- ಚಾಮರಾಜನಗರ ಕ್ಷೇತ್ರದಲ್ಲಿ ಸೋಮಣ್ಣ ಪರ ಸುದೀಪ್ ರೋಡ್ ಶೋ
- ಸುದೀಪ್ ಅಭಿಮಾನಿಗಳ ಮೇಲೆ ಮೂರನೇ ಬಾರಿಗೆ ಲಾಠಿ ಪ್ರಹಾರ
ಈ ಬಾರಿಯ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿಗೆ ಬೆಂಬಲ ಘೋಷಿಸಿರುವ ನಟ ಕಿಚ್ಚ ಸುದೀಪ್ ಶುಕ್ರವಾರ ಚಾಮರಾಜನಗರಕ್ಕೆ ಭೇಟಿ ನೀಡಿದ್ದು, ಸಚಿವ ವಿ ಸೋಮಣ್ಣ ಪರ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಇದೇ ಪ್ರಚಾರದ ವೇಳೆ ಸುದೀಪ್ ಅಭಿಮಾನಿಯೊಬ್ಬ ಆಕಸ್ಮಿಕವಾಗಿ ಸೋಮಣ್ಣ ಅವರನ್ನು ಕಾರಿನ ಮೇಲಿಂದ ಬೀಳಿಸಿರುವ ಘಟನೆ ನಡೆದಿದೆ.
ಚಾಮರಾಜನಗರ ಕ್ಷೇತ್ರದ ಸಂತೇಮರಹಳ್ಳಿಯಲ್ಲಿ ಸುದೀಪ್ ಮತ್ತು ಸೋಮಣ್ಣ ಕಾರಿನ ಮೇಲೆ ನಿಂತು ರೋಡ್ ಶೋ ನಡೆಸುತ್ತಿದ್ದ ವೇಳೆ ಅಭಿಮಾನಿಯೊಬ್ಬ ಏಕಾಏಕಿಯಾಗಿ ಅವರಿದ್ದ ಕಾರಿನ ಮೇಲೇರಿ ಸುದೀಪ್ ಅವರ ಬಳಿ ಬಂದಿದ್ದಾನೆ. ಪಕ್ಕದಲ್ಲಿದ್ದ ಭದ್ರತಾ ಸಿಬ್ಬಂದಿ ಆತನನ್ನು ಕೆಳಕ್ಕಿಳಿಸಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಆಯತಪ್ಪಿದ ಆತ ಆಸರೆಗಾಗಿ ಸೋಮಣ್ಣನವರನ್ನು ಹಿಡಿದುಕೊಂಡಿದ್ದಾನೆ. ಆತ ಕೆಳಕ್ಕೆ ಬೀಳುತ್ತಲೇ ಸೋಮಣ್ಣ ಅವರು ಕೂಡ ನಿಯಂತ್ರಣ ಸಿಗದೆ ಕಾರಿನ ರೂಫ್ ಮೇಲೆ ಬಿದ್ದಿದ್ದಾರೆ. ಕೊನೆಗೆ ಸುದೀಪ್, ಸೋಮಣ್ಣನವರ ಕೈ ಹಿಡಿದು ಮೇಲಕ್ಕೆತ್ತಿದ್ದಾರೆ.
ಹುಚ್ಚಾಟ ಪ್ರದರ್ಶಿಸಿದ ಅಭಿಮಾನಿಯನ್ನು ಭದ್ರತಾ ಸಿಬ್ಬಂದಿ ಸುರಕ್ಷಿತವಾಗಿ ಕೆಳಗಿಳಿಸದೆ ಅಮಾನುಷವಾಗಿ ಕಾರಿನ ಮೇಲಿಂದ ಕೆಳಕ್ಕೆ ನೂಕಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಭಿಮಾನಿಯ ಅತಿರೇಕಕ್ಕೆ ಸುದೀಪ್ ಸ್ಥಳದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂತೇಮರಹಳ್ಳಿಯ ವೃತ್ತದ ಬಳಿ ಈ ಘಟನೆ ನಡೆದಿದ್ದು, ಸುದೀಪ್ ಅವರನ್ನು ನೋಡಲು ಮುಗಿಬಿದ್ದ ಅಭಿಮಾನಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಗುರುವಾರ ರಾಯಚೂರಿನಲ್ಲೂ ಸುದೀಪ್ ಅಭಿಮಾನಿಗಳ ಮೇಲೆ ಭದ್ರತಾ ಸಿಬ್ಬಂದಿಯಿಂದ ಲಾಠಿ ಪ್ರಹಾರ ನಡೆದಿತ್ತು. ವಾರದ ಹಿಂದೆ ಕೂಡ್ಲಿಗಿಯಲ್ಲಿ ಸುದೀಪ್ ಬಿಜೆಪಿ ಅಭ್ಯರ್ಥಿ ಪರ ರೋಡ್ ಶೋ ನಡೆಸಿದ್ದಾಗಲೂ ಜನರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು.