- ಮಲ್ಲಿಕಾರ್ಜುನ ಖರ್ಗೆ ವಯಸ್ಸು ಉಲ್ಲೇಖಿಸಿ ಬಿಜೆಪಿ ಅಪಮಾನ
- ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಹರಿಹಾಯ್ದ ಸುರ್ಜೇವಾಲ
ರಾಜಸ್ಥಾನ ಬಿಜೆಪಿ ಕಾರ್ಯದರ್ಶಿ, ಶಾಸಕ ಮದನ್ ದಿಲಾವರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾವು ಬಯಸುವ ರೀತಿಯಲ್ಲಿ ಮಾತನಾಡಿ ವಿವಾದಕ್ಕೀಡಾಗಿದ್ದಾರೆ.
“ಮಲ್ಲಿಕಾರ್ಜುನ ಖರ್ಗೆ ಅವರಿಗೆ 80 ವರ್ಷ ವಯಸ್ಸಾಗಿದೆ. ದೇವರು ಅವರನ್ನು ಯಾವಾಗ ಬೇಕಾದರೂ ಕರೆದುಕೊಳ್ಳಬಹುದು” ಎಂದು ಮದನ್ ದಿಲಾವರ್ ಹೇಳಿಕೆ ನೀಡಿದ್ದು, ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿರುವ ಎಐಸಿಸಿ ರಾಜ್ಯ ಚುನಾವಣಾ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, “ಬಿಜೆಪಿ ಶಾಸಕ ಖರ್ಗೆ ಅವರ ಸಾವು ಬಯಸುವ ಮೂಲಕ ದಲಿತ ಸಮುದಾಯದ ಶ್ರೇಷ್ಠ ನಾಯಕನ ವಿರುದ್ಧ ಬಿಜೆಪಿಯ ದ್ವೇಷ ಮನೋಭಾವ ಎದ್ದು ಕಾಣುತ್ತಿದೆ” ಎಂದಿದ್ದಾರೆ.
“ಬಿಜೆಪಿ ನಾಯಕರು ಖರ್ಗೆ ಅವರ ಸಾವು ಬಯಸಿರುವ ಹಿನ್ನೆಲೆ ಪ್ರಧಾನಿ ಮೋದಿ ಕ್ಷಮೆಯಾಚಿಸಬೇಕು” ಎಂದು ಸುರ್ಜೇವಾಲ ಆಗ್ರಹಿಸಿದ್ದಾರೆ.
“ಮಲ್ಲಿಕಾರ್ಜುನ ಖರ್ಗೆ ಕಾರ್ಮಿಕ ಕುಟುಂಬದಲ್ಲಿ ಜನಿಸಿದ್ದಾರೆ. ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನದವರೆಗೂ ಏರಿದ್ದಾರೆ. ಅಂತವರ ವಿರುದ್ಧ ಕೀಳು ಮಟ್ಟದ ಮಾತುಗಳು ಸಹಿಸಲು ಸಾಧ್ಯವಿಲ್ಲ” ಎಂದು ಕಿಡಿಕಾರಿದ್ದಾರೆ.
“ರಾಜ್ಯದ ಜನರು ಖರ್ಗೆ ಅವರನ್ನು ಪಕ್ಷಾತೀತವಾಗಿ ಸೋಲಿಲ್ಲದ ಸರದಾರ ಎನ್ನುತ್ತಾರೆ. ಇಂತಹವರ ಸಾವನ್ನು ಬಿಜೆಪಿ ಬಯಸುತ್ತಿದೆ. ಮೋದಿ ಅವರು ಖರ್ಗೆ ಅವರನ್ನು ದ್ವೇಷಿಸುವ ಕಾರಣಕ್ಕೆ ಬೊಮ್ಮಾಯಿ ಅವರ ಸರ್ಕಾರ ಅಧಿಕಾರ ಕಳೆದುಕೊಂಡು 40ಕ್ಕಿಂತ ಕಡಿಮೆ ಸ್ಥಾನಕ್ಕೆ ಕುಸಿಯುತ್ತದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೋಮುಗಲಭೆ ಸೃಷ್ಟಿಸುವವರ ಮೇಲೆ ಕಠಿಣ ಕ್ರಮ ಎಂದರೆ ಬಿಜೆಪಿಗೆ ಯಾಕೆ ನೋವು: ಸಿದ್ದರಾಮಯ್ಯ
“ಬಿಜೆಪಿ ನಾಯಕರ ಬಳಿ ಭ್ರಷ್ಟಾಚಾರ, ನಿರುದ್ಯೋಗಕ್ಕೆ ಉತ್ತರವಿಲ್ಲ ಎಂಬ ಕಾರಣಕ್ಕೆ ಖರ್ಗೆ ಅವರ ಸಾವು ಬಯಸುತ್ತಿದೆಯೇ, ಬಿಜೆಪಿ ಇಂತಹ ಕೀಳು ರಾಜಕೀಯಕ್ಕೆ ಇಳಿಯುತ್ತದೆಯೇ” ಎಂದು ಪ್ರಶ್ನಿಸಿದ್ದಾರೆ.
“ಪ್ರಧಾನಮಂತ್ರಿಗಳೇ, ನೀವು ಕರ್ನಾಟಕ ರಾಜ್ಯದಲ್ಲಿದ್ದು, ನಿಮ್ಮ ಶಾಸಕರು ಖರ್ಗೆ ಅವರ ಸಾವು ಬಯಸುತ್ತಿದ್ದು, ನೀವು ಮೌನವಾಗಿರುವುದೇಕೆ? ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ?” ಎಂದು ಕೇಳಿದ್ದಾರೆ.