ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಪಡೆಯಲು ಸಾಕಷ್ಟು ಪರಿಶ್ರಮ ಅವಶ್ಯಕತೆಯಿದೆ. ಕೌಶಲ್ಯ ತರಬೇತಿ ಮೂಲಕ ಉದ್ಯೋಗ ಪಡೆದು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಐಟಿಐ ಶಿಕ್ಷಣ ನೆರವಾಗಲಿದೆ ಎಂದು ಮಾಜಿ ಸಚಿವ, ಶಾಸಕ ಪ್ರಭು.ಬಿ ಚವ್ಹಾಣ ಹೇಳಿದರು.
ಔರಾದ್(ಬಿ) ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಲಾದ 2023ನೇ ಸಾಲಿನ ಕುಶಲಕರ್ಮಿಗಳ ಘಟಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ” ಔರಾದ್ ಐಟಿಐ ಕಾಲೇಜಿನಲ್ಲಿ ಸುಸಜ್ಜಿತ ಕಟ್ಟಡ, ಯಂತ್ರೋಪಕರಣಗಳು, ನುರಿತ ಬೋಧಕ ಸಿಬ್ಬಂದಿ, ಅಗತ್ಯ ಕಂಪ್ಯೂಟರ್ ವ್ಯವಸ್ಥೆಯನ್ನು ಹೊಂದಿದ್ದು, ಈ ಭಾಗದಲ್ಲಿಯೇ ಮಾದರಿ ಕಾಲೇಜಾಗಿ ಮಾರ್ಪಟ್ಟಿದೆ. ಬಡ ಮಕ್ಕಳಿಗೆ ಕೌಶಲ್ಯ ತರಬೇತಿ ಕಲ್ಪಿಸಿ ಉದ್ಯೋಗಗಳನ್ನು ಕಲ್ಪಿಸಲು ನೆರವಾಗುತ್ತಿದೆ. ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಯಶಸ್ಸು ಗಳಿಸಬೇಕೆಂದು” ಸಲಹೆ ನೀಡಿದರು.
“ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಿ ಕೆಲಸ ಮಾಡುತ್ತಿದ್ದು, ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಾಲೇಜಿನಿಂದ ಬರುವ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತಾ ಬಂದಿದ್ದೇನೆ. ಇಂದಿನ ಅವಶ್ಯಕತೆಗೆ ಅನುಗುಣ ತಂತ್ರಜ್ಞಾನದ ಕಲಿಕೆಗಾಗಿ 30 ಕಂಪ್ಯೂಟರ್‌ಗಳ ಖರೀದಿಗೆ ಅನುದಾನ ಮೀಸಲಿಡಲಾಗಿದೆ. ಕಾಲೇಜಿನ ಅಭಿವೃದ್ಧಿಗೆ ಸದಾ ಸಿದ್ಧನಿದ್ದು, ಮುಂದಿನ ದಿನಗಳಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ” ಪ್ರಾಚಾರ್ಯರಿಗೆ ಸೂಚಿಸಿದರು.
ವಿಶೇಷ ಉಪನ್ಯಾಸ ನೀಡಿದ ಮಲ್ಲಿಕಾರ್ಜುನ ಟಂಕಸಾಲೆ ಮಾತನಾಡಿ, “ವಿದ್ಯಾರ್ಥಿಗಳು ಕಾಟಾಚಾರಕ್ಕೆ ಕಲಿಯದೇ ಸುಂದರ ಜೀವನ ರೂಪಿಸಿಕೊಳ್ಳುವ ಕನಸಿನೊಂದಿಗೆ ಶ್ರಮ ವಹಿಸಬೇಕು. ಕಾಲೇಜಿನಲ್ಲಿ ಕಲಿಕೆಗೆ ಬೇಕಾದ ಎಲ್ಲ ಸೌಕರ್ಯಗಳು ಲಭ್ಯವಿದ್ದು, ಇದರ ಸದುಪಯೋಗ ಪಡೆದಲ್ಲಿ ಮಾತ್ರ ಉತ್ತಮ ಉದ್ಯೋಗಗಳನ್ನು ಪಡೆಯಲು ಸಾಧ್ಯ” ಎಂದರು.
ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯ ಶೈಲಜಾ ಮಾತನಾಡಿ, “ಔರಾದ ಸರಕಾರಿ ಐಟಿಐ ಕಾಲೇಜು ಗಡಿ ಭಾಗದಲ್ಲಿದ್ದರೂ, ಡಿಜಿಟಲ್ ರೂಮ್, ರೊಬೊಟಿಕ್, ಸಿಎನ್‌ಸಿ, ಇತ್ತೀಚಿನ ವರ್ಷನ್‌ನ ಗಣಕಯಂತ್ರಗಳು
ಮತ್ತು ಕ್ರಿಯಾಶೀಲ ಸಿಬ್ಬಂದಿಯಿದ್ದಾರೆ. ಮಕ್ಕಳು ಉಳಿದುಕೊಳ್ಳಲು ಉತ್ತಮ ಹಾಸ್ಟಲ್ ವ್ಯವಸ್ಥೆಯೂ ಇದ್ದು, ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ಇಲ್ಲಿದೆ” ಎಂದು ವರ್ಣಿಸಿದರು.
ಕಾಲೇಜು ಪ್ರಾಚಾರ್ಯ ಯುಸೂಫಮಿಯ್ಯ ಜೋಜನಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥೆಯಲ್ಲಿ ಉತ್ತೀರ್ಣರಾದ ಕುಶಲಕರ್ಮಿಗಳಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆಯೊಂದಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು. ಇದೇ ವೇಳೆ ಮಾಜಿ ಯೋಧರು ಹಾಗೂ ಮಕ್ಕಳ ಪಾಲಕರಾದ ದಿಲಿಪಕುಮಾರ ಸಿದ್ದೇಶ್ವರ ಹಾಗೂ ತಂತ್ರಜ್ಞಾನದಲ್ಲಿ ಡಾಕ್ಟರೇಟ್ ಪಡೆದ ಪಾಲಿಟೆಕ್ನಿಕ್ ಉಪನ್ಯಾಸಕ ಡಾ.ಸಂಜೀವ ಕುಮಾರ ಅವರನ್ನು ಸನ್ಮಾನಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ವಿದ್ಯಾರ್ಥಿನಿಗೆ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ
ಕಾರ್ಯಕ್ರಮದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ಆಶೋಕ ಅಲ್ಮಾಜೆ, ಶ್ರೀನಿವಾಸ ಖೂಬಾ, ಉಪನ್ಯಾಸಕ ಹಣಮಂತ ಕಾಳೆ, ಸಂಸ್ಥೆಯ ಆಡಳಿತ ಅಧಿಕಾರಿ ಅನೀಲಕುಮಾರ ಶಾಂತಪೂರೆ, ಕಛೇರಿ ಅಧೀಕ್ಷಕ ಸುದರ್ಶನಕುಮಾರ ಮಂಗಲಗಿಕರ ಹಾಗೂ ಇತರರಿದ್ದರು. ಹುಲಸೂರೆ ಚಂದ್ರಕಾಂತ ನಿರೂಪಿಸಿದರು. ಧನರಾಜ ಸ್ವಾಮಿ ಸ್ವಾಗತಿಸಿದರು. ಸಂಗಮೇಶ ಮರಖಲೆ ವಂದಿಸಿದರು.