- ಮಾಜಿ ಶಾಸಕ ಬಿ.ನಾರಾಯಣರಾವ ಜಿಲ್ಲೆಯ ಗೊಂಡ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ಒದಗಿಸಿಕೊಟ್ಟಿದ್ದರು.
- ಕರೋನಾ ತಗುಲಿದರೂ ಬಸವಕಲ್ಯಾಣದ ಜನತೆಯ ಒಳಿತಿಗಾಗಿ ತಮ್ಮ ಜೀವ ಮುಡುಪಾಗಿಟ್ಟು ಸೇವೆಗೈದಿದ್ದರು.
ಸದಾ ಬಡವರ ಕಷ್ಟಗಳಿಗೆ ಸ್ಪಂದಿಸುವ ಗುಣ ಹೊಂದಿದ್ದ ಬಸವಕಲ್ಯಾಣದ ಮಾಜಿ ಶಾಸಕ ದಿವಂಗತ ಬಿ. ನಾರಾಯಣರಾವ ಕೇವಲ ತಮ್ಮ ಜಾತಿಗೆ ಸೀಮಿತರಾಗದೆ ಇತರೆ ಜಾತಿಗಳ ನಡುವಿನ ಸಮಸ್ಯೆಗಳ ಬಗ್ಗೆ ಹೆಚ್ಚಿನ ಕಾಳಜಿ ತೋರುತ್ತಿದ್ದರು ಎಂದು ಎಲ್‌ಐಸಿ ಅಧಿಕಾರಿ ಈಶ್ವರ ಮಲ್ಕಾಪೂರೆ ಹೇಳಿದರು.
ಬೀದರ ನಗರದ ಕರುನಾಡು ಸಾಂಸ್ಕೃತಿಕ ಸಭಾಂಗಣದಲ್ಲಿ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದಿಂದ ಆಯೋಜಿಸಿದ್ದ ʼಮಾಜಿ ಶಾಸಕ ದಿ. ಬಿ. ನಾರಾಯಣರಾವ ಅವರ ಸವಿ ನೆನಪುʼ ಕಾರ್ಯಕ್ರಮದಲ್ಲಿ ಮಾತನಾಡಿ, “ಮಾಜಿ ಶಾಸಕ ದಿ. ಬಿ.ನಾರಾಯಣರಾವ ತಮ್ಮ ಅವಿರತ ಹೋರಾಟದ ಮುಖಾಂತರ ಬೀದರ ಜಿಲ್ಲೆಯ ಗೊಂಡ ಸಮುದಾಯದ ಜನರಿಗೆ ಗೊಂಡ ಜಾತಿ ಪ್ರಮಾಣ ಪತ್ರ ನೀಡುವಂತೆ ಮಾಡಿಕೊಟ್ಟು ಸಮುದಾಯಕ್ಕೆ ನ್ಯಾಯ ಒದಗಿಸಿಕೊಟ್ಟಿದ್ದರು.ಇದಲ್ಲದೆ ಅನೇಕ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ವಸತಿ ಸೌಲಭ್ಯಗಳನ್ನು ಕೊಡಿಸಿದ ಹೆಗ್ಗಳಿಕೆಯೂ ಬಿ. ನಾರಾಯಣರಾವರಿಗೆ ಸಲ್ಲುತ್ತದೆ” ಎಂದರು.
“ನಮ್ಮ ಸಮಾಜದ ಕೆಲವರ ಅಸೂಯೆಯಿಂದಾಗಿ ದಿ. ಬಿ.ನಾರಾಯಣರಾವ್ ಅವರ ರಾಜಕೀಯ ಜೀವನ ಬೀದರನಿಂದ ಬಸವಕಲ್ಯಾಣಕ್ಕೆ ವರ್ಗಾಯಿಸುವಂತಾಯಿತು. ಅವರು ಕಟ್ಟಿ ಬೆಳೆಸಿದ ಕೆಲವು ಶಿಕ್ಷಣ ಸಂಸ್ಥೆಗಳನ್ನು ಸಹ ಅವರಿಂದ ಕಸಿದುಕೊಳ್ಳಲಾಯಿತು. ಆದರೆ ಈ ಬಗ್ಗೆ ಚಕಾರವೆತ್ತದೆ ತಮ್ಮ ಸಂಸ್ಥೆಯನ್ನು ಬಿಟ್ಟುಕೊಟ್ಟಿದ್ದು ಅವರ ದೊಡ್ಡ ಗುಣ. ಅವರಿಗೆ ಅನ್ಯಾಯವಾದರೂ ಸಹ ಸದಾ ಗೊಂಡ ಸಮುದಾಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದರು. ಅವರ ಹೆಸರು ಉಳಿಸಬೇಕೆಂದರೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪಕ್ಕೆ ದಿ ಬಿ.ನಾರಾಯಣರಾವ ಕಾರಣರಾಗಿದ್ದಾರೆ” ಎಂದು ಅಭಿಪ್ರಾಯಪಟ್ಟರು.
ಹಿರಿಯ ಮುಖಂಡ ಬಕ್ಕಪ್ಪ ಶೇರಿಕಾರ ಮಾತನಾಡಿ, “ದಿ. ಬಿ. ನಾರಾಯಣರಾವ ಇಂದು ಬದುಕಿದ್ದರೆ ರಾಜ್ಯ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಮಂತ್ರಿಯಾಗುತ್ತಿದ್ದರು. ಅಂದು ಕರೋನಾ ಮಹಾಮಾರಿ ತಗುಲಿದರೂ ಬಸವಕಲ್ಯಾಣದ ಜನತೆಯ ಒಳಿತಿಗಾಗಿ ತಮ್ಮ ಪ್ರಾಣ ಮುಡುಪಾಗಿಟ್ಟು ಅನೇಕ ಬಡ ಕುಟುಂಬಗಳಿಗೆ ಅಹಾರ ಸಾಮಾಗ್ರಿ ಒದಗಿಸುವುದಲ್ಲದೆ ಇತರೆ ರಾಜ್ಯಗಳಿಗೆ ಗುಳೆ ಹೋಗಿದ್ದ ಕ್ಷೇತ್ರದ ಜನತೆಗೆ ಸ್ವಂತ ಖರ್ಚಿನಲ್ಲಿ ತವರಿಗೆ ಕರೆಸಿಕೊಂಡು ಜೀವ ಕಾಪಾಡಿಕೊಳ್ಳುವಂತೆ ಸಲಹೆ ನೀಡುತ್ತಿದ್ದರು” ಎಂದು ಸ್ಮರಿಸಿದ್ದರು.
ಈ ವೇಳೆ ಬಿ. ನಾರಾಯಣರಾವ ಸಹೋದರ ಬಿ. ಸೋಮನಾಥರಾವ ಹಾಗೂ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ ಜೋಳದಾಪಕೆ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರ ಸಹಿತ ಹಲವರ ಮನೆ ಮೇಲೆ ದೆಹಲಿ ಪೊಲೀಸ್ ದಾಳಿ
ಕಾರ್ಯಕ್ರಮದಲ್ಲಿ ಬೀದರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಮಲ್ಲಿಕಾರ್ಜುನ ಸದಾಶಿವ, ಜಿಲ್ಲಾ ಕಸಾಪ ಮಾಜಿ ಕಾರ್ಯದರ್ಶಿ ನಾಗಶೇಟ್ಟಿ ಜ್ಯೋತೆಪ್ಪನೋರ, ಸಾಹಿತಿಗಳಾದ ಡಾ.ಸಂಜೀವಕುಮಾರ ಅತಿವಾಳೆ, ಆತ್ಮನಂದ ಬಂಬುಳಗಿ ಸೇರಿಂದತೆ ಪ್ರಮುಖರಾದ ಎಂ.ಪಿ. ವೈಜಿನಾಥ, ಶ್ರೀಕಾಂತ ಗೋರನಳ್ಳಿ, ಜಾಲಿಂದರ ಕಮಠಾಣೆ, ಬಸವರಾಜ, ಶ್ರೀಕಾಂತ ಬಿ. ಕೋಲಿ, ದತ್ತು ಕಮಠಾಣೆ ಹಾಗೂ ಬಿ. ನಾರಾಯಣರಾವ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.