- ಚುನಾವಣಾ ಆಯೋಗದ ನೀತಿ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡ ಬಿಬಿಎಂಪಿ
- ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಪಿ ಅರ್ ರಮೇಶ್, ರಮೇಶ್ ಬಾಬು ಆಗ್ರಹ
ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಕಾರ್ಯಕ್ರಮಕ್ಕೆ ಸ್ವತಃ ಬಿಬಿಎಂಪಿ ಹಣ ಖರ್ಚು ಮಾಡಿದ್ದು, ಈ ಮೂಲಕ ಕಾನೂನು ಉಲ್ಲಂಘನೆಯಾಗಿದೆ. ಚುನಾವಣಾ ಆಯೋಗದ ನೀತಿ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ಪಿ ಅರ್ ರಮೇಶ್ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಅವರು ಈ ಕುರಿತು ಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
“ವಿಧಾನಸಭೆ ಚುನಾವಣೆ ನಿಮಿತ್ತ ನೀತಿ ಸಂಹಿತೆ ಜಾರಿಯಲ್ಲಿದೆ. ಯಾವುದೇ ಸರ್ಕಾರಿ ಕಾರ್ಯಕ್ರಮವನ್ನು ಸರ್ಕಾರಿ ವೆಚ್ಚದಲ್ಲಿ ನಡೆಸಲು ಅವಕಾಶವಿಲ್ಲ. ಇಂತಹ ಯಾವುದೇ ಕಾರ್ಯಕ್ರಮಕ್ಕೆ ಚುನಾವಣಾ ಆಯೋಗದ ಪೂರ್ವಾನುಮತಿ ಬೇಕಾಗುತ್ತದೆ. ಆದರೆ, ನರೇಂದ್ರ ಮೋದಿ ಅವರು ಬಿಜೆಪಿಯ ಪ್ರಚಾರಕ್ಕಾಗಿ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ರ‍್ಯಾಲಿ ನಡೆಸಿದ್ದು, ಸುಮಾರು ಮೂರು ಕೋಟಿ ರೂಪಾಯಿಗಳ ಸಾಮಗ್ರಿಗಳನ್ನು ಬಳಸಿಕೊಳ್ಳಲಾಗಿದೆ. ಇದರ ಜೊತೆಗೆ ಐದು ಕಿಲೋ ಮೀಟರ್ ರಸ್ತೆ ವ್ಯಾಪ್ತಿಯಲ್ಲಿ ಚುನಾವಣಾ ರ‍್ಯಾಲಿಯ ವ್ಯವಸ್ಥೆಗೆ ಬಿಬಿಎಂಪಿ ಹಾಗೂ ಇತರ ಸರ್ಕಾರಿ ಸಂಸ್ಥೆಗಳ ಸೇವೆ ಬಳಸಿಕೊಳ್ಳಲಾಗಿದೆ” ಎಂದು ಪಿ ಅರ್ ರಮೇಶ್ ಮತ್ತು ರಮೇಶ್ ಬಾಬು ದೂರಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಚಿತ್ತಾಪುರ ಕ್ಷೇತ್ರ | ರೌಡಿ ರಾಠೋಡ್‌ನಿಂದ ಬಿಜೆಪಿ ಮಾನ ಬೀದಿಗೆ, ಸಂಭಾವಿತ ಖರ್ಗೆ ವಿಧಾನಸೌಧಕ್ಕೆ
“ಅನಧಿಕೃತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಇಲ್ಲದೆ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಸಾಮಗ್ರಿ ಬಳಸುವುದರ ಮೂಲಕ ಬಿಜೆಪಿ ಬಿಬಿಎಂಪಿಗೆ ಪಾವತಿ ಮಾಡಬೇಕಾಗಿದ್ದ ಅನುಮತಿ ಶುಲ್ಕವನ್ನು ಪಾವತಿ ಮಾಡದೆ ಬಿಬಿಎಂಪಿಗೆ ವಂಚಿಸಿದೆ” ಎಂದು ಆರೋಪಿಸಿದ್ದಾರೆ.
“ನೀತಿ ಸಂಹಿತೆ ಅನ್ವಯ ಬಿಜೆಪಿ, ರಸ್ತೆ ಬದಿಯಲ್ಲಿ ಮತ್ತು ರಸ್ತೆಯ ಉದ್ದಕ್ಕೂ ಮತ್ತು ಪ್ರಮುಖ ಸ್ಥಳಗಳಲ್ಲಿ ಪಕ್ಷದ ವಿವಿಧ ಪ್ರಚಾರ ಸಾಮಗ್ರಿಗಳು, ಭಾವಚಿತ್ರ, ರಾಜಕೀಯ ಪಕ್ಷದ ಕಮಾನುಗಳು, ಅಭ್ಯರ್ಥಿಗಳ ಭಾವಚಿತ್ರ, ಪಕ್ಷದ ಪ್ರಚಾರ ಚಿಹ್ನೆ ಅಳವಡಿಸಿದ್ದು, ಯಾವುದೇ ಪ್ರಚಾರ ಸಾಮಗ್ರಿಗೆ ಪೂರ್ವಾನುಮತಿ ಪಡೆದಿರುವುದಿಲ್ಲ. ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳನ್ನು ಯಾವುದೇ ಅನುಮತಿ ಇಲ್ಲದೆ ವಿರೂಪಗೊಳಿಸಲಾಗಿದೆ” ಎಂದಿದ್ದಾರೆ.
“ಸದರಿ ಪ್ರಚಾರ ಕಾರ್ಯಕ್ಕೆ ಸರ್ಕಾರಿ ಸಂಸ್ಥೆಗಳು ಯಾವುದೇ ಹಣ ವೆಚ್ಚ ಮಾಡಲು ಅಥವಾ ಈ ಸಂಸ್ಥೆಗಳ ವತಿಯಿಂದ ಉಸ್ತುವಾರಿ ಮಾಡಲು ಅವಕಾಶ ಇರುವುದಿಲ್ಲ. ಇದು ಒಂದು ರಾಜಕೀಯ ಪಕ್ಷದ ಕಾರ್ಯಕ್ರಮವಾಗಿದ್ದು ಇದಕ್ಕೆ ತಗಲುವ ಎಲ್ಲ ಖರ್ಚು-ವೆಚ್ಚಗಳನ್ನು ಕಾರ್ಯಕ್ರಮ ಆಯೋಜನೆ ಮಾಡುವ ರಾಜಕೀಯ ಪಕ್ಷಗಳು ಭರಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.
ಕೂಡಲೇ ಚುನಾವಣಾ ಆಯೋಗವು ಬಿಜೆಪಿಯ ಅನುಮತಿಯಿಲ್ಲದ ಇಂತಹ ಕಾನೂನು ಬಾಹಿರವಾದ ಕ್ರಮಗಳನ್ನು ನಿಯಂತ್ರಿಸಬೇಕು ಮತ್ತು ಬಿಬಿಎಂಪಿ ಅಧಿಕಾರಿಗಳು ಬಿಜೆಪಿ ಪರವಾಗಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಹಾಯ ಮಾಡದಂತೆ ನಿರ್ದೇಶನ ನೀಡಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.