ಕಲ್ಯಾಣ ಕರ್ನಾಟಕದ ಜನರಿಗೆ ಅನುಕೂಲವಾಗಲು ಕೆಲ ಕಚೇರಿಗಳನ್ನು ಕಲಬುರಗಿಗೆ ಸ್ಥಳಾಂತರಿಸಲು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಅನಂತರೆಡ್ಡಿ ಅವರ ನೇತೃತ್ವದಲ್ಲಿ ಇಂದು (ಡಿ.15) ಬೀದರ್ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕರ್ನಾಟಕದಲ್ಲಿ ಅತೀ ಹಿಂದುಳಿದ ಪ್ರದೇಶವಾದ ಕಲ್ಯಾಣ ಕರ್ನಾಟಕದ ಜನರ ಶ್ರೇಯೋ ಅಭಿವೃದ್ಧಿಗಾಗಿ 371(ಜೆ) ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು, ಐತಿಹಾಸಿಕ ದಾಖಲೆಯಾಗಿದೆ. ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲವೆಂಬ ಗಾದೆ ಈ ಭಾಗದ ಜನರಿಗೆ ಅನ್ವಯವಾಗುತ್ತದೆ.
ಬೀದರದಿಂದ ಬೆಂಗಳೂರು 800-850 ಕಿ.ಮೀ. ದೂರವಿದು, ಅದೇ ರೀತಿಯಾಗಿ ಬೆಳಗಾವಿ ಸುವರ್ಣ ಸೌಧ ಸಹ 500-550 ಕಿ.ಮೀ. ಅಂತರದಲ್ಲಿದೆ. ಈ ಕಾರಣಕ್ಕಾಗಿ ದೊಡ್ಡ- ದೊಡ್ಡ ರಾಜ್ಯಗಳನ್ನು ಚಿಕ್ಕದಾಗಿ ಮಾಡಿದರೆ ಅಭಿವೃದ್ಧಿಯಾಗುತ್ತದೆ ಎಂಬ ಕೂಗು ಕೇಳಿ ಬರುತ್ತಿದೆ.
ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಎಂಬ ತಾರತಮ್ಯವೇ ಬೇಡ. ಆದ್ದರಿಂದ, ಆಯಾ ಭಾಗದ ಜನರಿಗೆ ಅನುಕೂಲವಾಗುವಂತೆ ಕೆಲ ಕಚೇರಿಗಳು ಬೆಂಗಳೂರಿನಿಂದ ಆಯಾ ಭಾಗಕ್ಕೆ ಸ್ಥಳಾಂತರಿಸಿದರೆ, ಎಲ್ಲಾ ಭಾಗದ ಜನರು ಎಲ್ಲಾ ಕಡೆಯೂ ಸುತ್ತಲು ಮತ್ತು ಆ ಭಾಗದ ಜನಜೀವನ, ಸಂಸ್ಕೃತಿ, ಸಾಹಿತ್ಯ, ಊಟ, ಉಡುಗೆ ಅರಿಯಲು ಸಹ ಸಾಧ್ಯವಾಗುತ್ತದೆ.
ಹೀಗಾಗಿ, ಕಲ್ಯಾಣ ಕರ್ನಾಟಕದ ಕೇಂದ್ರ ಭಾಗವಾದ ಕಲಬುರಗಿಯಲ್ಲಿ ಕೆಲ ಕಚೇರಿಗಳನ್ನು ಸ್ಥಾಪಿಸಿ, ಈ ಭಾಗದ ಜನರು ಬೆಂಗಳೂರಿಗೆ ಹೋಗುವುದನ್ನು ತಪ್ಪಿಸಬೇಕೆಂದು ಮತ್ತು ಸರ್ಕಾರದ ಆಡಳಿತ ಜನರ ಅನುಕೂಲಕ್ಕೆ ಎಂಬ ಪ್ರಜಾಪ್ರಭುತ್ವದ ಆಶಯವನ್ನು ಸರ್ಕಾರ ಈಡೇರಿಸಬೇಕೆಂದು, ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಬಕ್ಕಪ್ಪಾ ನಾಗೋರಾ, ಡಾ. ಸಿ.ಆನಂದರಾವ, ರಮೇಶ್ ಬಿರಾದಾರ, ವಿಶ್ವನಾಥ ಉಪ್ಪೆ, ವಿದ್ಯಾಸಾಗರ, ಕೃಷ್ಣರೆಡ್ಡಿ ಸೇರಿದಂತೆ ಇತರರಿದ್ದರು.