ಬಸವಧರ್ಮ ಪೀಠದ ನಿಷ್ಠಾವಂತ ಸ್ವಾಭಿಮಾನಿ ಶರಣರ ಬಳಗದಿಂದ ಇದೇ ಅಕ್ಟೋಬರ್ 21, 22 ರಂದು ಎರಡು ದಿನಗಳ ಕಾಲ ಬಸವಕಲ್ಯಾಣದಲ್ಲಿ 2ನೇ ಸ್ವಾಭಿಮಾನಿ ಕಲ್ಯಾಣ ಪರ್ವ ಆಯೋಜಿಸಲಾಗಿದೆ ಎಂದು ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೂಜ್ಯ ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
ಬೀದರ್ ನಗರದ ಬಸವ ಮಂಟಪದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ” ಬಸವಕಲ್ಯಾಣದ ಎಂ.ಎಂ.ಬೇಗ್ ಕಲ್ಯಾಣ ಮಂಟಪದಲ್ಲಿ ಕಳೆದ ವರ್ಷ ಮೊದಲನೇ ಸ್ವಾಭಿಮಾನಿ ಕಲ್ಯಾಣ ಪರ್ವ ನಡೆಸಲಾಗಿತ್ತು. ಈ ಬಾರಿಯೂ ಅದೇ ಕಲ್ಯಾಣ ಮಂಟಪದಲ್ಲಿ ಎರಡನೇ ವರ್ಷದ ಸ್ವಾಭಿಮಾನಿ ಕಲ್ಯಾಣ ಪರ್ವ ಆಯೋಜಿಸಲಾಗಿದೆ” ಎಂದರು.
ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ್ ಅತಿವಾಳ ಮಾತನಾಡಿ, ” ಕೂಡಲ ಸಂಗಮ ಬಸವ ಧರ್ಮ ಪೀಠಾಧ್ಯಕ್ಷರಾದ ಮಾತೆ ಗಂಗಾದೇವಿಯವರು ಕೆಲವು ಜಂಗಮಮೂರ್ತಿ ಹಾಗೂ ಲಕ್ಷಾಂತರ ಬಸವ ಅನುಯಾಯಿಗಳನ್ನು ದೂರವಿಟ್ಟು ಯಾರದೋ ಕೈಗೊಂಬೆಯಾಗಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಕಳೆದ ವರ್ಷ ಎಲ್ಲರೂ ಒಗ್ಗೂಡಿ ಕಲ್ಯಾಣ ಪರ್ವ ಆಯೋಜಿಸೋಣ ಎಂದು ಸಂಧಾನ ಮಾಡಿಕೊಂಡು ಮೋಸ ಮಾಡಿದರು. ಹೀಗಾಗಿ ನಾವು ಸ್ವಾಭಿಮಾನಿ ಕಲ್ಯಾಣ ಪರ್ವ ಆಯೋಜಿಸಬೇಕಾಯಿತು. ಈ ವರ್ಷವೂ ಅದೇ ಪರಿಸ್ಥಿತಿ ಮುಂದುವರೆದ ಕಾರಣ ಪ್ರತ್ಯೇಕ ಕಲ್ಯಾಣ ಪರ್ವ ಆಯೋಜಿಸಲಾಗುತ್ತಿದೆ” ಎಂದರು.
“ಎರಡು ದಿನಗಳ ಕಾಲ ನಡೆಯುವ ಸ್ವಾಭಿಮಾನಿ ಕಲ್ಯಾಣ ಪರ್ವದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಬಸವ ಭಕ್ತರು ಪಾಲ್ಗೊಳ್ಳುತ್ತಾರೆ. ಸಮಾರಂಭಕ್ಕೆ ಆಗಮಿಸುವ ಎಲ್ಲರಿಗೂ ಊಟ, ವಸತಿ ಸೌಲಭ್ಯ ಮಾಡಲಾಗುವುದು. ಸ್ವಾಭಿಮಾನಿ ಕಲ್ಯಾಣ ಪರ್ವ ಆಯೋಜಕ ಪೂಜ್ಯರು, ಮಾತಾಜೀ ಹಾಗೂ ಬಸವ ಅನುಯಾಯಿಗಳು ಗ್ರಾಮಗಳಿಗೆ ತೆರಳಿ ಪ್ರಚಾರ ನಡೆಸುತ್ತಾರೆ, ಸಾರ್ವಜನಿಕರು, ಬಸವ ಭಕ್ತರಿಗೆ ದೇಣಿಗೆ ನೀಡಲು ಅವಕಾಶವಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಯುವಕನ ಕಿರುಕುಳಕ್ಕೆ ಮನನೊಂದು ಬಾಲಕಿ ಆತ್ಮಹತ್ಯೆ; ಒಂದು ತಿಂಗಳ ನಂತರ ಪ್ರಕರಣ ದಾಖಲು
ಬೀದರ್ ಬಸವ ಮಂಟಪ್ ಪೂಜ್ಯ ಸತ್ಯದೇವಿ ಮಾತಾಜೀ ಮಾತನಾಡಿ, “ನಾವು ಬಸವ ಧರ್ಮ ಪೀಠ ಬಿಟ್ಟು ಹೊರಹೋಗಿಲ್ಲ, ಪೂಜ್ಯ ಮಾತೆ ಗಂಗಾದೇವಿ ಅವರೇ ನಮನ್ನು ದೂರವಿಟ್ಟಿದ್ದಾರೆ. ಅವರ ಆಹ್ವಾನ ಮೇರೆಗೆ ಸೆ.19 ರಂದು ಕಲ್ಯಾಣ ಪರ್ವದ ಪೂರ್ವ ಸಿದ್ಧತಾ ಸಭೆಗೆ ಬಸವಕಲ್ಯಾಣಕ್ಕೆ ತೆರಳಿದ ಬಸವ ಅನುಯಾಯಿಗಳಿಗೆ ಸಭೆಗೆ ಪ್ರವೇಶ ನೀಡದಂತೆ ಪೋಲಿಸ್ ರನ್ನು ಕರೆಸಿ ನಮನ್ನು ಬಂಧಿಸಿ ಬಿಡುಗಡೆಗೊಳಿಸಿದರು. ಬಸವ ಧರ್ಮ ಆಶ್ರಮದಲ್ಲಿ ನಾವು ಹೋಗಬಾರದೇ? ಹೀಗೆ ಬಂಧಿಸಲು ನಾವೇನು ಭಯೋತ್ಪಾದಕರೇ? ಧರ್ಮಪೀಠ ನಂಬಿಕೊಂಡ ಬಂದ ನಾವುಗಳು ಎಲ್ಲಿ ಹೋಗಬೇಕು ಎಂದು ಪೂಜ್ಯ ಗಂಗಾ ಮಾತಾಜೀ ಹಾಗೂ ಸಿದ್ದರಾಮೇಶ್ವರ ಸ್ವಾಮೀಗಳು ಉತ್ತರಿಸಬೇಕು” ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿವಶರಣಪ್ಪ ಪಾಟೀಲ್, ಓಂಪ್ರಕಾಶ ರೊಟ್ಟೆ, ನಿರ್ಮಲಾ ನಿಲಂಗೆ ಸೇರಿದಂತೆ ಇತರರಿದ್ದರು.
- ವರದಿ: ಸಿಟಿಜನ್ ಜರ್ನಲಿಸ್ಟ್, ಜಗದೀಶ್ವರ ಬಿರಾದರ್