ಬೆಳಗಾವಿಯಲ್ಲಿ ಕೆಎಸ್ಆರ್ಟಿಸಿ ಬಸ್ ನಿರ್ವಾಹಕ ಮಹದೇವ ಹುಕ್ಕೇರಿ ಮೇಲೆ ಹಲ್ಲೆ ಮಾಡಿರುವ ದುಷ್ಕರ್ಮಿಗಳ ಮೇಲೆ ಉಗ್ರ ಕ್ರಮಕೈಗೊಳ್ಳಲು ಹಾಗೂ ನಿರ್ವಾಹಕರ ಮೇಲೆ ಫೋಕ್ಸೋ ಪ್ರಕರಣವನ್ನು ದಾಖಲಿಸಿರುವ ದುಷ್ಟ ಪೊಲೀಸ್ ಅಧಿಕಾರಿಗಳ ಕ್ರಮವನ್ನು ಖಂಡಿಸಿ ದಾವಣಗೆರೆ ಘಟಕದ ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಒತ್ತಾಯಿಸಿದರು.
ನಿರ್ವಾಹಕರ ಮೇಲೆ ಹಲ್ಲೆ ನಡೆಸಿದವರ ಮೇಲೆ ಕಠಿಣ ಕ್ರಮಕೈಗೊಳ್ಳುವ ಬಗ್ಗೆ ಒತ್ತಾಯಿಸಿ ಬೆಳಿಗ್ಗೆ 11ಗಂಟೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎದುರಿನ ದಾವಣಗೆರೆ ತಹಶೀಲ್ದಾರರ ಕಚೇರಿಗೆ ತೆರಳಿ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್, ಹೊಸ ಬಸ್ ನಿಲ್ದಾಣ, ದಾವಣಗೆರೆ ವಿಭಾಗದ ವತಿಯಿಂದ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, “ಕರ್ತವ್ಯ ನಿರತ ಬಸ್ ನಿರ್ವಾಹಕರ ಜೊತೆಗೆ 10-15 ಜನರ ಮರಾಠಿ ಪುಂಡರು ಪುಂಡಾಟಿಕೆ ಮೆರೆದು ಪಂಥಬಾಳೆಕುಂದ್ರಿಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿರುವುದು ಅಪರಾಧ. ಈ ಬಗ್ಗೆ ತಕ್ಷಣ ದುಷ್ಕರ್ಮಿಗಳ ಮೇಲೆ ಕ್ರಮ ಕೈಗೊಳ್ಳಬೇಕಾದ ಪೊಲೀಸರು ಅವರ ವಿರುದ್ಧವೇ ಪೋಕ್ಸೋ ಕೇಸ್ ದಾಖಲು ಮಾಡಿದ್ದಾರೆ. ಇದು ದುಷ್ಕರ್ಮಿಗಳಿಗೆ ಇನ್ನಷ್ಟು ಅಪರಾಧಕ್ಕೆ ದಾರಿ ಮಾಡಲಿದೆ. ತಕ್ಷಣ ಪೊಲೀಸರು ಹಲ್ಲೆಗೊಳಗಾದ ನಿರ್ವಾಹಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪ್ರಜೆಗಳ ರಕ್ಷಿಸುವ ಸಂವಿಧಾನಕ್ಕೆ ಅಪಾಯ, ಸಂವಿಧಾನ ಯಾನ ಕಾರ್ಯಕ್ರಮದಲ್ಲಿ ಚಿಂತನೆ
ಪ್ರತಿಭಟನೆಯಲ್ಲಿ ಎಐಟಿಯುಸಿ ಮುಖಂಡ ಉಮೇಶ್ ಆವರಗೆರೆ, ಸುರೇಶ್, ಪ್ರಕಾಶ್, ರಮೇಶ್ ಸೇರಿದಂತೆ ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್ ಸದಸ್ಯರು ಪಾಲ್ಗೊಂಡಿದ್ದರು.