- ಬೆಂಗಳೂರಿನ ವಸಂತನಗರ ಮುಖ್ಯರಸ್ತೆಯ ಬಳಿ ಶನಿವಾರ ರಾತ್ರಿ ನಡೆದ ಘಟನೆ
- ರಾತ್ರಿ ವಾಕಿಂಗ್ ಮಾಡುತ್ತಿದ್ದ ದಂಪತಿಗಳ ಪೈಕಿ ಪ್ರೇಮಾ ಮೃತ್ಯು ; ನಟ ಪೊಲೀಸ್ ವಶಕ್ಕೆ
ಸ್ಯಾಂಡಲ್‌ವುಡ್ ನಟ ನಾಗಭೂಷಣ ಅವರು ಸಂಚರಿಸುತ್ತಿದ್ದ ಕಾರು ದಂಪತಿಗೆ ಡಿಕ್ಕಿಯಾಗಿದ್ದು, ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಂಗಳೂರಿನ ವಸಂತನಗರ ಮುಖ್ಯರಸ್ತೆಯ ಬಳಿ ಸೆ.30ರ ಶನಿವಾರ ರಾತ್ರಿ ದಂಪತಿಯು ನಡೆದುಕೊಂಡು ಹೋಗುವಾಗ ನಾಗಭೂಷಣ ಅವರ ಕಾರು ಡಿಕ್ಕಿಯಾಗಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದ್ದು, ಘಟನೆಗೆ ಕಾರಣನಾಗಿರುವ ಹಿನ್ನೆಲೆಯಲ್ಲಿ ನಟ ನಾಗಭೂಷಣ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕೃಷ್ಣ (58) ಹಾಗೂ ಅವರ ಪತ್ನಿ ಪ್ರೇಮಾ (48) ಅವರು ರಾತ್ರಿ ವಾಕಿಂಗ್ ಮಾಡುವಾಗ ನಟ ನಾಗಭೂಷಣ ಅವರು ಚಲಾಯಿಸುತ್ತಿದ್ದ ಕಾರು ಡಿಕ್ಕಿಯಾಗಿದೆ. ಮೊದಲು ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿದ್ದು, ನಂತರ ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ದಂಪತಿಗೆ ಕಾರು ಡಿಕ್ಕಿಯಾಗಿದೆ.
ಅಪಘಾತದ ತೀವ್ರತೆಗೆ ಪ್ರೇಮಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿರುವ ಕೃಷ್ಣ ಅವರನ್ನು ಬನ್ನೇರುಘಟ್ಟದಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ನಡುವೆ ನಾಗಭೂಷನ್ ಕಾರು ಚಲಾಯಿಸುವಾಗ ಮದ್ಯ ಸೇವನೆ ಮಾಡಿರುವ ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರು ವೈದ್ಯಕೀಯ ಪರೀಕ್ಷೆ ನಡೆಸಿದ್ದು, ನಟ ಮದ್ಯ ಸೇವಿಸಿರಲಿಲ್ಲ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರೇಮಾ ಮತ್ತು ಕೃಷ್ಣ ದಂಪತಿಯ ಪುತ್ರ ಪಾರ್ಥ ಕೆ. ಅವರು ದೂರು ನೀಡಿದ್ದಾರೆ.