ಜುಲೈ 2 ರಂದು ನಡೆವ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ತಮ್ಮ ಪರವಾದ ನಿರ್ಣಯಕ್ಕೆ ಬರಲು ನೈತಿಕ ಬೆಂಬಲ ತುಂಬುವ ಸಲುವಾಗಿ ಚನ್ನರಾಯಪಟ್ಟಣದ 13 ಹಳ್ಳಿಗಳ ಸಂತ್ರಸ್ತರು “ನಮ್ಮ ಬದುಕು ಈ ಮಣ್ಣಿನಲ್ಲಿದೆ, ಈ ಮಣ್ಣಿನ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ” ಎಂದು ನಾಡ ಕಛೇರಿ ಮುಂಭಾಗದ ಧರಣಿ ಸ್ಥಳದಲ್ಲಿ ಉಪವಾಸ ಕೂರಲಿದ್ದಾರೆ. ಸಂತ್ರಸ್ತರ ಜೊತೆ ಹಿರಿಯ ಗಾಂಧಿವಾದಿಗಳಾದ ಸಂತೋಷ್ ಕೌಲಗಿಯವರು ನಾಡಿನ ಜನರ ಪ್ರತಿನಿಧಿಯಾಗಿ ನಮ್ಮ ಜೊತೆ ಉಪವಾಸ ಕೂರಲಿದ್ದಾರೆ ಎಂದು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ತಿಳಿಸಿದೆ.
ರಾಜ್ಯದ ಜನ ನಮ್ಮ ಧ್ವನಿಗೆ ಸ್ಪಂದಿಸಿದ ರೀತಿಗೆ ನಾವು ಅಭಾರಿಯಾಗಿರುತ್ತೇವೆ. ದೇವನಹಳ್ಳಿ ಚಲೋ ನಾಗರೀಕ ಸಮಾಜದಲ್ಲಿ ಇನ್ನೂ ಕೂಡಾ ತಾಯ್ತನದ ಪ್ರೀತಿ ಉಳಿಸಿಕೊಂಡಿದೆ ಎಂಬುದಕ್ಕೆ ಬಹುದೊಡ್ಡ ನಿದರ್ಶನ. ಭೂಮಿ ತಾಯಿಯ ಕರುಳ ಬಳ್ಳಿಯ ಸಂಬಂಧದಲ್ಲಿ ಬೆಸೆದ ಎಲ್ಲ ರೈತ, ಕಾರ್ಮಿಕ, ದಲಿತ, ಮಹಿಳಾ ಸಂಘಟನೆಗಳು ಒಟ್ಟಿಗೆ ಬಂದು ಸೇರಿ ರೈತರ ಉಳಿವಿಗಾಗಿ ಜೊತೆ ನಿಂತದ್ದನ್ನು ನಾವು ಸ್ಮರಿಸಲೇಬೇಕು ಎಂದು ಸಮಿತಿ ತಿಳಿಸಿದೆ.
ದೇವನಹಳ್ಳಿ ಚಲೋದ ನಂತರ ನಡೆದ ಬೆಳವಣಿಗೆಯಲ್ಲಿ ಸರ್ಕಾರವು ರೈತರೊಂದಿಗೆ ಹಾಗೂ ಹೋರಾಟಗಾರರೊಂದಿಗೆ ಅತ್ಯಂತ ದಾರುಣವಾಗಿ ವರ್ತಿಸಿದ ಪರಿಣಾಮ ಇಡೀ ರಾಜ್ಯಕ್ಕೆ ರಾಜ್ಯವೇ “ನಿಮ್ಮ ಜೊತೆಗೆ ನಾವಿದ್ದೇವೆ” ಎಂದು ಜೊತೆಗೆ ನಿಂತುಬಿಟ್ಟಿದೆ. ಪ್ರಗತಿಪರ ಚಿಂತಕರು, ಚಿತ್ರನಟರೂ, ಸಾಹಿತಿಗಳು, ಕಲಾವಿದರೂ ಸೇರಿದಂತೆ ಎಲ್ಲರೂ ಸರ್ಕಾರದ ಮೇಲೆ ಒತ್ತಡ ತಂದ ಪರಿಣಾಮ ಜುಲೈ 4ರಂದು ಸರ್ಕಾರ ರೈತ ಮುಖಂಡರ, ಹೋರಾಟಗಾರರ ಸಭೆಯನ್ನು ಕರೆಯಲಾಗಿದೆ ಎಂದು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ತಿಳಿಸಿದೆ.
ಇದನ್ನು ಓದಿದ್ದೀರಾ? ದೇವನಹಳ್ಳಿ ರೈತ ಹೋರಾಟ: ಜುಲೈ 4ರಂದು ಬೃಹತ್ ‘ನಾಡ ಉಳಿಸಿ ಸಮಾವೇಶ’
ಜುಲೈ 4ರ ಸಭೆ 1190ದಿನಗಳ ನಿರಂತರ ಹೋರಾಟಕ್ಕೆ ಒಂದು ನಿರ್ಣಾಯಕ ಘಟ್ಟವಾದ್ದರಿಂದ ಅಂದು ನಮ್ಮ ಭವಿಷ್ಯ ನಿರ್ಧಾರವಾಗಲಿದೆ. ಈ ಹಿನ್ನೆಲೆಯಲ್ಲಿ, ಜುಲೈ 2 ರಂದು ನಂದಿಬೆಟ್ಟದಲ್ಲಿ ನಡೆಯುತ್ತಿರುವ ವಿಶೇಷ ಸಂಪುಟ ಸಭೆಯಲ್ಲಿ”ದೇವನಹಳ್ಳಿ ಭೂಸ್ವಾಧೀನದ ಸಮಸ್ಯೆ” ವಿಶೇಷ ಅಜೆಂಡಾ ಆಗಬೇಕು ಮತ್ತು ದೇವನಹಳ್ಳಿಯ ಮೂಲಕವೇ ಬೆಟ್ಟಕ್ಕೆ ಹೋದವರು ಭೂಸ್ವಾಧೀನ ಮಾಡುವುದಿಲ್ಲವೆಂಬ ನಿರ್ಣಯ ಮಾಡಿಯೇ ವಾಪಸ್ಸಾಗುವಂತೆ ಸಂಪುಟ ಸಚಿವರುಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ದೇವನಹಳ್ಳಿ ರೈತರ ಸಂಕಷ್ಟಕ್ಕೆ ಮಿಡಿದ ರಾಜ್ಯದ ಜನರ ಆಶಯದಂತೆ ತಾವು ಕೂಡ ನಮ್ಮ ಪರವಾದ ನಿರ್ಣಯಕ್ಕೆ ಬರುತ್ತೀರಿ ಎಂದು ಆಸೆ ಕಣ್ಣುಗಳಿಂದ ದೇವನಹಳ್ಳಿಯ ಜನ ಮತ್ತು ರೈತಪರ ಮನಸ್ಸುಗಳು ಕಾಯುತ್ತಿರುತ್ತವೆ ಎಂದು ಹೋರಾಟ ಸಮಿತಿ ತಿಳಿಸಿದೆ.
ಜುಲೈ 4ರಂದು ನಡೆಯುವ ಸಭೆಯಲ್ಲಿ ರೈತ ನಿಯೋಗದ ಮತ್ತು ಸಂಯುಕ್ತ ಹೋರಾಟ ಕರ್ನಾಟಕದ ಮುಖಂಡರ ಸಭೆ ಕರೆದು, ಸಮಸ್ಯೆಯ ಕುರಿತು ಚರ್ಚಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ, ರೈತರನ್ನು ಬೆಂಬಲಿಸಿ ಫ್ರೀಡಂ ಪಾರ್ಕಿನಲ್ಲಿ ಬೃಹತ್ “ನಾಡ ಉಳಿಸಿ ಸಮಾವೇಶ”ವನ್ನು ಸಂಘಟಿಸಲಾಗುತ್ತಿದೆ. ಆದ್ದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ಸಮಾನ ಮನಸ್ಕರು ದೊಡ್ಡ ಸಂಖ್ಯೆಯಲ್ಲಿ ಈ ಸಮಾವೇಶದಲ್ಲಿ ಭಾಗವಹಿಸುವಂತೆ ಹೋರಾಟ ಸಮಿತಿ ಮನವಿ ಮಾಡಿದೆ.