ಲೋಕಸಭೆ ಚುನಾವಣೆ ಹತ್ತಿರದಲ್ಲಿರುವಾಗಲೇ, ಚಿಕ್ಕೋಡಿಯಲ್ಲಿ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳ ಶಕ್ತಿ ಪ್ರದರ್ಶನ ಜೋರಾಗಿದೆ. ಮಾಜಿ ಸಂಸದ ರಮೇಶ್ ಕತ್ತಿ, ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ ಬಹಿರಂಗವಾಗಿಯೇ ಟಿಕೆಟ್ ಬೇಡಿಕೆ ಇಟ್ಟಿದ್ದಾರೆ. ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಇರುವಾಗಲೇ ಟಿಕೆಟ್‌ಗಾಗಿ ಪೈಪೋಟಿ ಶುರುವಾಗಿದೆ.
ಬಿಜೆಪಿ ಟಿಕೆಟ್ ಸಿಗದಿದ್ರೆ ರಮೇಶ್ ಕತ್ತಿ, ಕಾಂಗ್ರೆಸ್ ಪಾಳಯಕ್ಕೆ ಸೇರುತ್ತಾರೆ ಎಂಬ ಮಾತುಗಳು ಸಹ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಮಾಜಿ ಸಂಸದ ರಮೇಶ್ ಕತ್ತಿ, ಕಳೆದ ಬಾರಿ ತಮಗೆ ಅನ್ಯಾಯವಾಗಿದೆ. ರಾಜ್ಯಸಭಾ ಸದಸ್ಯ ಸ್ಥಾನ, ಎಂಎಲ್ಸಿ ಸ್ಥಾನದಿಂದಲೂ ವಂಚಿತನಾಗಿದ್ದೇನೆ. ಈ ಬಾರಿ ನನಗೆ ಬಿಜೆಪಿ ಟಿಕೆಟ್ ನೀಡುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ತಮಗೇ ಈ ಬಾರಿಯೂ ಟಿಕೆಟ್ ಸಿಗುವ ವಿಶ್ವಾಸದಲ್ಲಿ, ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಲೋಕಸಭೆ ಬಿಜೆಪಿ ಟಿಕೆಟ್ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ರಮೇಶ್ ಕತ್ತಿ, “ರಾಜಕಾರಣ ನಿಂತ ನೀರಲ್ಲ, ಅದು ಹರಿಯುತ್ತಿರಬೇಕು. ಒಂದೇ ಕಡೆ ನಿಂತರೆ ದುರ್ವಾಸನೆ ಬರುತ್ತೆ,” ಎಂಬ ಹೇಳಿಕೆ ನೀಡಿದ್ದು, ಒಂದು ವೇಳೆ ಬಿಜೆಪಿ ಟಿಕೆಟ್ ನೀಡದಿದ್ದರೆ, ಕಾಂಗ್ರೆಸ್ ಸೇರುತ್ತಾರೆ ಎಂಬ ಅನುಮಾನವನ್ನು ದಟ್ಟವಾಗಿಸಿದೆ.
ರಮೇಶ್ ಕತ್ತಿ ಕಾಂಗ್ರೆಸ್ ಸೇರುವ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಲಕ್ಷ್ಮಣ್ ಸವದಿ, “ಬಿಜೆಪಿ ಅಣ್ಣಾಸಾಹೇಬ್ ಜೊಲ್ಲೆಗೆ ಟಿಕೆಟ್ ಕೊಡುತ್ತೋ, ರಮೇಶ್ ಕತ್ತಿಗೆ ಟಿಕೆಟ್ ಕೊಡುತ್ತೋ ಗೊತ್ತಿಲ್ಲ. ರಮೇಶ್ ಕತ್ತಿ ಕಾಂಗ್ರೆಸ್ ಸೇರೋದಾದ್ರೆ, ಆ ವಿಚಾರವನ್ನು ಕಾಂಗ್ರೆಸ್ ನಾಯಕರಿಗೆ ಕನ್ವೇ ಮಾಡುವ ಕೆಲಸ ಮಾಡ್ತೀನಿ,” ಎಂದಿದ್ದಾರೆ.
ಇತ್ತೀಚೆಗೆ ರಮೇಶ್ ಕತ್ತಿ ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ನಿವಾಸಕ್ಕೆ ಭೇಟಿ ನೀಡಿ ನಂದಗಾಂವ ಗ್ರಾಮದಲ್ಲಿ ಪಿಕೆಪಿಎಸ್ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದರು.
ನಾಯಕರ ಈ ಎಲ್ಲ ಹೇಳಿಕೆಗಳ ಮಧ್ಯೆ, ಚಿಕ್ಕೋಡಿ ಬಿಜೆಪಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಅಕ್ಟೋಬರ್ 8ರಂದು ತಮ್ಮ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿ, ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಈ ಟಿಕೆಟ್ ಪೈಪೋಟಿಗೆ ಪ್ರತಿಕ್ರಿಯಿಸಿರುವ ಸಂಸದ ಅಣ್ಣಾಸಾಹೇಬ್ ಜೊಲ್ಲೆ, “ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ಇಲ್ಲ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ. ಕಾದು ನೋಡಬೇಕು, ಯಾರ ಬೇಕಾದರೂ ಟಿಕೆಟ್ ಕೇಳಬಹುದು, ಕಳೆದ ಬಾರಿ 20 ಜನ ಕೇಳಿದ್ರು. ಆಗ, ನನಗೇ ಟಿಕೆಟ್ ಸಿಕ್ಕಿತು. ಈ ಬಾರಿಯೂ ಟಿಕೆಟ್ ಕೇಳೋದು ಎಲ್ಲರಿಗೂ ಹಕ್ಕಿದೆ,” ಎಂದಿದ್ದಾರೆ.
ಕಾಂಗ್ರೆಸ್ ಸೇರಲು ರಮೇಶ್ ಕತ್ತಿ ಚಿಂತನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯಕ್ತಿಕ ವಿಚಾರ, ನಾನಂತೂ ಅವರೇನು ಹೇಳಿದ್ದಾರೆ ಕೇಳಿಲ್ಲ. ರಮೇಶ್ ಕತ್ತಿ ಬಿಜೆಪಿಯಲ್ಲೇ ಉಳಿತಾರೆ, ಬಿಜೆಪಿಯಲ್ಲೇ ಇರ್ತಾರೆ ಎಂಬ ಆತ್ಮವಿಶ್ವಾಸ ಇದೆ ಎಂದಿದ್ದಾರೆ.
ಒಟ್ಟಿನಲ್ಲಿ, ಚಿಕ್ಕೋಡಿ ಲೋಕಸಭಾ ಬಿಜೆಪಿ ಟಿಕೆಟ್ ಗೆ ಈಗಿಂದಲೇ ಪೈಪೋಟಿ, ಶಕ್ತಿ ಪ್ರದರ್ಶನಗಳು ಶುರುವಾಗಿದ್ದು, ಟಿಕೆಟ್ ಯಾರ ಪಾಲಾಗಲಿದೆ ಎಂಬ ಕುತೂಹಲ ಮೂಡಿಸಿದೆ.