ್ದ ಅಭಿಮಾನಿಗಳಿಗೆ ಲಾಠಿ ಏಟು
ಈ ಬಾರಿಯ ಚುನಾವಣೆಯಲ್ಲಿ ನಟ ಸುದೀಪ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿಯ ಹಲವು ಅಭ್ಯರ್ಥಿಗಳ ಪ್ರಚಾರ ಮಾಡುತ್ತಿದ್ದು, ಮತ್ತೊಬ್ಬ ಸ್ಟಾರ್ ನಟ ದರ್ಶನ್, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಇದೀಗ ಶಿವಣ್ಣ ಕೂಡ ಚುನಾವಣಾ ಕಣಕ್ಕೆ ಧುಮುಕಿದ್ದು, ಕೈ ಅಭ್ಯರ್ಥಿಗಳ ಬೆಂಬಲಕ್ಕೆ ನಿಂತಿದ್ದಾರೆ.